ಸೋಮವಾರ, ಜನವರಿ 27, 2020
15 °C
ಬೆಸ್ಕಾಂ ಕಚೇರಿ ಎದುರು ಧರಣಿ

ಅಸಮರ್ಪಕ ವಿದ್ಯುತ್‌: ರೈತರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಅಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಪರಿವರ್ತಕಗಳ ರಿಪೇರಿಗೆ ಸಮರ್ಪಕವಾಗಿ ಪರಿಕರ ಒದಗಿಸಲಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ಹಿರೇಕಬ್ಬಿಗೆರೆ ಗ್ರಾಮದ ರೈತರು ನಗರದ ಬೆಸ್ಕಾಂ ಕಚೇರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ವಿದ್ಯುತ್ ಪರಿವರ್ತಕ ಕೆಟ್ಟು ಹೋದ ಪರಿಣಾಮ ಗ್ರಾಮದಲ್ಲಿ ಮೂರು ದಿನಗಳಿಂದ ವಿದ್ಯುತ್ ಇಲ್ಲ. ವಿದ್ಯುತ್‌ ಸ್ಥಗಿತಗೊಂಡಿರುವ ಕುರಿತು ಬೆಸ್ಕಾಂ ಕಚೇರಿಯ ‘ವಿಭಾಗೀಯ ಅಧಿಕಾರಿಗೆ ದೂರು ನೀಡಿದರೆ, ನೀವೇ ಪರಿಕರಗಳನ್ನು ಖರೀದಿಸಿ ದುರಸ್ತಿ ಮಾಡಿಕೊಳ್ಳಿ ಎನ್ನುತ್ತಾರೆ. ಸುಮಾರು ರೂ 1140ನಷ್ಟು ಮೊತ್ತದ ಪರಿಕರಗಳನ್ನು ಖರೀದಿಸಿ ಪರಿವರ್ತಕ ಸರಿಪಡಿಸಿದರೂ ವಿದ್ಯುತ್ ಪೂರೈಕೆಯಾಗಿಲ್ಲ. ಖರೀದಿಸಿದ ಪರಿಕರದ ಹಣವನ್ನು ವಾಪಸ್ ಕೊಡುವಂತೆ ರಶೀದಿ ನೀಡಿದರೂ, ಹಣ ನೀಡುತ್ತಿಲ್ಲ’ ಎಂದು ರೈತ ನಾಗರಾಜ್ ಆರೋಪಿಸಿದರು.ಈ ಸಮಸ್ಯೆ ಕುರಿತು ಜಿಲ್ಲಾ ಬೆಸ್ಕಾಂ ಕಚೇರಿಯ ಎಂಜಿನಿಯರ್ ಅವರಿಗೆ ದೂರು ನೀಡಿದರೆ, ‘ನೀವೇಕೆ ಪರಿಕರಗಳನ್ನು ಖರೀದಿಸಬೇಕು. ನಮ್ಮ ಇಲಾಖೆಯ ಗೋದಾಮಿ(ಸ್ಟೋರ್) ನಲ್ಲೇ ಸಾಕಷ್ಟು ಪರಿಕರಗಳಿವೆ’ ಎನ್ನುತ್ತಾರೆ. ‘ಇನ್ನರ್ಧ ಗಂಟೆಯಲ್ಲಿ ಕರೆಂಟ್ ಕೊಡಿಸುತ್ತೇನೆಂದು ಭರವಸೆ ನೀಡುತ್ತಾರೆ. ಇಲ್ಲಿಯವರೆವಿಗೆ ಇಲ್ಲದ ಕರೆಂಟ್, ಇನ್ನು ಅರ್ಧಗಂಟೆಯಲ್ಲಿ ಹೇಗೆ ಬಂದುಬಿಡುತ್ತದೆ?’ ಎಂದು ರೈತರಾದ ಸಿದ್ದೇಶ್, ಕುಮಾರ್ ಪ್ರಶ್ನಿಸುತ್ತಾರೆ.‘3 ದಿನಗಳಿಂದ ವಿದ್ಯುತ್ ಇಲ್ಲದೇ ಬೆಳೆಗಳಿಗೆ ನೀರು ಹಾಯಿಸಲಾಗಿಲ್ಲ. ಲಕ್ಷಾಂತರ ರೂಪಾಯಿ ಬಂಡವಾಳ ಸುರಿದು ದಾಳಿಂಬೆ, ಪಪ್ಪಾಯಿ, ಕಬ್ಬು ಹಾಕಿದ್ದೇವೆ. ಈಗ ಫಸಲು ಬಿಡುವ ಸಮಯದಲ್ಲಿ ಕರೆಂಟ್ ಕೈಕೊಟ್ಟರೆ ಏನ್ಮಾಡೋದು ಹೇಳಿ’ ಎಂದು ಆತಂಕ ವ್ಯಕ್ತಪಡಿಸುವ ನಾಗರಾಜ್, ಪರಿಕರಗಳ ಹಣ ವಾಪಸ್ ಕೊಡಿಸಬೇಕು. ಸೆಕ್ಷನ್ ಆಫೀಸರ್‌ಗೆ ನೋಟಿಸ್ ಕೊಡಬೇಕು’ ಎಂದು ಪಟ್ಟು ಹಿಡಿದರು.ಪ್ರತಿಭಟನಾಕಾರರ ಮನವೊಲಿಸಿದ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಇನ್ ಚಾರ್ಜ್) ಜಯಣ್ಣ, ‘ನಮ್ಮ ಗೋದಾಮಿನಲ್ಲಿ ಎಲ್ಲ ಪರಿಕರಗಳಿವೆ. ನೀವು ಖರೀದಿಸುವ ಅವಶ್ಯಕತೆ ಇಲ್ಲ. ನಮ್ಮ ಕಚೇರಿಗೆ ಮಾಹಿತಿ ತಲುಪಿಸಿದರೆ, ಒಂದು ಗಂಟೆಯೊಳಗೆ ವ್ಯವಸ್ಥೆ ಮಾಡುತ್ತೇವೆ. ಈಗ ನೀವು ಖರೀದಿಸಿರುವ ಪರಿಕರಗಳ ವೆಚ್ವವನ್ನು ವಾಪಸ್ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ. ಮುಂದೆ ಹೀಗಾಗದಂತೆ  ವಿಭಾಗೀಯ ಅಧಿಕಾರಿಗೂ ಸೂಚಿಸುತ್ತೇನೆ’ ಎಂದು ಭರವಸೆ ನೀಡಿದರು.ದಾರಿ ಬದಲಾಗಿದ್ದೇ ಸಮಸ್ಯೆಗೆ ಕಾರಣ

ನಮ್ಮೂರಿನಲ್ಲಿ 350 ಕುಟುಂಬಗಳಿವೆ. ಎಲ್ಲರೂ ರೈತರು.  ನಮ್ಮೂರಿಗೆ ಕರೆಂಟ್ ಬಂದಾಗಿನಿಂದಲೂ, ಭರಮಸಾಗರ, ಸಿರಿಗೆರೆ ಕೇಂದ್ರದಿಂದಲೇ ವಿದ್ಯುತ್ ಪೂರೈಸಲಾಗುತ್ತಿತ್ತು. ಇತ್ತೀಚೆಗೆ ವಿಜಾಪುರ ಕೇಂದ್ರದಿಂದ ವಿದ್ಯುತ್ ಪೂರೈಸುತ್ತಿದ್ದಾರೆ. ಈ ಬದಲಾವಣೆಯಿಂದಾಗಿಯೇ ನಮಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ನಮಗೆ ಮೊದಲಿನ ವ್ಯವಸ್ಥೆಯನ್ನೇ ಅಳವಡಿಸಬೇಕು.

– ಕುಮಾರ್, ಸಿದ್ದೇಶ, ಹಿರೇಕಬ್ಬಿಗೆರೆಆತಂಕಪಡುವ ಅಗತ್ಯವಿಲ್ಲ

ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ (ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ) ಇದೇ ತಿಂಗಳಲ್ಲಿ 172 ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗಿವೆ. ಅವುಗಳನ್ನು ತಕ್ಷಣ ಬದಲಾಯಿಸಿ, ಹೊಸ ಪರಿವರ್ತಕಗಳನ್ನು ಅಳವಡಿಸಿದ್ದೇವೆ. ರೈತರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ತ್ವರಿತಗತಿಯಲ್ಲಿ ರಿಪೇರಿ ಮಾಡುತ್ತಿದ್ದೇವೆ. ಈ ಪ್ರಕರಣದಲ್ಲಿ ಎಲ್ಲಿ ತಪ್ಪಾಗಿದೆ ತಿಳಿದಿಲ್ಲ. ಅದನ್ನು ಸರಿಪಡಿಸುವಂತೆ ವಿಭಾಗೀಯ ಅಧಿಕಾರಿಗಳಿಗೆ ತಿಳಿಸುತ್ತೇವೆ. ರೈತರು ಆತಂಕಪಡುವ ಹಾಗಿಲ್ಲ.

– ಜಯಣ್ಣ, ಎಇಇ, ಬೆಸ್ಕಾಂ

ಪ್ರತಿಕ್ರಿಯಿಸಿ (+)