ಅಸಮರ್ಪಕ ಸೌಲಭ್ಯ, ಅಥ್ಲೀಟ್‌ಗಳ ಪ್ರತಿಭಟನೆ

7

ಅಸಮರ್ಪಕ ಸೌಲಭ್ಯ, ಅಥ್ಲೀಟ್‌ಗಳ ಪ್ರತಿಭಟನೆ

Published:
Updated:

ಮೈಸೂರು: ಕಳೆದ ಮೂರು ವರ್ಷಗಳಿಂದ ತಮ್ಮ  ಕ್ರೀಡಾ ಕಿಟ್‌ಗಳನ್ನು ಕೊಟ್ಟಿಲ್ಲ ಎಂದು ಆರೋಪಿಸಿದ ಇಲ್ಲಿಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ವಸತಿ ನಿಲಯದ ಮಹಿಳಾ ಅಥ್ಲೀಟ್‌ಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.ಬೆಳಿಗ್ಗೆ ತಮ್ಮ ಹರಿದ ಬೂಟುಗಳು, ಕಿತ್ತುಹೋದ ಹಾಕಿ ಸ್ಟಿಕ್, ಚೆಂಡುಗಳನ್ನು ಚಾಮುಂಡಿ ವಿಹಾರದಲ್ಲಿರುವ ಇಲಾಖೆಯ ಕಚೇರಿಯ ಮುಖ್ಯದ್ವಾರದ ಮುಂದೆ ಗುಡ್ಡೆ ಹಾಕಿದ ಅಥ್ಲೀಟ್‌ಗಳು ತಿಂಡಿ, ಊಟ ಮಾಡದೇ ಧರಣಿ ಕುಳಿತರು. ಸುಮಾರು ಅರು ತಾಸುಗಳವರೆಗೆ ಅಥ್ಲೀಟ್‌ಗಳು ನಡೆಸಿದ ಪ್ರತಿಭಟನೆಗೆ ಇಲಾಖೆಯ ಅಧಿಕಾರಿಗಳು ಮಣಿದರು. ಬೆಂಗಳೂರಿನಿಂದ ಇಲಾಖೆಯ ಪ್ರಭಾರ ಉಪನಿರ್ದೇಶಕ ಸಿ.ಎಂ. ಅಪ್ಪಚ್ಚು ಮತ್ತು ಮೈಸೂರು ಉಪವಿಭಾಗಾಧಿಕಾರಿ ಭಾರತಿ ಅವರು ಬಂದು ಭರವಸೆ ನೀಡುವವರೆಗೂ  ಪ್ರತಿಭಟನೆ ನಡೆಯಿತು.ಟ್ರ್ಯಾಕ್ ಸೂಟ್, ಬೂಟುಗಳು, ಕ್ರೀಡಾ ಸಲಕರಣೆಗಳ ಕಿಟ್‌ಗಳು ಮಂಜೂರಾಗಿದ್ದರೂ ತಮಗೆ ಸಿಕ್ಕಿಲ್ಲ. ಇಲಾಖೆಯ ಅಧಿಕಾರಿಗಳು ದಿನಕ್ಕೊಂದು ಸಬೂಬು ಹೇಳುತ್ತಿದ್ದಾರೆ. ನಮ್ಮ ಸ್ವಂತ ಹಣದಿಂದ ದುಬಾರಿ ಬೂಟುಗಳು ಮತ್ತು ಟ್ರ್ಯಾಕ್ ಸೂಟ್‌ಗಳನ್ನು ಖರೀದಿಸುತ್ತಿದ್ದೇವೆ. 72 ಅಥ್ಲೀಟ್‌ಗಳಿರುವ ಸೀನಿಯರ್ ಮಹಿಳಾ ವಸತಿ ನಿಲಯದಲ್ಲಿಯೂ ಮೂಲ ಸೌಲಭ್ಯಗಳ ಕೊರತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಿಟ್ ಮಂಜೂರು ಭರವಸೆ: ಮಧ್ಯಾಹ್ನ ಸುಮಾರು 3 ಗಂಟೆಗೆ ಬೆಂಗಳೂರಿನಿಂದ ಆಗಮಿಸಿದ ಸಿ.ಎಂ. ಅಪ್ಪಚ್ಚು  ಅವರು ಮನವೋಲಿಸಲು ಪ್ರಯತ್ನಿಸಿದರೂ ಧರಣಿನಿರತರು ಒಪ್ಪಲಿಲ್ಲ. ಮೂರು ಕಿಟ್‌ಗಳನ್ನು ಕೊಡಬೇಕು, ಇಲ್ಲದಿದ್ದರೆ ಮಂಜೂರಾಗಿರುವ ಕಿಟ್‌ಗಳು ಎಲ್ಲಿ ಹೋದವು ಎಂಬ ಲೆಕ್ಕ ಕೊಡಬೇಕು ಎಂದು ಪಟ್ಟು ಹಿಡಿದರು.`ನಾವು ಉತ್ತಮ ಪ್ರದರ್ಶನ ನೀಡಿಲ್ಲವೆಂದರೆ ನಮ್ಮ ಮೇಲೆ ಕ್ರಮ ಕೈಗೊಳ್ಳಿ. ನಮ್ಮ ವಸತಿ ನಿಲಯದ ಅಥ್ಲೀಟ್‌ಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಸಾಧನೆ ಮಾಡಿದ್ದಾರೆ. ಆದರೂ ನಮ್ಮ ಬಗ್ಗೆ ಏಕೆ ಸರ್ಕಾರಕ್ಕೆ ನಿರ್ಲಕ್ಷ್ಯ ಭಾವನೆ.  ಸರ್ಕಾರಕ್ಕೆ ಹಣದ ಕೊರತೆಯೇ~ ಎಂದು ಎಲ್ಲರೂ ದೂರಿದರು.

ನಂತರ ಆಗಮಿಸಿದ ಉಪವಿಭಾಗಾಧಿಕಾರಿ ಭಾರತಿ ಅವರೂ ಅಧಿಕಾರಿಗಳು ಮತ್ತು ವಿದ್ಯಾರ್ಥಿನಿಯರೊಂದಿಗೆ ಚರ್ಚಿಸಿದರು.ಇದರ ಫಲವಾಗಿ ಫೆಬ್ರುವರಿ 17ರಂದು ಒಂದು ಕಿಟ್ ಮತ್ತು ಈ ತಿಂಗಳ ಕೊನೆಯ ವಾರದಲ್ಲಿ ಮತ್ತೊಂದು ಕಿಟ್ ನೀಡುವ ಭರವಸೆಯನ್ನು ವಿದ್ಯಾರ್ಥಿನಿಯರಿಗೆ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry