ಅಸಮರ್ಪಕ ವಿದ್ಯುತ್: ಕಿಮ್ಮನೆ ಗರಂ

7

ಅಸಮರ್ಪಕ ವಿದ್ಯುತ್: ಕಿಮ್ಮನೆ ಗರಂ

Published:
Updated:

ತೀರ್ಥಹಳ್ಳಿ: ತಾಲ್ಲೂಕಿನಾದ್ಯಂತ ಅಸಮರ್ಪಕ ವಿದ್ಯುತ್ ವಿತರಣೆಯಿಂದ ವಿದ್ಯುತ್ ಸಂಪರ್ಕ ಇದ್ದೂ ಇಲ್ಲದಂತಾಗಿದೆ. ಅಸಮರ್ಪಕ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಕೆಯಿಂದ ಈ ಸಮಸ್ಯೆ ಎದುರಾಗಿದೆ. ಮೆಸ್ಕಾಂ ಇಲಾಖೆ ಈ ಕುರಿತು ಶೀಘ್ರ ಕ್ರಮ ಜರುಗಿಸಬೇಕು ಎಂದು ಶಾಸಕಕಿಮ್ಮನೆ ರತ್ನಾಕರ್ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.ಮಂಗಳವಾರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶಾಸಕ ಕಿಮ್ಮನೆ ರತ್ನಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿದ್ಯುತ್ ಸಂಪರ್ಕ ಹೊಂದದ ಮನೆಗಳ ಸಂಪೂರ್ಣ ವರದಿಯನ್ನು ಒಂದು ವಾರದ ಒಳಗೆ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ತಾಲ್ಲೂಕಿನಲ್ಲಿ ಎಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ ಎಂಬ ವರದಿಯ ಪಟ್ಟಿ ನನ್ನ ಬಳಿ ಇದೆ. ಆದರೆ, ಇಲಾಖೆಯ ಬಳಿ ಈ ಮಾಹಿತಿ ಇಲ್ಲದೇ ಇರುವುದು ನಾಚಿಕೆಗೇಡು ಎಂದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗಳು ತಾಲ್ಲೂಕಿನಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ಬರುತ್ತಿಲ್ಲ. ನಿಗದಿತ ಸಮಯದೊಳಗೆ ಕಾಮಗಾರಿಗಳು ಪೂರ್ಣಗೊಳ್ಳುತ್ತಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಹಾರೋಗೊಳಿಗೆ ಪದ್ಮನಾಭ್, ಕೆಡಿಪಿ ಸದಸ್ಯ ಸಿ.ಬಿ. ಈಶ್ವರ್ ಹೇಳಿದರು.ಅದಕ್ಕೆ ಉತ್ತರಿಸಬೇಕಿದ್ದ ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು ಇಲಾಖೆಗೆ ನೋಟಿಸ್ ನೀಡಿ ಕಾಮಗಾರಿಗಳಿಗೆ ಬಿಲ್ ಪಾವತಿಸದಂತೆ ಕ್ರಮ ತೆಗೆದುಕೊಳ್ಳುವಂತೆ ಆದೇಶ ನೀಡಿದರು. ಕೋಣಂದೂರು ಸುತ್ತಮುತ್ತ ಇಲಿ ಜ್ವರ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ಈ ಭಾಗದಲ್ಲಿ ಜ್ವರದಿಂದ ನರಳುತ್ತಿರುವವರಿಗೆ ಸೂಕ್ತ ಚಿಕಿತ್ಸೆ ನೀಡಿ ಮುಂಜಾಗೃತಾ ಕ್ರಮಗಳನ್ನು ತಗೆದುಕೊಳ್ಳಬೇಕು ಎಂದು ಶಾಸಕ ಕಿಮ್ಮನೆ ರತ್ನಾಕರ್ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ಸೊಪ್ಪುಗುಡ್ಡೆಯಲ್ಲಿ ನಿರ್ಮಾಣ ಹಂತದಲ್ಲಿರುವ ಶಾಂತವೇರಿ ಗೋಪಾಲಗೌಡ ರಂಗಮಂದಿರದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕಿಮ್ಮನೆ ರತ್ನಾಕರ್ ಕಾಮಗಾರಿಯ ಕುರಿತು ಮಾಹಿತಿ ಪಡೆದು ತೊಡಕನ್ನು ನಿವಾರಿಸಿ ತಕ್ಷಣ ಕಾಮಗಾರಿ ಪೂರ್ಣಗೊಳಿಸುವಂತೆ ಕ್ರಮ ಜರುಗಿಸುವುದಾಗಿ ತಿಳಿಸಿದರು ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ರಾಮಪ್ಪ, ಉಪಾಧ್ಯಕ್ಷೆ ಜೀನಾ ವಿಕ್ಟರ್ ಡಿಸೋಜ, ಕಾರ್ಯ ನಿರ್ವಾಹಕ ಅಧಿಕಾರಿ ಡಾ.ವಿ.ಕೆ. ಮಂಜುನಾಥ್, ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry