5
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಅಸಹಾಯಕ ಪ್ರಧಾನಿ

Published:
Updated:

ಯುಪಿಎ ಸರ್ಕಾರದ ಹತ್ತು ವರ್ಷದ ಅವಧಿಯುದ್ದಕ್ಕೂ ‘ಮನ­ಮೋಹನ್‌ ಸಿಂಗ್‌ ಅವರು ನಾಮಕಾವಸ್ಥೆ ಪ್ರಧಾನಿ­ಯಾಗಿ­ದ್ದರು, ಪ್ರಮುಖ ನಿರ್ಧಾರವನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ತೆಗೆದುಕೊಳ್ಳುತ್ತಿದ್ದರು’ ಎಂಬ ಆರೋಪ ಸುಳ್ಳಲ್ಲ, ಅದು ವಾಸ್ತವ ಎಂಬುದು ಈಗ ಮತ್ತೆ ದೃಢಪಟ್ಟಂತಾಗಿದೆ.ಇತ್ತೀಚೆಗೆ ಹೊರಬಂದ ಎರಡು ಪುಸ್ತಕ­­ಗಳಲ್ಲಿ ಪ್ರಧಾನಿಯ ಅಸಹಾಯಕ ಪರಿಸ್ಥಿತಿ  ಮನಮುಟ್ಟುವಂತೆ ಉಲ್ಲೇಖ­­ಗೊಂಡಿದೆ. ಇದರಲ್ಲಿ ಬರೆದದ್ದೆಲ್ಲ ಕಪೋಲಕಲ್ಪಿತ, ಉತ್ಪ್ರೇಕ್ಷೆಯಿಂದ ಕೂಡಿದ್ದು ಎಂದು ಸುಲಭವಾಗಿ ತಳ್ಳಿಹಾಕುವುದೂ ಸರಿಯಲ್ಲ.  ಏಕೆಂದರೆ ಇವು­ಗಳ ಲೇಖಕರಲ್ಲಿ ಒಬ್ಬರು ಕೆಲ ಕಾಲ ಪ್ರಧಾನಿಯವರಿಗೆ ಮಾಧ್ಯಮ ಸಲಹೆ­ಗಾರ­ರಾಗಿದ್ದ ಪತ್ರಕರ್ತ ಸಂಜಯ್‌ ಬಾರು ಮತ್ತು ಇನ್ನೊಬ್ಬರು ಕಲ್ಲಿ­ದ್ದಲು ಖಾತೆ ಕಾರ್ಯದರ್ಶಿಯಾಗಿದ್ದ ಪಿ.ಸಿ. ಪಾರೇಖ್‌.ಇವರಿಬ್ಬರೂ ಉನ್ನತ ಹುದ್ದೆಗಳಲ್ಲಿ ಇದ್ದವರು, ಪ್ರಧಾನಿ ಕಾರ್ಯಾಲಯದ ಆಡಳಿತ ವೈಖರಿ­ಯನ್ನು ಬಹಳ ಹತ್ತಿರದಿಂದ ಕಂಡವರು. ಪುಸ್ತಕದಲ್ಲಿ ಉಲ್ಲೇಖಿಸಿ­ದಂತೆ, ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರು ಪ್ರಧಾನಿ ಹುದ್ದೆಯನ್ನು ಕೈಗೊಂಬೆ ಮಾಡಿ­ಕೊಂಡಿದ್ದರಿಂದ ಮಂತ್ರಿಗಳು ಕೂಡ ಪ್ರಧಾನಿಯನ್ನು ಗಣನೆಗೆ ತೆಗೆದು­ಕೊಳ್ಳು­ತ್ತಿರಲಿಲ್ಲ, ಕೆಲ ಸಚಿವರಂತೂ ಪ್ರಧಾನಿಗೆ ತಮ್ಮ ತಮ್ಮ ಇಲಾಖೆ ವ್ಯಾಪ್ತಿಯ ಮಹತ್ವದ ತೀರ್ಮಾನಗಳ ಬಗ್ಗೆ ಸೌಜನ್ಯಕ್ಕಾದರೂ ಮಾಹಿತಿ ಕೊಡುತ್ತಿರಲಿಲ್ಲ ಎಂಬುದು  ಸಂಸದೀಯ ಪ್ರಜಾಸತ್ತೆ ಮತ್ತು ಸಾಮೂಹಿಕ ಹೊಣೆ­ಗಾರಿಕೆಯ ತತ್ವದ ಉಲ್ಲಂಘನೆ ಎಂದೇ ಹೇಳಬೇಕಾಗುತ್ತದೆ.ಸಚಿವರ ನೇಮ­ಕಾತಿಯಲ್ಲಿ ಸಿಂಗ್‌ ಅವರಿಗೆ ಪೂರ್ಣ ಸ್ವಾತಂತ್ರ್ಯ ಇರಲಿಲ್ಲ, ಸೋನಿಯಾ ಅವರು ಸಂವಿಧಾನೇತರ ಶಕ್ತಿಯಾಗಿ ಆಡಳಿತ ನಿಯಂತ್ರಿಸುತ್ತಿದ್ದರು ಎನ್ನುವುದು ಬಾರು ಅವರ ಪುಸ್ತಕದ ತಿರುಳು. ಪಾರೇಖ್‌ ಅವರು ಬರೆದಂತೆ, ಕಲ್ಲಿದ್ದಲು ಸಚಿವರಾಗಿದ್ದ ಶಿಬು ಸೊರೆನ್‌ ಮತ್ತು ದಾಸರಿ ನಾರಾಯಣ ರಾವ್‌ ಅವರು ಕೋಲ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆ ನೇಮಕಾತಿಗೆ ಲಂಚದ ಬೇಡಿಕೆ ಇಟ್ಟಿದ್ದರು, ಎಷ್ಟೋ ವಿಷಯಗಳು ಪ್ರಧಾನಿ ಗಮನಕ್ಕೇ ಬರುತ್ತಿರಲಿಲ್ಲ ಎನ್ನುವುದು ಆಘಾತಕಾರಿ ವಿದ್ಯಮಾನ. ಇದನ್ನೆಲ್ಲ ನೋಡಿದರೆ ಸಿಂಗ್‌ ಅವರು ಹೆಸರಿಗೆ ಪ್ರಧಾನಿ ಹುದ್ದೆಯಲ್ಲಿದ್ದರು, ಆದರೆ ಆಡಳಿತ ಅವರ ಕೈಯಲ್ಲಿ ಇರಲಿಲ್ಲ ಎಂಬುದು ಸಾಬೀತಾಗುತ್ತದೆ.ಹಾಗೆ ನೋಡಿದರೆ ಈ ಪುಸ್ತಕಗಳು ಬಹಿರಂಗಪಡಿಸಿದ ಬಹುತೇಕ ಸಂಗತಿಗಳಲ್ಲಿ ಹೊಸದೇನಿಲ್ಲ. ಆದರೆ ಇವು ಹೊರಬಂದ ಸಮಯ ಸ್ವಲ್ಪ ಅನುಮಾನಕ್ಕೆ ಎಡೆ ಮಾಡುತ್ತದೆ. ಲೋಕಸಭೆ ಚುನಾವಣೆಗಳ ಆಜೂ­ಬಾಜಿನಲ್ಲಿ ಪುಸ್ತಕದಲ್ಲಿನ ಅಂಶಗಳನ್ನು ಕಂತುಕಂತಿನಲ್ಲಿ ಹೊರಬಿ­ಡುತ್ತಿರುವುದರ ಹಿಂದೆ ಕಾಂಗ್ರೆಸ್‌ಗೆ ಮುಜುಗರ ಮಾಡುವ, ಪ್ರತಿಪಕ್ಷ­ಗಳಿಗೆ ಅದರಲ್ಲೂ ವಿಶೇಷವಾಗಿ ಬಿಜೆಪಿಗೆ ಅನುಕೂಲ ಕಲ್ಪಿಸುವ ಉದ್ದೇಶವಿದೆ ಎಂದು ಆರೋಪಿಸುವವರೂ ಇದ್ದಾರೆ.ಆದರೆ ಕೃತಿಕಾರ­ರಿಬ್ಬರಿಗೂ ಅಂಥ ರಾಜಕೀಯ ಮಹತ್ವಾಕಾಂಕ್ಷೆ ಇದ್ದಂತೆ ಅನಿಸುವುದಿಲ್ಲ. ಆದರೆ ಸ್ವಾರ್ಥ ಇರಬಹುದೇನೋ.  ಈಗ ಅನೇಕ ಸೂಕ್ಷ್ಮ ಮತ್ತು ಇರುಸು ಮುರುಸಿನ ಅಂಶಗಳು ಬಹಿರಂಗಗೊಂಡಿದ್ದರಿಂದ  ಯಥೇಚ್ಛ ಪ್ರಚಾರವಂತೂ ಸಿಕ್ಕಿದೆ. ಇದರಿಂದ ಪುಸ್ತಕದಲ್ಲಿ ಉಲ್ಲೇಖಿಸಿದ ಸಂಗತಿಗಳು, ಅವುಗಳ ಗಂಭೀರತೆಯೇನೂ ಕಡಿಮೆಯಾಗುವುದಿಲ್ಲ.ಪ್ರಧಾನಿ ಹುದ್ದೆಯ ಘನತೆ, ಗಾಂಭೀರ್ಯಕ್ಕೆ ಯುಪಿಎ ಅವಧಿಯಲ್ಲಿ ಧಕ್ಕೆ ಬಂದಿತ್ತು ಎಂಬ ಐತಿಹಾಸಿಕ ಸತ್ಯವನ್ನು ಬಚ್ಚಿಡುವುದಂತೂ ಸಾಧ್ಯವಿಲ್ಲ. ಸರ್ಕಾರ ಮತ್ತು ಪಕ್ಷದ ನಡುವಿನ ಸಂಬಂಧ, ಅಂತರಗಳ ಬಗ್ಗೆ ಚರ್ಚೆಗೆ ಇದು ಪ್ರೇರಣೆಯಾಗಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry