ಮಂಗಳವಾರ, ಏಪ್ರಿಲ್ 20, 2021
32 °C

ಅಸಹಾಯಕ ಅಶಕ್ತರ ಅತಂತ್ರ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೃದ್ಧಾಪ್ಯ, ಕಾಯಿಲೆಗಳು, ಗರ್ಭಾವಸ್ಥೆ, ನಿರುದ್ಯೋಗ, ಅಂಗವಿಕಲತೆ, ಇತರೇ ಕಾರಣಗಳಿಂದ ಉಂಟಾದ ಆರ್ಥಿಕ ಹಾಗೂ ಸಾಮಾಜಿಕ ಸಂಕಷ್ಟಗಳಿಂದ ಬಳಲುವ ಅಶಕ್ತ ಹಾಗೂ ಅಸಹಾಯಕ ಜನರಿಗೆ ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ ದೊರಕಿಸಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಈ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ, ಕರ್ನಾಟಕ ಸರ್ಕಾರವು ಸಂಧ್ಯಾಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ಎಂದೆಲ್ಲ  ವೇತನಗಳನ್ನು ನೀಡುತ್ತಿದೆ.

 

ತುಳಸವ್ವಾ ಒಬ್ಬ ದಿಕ್ಕಿಲ್ಲದ ಅನಾಥೆ. ವಯಸ್ಸು 81. ಮೈಯಲ್ಲಿ ಶಕ್ತಿ ಇರುವವರೆಗೂ ಅವರಿವರ ಮನೆಯಲ್ಲಿ ಪಾತ್ರೆ ತೊಳೆದು ಬಟ್ಟೆ ಒಗೆದು ಆ ಹಳ್ಳಿಯಲ್ಲಿ ಯಾರದಾದರೂ ಹೆರಿಗೆಯಾದರೆ, ಬಾಣಂತನ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದಳು. ವಯಸ್ಸು ಹೆಚ್ಚುತ್ತಾ ಹೋದಂತೆ ಕಾಲು ಹೋದವನಿಗೊಂದು ಊರುಗೋಲು ಎಂಬಂತೆ ಸಂಧ್ಯಾಸುರಕ್ಷಾ ಯೋಜನೆಯ ಫಲಾನುಭವಿಯಾಗಿ ಪ್ರತಿ ತಿಂಗಳೂ ದೊರಕುವ ನಾಲ್ಕು ನೂರು ರೂಪಾಯಿಗಳಲ್ಲಿ ಎರಡು ಹೊತ್ತಿನ ಅನ್ನಕ್ಕೆ ಬರ ಬರದೇ ಬದುಕು ಚಲಿಸತೊಡಗಿತು.

 

ದಿನ ಕಳೆದಂತೆ ಈ ಅಜ್ಜಿಗೆ ಕೆಲಸ ನೀಗದೇ ಕೇವಲ ಈ ನಾಲ್ಕುನೂರು ರೂಪಾಯಿಗಳ ಆಧಾರದ ಮೇಲೆ  ಬದುಕುವಂತಾಯಿತು. ಆದರೆ ಒಮ್ಮಿಂದೊಮ್ಮೆಲೇ ಈ ಪಿಂಚಣಿ ನಿಂತು ಹೋದಾಗ ಉಸಿರಾಟವೇ ನಿಂತು ಹೋದಂತಾಯಿತು. ಓದು ಬರಹ ಬಾರದ ಈ ಅನಕ್ಷರಸ್ಥೆ ತಿಳಿದವರನ್ನು ಕೇಳಿದಾಗ ಸಮಸ್ಯೆ ತನಗಷ್ಟೇ ಅಲ್ಲ ಗ್ರಾಮದ ಇನ್ನೂ ಅನೇಕ ಬಡಪಾಯಿಗಳಿಗೆ ಬಂದೊದಗಿದೆ ಎಂಬುದು ತಿಳಿಯಿತು.ಗ್ರಾಮಲೆಕ್ಕಾಧಿಕಾರಿಗಳ ಸಲಹೆ ಮೇರೆಗೆ ಅವಶ್ಯಕ ದಾಖಲೆಗಳ ನಕಲು ಪ್ರತಿಗಳನ್ನು ಸಲ್ಲಿಸಿದ ಪರಿಣಾಮವಾಗಿ ಹಾಗೂ ಗ್ರಾಮಲೆಕ್ಕಾಧಿಕಾರಿಗಳ ಶ್ರಮದಿಂದ ಹಲವರಿಗೆ ನಿಂತು ಹೋದ ಪಿಂಚಣಿ ಮತ್ತೆ ಬರುವಂತಾಯಿತು. ಆದರೆ ತುಳಸವ್ವನಂತಹ ಬಡಪಾಯಿಗಳು ಸಾಕಷ್ಟು ಸಲ ಸಂಬಂಧಪಟ್ಟ ಕಚೇರಿಗೆ ಅಲೆದಲೆದು ಹಲವಾರು ಸಲ ಅವಶ್ಯಕ ದಾಖಲೆಗಳ ನಕಲು ಪ್ರತಿಗಳನ್ನು ಸಲ್ಲಿಸಿದರೂ ವರುಷ ಕಳೆದರೂ ಪಿಂಚಣಿ ದೊರೆಯುತ್ತಿಲ್ಲ.  ಪಿಂಚಣಿಯ ಮೇಲೆಯೇ ಸಂಪೂರ್ಣ ಅವಲಂಬಿತ ಈ ತುಳಸವ್ವನಂತಹ ವೃದ್ಧರಿಗಿನ್ನು ಭಿಕ್ಷೆಯೊಂದೇ ಗತಿ!`ಪುಗಸೆಟ್ಟಿ ಸಿಗತೈತಿ ಅಂದ್ರ ನಮ್ಮ ಮಂದಿ ಸಿಕ್ಕದ್ದ ತಿಂತೈತಿ ಇದ್ದಾರು ಇಲ್ಲದಾರು ಎಲ್ಲಾರು ಕೂಡೆ ಈ ರೊಕ್ಕಕ್ಕ ಗಂಟ ಬಿದ್ರ ಸರ್ಕಾರ ಆದರೂ ಏನ ಮಾಡೀತು?~ ಗ್ರಾಮಸ್ಥರೊಬ್ಬರ ಮಾತಿನಲ್ಲಿಯೇ ಈ ಮಾಸಾಶನ ನಿಂತು ಹೋದ ಕಾರಣ ಸ್ಪಷ್ಟವಾಗುವುದು. ಈ ಮೊದಲೇ ತಿಳಿಸಿದಂತೆ ಈ ಯೋಜನೆಗಳು ಅಶಕ್ತ ಹಾಗೂ ಅಸಹಾಯಕರಿಗೋಸ್ಕರ. ಸಶಕ್ತ ಹಾಗೂ ಆರ್ಥಿಕ ಸಬಲತೆಯುಳ್ಳ ಜನರೂ ಕೂಡ ಈ ಯೋಜನೆಯ ಲಾಭ ಪಡೆಯುತ್ತಿರುವುದು ವಿಷಾದನೀಯ ಸಂಗತಿ. ಈ ಯೋಜನೆಗಳಿಗೆ ಅರ್ಹ ವ್ಯಕ್ತಿಗಳೆನಿಸಿಕೊಂಡಂತಹ ಬಡಪಾಯಿಗಳಿಗೆ  ಯೋಜನೆಯ ಲಾಭ ತಟ್ಟದಿರುವುದು ದಯನೀಯ ಸಂಗತಿ.ಬಸಲಿಂಗವ್ವಾ ಕೂಲಿ ನೇಕಾರ ಹೆಣ್ಣು ಮಗಳು. ಗಂಡನನ್ನು ಕಳೆದುಕೊಂಡು ಎರಡು ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಪರದಾಡುವ ವಿಧವಾ ವೇತನ ಫಲಾನುಭವಿ. ಈ ವಿಧವಾ ವೇತನವೇ ಅಷ್ಟೊ ಇಷ್ಟೊ ಬದುಕಿಗೆ ಸಹಾಯಕವಾಗಿದ್ದು ಈಗ ಒಂದು ವರ್ಷದಿಂದ ದಿಢೀರನೇ ಈ ವೇತನ ನಿಂತುಹೋಗಿ ಬಸಲಿಂಗವ್ವ ಕಂಗೆಟ್ಟಳು. ಸಂಬಂಧಪಟ್ಟ ಆಫೀಸಿಗೆ ಅಲೆದಾಡಿ ಬೇಸತ್ತಳು. ಪರಿಣಾಮ ಮಾತ್ರ ಶೂನ್ಯ. ಎಷ್ಟೇ ಪ್ರಯತ್ನ ಮಾಡಿದರೂ ಬಾರದಿದ್ದ ವೇತನದಿಂದ ಕಂಗೆಟ್ಟಳು. ಮುಂದೆ ಏನು ಮಾಡಬೇಕೆಂದು ದಿಕ್ಕು ತೋಚದಾಯಿತು.ಆದರೂ ಪ್ರಯತ್ನವನ್ನು ನಿಲ್ಲಿಸಲಿಲ್ಲ. ಕೊನೆಗೆ ಪ್ರಭಾವಿ ವ್ಯಕ್ತಿಗಳೊಬ್ಬರು ಈ ಬಡಪಾಯಿಯ ಅಳಲನ್ನು ಆಲಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದಾಗ ತಿಳಿದದ್ದು ಖಜಾನೆ ಇಲಾಖೆಯ ಬೇಜವಾಬ್ದಾರಿತನದಿಂದ ಹಣವನ್ನು ಈಕೆಯ ಖಾತೆಗೆ ಜಮೆ ಮಾಡದೇ ಬೇರೆ ಖಾತೆಗೆ ಜಮಾಯಿಸಿದ್ದರು! ಕಳೆದ ಒಂದು ವರ್ಷದಿಂದ ಈ ಬಸಲಿಂಗವ್ವ ಇಲಾಖೆಗೆ ಸಾಕಷ್ಟು ಅಲೆದಾಡಿದ್ದರೂ ಅವಳ ಸಮಸ್ಯೆಯ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಕಾರಣ ಆಕೆ ಕನಿಷ್ಠ ಕೂಲಿ ಮಾಡುವ ಹೆಣ್ಣು ಮಗಳು ಎನ್ನುವ ಅಸಡ್ಡೆ. ಜೊತೆಗೆ ಅವಳೇನು ಮಾಡಬಲ್ಲಳು ಎಂಬುವುದರೊಂದಿಗೆ ಮಾಡಿಕೊಟ್ಟ ಕೆಲಸಕ್ಕೆ ಅವಳಿಂದ ಏನು ಸಿಕ್ಕೀತು? ಎನ್ನವ ತಾತ್ಸಾರ!`ಅಂಗವಿಕಲ ಮಗನನ್ನು ಬಗಲಾಗ ಇಟ್ಗೊಂಡು ಅಧಿಕಾರಿಗಳ ಹತ್ತಿರ ಓಡಾಡಿದೆ. ಅವಗ ಬರುತ್ತಿದ್ದ ಅಂಗವಿಕಲ ಮಾಸಾಶನ ಹಾಗೂ ನನ್ಗ ಬರ‌್ತಿದ್ದ ವಿಧವಾ ವೇತನ ನಿಂತು ವರ್ಷ ಕಳದೈತಿ. ವಿಧವಾ ವೇತನ ಹಾಗೂ ಅಂಗವಿಕಲ ಮಾಸಾಶನ ಬಿಡುಗಡೆಯಾಗಿದ್ದರೂ ಇಲ್ಲಿಯವರೆಗೆ ಒಂದು ಪೈಸೆ ಕೈ ಸೇರಲಿಲ್ಲ. ಅಧಿಕಾರಿಗಳು ಕೈ ಚೆಲ್ಲಿದಾಗ, ಹಿರಿಯ ರಾಜಕಾರಣಿಗಳ ಬಳಿಗೆ ಹೋದೆ. ಅವರು ನೋಡ್ತಿನಿ ಎಂದು ಮಾತ್ರ ಹೇಳಿದರು. ಗಂಡನಿಗೆ ಕೊಳ್ಳಿ ಇಟ್ಟವರು ನಮಗೂ ಒಂದಷ್ಟು ವಿಷ ಹಾಕಿ ಸಾಯಿಸಿ ಪುಣ್ಯ ಕಟ್ಟಿಕೊಳ್ಳಲಿ~ ಎಂದೆಲ್ಲ ಹೀಗೆ ಹುಬ್ಬಳ್ಳಿಯ ನಿವಾಸಿ ಹೇಮಾ ಅವರು ನೊಂದು ನುಡಿದ ಮಾತುಗಳಿವು.ಮೇಲಿನ ಉದಾಹರಣೆಗಳಂತೆ ರಾಜ್ಯದ ಸಾಕಷ್ಟು ಅಶಕ್ತ ಜನರು ಅವರಿಗೋಸ್ಕರವೇ ಇರುವ ವೇತನಗಳಿಂದ ವಂಚಿತರಾಗಿ ಬಳಲುವಂತಾಗಿದೆ. ಸಾಕಷ್ಟು ಜನರಿಗೆ ವೇತನ ಮಂಜೂರಾಗಿದ್ದರೂ ಹಣ ಬರುತ್ತಿಲ್ಲ. ನಿಂತುಹೋದ ಈ ವೇತನಗಳಿಗೆ ಅಲ್ಲಲ್ಲಿ ಹೋರಾಟ ಉಪವಾಸ ಸತ್ಯಾಗ್ರಹಗಳು ನಡೆಯುತ್ತಿವೆಯಾದರೂ ಈ ಹೋರಾಟಗಳು `ಬಡವನ ಕೋಪ ದವಡೆಗೆ ಮೂಲ~ ಎಂಬಂತಾಗಿವೆ.ವೇತನ ನಿಂತುಹೋಗಿದ್ದರಿಂದ ಪ್ರತಿದಿನವೂ ಬ್ಯಾಂಕು, ತಾಲೂಕು ಖಜಾನೆ ಅಧಿಕಾರಿಗಳ ಕಚೇರಿ, ಕಂದಾಯ ನಿರೀಕ್ಷಕರ ಕಚೇರಿ ಮತ್ತು ತಹಸೀಲ್ದಾರ ಕಚೇರಿಗೆ ಅಲೆದಾಡುವಂತಾಗಿದೆ. ಈ ಬಡಪಾಯಿಗಳು ಹೇಳಿಕೇಳಿ ಅನಕ್ಷರಸ್ತರು, ಓಡಾಡಲು ಶಕ್ತಿ ಇಲ್ಲದವರು. ಅಷ್ಟೇ ಅಲ್ಲ ತಾಲೂಕು ಕಚೇರಿಗಳಿಗೆ ಅಲೆದಾಡಲು ತಿಳಿಯದವರು. ಹೀಗಾಗಿ ಇವರು ಮತ್ತೊಬ್ಬರನ್ನು ಆಶ್ರಯಿಸಲೇಬೇಕಾದ ಪರಿಸ್ಥಿತಿ. ತಮ್ಮದಷ್ಟೇ ಬಸ್ಸು, ಚಹಾ ಇತರೇ ಖರ್ಚನ್ನು ನಿಭಾಯಿಸದ ಇವರು ಜೊತೆಗೆ ಕರೆದುಕೊಂಡು ಹೋದವರ ಖರ್ಚನ್ನೂ ನಿಭಾಯಿಸಬೇಕು.ಹೇಗಾದರೂ ಮಾಡಿ ಮತ್ತೆ ನಿಂತು ಹೋದ ವೇತನ ಬಂದರೆ ಸಾಕು ಬದುಕಿಗೊಂದು ಆಸರೆ ಸಿಕ್ಕಂತಾಗುವುದೆಂಬ ಆಸೆಯಲ್ಲಿ ಸಾಲಸೂಲ ಮಾಡಿ ಹೀಗೆ ಆ ಕಚೇರಿ ಈ ಕಚೇರಿ ಎಂದೆಲ್ಲ ಅಲೆಯುತ್ತಿದ್ದಾರೆ! ಇವರ ಸಹಾಯಕ್ಕೆ ಇವರೊಂದಿಗೆ ಹೋಗುವವರು ಒಂದು ಸಲ ಹೋಗಬಹುದು ಎರಡು ಸಲ ಹೋಗಬಹುದು ಮೂರನೇ ಬಾರಿ ಅಂಗಲಾಚಿದರೆ `ಏ ಏನ್ರಿ ದಿನಾ ಸಾಯುವವರಿಗೆ ಯಾರ ಅಳತಾರಾ?~ ಎಂಬ ಮಾತನ್ನು ಕೇಳಿಸಿಕೊಳ್ಳಬೇಕಾಗಬಹುದು.ಇವರ ನೋವು ನೀಗಿ ನಿಜ ಫಲಾನುಭವಿಗಳಿಗೆ ಯೋಜನೆಯ ಲಾಭ ತಟ್ಟುವಂತಾಗಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯತೆ ಇದೆ. ಅರ್ಹ ಫಲಾನುಭವಿಗಳ ಆಯ್ಕೆಗೆ ಅಧಿಕಾರಿಗಳ ತಂಡ ಮನೆ ಮನೆಗೆ ತೆರಳಿ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಸುಳ್ಳು ಫಲಾನುಭವಿಗಳನ್ನು ಗುರುತಿಸಿ ದಂಡ ವಿಧಿಸಿದಲ್ಲಿ, ನಕಲಿ ಫಲಾನುಭವಿಗಳನ್ನು ತಡೆಗಟ್ಟಬಹುದು. ಜೊತೆಗೆ ಅನರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ನೀಡಿದ ಅಧಿಕಾರಿಗಳಿಗೂ ಶಿಕ್ಷೆಯನ್ನು ವಿಧಿಸುವಂತಾದಲ್ಲಿ ಯೋಜನೆಯ ಲಾಭ ಸಂಪೂರ್ಣವಾಗಿ ಅರ್ಹರಿಗೆ ಮಾತ್ರ ಲಭಿಸುವ ಸಾಧ್ಯತೆಗಳಿವೆ.ಅನರ್ಹ ಫಲಾನುಭವಿಗಳಲ್ಲಿ ಸರ್ಕಾರ ಕೊಡುವಾಗ ತೆಗೆದುಕೊಳ್ಳುವಲ್ಲಿ ತಪ್ಪೇನು ಎನ್ನುವ ಭಾವನೆ ಇದೆ. ಆದರೆ ತಾವು ಹಸಿದವರ ಪಾಲಿನ ತುತ್ತನ್ನು ಕಸಿದುಕೊಳ್ಳುತ್ತಿದ್ದೇವೆ ಎಂಬ ಅರಿವಿಲ್ಲ. ಸುಳ್ಳು ಕಪಟತನದ ಸ್ಥಳದಲ್ಲಿ ಪ್ರಾಮಾಣಿಕತೆ ಹುಟ್ಟಿಕೊಂಡಲ್ಲಿ ಅರ್ಧ ಸಮಸ್ಯೆ ತನ್ನಿಂದ ತಾನೇ ಮರೆಯಾಗಬಹುದೇನೊ. ಏನೇ ಆಗಲಿ ಮೊದಲು ಈ ಬಡಪಾಯಿಗಳ ನಿಂತು ಹೋದ ವೇತನ ಮತ್ತೆ ಬರುವಂತಾಗಿ ಯೋಜನೆಗೊಂದು ಅರ್ಥ ಬರುವಂತಾಗಲಿ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.