ಅಸೀಂ ತ್ರಿವೇದಿ ವಿರುದ್ಧದ ಪ್ರಕರಣ :ರಾಷ್ಟ್ರದ್ರೋಹ ಕೈಬಿಟ್ಟ ಮಹಾರಾಷ್ಟ್ರ ಸರ್ಕಾರ

7

ಅಸೀಂ ತ್ರಿವೇದಿ ವಿರುದ್ಧದ ಪ್ರಕರಣ :ರಾಷ್ಟ್ರದ್ರೋಹ ಕೈಬಿಟ್ಟ ಮಹಾರಾಷ್ಟ್ರ ಸರ್ಕಾರ

Published:
Updated:

ಮುಂಬೈ (ಪಿಟಿಐ): ಆಕ್ಷೇಪಾರ್ಹ ವ್ಯಂಗ್ಯಚಿತ್ರಗಳನ್ನು ರಚಿಸಿದ ಆರೋಪಕ್ಕೆ ಗುರಿಯಾಗಿರುವ ವ್ಯಂಗ್ಯಚಿತ್ರಕಾರ ಅಸೀಂ ತ್ರಿವೇದಿ ವಿರುದ್ಧದ ರಾಷ್ಟ್ರದ್ರೋಹದ ಆರೋಪವನ್ನು ಕೈ ಬಿಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

ಈ ಹಿಂದೆ ಕೋರ್ಟ್ ವ್ಯಕ್ತಪಡಿಸಿರುವ ಟೀಕೆ ಮತ್ತು ಸಾರ್ವಜನಿಕರ ಒತ್ತಡಕ್ಕೆ ಮಣಿದಿರುವ ಮಹಾರಾಷ್ಟ್ರ ಸರ್ಕಾರ, ತ್ರಿವೇದಿ ವಿರುದ್ಧದ ರಾಷ್ಟ್ರದ್ರೋಹದ ಆರೋಪವನ್ನು ಕೈ ಬಿಡುವುದಾಗಿ ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.`ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ, ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 124 (ಎ)ರ ಅಡಿಯಲ್ಲಿ ಬರುವ ಪ್ರಕರಣ ಇದಲ್ಲ ಎಂದು ಸ್ಪಷ್ಟವಾಗಿದೆ. ಆ ಹಿನ್ನೆಲೆಯಲ್ಲಿ ತ್ರಿವೇದಿ ವಿರುದ್ಧ ದಾಖಲಿಸಲಾಗಿರುವ ರಾಷ್ಟ್ರದ್ರೋಹದ ಆರೋಪವನ್ನು ಕೈ ಬಿಡಲು ಸರ್ಕಾರ ನಿರ್ಧರಿಸಿದೆ~ ಎಂದು ಅಡ್ವೊಕೇಟ್ ಜನರಲ್ ಡಾರಿಯಸ್ ಖಂಬಾತಾ ನ್ಯಾಯಾಲಯಕ್ಕೆ ತಿಳಿಸಿದರು.ವ್ಯಂಗ್ಯಚಿತ್ರದಲ್ಲಿ ರಾಷ್ಟ್ರೀಯ ಲಾಂಛನ ಮತ್ತು ಸಂಸತ್‌ನ್ನು ಅವಹೇಳನಕಾರಿಯಾಗಿ ಚಿತ್ರಿಸಿದ ಆರೋಪ ಎದುರಿಸುತ್ತಿರುವ ತ್ರಿವೇದಿ ಅವರನ್ನು ರಾಷ್ಟ್ರದ್ರೋಹದ ಪ್ರಕರಣದಲ್ಲಿ ಬಂಧಿಸಿರುವುದನ್ನು ಪ್ರಶ್ನಿಸಿ ವಕೀಲ ಸಂಸ್ಕಾರ್ ಮರಾಠೆ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಮುಖ್ಯ ನ್ಯಾಯಮೂರ್ತಿ ಮೋಹಿತ್ ಶಾ ಮತ್ತು ನ್ಯಾಯಮೂರ್ತಿ ಎನ್.ಎಂ. ಜಮ್ದಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಅರ್ಜಿಯ ವಿಚಾರಣೆ ನಡೆಸುತ್ತಿದೆ.ಈ ಪ್ರಕರಣದಲ್ಲಿ ತ್ರಿವೇದಿಗೆ ಈ ಮೊದಲೇ ಜಾಮೀನು ನೀಡಿದ್ದ ಹೈಕೋರ್ಟ್, ಕ್ಷುಲ್ಲಕ ವಿಚಾರದ ಆಧಾರದಲ್ಲಿ  ಬಂಧಿಸಿರುವುದಕ್ಕೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry