ಅಸಮರ್ಪಕ ಬಿಬಿಎಂಪಿ ಬಜೆಟ್‌

7

ಅಸಮರ್ಪಕ ಬಿಬಿಎಂಪಿ ಬಜೆಟ್‌

Published:
Updated:
ಅಸಮರ್ಪಕ ಬಿಬಿಎಂಪಿ ಬಜೆಟ್‌

ಬಿಬಿಎಂಪಿ ಮಂಡಿಸಿದ ಈ ವರ್ಷದ ಬಜೆಟ್‌ನಲ್ಲಿ  ವಾರ್ಡ್‌ವಾರು ಮತ್ತು ವಿವಿಧ ಕಾಮಗಾರಿಗಳಿಗೆ  ಹಂಚಿಕೆಯಾಗಿರುವ ಹಣದಲ್ಲಿ ಅಸಮರ್ಪಕತೆ ಹಾಗೂ ಅಂದಾಜಿನಲ್ಲಿ ಪಾರದರ್ಶಕತೆಯ ಕೊರತೆ ಇರುವುದನ್ನು ‘ಜನಾಗ್ರಹ’ ಸಮೀಕ್ಷೆ ಗುರುತಿಸಿದೆ.ಬೆಂಗಳೂರು ಮಿತಿಮೀರಿ ಬೆಳೆಯುತ್ತಿದೆ. 28 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ, 198 ವಾರ್ಡ್‌ಗಳ ಆಡಳಿತದ ಹೊಣೆ ಹೊತ್ತಿರುವ ಬಿಬಿಎಂಪಿಗೆ ನಗರಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡುವುದು ಬಹುದೊಡ್ಡ ಸವಾಲು ಎಂಬುದು ಇತ್ತೀಚೆಗೆ  ಬಿಬಿಎಂಪಿ ಮಂಡಿಸಿದ ಬಜೆಟ್‌ ಸಾಬೀತುಪಡಿಸಿದೆ.ಈ ಕುರಿತು ‘ಜನಾಗ್ರಹ’ ಮಾಡಿರುವ ವಿಶ್ಲೇಷಣೆ ಮೇಲಿನ ಮಾತನ್ನು ಪುಷ್ಟೀಕರಿಸುತ್ತದೆ. ವಾರ್ಡ್‌ವಾರು ಮತ್ತು ವಿವಿಧ ಕಾಮಗಾರಿಗಳಿಗೆ  ಹಂಚಿಕೆಯಾಗಿರುವ ಹಣದಲ್ಲಿ ಅಸಮರ್ಪಕತೆ ಹಾಗೂ ಅಂದಾಜಿನಲ್ಲಿ ಪಾರದರ್ಶಕತೆಯ ಕೊರತೆ ಇರುವುದನ್ನು ‘ಜನಾಗ್ರಹ’ ಗುರುತಿಸಿದೆ.ಈ ಬಾರಿಯ ಬಜೆಟ್ ಗಾತ್ರ ₨ 8,520 ಕೋಟಿ. ಈ ವರ್ಷದ ಬಜೆಟ್ ಗಾತ್ರ ಸ್ಪಲ್ಪ ತಗ್ಗಿದ್ದು, ಇದರಲ್ಲಿ ವಾರ್ಡ್‌ಗಳಿಗೆ ₨ 647 ಕೋಟಿ (ಶೇ.8) ಮೀಸಲಿರಿಸಲಾಗಿದೆ.ಬೆಂಗಳೂರು ಅಭಿವೃದ್ಧಿಯ ಅಧ್ಯಯನದ ದೃಷ್ಟಿಯಿಂದ  ‘ಜನಾಗ್ರಹ’ ಮಹಾನಗರದ ವಾರ್ಡ್‌ಗಳನ್ನು ಒಳವಾರ್ಡ್‌ಗಳು ಮತ್ತು ಹೊರ ವಾರ್ಡ್‌ಗಳು ಎರಡು ಭಾಗಗಳಾಗಿ ವಿಂಗಡಿಸಿದೆ.ಒಟ್ಟಾರೆ ಬಜೆಟ್‌ನಲ್ಲಿ ವಾರ್ಡ್‌ವಾರು ಹಣ ಹಂಚಿಕೆಯ ಸರಾಸರಿ ಪ್ರಮಾಣ ₨ 3 ಕೋಟಿ. ಆದರೆ, ಜನಾಗ್ರಹ ಈ ಮೊದಲು ನಡೆಸಿದ್ದ ‘ವಾರ್ಡ್‌ ಗುಣಮಟ್ಟ ಅಂಕ’ (ಡಬ್ಲ್ಯೂಕ್ಯೂಎಸ್‌) ಎಂಬ ಅಭಿವೃದ್ಧಿ ಸಮೀಕ್ಷೆಯಲ್ಲಿ ತೀರಾ ಕಡಿಮೆ ಅಂಕ ಗಳಿಸಿದ್ದ ವಾರ್ಡ್‌ಗಳಿಗೆ ಅತ್ಯಂತ ಕಡಿಮೆ ಹಣವನ್ನು, ಹೆಚ್ಚು ಅಂಕ ಗಳಿಸಿದ್ದ ವಾರ್ಡ್‌ಗಳಿಗೆ ಹೆಚ್ಚು ಹಣವನ್ನು ಹಂಚಿಕೆ ಮಾಡಿರುವುದು ಬಜೆಟ್‌ನ ದೂರದೃಷ್ಟಿ ಕೊರತೆಯನ್ನು ಎತ್ತಿ ತೋರಿಸುತ್ತದೆ.ಬಜೆಟ್‌ನಲ್ಲಿ ಅತೀ ಕಡಿಮೆ ಹಣ ಪಡೆದಿರುವ ವಾರ್ಡ್‌ಗಳೆಲ್ಲವೂ ಹೊರ ವಾರ್ಡ್‌ಗಳು. ಇವುಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ನೀಡದಿರುವುದನ್ನು ಕಾಣಬಹುದು. ಅದರಂತೆ, ಅತಿ ಹೆಚ್ಚು ಹಣ ಹಂಚಿಕೆಯಾಗಿರುವ ವಾರ್ಡ್‌ಗಳಲ್ಲಿ ಒಂದು ವಾರ್ಡ್‌್ ಅನ್ನು ಹೊರತುಪಡಿಸಿ ಉಳಿದವೆಲ್ಲವೂ ಒಳ ವಾರ್ಡ್‌ಗಳು.ಡಬ್ಲ್ಯೂಕ್ಯೂಎಸ್‌ ಸಮೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿಧಾನಸಭಾ ಕ್ಷೇತ್ರಗಳಾದ ರಾಜಾಜಿನಗರ, ಜಯನಗರ, ಯಲಹಂಕ, ಬಿ.ಟಿ.ಎಂ. ಲೇಔಟ್‌, ಶಿವಾಜಿನಗರ, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರಗಳ ಸರಾಸರಿ ಹಂಚಿಕೆಗಿಂತ ಹೆಚ್ಚು ಹಣವನ್ನು ಪಡೆದುಕೊಂಡಿವೆ. ಅದರಂತೆ ಸಮೀಕ್ಷೆಯಲ್ಲಿ ಅತೀ ಕಡಿಮೆ ಅಂಕ ಗಳಿಸಿದ್ದ ವಿಧಾನಸಭಾ ಕ್ಷೇತ್ರಗಳಾದ ದಾಸರಹಳ್ಳಿ, ಮಹದೇವಪುರ, ಯಶವಂತಪುರ ಹಾಗೂ ಬ್ಯಾಟರಾಯನಪುರಗಳು ನಗರ ಸರಾಸರಿಗಿಂತ ಕಡಿಮೆ ಬಜೆಟ್‌ ಹಂಚಿಕೆಯನ್ನು ಪಡೆದಿವೆ.‘ಸಮೀಕ್ಷೆಯಲ್ಲಿ ಕಡಿಮೆ ಗುಣಮಟ್ಟ ಅಂಕ ಗಳಿಸಿದ್ದ 30 ವಾರ್ಡ್ ಗಳ ಪೈಕಿ 27 ವಾರ್ಡ್ ಗಳು ಕೇವಲ ಸರಾಸರಿ ‘1.6 ಕೋಟಿ ಹಣ ಹಂಚಿಕೆಯಾಗಿದೆ. ಇದು ನಗರ ಸರಾಸರಿಯ ಅರ್ಧಕ್ಕೆ ಸಮಾನವಾದ ಹಂಚಿಕೆಯಾಗಿದೆ. ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರವಾರು ಹಣ ಹಂಚಿಕೆಯಲ್ಲಿ, ಆಯಾ ವಾರ್ಡ್ ಹಾಗೂ ಕ್ಷೇತ್ರಗಳನ್ನು ಯಾವ ಯಾವ ರಾಜಕೀಯ ಪಕ್ಷದವರು ಪ್ರತಿನಿಧಿಸಿದ್ದಾರೆ ಎಂಬುದರ ಛಾಯೆ ಕೂಡ ಇದೆ. ಈ ಒಂದು ಅಂಶ ಕೂಡ ಬಜೆಟ್ ಹಣ ಹಂಚಿಕೆಯಲ್ಲಿ ಪಾರದರ್ಶಕತೆಯ ಕೊರತೆ ಎದ್ದು ಕಾಣಲು  ಪ್ರಮುಖ ಕಾರಣ’ ಎನ್ನುತ್ತಾರೆ ಜನಾಗ್ರಹ ಸಂಸ್ಥೆಯ ಸಂಶೋಧನಾ ವಿಭಾಗದ ಸಂಚಾಲಕರಾದ ಶ್ರೀಕಾಂತ್ ವಿಶ್ವನಾಥನ್.‘133 ವಾರ್ಡ್‌ಗಳಿಗೆ  ಸರಾಸರಿಗಿಂತ ಅತೀ ಕಡಿಮೆ ಹಣ ಹಂಚಿಕೆ ಮಾಡಲಾಗಿದೆ. ಅಲ್ಲದೆ, ವಾರ್ಡ್‌ವಾರು ಮತ್ತು ವಿಧಾನಸಭಾ ಕ್ಷೇತ್ರವಾರು ಜನಸಂಖ್ಯೆಯಲ್ಲಿ ಆಗಿರುವ ಏರುಪೇರಿಗೆ ತಕ್ಕಂತೆ ಹಣ ಹಂಚಿಕೆ ಆಗಿಲ್ಲ ಎಂಬುದು ಬಜೆಟ್‌ನಲ್ಲಿ ಸ್ಪಷ್ಟವಾಗುತ್ತದೆ’ ಎಂದು ಶ್ರೀಕಾಂತ್ ವಿವರಿಸುತ್ತಾರೆ. ಹೆಚ್ಚಿನ ವಿವರಗಳಿಗೆ www.ichangemycity.comಗೆ ಭೇಟಿ ಕೊಡಿ.

 

 

 

 

 

 

 

 

         

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry