ಮಂಗಳವಾರ, ಮೇ 24, 2022
27 °C

ಅಸುರಕ್ಷಿತ ರಾಷ್ಟ್ರೀಯ ಹೆದ್ದಾರಿ

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಸಂಚಾರ ಸುಧಾರಣೆಗೆ ಒಂದೆಡೆ ಪೊಲೀಸ್ ಇಲಾಖೆ ಬಗೆಬಗೆಯ ಯತ್ನ ನಡೆಸುತ್ತಿದ್ದರೆ, ಮತ್ತೊಂದೆಡೆ ರಸ್ತೆ ಅಪಘಾತ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.ಅದರಲ್ಲೂ ಚಿಕ್ಕಬಳ್ಳಾಪುರದ ಹೊರವಲಯದಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿದ್ದು, ಅಸುರಕ್ಷತೆಗೆ ಕಾರಣವಾಗುತ್ತಿದೆ.ವಾಹನ ಚಾಲಕರ ಅಜಾಗರೂಕತೆ ಮತ್ತು ಸುರಕ್ಷತಾ ಕ್ರಮಗಳು ಅಳವಡಿಕೆಯಾಗದಿರುವ ಕಾರಣ ಅಪಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿವೆ.

 

ಭಾನುವಾರ ಸಂಜೆ ನಂದಿ ಬೆಟ್ಟದ ಕಣಿವೆ ಬಳಿ ಸರಕುಸಾಗಣೆ ವಾಹನ ಉರುಳಿಬಿದ್ದ ಪರಿಣಾಮ ಆರು ವರ್ಷದ ಬಾಲಕ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರು. ಮಾರನೇ ದಿನ ಸೋಮವಾರ ನಸುಕಿನಲ್ಲಿ ತಾಲ್ಲೂಕಿನ ಹುನೇಗಲ್ಲು ಬಳಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾದವು.ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿಯತ್ತ ಹೋಗುವ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆಗಳಿದ್ದು, ಬಹುತೇಕ ಸಾರ್ವಜನಿಕರು ಅಲ್ಲಿಂದಲೇ ಸಂಚರಿಸುತ್ತಾರೆ.ಬಸ್ ನಿಲ್ದಾಣಗಳಿಗೆ ಪ್ರತ್ಯೇಕ ಶೆಲ್ಟರ್ ನಿರ್ಮಿಸದಿರುವ ಕಾರಣ ಬಹುತೇಕ ಮಂದಿ ಹೆದ್ದಾರಿ ಮತ್ತು ಸರ್ವಿಸ್ ರಸ್ತೆಯ ಮಧ್ಯೆ ನಿಂತು ಬಸ್‌ಗೆ ಕಾಯುತ್ತಾರೆ. ರಸ್ತೆಯು ಉತ್ತಮ ಗುಣಮಟ್ಟದಿಂದ ಕೂಡಿರುವ ಕಾರಣ ವೇಗವಾಗಿ ಸಂಚರಿಸುವ ವಾಹನಗಳು ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆದಲ್ಲಿ, ಸಾರ್ವಜನಿಕರ ಪ್ರಾಣಕ್ಕೆ ಅಪಾಯವಾಗದೇ ಇರುವುದಿಲ್ಲ. ಮರಸನಹಳ್ಳಿ, ಹುನೇಗಲ್ಲು, ಪೆರೇಸಂದ್ರ ಸೇರಿದಂತೆ ಬಾಗೇಪಲ್ಲಿಯವರೆಗೆ ಹೆದ್ದಾರಿಗಳ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆಗಳಿದ್ದರೂ ಸುರಕ್ಷತೆ ಹಿತದೃಷ್ಟಿಯಿಂದ ಅಲ್ಲಿ ಕಂಬಿಗಳನ್ನು ಹಾಕಲಾಗಿಲ್ಲ, ಕಿರಿದಾದ ತಡೆಗೋಡೆ ಸಹ ನಿರ್ಮಿಸಲಾಗಿಲ್ಲ.‘ನಮ್ಮ ಗ್ರಾಮದತ್ತ ಬಸ್‌ಗಳು ನಿಲ್ಲುವುದೇ ಅಪರೂಪ. ರಸ್ತೆಯ ಬದಿಯಲ್ಲಿ ನಿಂತುಕೊಂಡರೂ ಬಸ್‌ಗಳನ್ನು ನಿಲ್ಲಿಸದೇ ವೇಗವಾಗಿ ಚಾಲನೆ ಮಾಡಲಾಗುತ್ತದೆ. ಸರ್ಕಾರಿ ಅಥವಾ ಖಾಸಗಿ ಬಸ್‌ಗಳಿಗೆ ಕೈ ಮಾಡಿ ನಿಲ್ಲಿಸಲಿಕ್ಕಾದರೂ ನಾವು ಅನಿವಾರ್ಯವಾಗಿ ರಸ್ತೆ ಮಧ್ಯೆ ನಿಲ್ಲಬೇಕಾಗುತ್ತದೆ. ಲಾರಿಗಳು ವೇಗವಾಗಿ ಸಂಚರಿಸುವಾಗ ಹೆದರಿಕೆಯಾಗುತ್ತದೆ. ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ವಾಹನಗಳನ್ನು ನೋಡಿದಾಗಲಂತೂ ಇನ್ನೂ ಭೀತಿಯಾಗುತ್ತದೆ. ಯಾವುದೇ ಸಂದರ್ಭದಲ್ಲಿ ಅಪಾಯ ಸಂಭವಿಸಬಹುದು ಎಂಬ ಆತಂಕದಲ್ಲೇ ಇಲ್ಲಿ ನಿಂತಿರುತ್ತೇವೆ’ ಎಂದು ಹುನೇಗಲ್ಲು ಗ್ರಾಮದ ನಿವಾಸಿ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.ಹೆದ್ದಾರಿ ಉತ್ತಮ ಗುಣಮಟ್ಟದಿಂದ ಕೂಡಿರುವ ಕಾರಣ ವಾಹನಗಳು ವೇಗವಾಗಿ ಸಂಚರಿಸುತ್ತವೆ. ಬಾಗೇಪಲ್ಲಿ, ಹೈದರಾಬಾದ್ ಸೇರಿದಂತೆ ಆಂಧ್ರಪ್ರದೇಶದ ತಾಲ್ಲೂಕುಗಳಿಗೆ ಹೋಗಲು ಇದೇ ಮುಖ್ಯರಸ್ತೆ. ಹೀಗಾಗಿ ಅಂತರರಾಜ್ಯ ವಾಹನಗಳು ಅದರಲ್ಲೂ ಲಾರಿಗಳು ಭಾರಿ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಬಹುತೇಕ ಅಪಘಾತಗಳು ಮಧ್ಯರಾತ್ರಿ ಮತ್ತು ನಸುಕಿನ ವೇಳೆಯಲ್ಲಿ ಸಂಭವಿಸುತ್ತವೆ. ಹಣ್ಣು, ತರಕಾರಿ, ಹಾಲು ಮುಂತಾದ ಅಗತ್ಯ ವಸ್ತುಗಳನ್ನು ತಲುಪಿಸಲು ಕೆಲ ವಾಹನಗಳನ್ನು ವೇಗವಾಗಿ ಸಂಚರಿಸಿದರೆ, ಇನ್ನೂ ಕೆಲವು ವಾಹನಗಳು ನಿಗದಿತ ಅವಧಿಯಲ್ಲಿ ನಿಶ್ಚಿತ ಸ್ಥಳ ತಲುಪಬೇಕು ಎಂದು ಭಾರಿ ವೇಗದಲ್ಲಿ ಸಂಚರಿಸುತ್ತವೆ.‘ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತ ಚಿಕಿತ್ಸೆ ನೀಡಲು ಹೆದ್ದಾರಿ ಬಳಿ ಬೃಹತ್ ಆಸ್ಪತ್ರೆಗಳು (ಟ್ರಾಮಾ ಕೇರ್ ಸೆಂಟರ್) ಇರುತ್ತವೆ.ಗಾಯಗೊಂಡವರಿಗೆ ತುರ್ತಾಗಿ ಚಿಕಿತ್ಸೆ ನೀಡುವುದರ ಜೊತೆಗೆ ರಕ್ತದ ಕೊರತೆ ತಲೆದೋರಿದಲ್ಲಿ ರಕ್ತನಿಧಿಯಿಂದ ಅಗತ್ಯ ಸೌಕರ್ಯ ಕೂಡ ಕಲ್ಪಿಸಲಾಗುತ್ತದೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಟ್ರಾಮಾ ಕೇರ್ ಸೆಂಟರ್ ಇಲ್ಲ. ರಕ್ತನಿಧಿಯ ಸೌಲಭ್ಯವೂ ಇಲ್ಲ. ಹೆದ್ದಾರಿಯ ಯಾವುದೇ ಸ್ಥಳದಲ್ಲೇ ಅಪಘಾತಕ್ಕೀಡಾಗಿ ಜನರು ಗಾಯಗೊಂಡರೆ, ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಹೊರತು ಜಿಲ್ಲಾ ಆಸ್ಪತ್ರೆಯಲ್ಲಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ’ ಎಂದು ಖಾಸಗಿ ಸಂಸ್ಥೆ ಉದ್ಯೋಗಿ ಸತ್ಯನಾರಾಯಣ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.