`ಅಸಂಘಟಿತ ಕಾರ್ಮಿಕರ ಸಂಘಟಿಸಿ'

ಸೋಮವಾರ, ಜೂಲೈ 22, 2019
27 °C

`ಅಸಂಘಟಿತ ಕಾರ್ಮಿಕರ ಸಂಘಟಿಸಿ'

Published:
Updated:

ಹುಬ್ಬಳ್ಳಿ: ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ದೊರಕಿಸುವ ನಿಟ್ಟಿನಲ್ಲಿ ಅಸಂಘಟಿತ ಕಾರ್ಮಿಕರನ್ನು ಸಂಘಟಿತರಾಗಿಸಲು ಜಾಗೃತಿ ಮೂಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ ಶೆಟ್ಟರ್ ಹೇಳಿದರು.ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದ ವತಿಯಿಂದ ಭಾನುವಾರ ಭೈರಿದೇವರಕೊಪ್ಪದ  ಸದಾಶಿವಾನಂದ ಕೈಲಾಸ ಮಂಟಪದ ಆವರಣದಲ್ಲಿ ನೋಂದಾಯಿತ ಕಾರ್ಮಿಕರಿಗೆ ಗುರುತಿನ ಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಸಂಘಟಿತ ಕಾರ್ಮಿಕರಿಗಿಂತ ಅಸಂಘಟಿತ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಸಂಘಟಿತ ಕಾರ್ಮಿಕರನ್ನು ಜಾಗೃತಿಗೊಳಿಸುವ ಕೆಲಸ ಅಷ್ಟಾಗಿ ನಡೆಯುತ್ತಿಲ್ಲ. ಕಾರ್ಮಿಕರು ಅಸಂಘಟಿತರಾಗಿದ್ದರೆ  ಅವರಿಗೆ ಸರ್ಕಾರದ ಮೇಲೆ ಒತ್ತಾಯ ಹೇರಿ ತಮ್ಮ ಬೇಡಿಕೆಗಳನ್ನು  ಅನುಷ್ಠಾನಗೊಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕಾರ್ಮಿಕರ ವಿವಿಧ ಯೋಜನೆಗಳಿಗಾಗಿ  ನೂರಾರು ಕೋಟಿ ರೂಪಾಯಿ ಹಣ ಬಂದಿದ್ದರೂ ಕೂಡ ಅದನ್ನು  ಸಮರ್ಪಕವಾಗಿ ಬಳಕೆ ಮಾಡಲು ಸಾಧ್ಯವಾಗದೇ ಇರುವುದಕ್ಕೆ ಕಾರ್ಮಿಕರು ಸಂಘಟಿತರಾಗದೇ ಇರುವುದೇ ಕಾರಣವಾಗಿದೆ. ಹೀಗಾಗಿ ಅಸಂಘಟಿತ ಕಾರ್ಮಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.ರಾಜ್ಯದಲ್ಲಿನ ಸುಮಾರು 23 ಸಾವಿರ ದಿನಗೂಲಿ ನೌಕರರಿದ್ದು ತಾವು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ದೃಢ ಸಂಕಲ್ಪ ಮಾಡಿ ಕಾನೂನು ಅಡಿಯಲ್ಲಿ ಅವರಿಗೆ ದಿನಗೂಲಿ ಕಾಯಂ ಮಾಡಲು ಕ್ರಮ ಕೈಗೊಂಡಿದ್ದಾಗಿ ಶೆಟ್ಟರ್ ತಿಳಿಸಿದರು.ಇದೇ ಸಂದರ್ಭದಲ್ಲಿ ಕಾರ್ಮಿಕರಿಗೆ ವಸತಿ ಯೋಜನೆಯನ್ನು ಕಲ್ಪಿಸಿಕೊಡಬೇಕು ಎನ್ನುವ ಮನವಿಯನ್ನು ಅವರು ಸ್ವೀಕರಿಸಿದರು.ಈ ಬಗ್ಗೆ ಹಿಂದೆಯೂ ಪ್ರಯತ್ನ ಮಾಡಲಾಗಿದ್ದು ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಿನ ಪ್ರಯತ್ನ ಮಾಡಲಾಗುವುದು ಎಂದು ಅವರು ಭರವಸೆಯನ್ನು  ನೀಡಿದರು.ಜಿಲ್ಲಾ ಕಾರ್ಮಿಕ ಅಧಿಕಾರಿ ಮಹಮ್ಮದ್ ಅಬ್ದುಲ್ ಖಾಲಿಕ್ ಮಾತನಾಡಿ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ಹಚ್ಚದೇ ಅವರನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿಕೊಡಬೇಕು ಎಂದರು.ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಸಂಬಂಧಪಟ್ಟ ಕಾಯ್ದೆ ಅಡಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಅವಕಾಶವಿದ್ದು ಒಮ್ಮೆ ಹೆಸರನ್ನು ನೋಂದಾಯಿಸಿದ ಕೂಡಲೇ ಸುಮಾರು 6 ರಿಂದ 8 ಸೌಲಭ್ಯಗಳಿಗೆ ತತ್‌ಕ್ಷಣವೇ ಕಾರ್ಮಿಕರು ಅರ್ಹರಾಗುತ್ತಾರೆ. ಒಟ್ಟಾರೆ ಕಾರ್ಮಿಕರಿಗೆ 66 ಬಗೆಯ ಸೌಲಭ್ಯಗಳು ಲಭ್ಯವಿದ್ದು ಅವುಗಳನ್ನು ಕಾರ್ಮಿಕರ ಇಲಾಖೆಯಿಂದ ಪಡೆಯಬಹುದು ಎಂದರು.ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದುರಗಪ್ಪ ಚಿಕ್ಕತಂಬಳ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯ ಮೋಹನ ಹಿರೇಮನಿ, ಎಪಿಎಂಸಿ ಅಧ್ಯಕ್ಷ ಸುರೇಶ ದಾಸನೂರ,  ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ರಾಮಚಂದ್ರ ಹದಗಲ್, ಹಮಾಲಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಹನುಮಂತಪ್ಪ ಜಾಲಗಾರ, ಎಪಿಎಂಸಿ ಸದಸ್ಯ ರಾಜಶೇಖರ ಮೆಣಸಿನಕಾಯಿ, ಬಿಜೆಪಿ ಮುಖಂಡ ನಾಗೇಶ ಕಲಬುರ್ಗಿ, ಡಿ.ಕೆ.ಚವ್ವಾಣ, ಭಾಸ್ಕರ ಜಿತೂರಿ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry