ಅಸ್ತವ್ಯಸ್ತ ಪ್ರಚಾರ ಫಲಕಗಳು

7

ಅಸ್ತವ್ಯಸ್ತ ಪ್ರಚಾರ ಫಲಕಗಳು

Published:
Updated:
ಅಸ್ತವ್ಯಸ್ತ ಪ್ರಚಾರ ಫಲಕಗಳು

ಬಾದಾಮಿ: ನಗರದಲ್ಲಿ ದೂಳು ತುಂಬಿದ ರಸ್ತೆಗಳು, ತ್ಯಾಜ್ಯ ತುಂಬಿದ ಚರಂಡಿಗಳು, ಪಾದಚಾರಿ ರಸ್ತೆಯಲ್ಲಿ ಚಿಕ್ಕಪುಟ್ಟ ಅಂಗಡಿಗಳು, ಕಣ್ಣೆತ್ತಿ ಪ್ರಚಾರ ಫಲಕಗಳನ್ನು ನೋಡಿದರೆ ರಸ್ತೆಯ ಪಕ್ಕದಲ್ಲಿ ಅಸ್ತವ್ಯಸ್ತವಾಗಿರುವ ಜಾಹೀರಾತು ಫಲಕಗಳು ಕಾಣುತ್ತವೆ. ಇವುಗಳನ್ನೆಲ್ಲ ನೋಡಿದರೆ ಅಯ್ಯೋ ಪ್ರವಾಸಿ ತಾಣವೇ ಎಂದು ಸಹಜವಾಗಿ ಮುಜುಗರ ಉಂಟಾಗುವುದು.ಪ್ರವಾಸಿಗರನ್ನು ಆಕರ್ಷಿಸಲು ಚಾಲುಕ್ಯರ ಸ್ಮಾರಕಗಳನ್ನು ಪರಿಚಯಿಸಲು ಪುರಸಭೆಯು ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಎರಡು ಪ್ರಚಾರ ಫಲಕದಲ್ಲಿ ಭೂತನಾಥ ದೇವಾಲಯ ಮತ್ತು ಮಾಲೆಗಿತ್ತಿ ಶಿವಾಲಯ ಸ್ಮಾರಕಗಳ ಚಿತ್ರಗಳು ಇದ್ದವು. ಗಾಳಿ, ಬಿಸಿಲು ಮತ್ತು ಮಳೆಗೆ ಸ್ಮಾರಕಗಳ ಚಿತ್ರಗಳು  ಈಗ ಪ್ರಚಾರ ಫಲಕದಿಂದ ಮಾಯವಾಗಿ ವಿವಿಧ ಸಂಸ್ಥೆಗಳು ಮತ್ತು ಸಾರ್ವಜನಿಕರು ಬೇರೆ ಬೇರೆ ಬ್ಯಾನರ್ ಅಂಟಿಸುವುದರ ಮೂಲಕ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ. ಇವುಗಳ ಬಗ್ಗೆ ಪುರಸಭೆ ಯಾವ ಚಕಾರವನ್ನೂ ಎತ್ತುವುದಿಲ್ಲ.ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಎರಡೂ ಪ್ರಚಾರ ಫಲಕಗಳು ಧರೆಗೆ ಉರುಳುವಂತಿವೆ. ಯಾವಾಗ ಯಾರ ಮೈಮೇಲೆ ಬೀಳುತ್ತವೊ ಎಂಬ ಭಯ ಜನತೆಗೆ ಉಂಟಾಗಿದೆ.ನಗರದ ಮುಖ್ಯ ರಸ್ತೆಯ ಮಾಲೆಗಿತ್ತಿ ಶಿವಾಲಯ ರಸ್ತೆಯ ಎದುರಿಗೆ ಮೊಬೈಲ್ ಸೆಟ್ ಜಾಹೀರಾತು ಫಲಕದ ಚಿತ್ರ ಹರಿದು ಚಿಂದಿಯಾಗಿದೆ. ಫಲಕಗಳನ್ನು ನೋಡಿದವರಿಗೆ ಮಾತ್ರ  ಅಯ್ಯೋ ಇದು ಪ್ರವಾಸಿ ತಾಣವೇ ಎಂದು ಅಸಹ್ಯವಾಗುವುದು.

ತಾಲ್ಲೂಕು ಪಂಚಾಯ್ತಿ ಸಮೀಪ ಮುಖ್ಯ ರಸ್ತೆಯಲ್ಲಿ ಕರ್ನಾಟಕ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸರ್ಕಾರದ ಸಾಧನೆಯ ಅರಣ್ಯ ಇಲಾಖೆಯ ಜಾಹೀರಾತು ಪ್ರಚಾರ ಫಲಕವಿದೆ. ಇದೂ ಕೂಡ ಹರಿದು ಚಿಂದಿಯಾಗಿದೆ.ಇದರ ಹಿಂದೆಯೇ ನೂತನವಾಗಿ ಪುರುಷರ ಮೂತ್ರಾಲಯ ನಿರ್ಮಿಸಿದ್ದಾರೆ. ಜಾಹೀರಾತು ಫಲಕ ಕೆಳಗೆ ಇರುವುದರಿಂದ ಎತ್ತರ ಇದ್ದ ಅನೇಕ ಪುರುಷರು ತಮ್ಮ ತಲೆಯನ್ನು ಬಡಿಸಿಕೊಂಡು ಒಳಗೆ ಹೋಗುವಂತಾಗಿದೆ. ಬಾಗಿ ಹೋಗದಿದ್ದರೆ ತಲೆ ಒಡೆಯುವುದು ಗ್ಯಾರಂಟಿ!

ಅಸ್ತವ್ಯಸ್ತವಾಗಿರುವ ಪ್ರಚಾರ ಫಲಕಗಳ ಬಗ್ಗೆ ಪುರಸಭೆ ಸೂಕ್ತ ಕ್ರಮ ಕೈಗೊಂಡು ಆಕರ್ಷಕವಾಗಿ ಕಾಣುವಂತೆ ಪ್ರಚಾರ ಫಲಕವನ್ನು ದುರಸ್ತಿ ಮಾಡಿಸಬೇಕಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry