ಅಸಹನೆಯ ಪರಮಾವಧಿ

ಬುಧವಾರ, ಜೂಲೈ 24, 2019
27 °C

ಅಸಹನೆಯ ಪರಮಾವಧಿ

Published:
Updated:

ಅಸ್ಸಾಂ ಕಾಂಗ್ರೆಸ್ ಶಾಸಕಿ ರೂಮಿ ನಾಥ್ ಹಾಗೂ ಅವರ ಎರಡನೆ ಪತಿ ಜಾಕಿ ಜಕೀರ್ ಮೇಲೆ ಸುಮಾರು 200 ಜನರಷ್ಟಿದ್ದ ಗುಂಪೊಂದು ನಡೆಸಿರುವ ಹಲ್ಲೆ ಪ್ರಜಾತಂತ್ರ ವ್ಯವಸ್ಥೆಗೆ ಕಳಂಕ ತರುವಂತಹದ್ದು. ಈಗಾಗಲೇ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿ ಸುದ್ದಿಯಲ್ಲಿದೆ ಅಸ್ಸಾಂ.ಇದೇ ಸಂದರ್ಭದಲ್ಲಿ, ರಾಷ್ಟ್ರೀಯ ಟಿವಿ ವಾಹಿನಿಗಳಲ್ಲಿ  ಬಿತ್ತರಗೊಂಡಂತಹ ಗರ್ಭಿಣಿ ಶಾಸಕಿಯ ಮೇಲಿನ ದೌರ್ಜನ್ಯದ ದೃಶ್ಯಾವಳಿಗಳು ಆಘಾತಕಾರಿ. ಈ ದೌರ್ಜನ್ಯ ನಡೆದದ್ದು ಸಾಧಾರಣ ಮಹಿಳೆಯೊಬ್ಬರ ಮೇಲಲ್ಲ. ರಾಷ್ಟ್ರೀಯ ಪಕ್ಷವಾದ ಬಲಿಷ್ಠ ಕಾಂಗ್ರೆಸ್‌ನ ಶಾಸಕಿಯ ಮೇಲೆ ಎಂಬುದು ಈ ಪ್ರಕರಣದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.ಬಹುಶಃ ಭಾರತದಲ್ಲಿ ಶಾಸಕಿಯೊಬ್ಬರ ಮೇಲೆ ನಡೆದಂತಹ ಹಿಂಸಾತ್ಮಕ ದೌರ್ಜನ್ಯದ ಮೊದಲ ಪ್ರಕರಣ ಇದು. ಯಾವುದೇ ಕಾನೂನು, ಸುವ್ಯವಸ್ಥೆ ಇಲ್ಲದೆ ಗೂಂಡಾರಾಜ್ಯವೇ ವಿಜೃಂಭಿಸಿದಂತಹ ಸನ್ನಿವೇಶ ನಾಚಿಕೆಗೇಡಿನದು. ನೈತಿಕ ಪೊಲೀಸರ ಅಟ್ಟಹಾಸದ ಕ್ರೌರ್ಯವನ್ನೂ ಈ ದುಷ್ಕೃತ್ಯ ಬಯಲಿಗೆಳೆದಿದೆ.2006ರಲ್ಲಿ ಬಿಜೆಪಿ ಶಾಸಕಿಯಾಗಿದ್ದ ರೂಮಿ ನಾಥ್ ನಂತರ ಕಾಂಗ್ರೆಸ್ ಪಕ್ಷ ಸೇರಿಕೊಂಡು 2011ರಲ್ಲಿ ಮರುಚುನಾಯಿತರಾಗಿದ್ದರು. `ಪತ್ನಿ ನಾಪತ್ತೆಯಾಗಿದ್ದಾರೆ. ಆಕೆಯನ್ನು ಅಪಹರಿಸಲಾಗಿದೆ~ ಎಂದು ರೂಮಿ ನಾಥ್‌ರ ಮೊದಲ ಪತಿ ಮೇ ತಿಂಗಳಿನಲ್ಲಿ ಪೊಲೀಸರಿಗೆ ದೂರು ನೀಡಿದಾಗಲಿಂದ ಈ ಶಾಸಕಿ ಸುದ್ದಿಯಲ್ಲಿದ್ದಾರೆ.ಮೊದಲ ಪತಿಯಿಂದ ಅವರಿಗೆ ಎರಡು ವರ್ಷದ ಮಗುವೂ ಇದೆ. ಆದರೆ ತಾವು ಅಪಹರಣಗೊಂಡಿಲ್ಲ; ಸ್ವಇಚ್ಛೆಯಿಂದ ಮುಸ್ಲಿಂ ಆಗಿ ಪರಿವರ್ತನೆಗೊಂಡು ಮುಸ್ಲಿಂ ಯುವಕ ಜಾಕಿ ಜಕೀರ್ ಅವರನ್ನು ವಿವಾಹವಾಗಿರುವುದಾಗಿ ಈ ಶಾಸಕಿ ಬಹಿರಂಗ ಹೇಳಿಕೆ ನೀಡಿದ್ದರು. ನಂತರ ವಿವಾದ ಅವರನ್ನು ಹಿಂಬಾಲಿಸಿತ್ತು. ಮೊದಲ ಪತಿಗೆ ವಿಚ್ಛೇದನ ನೀಡದೆ ಮರು ವಿವಾಹವಾದದ್ದು ಟೀಕೆಗಳಿಗೆ ಕಾರಣವಾಗಿತ್ತು.ಅಂತರ್‌ಧರ್ಮೀಯ ವಿವಾಹವಾಗಿದ್ದಾರೆ ಎಂಬುದು ಅಸಹನೆಯನ್ನು  ಮತ್ತಷ್ಟು ಹೆಚ್ಚಿಸಿತ್ತು. ಇವ್ಲ್ಲೆಲವೂ ಅವರ ವೈಯಕ್ತಿಕ ಬದುಕಿಗೆ ಸಂಬಂಧಿಸಿದ್ದು. ಅವರ ಕುಟುಂಬ ಅಥವಾ ಕಾನೂನಿನ ಮಟ್ಟದಲ್ಲಿ ಪರಿಹರಿಸಿಕೊಳ್ಳಬೇಕಿರುವ ವಿಚಾರಗಳು. ಆದರೆ ಹಿಂಸೆಯ ಮೂಲಕ ಅವರನ್ನು ಮಣಿಸಲು ಹೊರಟಂತಹ ಶಕ್ತಿಗಳು ಸಮಾಜಕ್ಕೆ ಕೆಟ್ಟ ಸಂದೇಶ ನೀಡಿವೆ. ಈ ದುಷ್ಟ ಶಕ್ತಿಗಳು ಯಾವುವು ಎಂಬುದು ಪತ್ತೆಯಾಗಬೇಕಿದೆ.ರಾಜ್ಯದ ಆಡಳಿತದ ಭಾಗವಾಗಿರುವ ಜನಪ್ರತಿನಿಧಿಗೂ ಈ ಗತಿ ಬರಬಹುದು ಎಂಬುದು ನಾಗರಿಕ ಸಮಾಜದ ಮುನ್ನಡೆಗೆ ಆರೋಗ್ಯಕರ ಲಕ್ಷಣವಲ್ಲ. ದುಷ್ಕೃತ್ಯ ನಡೆದ ತಕ್ಷಣ ಪೊಲೀಸರು ಕಾರ್ಯಪ್ರವೃತ್ತವಾಗದಿದ್ದುದೂ ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ. ಪ್ರಕರಣ ನಡೆದ ಎರಡು ದಿನದ ನಂತರ, ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.ಇಪ್ಪತ್ತೊಂದನೇ ಶತಮಾನದಲ್ಲೂ ಅನೇಕ ವಿಚಾರಗಳಲ್ಲಿ ಮಹಿಳೆಗೆ ಸ್ವತಂತ್ರ ಆಯ್ಕೆಗಳಿಲ್ಲ. ಅದರಲ್ಲೂ ಲೈಂಗಿಕ ವಿಚಾರಗಳಿಗೆ ಸಂಬಂಧಿಸಿದಂತೆ ಅಂಗೀಕೃತ ನಿಯಮಗಳನ್ನು ದಾಟಲು ಯತ್ನಿಸುವ ಹೆಣ್ಣುಮಕ್ಕಳನ್ನು ಬದುಕುವುದಕ್ಕೂ ಬಿಡದೆ ಕುಟುಂಬ ಮರ್ಯಾದೆ ಉಳಿಸುವ ಹೆಸರಲ್ಲಿ `ಹತ್ಯೆ~ ನಡೆಸುವ ಕಾಲ ಇದು. ಕುಟುಂಬ ಹಾಗೂ ಸಮುದಾಯದ ಗೌರವದ ಹೆಸರಲ್ಲಿ ಹಿಂಸೆ, ದೌರ್ಜನ್ಯಗಳು ಮಹಿಳೆಯನ್ನು ಆವರಿಸಿಕೊಳ್ಳುತ್ತಿರುವುದು ಅಪಾಯಕಾರಿ ಪ್ರವೃತ್ತಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry