ಅಸಾಮಾನ್ಯರಲ್ಲಿ ಅದ್ವಿತೀಯ

7

ಅಸಾಮಾನ್ಯರಲ್ಲಿ ಅದ್ವಿತೀಯ

Published:
Updated:

ಕ್ರಿಕೆಟ್ ಜಗತ್ತಿನ ಸರ್ವಶ್ರೇಷ್ಠ ಆಟಗಾರನೆಂದು ಎರಡು ದಶಕಗಳ ಕಾಲ ವಿಜೃಂಭಿಸಿದ ಸಚಿನ್ ತೆಂಡೂಲ್ಕರ್ ಒಂದು ದಿನದ ಕ್ರಿಕೆಟ್‌ನಿಂದ `ಕೊನೆಗೂ' ನಿವೃತ್ತಿಯಾದರೆಂದು ಹೇಳಿದರೆ, ಅವರು ತೋರಿರುವ ಅಮೋಘ ಸಾಧನೆ ಹಾಗೂ ಗಳಿಸಿರುವ ಜನಮನ್ನಣೆಯನ್ನು ಅವಮಾನಿಸಿದಂತಾಗುತ್ತದೆ. ಅವರಿನ್ನೂ ಟೆಸ್ಟ್ ಕ್ರಿಕೆಟ್ ಆಡಲಿದ್ದಾರೆ.ಕ್ರಿಕೆಟ್ ಅವರನ್ನು ಅಷ್ಟು ಸುಲಭವಾಗಿ ಬಿಡುತ್ತಿಲ್ಲ. ಮೈದಾನದಲ್ಲಿ ಅವರು ಮೊದಲಿನ ಸಚಿನ್ ಅಲ್ಲವಾದರೂ ಕ್ರಿಕೆಟ್ ಆಡುವ, ನೋಡುವ ಎಲ್ಲ ರಾಷ್ಟ್ರಗಳಲ್ಲಿ ಅವರೊಬ್ಬ ಅದ್ಭುತ ಆಟಗಾರ. ಆಟಕ್ಕಿಂತ ಯಾರೂ ದೊಡ್ಡವರಲ್ಲ ಎಂದರೂ ಅವರು ಆಟಕ್ಕಿಂತ ಎತ್ತರ ಬೆಳೆದದ್ದಂತೂ ಸುಳ್ಳಲ್ಲ. ಅವರ ಬ್ಯಾಟಿನಿಂದ ಹರಿದಿರುವ ಸಹಸ್ರಾರು ರನ್ನುಗಳು ಕ್ರಿಕೆಟ್‌ಪ್ರೇಮಿಗಳ ಮನದಲ್ಲಿ ಅಚ್ಚಳಿಯದ ಮುದ್ರೆ ಒತ್ತಿವೆ.ಹೊಸದಾಗಿ ಬ್ಯಾಟ್ ಹಿಡಿಯುವ ಪ್ರತಿಯೊಬ್ಬ ಬಾಲಕನೂ ತಾನು `ಸಚಿನ್ ತೆಂಡೂಲ್ಕರ್' ಆಗಬೇಕೆಂದು ಕನಸು ಕಾಣುತ್ತಾನೆ. ಹದಿವಯಸ್ಸಿನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಇಳಿದು 23 ವರ್ಷಗಳ ಸುದೀರ್ಘ ಕಾಲ ಆಡಿರುವ, ಇನ್ನೂ ಆಡುವ ಮನಸ್ಸಿರುವ ಸಚಿನ್, ಒಂದು ದಿನದ ಕ್ರಿಕೆಟ್‌ಗೆ ವಿದಾಯ ಹೇಳುವ ಸಮಯ ಬಂದಿತ್ತು. ಇಂದು-ನಾಳೆ ಎಂದು ಎಲ್ಲರೂ ಎದುರುನೋಡುವ ಸಂದರ್ಭದಲ್ಲಿ ಅವರು ತಮ್ಮ ನಿರ್ಧಾರ ಪ್ರಕಟಿಸಿರುವುದು  ಸೂಕ್ತವಾಗಿಯೇ ಇದೆ. ಸಚಿನ್ ತೆಂಡೂಲ್ಕರ್ ಇನ್ನೂ ಸ್ವಲ್ಪ ಸಮಯ ಆಡಬೇಕಿತ್ತು ಎಂದು ಕ್ರಿಕೆಟ್‌ಪ್ರೇಮಿಗಳು ಹೇಳಿದರೂ, ಇನ್ನು ನಾಲ್ಕು ತಿಂಗಳಲ್ಲಿ 40ನೇ ಜನ್ಮದಿನ ಆಚರಿಸಲಿರುವ ಅವರಿಗೆ ತಮ್ಮ ಕಾಲುಗಳಲ್ಲಿ ಶಕ್ತಿ ಇನ್ನೂ ಎಷ್ಟಿದೆ ಎಂಬ ಅರಿವು ಇದ್ದೇ ಇರುತ್ತದೆ. ಪ್ರಶಸ್ತಿಗಳಿಂದ ತುಂಬಿ ತುಳುಕುತ್ತಿರುವ ಅವರ ಮನೆಯ ಕಪಾಟಿನಲ್ಲಿ ಇಲ್ಲವಾಗಿದ್ದ, ಬಹುನಿರೀಕ್ಷಿತ ವಿಶ್ವ ಕಪ್ ಕಳೆದ ವರ್ಷದ ಬೇಸಿಗೆಯಲ್ಲಿ ಸೇರಿಕೊಂಡ ಮೇಲೆ, ಟೆಸ್ಟ್ ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ನೂರನೇ ಶತಕಕ್ಕಾಗಿ ಕಾತರಿಸಿದರು. ಅದು ಬಂದ ಮೇಲೆ ಅವರು ನಿಗದಿತ ಓವರುಗಳ ಕ್ರಿಕೆಟ್‌ನಿಂದ ದೂರ ಸರಿಯುವ ಲಕ್ಷಣಗಳು ಗೋಚರಿಸಿದ್ದವು.ಒಟ್ಟು 463 ಪಂದ್ಯಗಳನ್ನಾಡಿ, 49 ಶತಕಗಳಿರುವ 18426 ರನ್‌ಗಳ ದಾಖಲೆ ಹೊಂದಿರುವ ಅವರಿಗೆ ಒಂದು ದಿನದ ಪಂದ್ಯಗಳಲ್ಲಿ ಸಾಧಿಸಿ ತೋರಿಸುವ ಗುರಿ ಯಾವುದೂ ಉಳಿದಿಲ್ಲ.  ಟೆಸ್ಟ್ ರಂಗದಲ್ಲೂ ಅಷ್ಟೇ. ಎವರೆಸ್ಟ್‌ನಂಥ ಸಾಧನೆ ಅವರದೊಬ್ಬರದೇ. ಆದರೆ 194 ಟೆಸ್ಟ್ ಆಡಿರುವ ಅವರಿಗೆ 200 ಟೆಸ್ಟ್‌ಗಳನ್ನು ಆಡಬೇಕೆಂಬ ಆಸೆ ಇರಬಹುದು. ಅದಕ್ಕಾಗಿ ಅವರು ಮುಂಬರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ತಮ್ಮ ಶಕ್ತಿಯನ್ನು ಕಾಯ್ದಿರಿಸಿಕೊಳ್ಳಬೇಕಾಗಿದೆ. ಆದರೆ ಇಷ್ಟು ವರ್ಷಗಳ ಕಾಲ ಅವರ ಬೆನ್ನು ಹತ್ತಿ ಕುಳಿತಿದ್ದ ಯಶಸ್ಸು ನಿಧಾನವಾಗಿ ಜಾರುತ್ತಿರುವುದು ಅವರ ಮತ್ತು ಅಸಂಖ್ಯಾತ ಬೆಂಬಲಿಗರ ಆತಂಕವಾಗಿದೆ. ಕ್ರಿಕೆಟ್‌ನಿಂದ ಅವರೊಬ್ಬರೇ ಅಲ್ಲ ಭಾರತದ ಕ್ರಿಕೆಟ್ ಕೂಡ ಶ್ರೀಮಂತವಾಗಿದೆ. ಅವರು ಸಾಮಾನ್ಯರಲ್ಲಿ ಅಸಾಮಾನ್ಯರಲ್ಲ,

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry