ಬುಧವಾರ, ನವೆಂಬರ್ 13, 2019
21 °C
ಕಡಚಿ ಕ್ಷೇತ್ರ

ಅಸ್ತಿತ್ವಕ್ಕೆ ಬರುತ್ತಿದ್ದಂತೆ `ಕೈ'ವಶ!

Published:
Updated:

ಬೆಳಗಾವಿ: ಕ್ಷೇತ್ರ ಪುನರ್‌ವಿಂಗಡಣೆಯಿಂದಾಗಿ 2008ರ ಚುನಾವಣೆ ಪೂರ್ವದಲ್ಲಿ ಕುಡಚಿ ವಿಧಾಸಭೆ ಕ್ಷೇತ್ರವು ಅಸ್ತಿತ್ವಕ್ಕೆ ಬಂದಿತು. ಇದಕ್ಕೂ ಮೊದಲು ರಾಯಬಾಗ ಕ್ಷೇತ್ರದಲ್ಲಿ ಇತ್ತು. ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲು ಕ್ಷೇತ್ರವಾಗಿರುವ ಇಲ್ಲಿ ಕಳೆದ ಚುನಾವಣೆಯಲ್ಲಿ  ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್.ಬಿ.ಘಾಟಗೆ ಆಯ್ಕೆಯಾದರು.ಜಿಲ್ಲೆಯಲ್ಲಿಯೇ ಅತಿ ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರ ಇದಾಗಿದೆ. ಸಧ್ಯದ ಅಂಕಿ- ಆಂಶಗಳ ಪ್ರಕಾರ 1,46,584 ಮತದಾರರನ್ನು ಕುಡಚಿ ಕ್ಷೇತ್ರ ಹೊಂದಿದೆ. ಇದರಲ್ಲಿ 76,998 ಪುರುಷ ಹಾಗೂ 69,586 ಮಹಿಳಾ ಮತದಾರರು ಇದ್ದಾರೆ.ಬೆಳಗಾವಿ ಜಿಲ್ಲೆಯಲ್ಲಿ ದೊಡ್ಡ ಕ್ಷೇತ್ರವಾಗಿದ್ದ ರಾಯಬಾಗ ಕ್ಷೇತ್ರವನ್ನು 1957ರಲ್ಲಿ ದ್ವಿಸದಸ್ಯರು ಪ್ರತಿನಿಧಿಸುತ್ತಿದ್ದರು. `ರಾಯಬಾಗದ ಹುಲಿ' ಎಂದೇ ಖ್ಯಾತರಾಗಿದ್ದ ವಿ.ಎಲ್.ಪಾಟೀಲ ಹಾಗೂ ಎಸ್.ಪಿ. ತಳವಳಕರ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 1962ರ ಚುನಾವಣೆಯಲ್ಲಿ ದ್ವಿಸದಸ್ಯರ ಆಯ್ಕೆಯನ್ನು ರದ್ದುಗೊಳಿಸಲಾಯಿತು. ಈ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಿ.ಎಸ್.ಸೌದಾಗರ ಈ ಕ್ಷೇತ್ರದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದರು.ಕುಡಚಿ ಕ್ಷೇತ್ರ ಅಸ್ತಿತ್ವಕ್ಕೆ ಬರುವುದಕ್ಕಿಂತ ಮುನ್ನ ರಾಯಬಾಗ ತಾಲ್ಲೂಕಿನ 18 ಗ್ರಾಮಗಳು ಚಿಕ್ಕೋಡಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿದ್ದವು. ಕುಡಚಿ ಕ್ಷೇತ್ರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಚಿಕ್ಕೋಡಿ ಕ್ಷೇತ್ರಕ್ಕೆ ಸೇರ್ಪಡೆಯಾಗಿದ್ದ 18 ಗ್ರಾಮಗಳನ್ನು ರಾಯಬಾಗ ವಿಧಾನಸಭೆ ಕ್ಷೇತ್ರಕ್ಕೆ ಸೇರಿಸಲಾಯಿತು.ಕುಡಚಿ ಕ್ಷೇತ್ರಕ್ಕೆ ರಾಯಬಾಗದ ಕುಡಚಿ ಹೋಬಳಿ ಸೇರಿದಂತೆ 53 ಹಳ್ಳಿಗಳನ್ನು ಸೇರಿಸ ಲಾಯಿತು. ಹಾರೂಗೇರಿ, ಕುಡಚಿ ಗ್ರಾಮೀಣ, ಅಳಗವಾಡಿ, ಮುಗಳಖೋಡ ಸೇರಿ ಒಟ್ಟು ನಾಲ್ಕು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳು ಕುಡಚಿ ಕ್ಷೇತ್ರದ ವ್ಯಾಪ್ತಿಯಲ್ಲಿವೆ.ಕುಡಚಿ ಹೋಬಳಿ, ಗಂಡವಾಡ, ತಿರಗೂರ, ಹಾರೂಗೇರಿ, ಮುಗಳಖೋಡ, ಸುತ್ತಟ್ಟಿ, ಇಟ ನಾಳ, ಪರಮಾನಂದವಾಡಿ, ಸಿದ್ದಾಪುರ, ಖೇಮಲಾ ಪುರ, ನಿಲಜಿ, ಅಲಕನೂರ, ಕೋಳಿಗಟ್ಟಿ, ಹಿಡಕಲ್, ಪಾಲಭಾವಿ ಸೇರಿದಂತೆ ಒಟ್ಟು 53 ಗ್ರಾಮಗಳು ಕುಡಚಿ ಕ್ಷೇತ್ರದ ವ್ಯಾಪ್ತಿಗೆ ಸೇರಿಸಲಾಗಿದೆ.1957 ರಿಂದ 2004ರ ವರೆಗೆ ನಡೆದ 11 ಚುನಾವಣೆಯಲ್ಲಿ ಕುಡಚಿ ಕ್ಷೇತ್ರವು ರಾಯಬಾಗ ಕ್ಷೇತ್ರದಲ್ಲಿಯೇ ಇತ್ತು. ವಿ.ಎಲ್.ಪಾಟೀಲ ಅವರು 1957ರಲ್ಲಿ ಪಕ್ಷೇತರರಾಗಿ, 1967 ಹಾಗೂ 1972ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1978ರಲ್ಲಿ ಜನತಾ ಪರಿವಾರದ ಆರ್.ಎಸ್.ನಡೋಣಿ, 1983ರಲ್ಲಿ ಎಸ್.ಎಸ್.ಕಾಂಬಳೆ ಮತ್ತು 1985ರಲ್ಲಿ ಮಾರುತಿ ಗಂಗಪ್ಪ ಘೇವಾರಿ ಪ್ರತಿನಿಧಿಸಿದ್ದರು. ಮೂರು ಚುನಾವಣೆಗಳ ನಂತರ 1989ರಲ್ಲಿ ಮತ್ತೆ ಈ ಕ್ಷೇತ್ರ `ಕೈ' ವಶಕ್ಕೆ ಬಂದಿತು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಸ್.ಬಿ.ಘಾಟಗೆ ಅವರು 1989ರಲ್ಲಿ ವಿಧಾನಸಭೆ ಪ್ರವೇಶಿಸಿದರು. ಘಾಟಗೆ (37,948 ಮತಗಳು) ಅವರು ಜನತಾ ದಳದ ಎಂ.ಜಿ. ಘೇವಾರಿ (30,300 ಮತಗಳು) ಅವರನ್ನು 7,648 ಮತಗಳ ಅಂತರದಿಂದ ಪರಾಭವಗೊಳಿಸಿದರು.ಎಸ್.ಬಿ.ಘಾಟಗೆ ಅವರು 1994 ಹಾಗೂ 1999ರಲ್ಲಿ ಜಯಗಳಿಸುವ ಮೂಲಕ `ಹ್ಯಾಟ್ರಿಕ್' ಸಾಧನೆ ಮಾಡಿದರು. 2004ರಲ್ಲಿ ಲೊಕಸಭೆ ಪ್ರವೇಶಿಸಿಲು ಘಾಟಗೆ ಅವರು ಪ್ರಯತ್ನ ನಡೆಸಿದರೂ ಯಶಸ್ಸು ಕಾಣಲಿಲ್ಲ. 2004ರಲ್ಲಿ ಸಂಯುಕ್ತ ಜನತಾದಳದ ಭೀಮಪ್ಪ ಸರಿಕರ ಜಯಗಳಿಸಿದರು.ಕ್ಷೇತ್ರ ಪುನರ್ ವಿಂಗಡನೆ ನಂತರ ಘಾಟಗೆ ಅವರು ಕುಡಚಿ ಕ್ಷೇತ್ರದತ್ತ ತಮ್ಮ ಗಮನ ಹರಿಸಿದರು. ನೂತನವಾಗಿ ಅಸ್ತಿತ್ವಕ್ಕೆ ಬಂದ ಕುಡಚಿ ಕ್ಷೇತ್ರದ ಮೊದಲ ಚುನಾವಣೆಯಲ್ಲಿಯೇ ಎಸ್.ಬಿ.ಘಾಟಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿದರು.ಘಾಟಗೆ (29,481 ಮತಗಳು) ಅವರು ಬೆಜೆಪಿಯ ಎಂ.ಕೆ.ತಮ್ಮಣ್ಣವರ (28,715 ಮತಗಳು) ಅವರನ್ನು ಕೇವಲ 766 ಮತಗಳ ಅಂತರದಿಂದ ಸೋಲಿಸಿ ವಿಜಯಶಾಲಿಯಾದರು. ಈ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಪಿ.ರಾಜೀವ ಪಾಂಡಪ್ಪ ಅವರು 22,978 ಮತಗಳನ್ನು ಪಡೆದು ಗಮನ ಸೆಳೆದರು. ಕುಡಚಿ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ರಾಜೀವ ಅವರು ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಚುನಾವಣಾ ಕಣಕ್ಕೆ ಇಳಿದಿದ್ದರು.ಈ ಬಾರಿಯ ಚುನಾವಣೆಯಲ್ಲಿ ಪಿ.ರಾಜೀವ ಅವರು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಎಸ್.ಬಿ.ಘಾಟಗೆ ಮರು ಆಯ್ಕೆ ಬಯಸಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ. ಪ್ರಗತಿಪರ ರಂಗದಿಂದ ಆರ್.ಮೋಹನರಾಜ್ ಕಣಕ್ಕಿಳಿಯಲು ಬಯಸಿದ್ದಾರೆ. ಜೆಡಿಎಸ್‌ನಿಂದ ಟಿಕೆಟ್ ಪಡೆಯಲು ಶಾಂತಾರಾಮ ಸಣ್ಣಕ್ಕಿ ಹಾಗೂ ಮಧುಸೂದನ ಸಣ್ಣ್ಕೂಿ ಪೈಪೋಟಿ ನಡೆಸಿದ್ದಾರೆ. ಕೆಜೆಪಿ ಅಭ್ಯರ್ಥಿಯ ಹುಡುಕಾಟದಲ್ಲಿದೆ.

ಪ್ರತಿಕ್ರಿಯಿಸಿ (+)