ಅಸಮರ್ಪಕ ಒಳಚರಂಡಿ ಕಾಮಗಾರಿ

7

ಅಸಮರ್ಪಕ ಒಳಚರಂಡಿ ಕಾಮಗಾರಿ

Published:
Updated:

ಚಿಕ್ಕಬಳ್ಳಾಪುರ: ಸುಮಾರು ಆರು ತಿಂಗಳುಗಳ ಬಳಿಕ ಮಂಗಳವಾರ ನಡೆದ ನಗರಸಭೆ ತುರ್ತುಸಭೆಯ ಸಮಯ ಆರೋಪ-ಪ್ರತ್ಯಾರೋಪಗಳಲ್ಲಿ ವ್ಯಯವಾಯಿತು. ಕೆಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತಾದರೂ ಬಹುತೇಕ ಸಮಯ ಮಾತಿನ ಚಕಮಕಿಯೇ ಮುಂದುವರೆಯಿತು. ಆರು ತಿಂಗಳುಗಳ ಬಳಿಕ ತುರ್ತುಸಭೆ ಕರೆದಿರುವ ಬಗ್ಗೆ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ ವಿರೋಧಪಕ್ಷದ ಸದಸ್ಯರು ವಿಳಂಬಕ್ಕೆ ನಿಜವಾದ ಕಾರಣಗಳನ್ನು ತಿಳಿಸಿ ಎಂದು ಒತ್ತಾಯಿಸಿದರು.ನಗರಸಭೆ ಅಧ್ಯಕ್ಷ ಬಿ.ಎ.ಲೋಕೇಶ್‌ಕುಮಾರ್ ಸೇರಿದಂತೆ ಆಡಳಿತ ಪಕ್ಷದವರು ವಿಳಂಬಕ್ಕೆ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರಾದರೂ ವಿರೋಧ ಪಕ್ಷದವರು ಸುಮಾರು ಅರ್ಧಗಂಟೆಗೂ ಹೆಚ್ಚು ಇದೇ ವಿಷಯವನ್ನು ಪಟ್ಟು ಹಿಡಿದರು. ನಗರಸಭೆ ಆಯುಕ್ತರು ಇಲ್ಲ, ನಗರಸಭೆಯ ಕೆಲ ಸದಸ್ಯರು ಮನವಿ ಮಾಡಿದ್ದಾರೆ ಎಂದೆಲ್ಲ ಹೇಳಿಕೊಂಡು ಸಭೆ ಮುಂದೂಡಲಾಗಿದೆ ಹೊರತು ನಿಜ ಸಂಗತಿಯನ್ನು ಬಯಲು ಮಾಡುತ್ತಿಲ್ಲ ಎಂದು ವಿರೋಧ ಪಕ್ಷದವರು ಆರೋಪಿಸಿದರು.ನಗರದ ವಿವಿಧ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ವಿಷಯವನ್ನು ಪ್ರಸ್ತಾಪಿಸಿದ ನಗರಸಭಾ ಸದಸ್ಯ ಎಂ.ಪ್ರಕಾಶ್, ‘ಒಳಚರಂಡಿ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ. ಇಟ್ಟಿಗೆ ಮತ್ತು ಸಿಮೆಂಟು ಕಳಪೆಯಾಗಿವೆ. ಕಾಮಗಾರಿಯನ್ನು ಯಾರೂ ಸಹ ಪರಿಶೀಲಿಸುತ್ತಿಲ್ಲ. ಅಧಿಕಾರಿಗಳು ಸಹ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಆರೋಪಿಸಿದರು.ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಇಸ್ಮಾಯಿಲ್ ಅವರು ಈ ವಿಷಯವನ್ನು ಅಲ್ಲಗೆಳೆಯಲು ಯತ್ನಿಸಿದರು. ಆದರೆ ಅದೇ ವಿಷಯವನ್ನು ಪಟ್ಟು ಹಿಡಿದ ಪ್ರಕಾಶ್ ಅವರು, ‘ಈ ಕೂಡಲೇ ನಗರಸಭೆ ಆಯುಕ್ತರು, ಅಧ್ಯಕ್ಷರ ಜೊತೆಗೆ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡೋಣ. ಕಾಮಗಾರಿ ಸಮರ್ಪಕವಾಗಿ ನಡೆದಿದೆಯೋ ಇಲ್ವೊ ಎಂಬುದನ್ನು ಪರಿಶೀಲಿಸೋಣ’ ಎಂದರು.ಕಾಮಗಾರಿಯತ್ತ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಆಯುಕ್ತರು ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು. ನಗರಸಭೆ ಸದಸ್ಯೆ ಗಾಯತ್ರಿ ಅವರು ಕೂಡ ಒಳಚರಂಡಿ ಕಾಮಗಾರಿಯ ಅಸಮಧಾನ ವ್ಯಕ್ತಪಡಿಸಿದರು.ಇದಕ್ಕೂ ಮುನ್ನ ನೂತನ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ಬಸವರಾಜ ಅವರನ್ನು ಅಭಿನಂದಿಸಲಾಯಿತು. ಈಚೆಗೆ ನಿಧನರಾದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ಕಾಡಿಗೆ ಹುಳು ದಾಳಿ

ಶ್ರೀನಿವಾಸಪುರ: ತಾಲ್ಲೂಕಿನ ಕಶೆಟ್ಟಿಪಲ್ಲಿ ಸಮೀಪದ ಗುಡ್ಡದ ಕಾಡಿನಲ್ಲಿ ಗಿಡ ಮರಗಳ ಎಲೆಗಳನ್ನು ತಿಂದು ಹಾಳು ಮಾಡುವ ದೊಡ್ಡ ಗಾತ್ರದ ಹುಳುಗಳು ಕಂಡುಬಂದಿವೆ.ಸಾಹಿತಿ ಸ.ರಘುನಾಥ ಅವರು ಈಚೆಗೆ ಪರಿಸರ ಪರಿಚಯ ಕಾರ್ಯಕ್ರಮದಡಿ ವಿದ್ಯಾರ್ಥಿಗಳೊಂದಿಗೆ ಗುಡ್ಡದಲ್ಲಿ ಸುತ್ತಾಡುತ್ತಿದ್ದಾಗ ಈ ಹುಳುಗಳು ಕಂಡುಬಂದವು. ನೋಡಲು ರಬ್ಬರ್ ಹುಳುಗಳಂತೆ ಕಾಣುವ ಈ ಹುಳುಗಳ ದೇಹದ ಮೇಲೆ ಕೊಂಬಿನ ಆಕಾರದ ರಚನೆಯಿದೆ. ಹಸಿರು ಬಣ್ಣವನ್ನು ಹೊಂದಿರುವ ಈ ಹುಳುಗಳು ರೇಷ್ಮೆ ಹುಳುಗಳಂತೆ ಕಡ್ಡಿಯನ್ನು ಹಿಡಿದು ಗಿಡಗಳನ್ನು ಹತ್ತಬಲ್ಲವು. ವಿವಿಧ ಜಾತಿಯ ಕಾಡು ಸಸಿಗಳ ಎಲೆಗಳನ್ನು ಕತ್ತರಿಸಿ ತಿನ್ನಬಲ್ಲವು ಎಂದು ಸ.ರಘುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry