ಶನಿವಾರ, ಮೇ 28, 2022
31 °C

ಅಸಾಧಾರಣ ಸಂಸ್ಥೆ ಹುಟ್ಟಿದ್ದು ಹೀಗೆ...

ಡಾ.ಆರ್.ಬಾಲಸುಬ್ರಹ್ಮಣ್ಯಂ Updated:

ಅಕ್ಷರ ಗಾತ್ರ : | |

ಶ್ರೇಷ್ಠ ಸಂಸ್ಥೆಗಳನ್ನು ರಾತ್ರೋರಾತ್ರಿ ದಿಢೀರ್ ನಿರ್ಮಾಣ ಮಾಡಲಾಗದು. ಅವುಗಳ ನಿರ್ಮಾಣದ ಹಿಂದಿನ ಬೆವರು ಮತ್ತು ಕಠಿಣ ಶ್ರಮ ಬಹುತೇಕರಿಗೆ ಗೋಚರಿಸುವುದಿಲ್ಲ. ಹಲವು ಸಂಸ್ಥೆಗಳು ಒಬ್ಬ ವ್ಯಕ್ತಿಯ ಅಥವಾ ಇಬ್ಬರು ವ್ಯಕ್ತಿಗಳ ಮುನ್ನೋಟದ ಪರಿಣಾಮವಾಗಿ ಆರಂಭವಾಗುತ್ತವೆ.ಕಾಲಕ್ರಮೇಣ ಅವುಗಳನ್ನು ನಿರ್ಮಿಸಲು ಏಕಕಾಲಕ್ಕೆ ನೂರಾರು ಜನ ಕೆಲಸ ಮಾಡಬೇಕಾಗುತ್ತದೆ. ಇಂತಹ ಹಲವು ವರ್ಷಗಳ ಪರಿಶ್ರಮವನ್ನು ಇದು ಬೇಡುತ್ತದೆ. ಆನಂತರ ನಮಗೆಲ್ಲಾ ಅಚ್ಚರಿಯಾಗುವಂತೆ ಸಂಸ್ಥೆ ಬೆಳೆದು ನಿಲ್ಲುತ್ತದೆ.

ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಅಂತಹ ಸಂಸ್ಥೆಗಳಲ್ಲಿ ಒಂದಾಗಿದೆ.ಇಂದು ಜಗತ್ತಿನೆಲ್ಲೆಡೆ ರಾಮಕೃಷ್ಣ ಮಠದ ನೂರಾರು ಕೇಂದ್ರಗಳನ್ನು ಕಾಣಬಹುದು. ಶಾಲೆಗಳು, ಆಸ್ಪತ್ರೆಗಳು ಇತರ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಈ ಕೇಂದ್ರಗಳ ಮೂಲಕ ನಡೆಸಲಾಗುತ್ತಿದೆ. ರಾಮಕೃಷ್ಣ ಮಿಷನ್ ಇಂದು ಈ ರೀತಿ ಕಾಣಬೇಕಾದರೆ, ಅದರ ಹಿಂದೆ ಶ್ರೀ ರಾಮಕೃಷ್ಣರು ಮತ್ತು ವಿವೇಕಾನಂದರಿಂದ ಪ್ರೇರಿತರಾದ ನೂರಾರು ಸನ್ಯಾಸಿಗಳ ಹೋರಾಟ ಹಾಗೂ ಪರಿಶ್ರಮ ಇರುವುದು ಸಾಮಾನ್ಯ ನೋಡುಗರಿಗೆ ಅರ್ಥವಾಗುವುದು ಕಷ್ಟ.ಮಠ ಮತ್ತು ಮಿಷನ್ ಸ್ಥಾಪಿಸಲು ವಿವೇಕಾನಂದರು ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಯಿತು ಎಂಬುದನ್ನು ನಂಬಲು ಕೂಡ ಕಷ್ಟವಾಗುತ್ತದೆ.

`ನಮ್ಮ ಹಿರಿಯ ಗುರುಗಳು ಮೃತಪಟ್ಟ ದುರದೃಷ್ಟದ ದಿನ ಬಂತು. ನಾವು ಅವರಿಗೆ ಸಾಧ್ಯವಿರುವಷ್ಟು ಅತ್ಯುತ್ತಮ ಆರೈಕೆ ಮಾಡಿದೆವು. ಆ ಸಂದರ್ಭದಲ್ಲಿ ನಮಗೆ ಯಾವ ಗೆಳೆಯರೂ ಇರಲಿಲ್ಲ.

 

ವಿಚಿತ್ರವಾದ ಪ್ರತಿಪಾದನೆಗಳನ್ನು ಮಾಡುವ ಕೆಲವರಿರುವ ಗುಂಪಿನ ಮಾತಿಗೆ ಯಾರು ಕಿವಿಗೊಡುತ್ತಾರೆ? ಭಾರತದಲ್ಲಂತೂ, ಹುಡುಗರೆಂದರೆ ಲೆಕ್ಕಕ್ಕಿಲ್ಲದವರೇ ಅಲ್ಲವೇ? ಒಂದು ಡಜನ್ ಹುಡುಗರು ಬೃಹತ್ ಜನಸಮೂಹಕ್ಕೆ ದೊಡ್ಡ ದೊಡ್ಡ ಮಾತುಗಳನ್ನು ಆಡಿ, ಅವನ್ನು ತಮ್ಮ ಜೀವನದಲ್ಲಿ ಕಾರ್ಯರೂಪಕ್ಕಿಳಿಸಲು ದೃಢ ನಿಶ್ಚಯ ಮಾಡಿರುವುದಾಗಿ ಹೇಳುವುದನ್ನು ಸುಮ್ಮನೆ ಹಾಗೇ ಕಲ್ಪಿಸಿಕೊಳ್ಳಿ. ನೀವು ಏತಕ್ಕೋಸ್ಕರ ಇವೆಲ್ಲವನ್ನೂ ಮಾಡಲು ಹೊರಟಿದ್ದೀರಿ ಎಂದೇ ಎಲ್ಲರೂ ನಗೆಯಾಡಿದರು.ನಂತರ ನಗೆ ಹೋಗಿ ಗಾಂಭೀರ್ಯ ಮೂಡಿತು; ಆಮೇಲೆ ಒಂದು ರೀತಿಯ ಬಾಧೆಯಾಯಿತು. ಹುಡುಗರ ಪೋಷಕರು ನಮಗೆ ಹೊಡೆತ ನೀಡಲು ಮುಗಿಬೀಳುತ್ತಾರೇನೋ ಎಂದು ಭಾಸವಾಗುತ್ತಿತ್ತು. ನಾವು ಹೆಚ್ಚೆಚ್ಚು ಅಪಹಾಸ್ಯಕ್ಕೆ ಗುರಿಯಾದಂತೆಲ್ಲಾ ನಮ್ಮ ನಿಶ್ಚಯ ಇನ್ನಷ್ಟು ದೃಢವಾಗುತ್ತಾ ಹೋಯಿತು~ ಎಂದು ವಿವೇಕಾನಂದರು ಒಂದೆಡೆ ಬರೆದಿದ್ದಾರೆ.ಶ್ರೀ ರಾಮಕೃಷ್ಣರು ತಮ್ಮ ಅಂತಿಮ ದಿನಗಳಲ್ಲಿ ಕಾಶಿಪುರದ ತೋಟದ ಮನೆಯಲ್ಲಿದ್ದರು. ಅವರ ಹತ್ತಿರದ ಬಳಗದಲ್ಲಿದ್ದ, ಅವಿವಾಹಿತರಾದ ಯುವ ಶಿಷ್ಯರು ಅವರನ್ನು ಹಗಲು ಇರುಳು ನೋಡಿಕೊಂಡಿದ್ದರು. ರಾಮಕೃಷ್ಣರು ಕೊನೆಯುಸಿರೆಳೆದ ನಂತರ ಅವರಲ್ಲಿ ಬಹುತೇಕರು, ತಮಗೆ ಇಷ್ಟವಿಲ್ಲದಿದ್ದರೂ ತಮ್ಮ ಕುಟುಂಬಗಳಿಗೆ ವಾಪಸ್ ತೆರಳಿದರು. ಅವರು ಇನ್ನೂ ಲೌಕಿಕ ಜೀವನವನ್ನು ವಿಧ್ಯುಕ್ತವಾಗಿ ಪರಿತ್ಯಜಿಸಿರಲಿಲ್ಲ.ಆದರೆ ರಾಮಕೃಷ್ಣರು, ಮಾನಸಿಕವಾಗಿ ಲೌಕಿಕ ಜೀವನವನ್ನು ಪರಿತ್ಯಜಿಸುವಂತೆ ಪರಿಣಾಮ ಬೀರಿದ್ದರು. ಅವರಲ್ಲಿ ಹಲವರಿಗೆ ತಾವೇ ಸನ್ಯಾಸಿಗಳ ಅರಿವೆ ನೀಡುವ ಮೂಲಕ ಸನ್ಯಾಸ ಜೀವನಕ್ಕೆ ಪರಿಚಯಿಸಿದ್ದರು.ಬಾರಾನಗರ ಮಠ: ಗುರುಗಳ ಇಬ್ಬರು ಮೂವರು ಶಿಷ್ಯರಿಗೆ ತಂಗಲು ಬೇರ‌್ಯಾವ ಜಾಗವೂ ಇರಲಿಲ್ಲ. ಆಗ ರಾಮಕೃಷ್ಣರ ಭಕ್ತರಾಗಿದ್ದ, ಕುಟುಂಬಸ್ಥರಾಗಿದ್ದ,  ಉದಾರ ಹೃದಯದ ಸುರೇಂದ್ರ ಎಂಬುವವರು ಹೀಗೆ ಹೇಳಿದರು. “ಸಹೋದರ ಶಿಷ್ಯರೇ, ನೀವು ಎಲ್ಲಿಗೆ ಹೋಗುವಿರಿ? ನಾವು ಒಂದು ಬಾಡಿಗೆ ಮನೆ ಪಡೆಯೋಣ.

 

ನೀವು ಅಲ್ಲಿದ್ದುಕೊಂಡು, ಆ ತಾಣವನ್ನು ಗುರುಗಳ ಪವಿತ್ರ ಸನ್ನಿಧಿಯನ್ನಾಗಿ ಪರಿವರ್ತಿಸಿ. ಸಂಸಾರಿಗಳಾದ ನಾವು ಶಾಂತಿ, ಸಮಾಧಾನಕ್ಕಾಗಿ ಅಲ್ಲಿಗೆ ಬರುತ್ತೇವೆ. ನಾವು ಇಡೀ ಜೀವನವನ್ನು ಬರೀ ಹೆಂಡತಿ, ಮಕ್ಕಳೊಂದಿಗೆ ಮಾತ್ರ ಕಳೆಯಲು ಹೇಗೆ ಸಾಧ್ಯ? ಗುರುಗಳು ಕಾಶಿಪುರದಲ್ಲಿದ್ದಾಗ ಅವರಿಗೋಸ್ಕರ ನಾನು ಒಂದಿಷ್ಟು ಹಣ ಖರ್ಚು ಮಾಡುತ್ತಿದ್ದೆ. ಈಗ ಅದೇ ಹಣವನ್ನು ನಿಮ್ಮ ವೆಚ್ಚಕ್ಕಾಗಿ ಸಂತೋಷದಿಂದ ನೀಡುತ್ತೇನೆ” ಎಂದರು.ಅದರಂತೆ, ಕೋಲ್ಕತ್ತ ಹೊರವಲಯದ ಬಾರಾನಗರದಲ್ಲಿ ಅವರು ಬಾಡಿಗೆ ಮನೆಯನ್ನು ಒದಗಿಸಿಕೊಟ್ಟರು. ಕ್ರಮೇಣ ಇದು ಮಠವಾಗಿ ಪರಿವರ್ತನೆಗೊಂಡಿತು.  ಮೊದಲ ಕೆಲವು ತಿಂಗಳುಗಳ ಕಾಲ ಸುರೇಂದ್ರ ಅವರು ತಿಂಗಳಿಗೆ 30 ರೂಪಾಯಿ ಬಾಡಿಗೆಯನ್ನು ಭರಿಸಿದರು.ನಂತರ ಒಬ್ಬೊಬ್ಬರಾಗಿ ಸೇರುತ್ತಾ ಮಠದ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಅವರು ತಮ್ಮ ದೇಣಿಗೆಯನ್ನು ದುಪ್ಪಟ್ಟುಗೊಳಿಸಿದರು. ನಂತರ ಅವರ ದೇಣಿಗೆಯ ಪ್ರಮಾಣ ತಿಂಗಳಿಗೆ 100 ರೂಪಾಯಿ ಮುಟ್ಟಿತು. ಇದರಲ್ಲಿ ತಿಂಗಳಿಗೆ ಮನೆ ಬಾಡಿಗೆ 11 ರೂಪಾಯಿ ಇತ್ತು. ಅಡುಗೆ ಸಹಾಯಕನಿಗೆ 6 ರೂಪಾಯಿ ಹೋಗುತ್ತಿತ್ತು. ಉಳಿದದ್ದು ಆಹಾರಕ್ಕೆ ವ್ಯಯವಾಗುತ್ತಿತ್ತು.ತಮ್ಮ ಕುಟುಂಬದ ಕಾನೂನು ವ್ಯಾಜ್ಯವೊಂದರ ವ್ಯವಹಾರಗಳಲ್ಲಿ ಮಗ್ನರಾಗಿದ್ದ ನರೇಂದ್ರ ಅವರು ರಾತ್ರಿಗಳನ್ನು ಮಠದಲ್ಲಿಯೇ ಕಳೆಯುತ್ತಿದ್ದರು. ಸಹೋದರ ಶಿಷ್ಯತ್ಯ ಸ್ವೀಕರಿಸಲು ಅವರು ಇತರರನ್ನು ಪ್ರೇರೇಪಿಸುತ್ತಿದ್ದರು. ಆದರೆ ಈ ಭಕ್ತಿಯು, ಒಂದು ಸಂಸ್ಕೃತಿ ಅಥವಾ ಪಂಥಕ್ಕೆ ಕಟ್ಟುಬೀಳುವುದರ ಅಪಾಯವನ್ನು ಮನಗಂಡ ಅವರು, ಹೊರಜಗತ್ತಿನ ಚಿಂತನೆಗಳ ಅಧ್ಯಯನ ಮಾಡುವಂತೆಯೂ ಅವರನ್ನು ಒತ್ತಾಯಿಸುತ್ತಿದ್ದರು.ಸ್ವತಃ ತಾವೇ ಅವರಿಗೆ ಪಾಶ್ಚಿಮಾತ್ಯ ತತ್ವಶಾಸ್ತ್ರ, ಪೌರಾತ್ಯ ತತ್ವಶಾಸ್ತ್ರ, ಧಾರ್ಮಿಕತೆಗಳ ತೌಲನಿಕತೆ, ದೈವವಾದ (ಥಿಯಾಲಜಿ), ಇತಿಹಾಸ, ಸಮಾಜಶಾಸ್ತ್ರ, ಸಾಹಿತ್ಯ, ಕಲೆ ಮತ್ತು ವಿಜ್ಞಾನಗಳ ಬಗ್ಗೆ ಬೋಧಿಸುತ್ತಿದ್ದರು.ಮಾನವ ಚಿಂತನೆ ಕುರಿತಾದ ಹೆಸರಾಂತ ಪುಸ್ತಕಗಳನ್ನು ಅವರಿಗಾಗಿ ತಾವೇ ಓದಿದರು. ಮನಸ್ಸಿನ ವಿಕಾಸ ಕುರಿತು ವಿವರಿಸಿದರು. ಧರ್ಮ ಮತ್ತು ತತ್ವಶಾಸ್ತ್ರದ ಬಿಕ್ಕಟ್ಟುಗಳ ಬಗ್ಗೆ ಚರ್ಚಿಸುತ್ತಿದ್ದರು. ಸೀಮಾತೀತವಾದ ಸತ್ಯದ ದಿಗಂತದೆಡೆಗೆ ಕೈಹಿಡಿದು ಮುನ್ನಡೆಸಿದರು.ಎಲ್ಲ ತಾತ್ವಿಕ ಸಿದ್ಧಾಂತಗಳು, ಮತ ಪಂಥಗಳ ಮಿತಿಯನ್ನು ಮೀರಿದ ಹಾಗೂ ಎಲ್ಲ ಸತ್ಯಗಳನ್ನೂ ಸಮಾಗಮಗೊಳಿಸಿದ ಸತ್ಯ ಮಾರ್ಗ ಅದಾಗಿತ್ತು. ರಾಮಕೃಷ್ಣ ಮಠವು ಒಂದು ಸಣ್ಣ, ಶಿಥಿಲ, ಬಾಡಿಗೆ ಮನೆಯಲ್ಲಿ ಹುಟ್ಟಿದ್ದು ಹೀಗೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.