ಸೋಮವಾರ, ಮಾರ್ಚ್ 8, 2021
25 °C
ತೆಲಂಗಾಣ ಪ್ರಕ್ರಿಯೆ ಪೂರ್ಣಕ್ಕೆ ಮಸೂದೆ ಅಂಗೀಕಾರ ಅಗತ್ಯ

ಅಸ್ತಿತ್ವಕ್ಕೆ ಬೇಕು 5 ತಿಂಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಸ್ತಿತ್ವಕ್ಕೆ ಬೇಕು 5 ತಿಂಗಳು

ನವದೆಹಲಿ: ಕೇಂದ್ರದ ಆಡಳಿತಾರೂಢ ಯುಪಿಎ ಮತ್ತು ಯುಪಿಎ ನೇತೃತ್ವ ವಹಿಸಿರುವ ಕಾಂಗ್ರೆಸ್, ಆಂಧ್ರಪ್ರದೇಶವನ್ನು ವಿಭಜಿಸಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚಿಸುವುದಾಗಿ ಮಾಡಿರುವ ಘೋಷಣೆ ರಾಜಕೀಯವಾದುದು.

ಇದು ಸಾಕಾರವಾಗಬೇಕಿದ್ದರೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಕುರಿತು ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರ ಪಡೆದು ರಾಷ್ಟ್ರಪತಿ ಅಂಕಿತ ಬೀಳಬೇಕು.ಈ ಪ್ರಕ್ರಿಯೆಯು ಪೂರ್ಣಗೊಳ್ಳಬೇಕಿದ್ದರೆ ಕನಿಷ್ಠ ಐದು ತಿಂಗಳ ಕಾಲಾವಕಾಶ ಬೇಕು ಎಂಬುದು ಸಂವಿಧಾನ ತಜ್ಞರ ಅಭಿಪ್ರಾಯ.`ಕೇಂದ್ರ ಸಂಪುಟದ ಶಿಫಾರಸಿನಂತೆ ಕರಡು ಮಸೂದೆಯನ್ನು ಸಂಬಂಧಿಸಿದ ರಾಜ್ಯದ ವಿಧಾನಮಂಡಲಕ್ಕೆ ರಾಷ್ಟ್ರಪತಿಗಳು ಕಳುಹಿಸುತ್ತಾರೆ.ವಿಧಾನಮಂಡಲದ ಅಭಿಪ್ರಾಯ ಪಡೆಯುವುದು ಕಡ್ಡಾಯವಾದರೂ ಅದನ್ನು ಒಪ್ಪುವುದು ಇಲ್ಲವೇ ಬಿಡುವುದು ಕೇಂದ್ರ ಸಂಪುಟದ ಇಚ್ಛೆಗೆ ಬಿಟ್ಟಿದ್ದು' ಎಂದು ಲೋಕಸಭೆಯ ಮಾಜಿ ಕಾರ್ಯದರ್ಶಿ ಸುಭಾಷ್ ಕಶ್ಯಪ್ ಹೇಳಿದ್ದಾರೆ.`ಸಂಸತ್ ಅಂಗೀಕರಿಸಿದ ಹೊಸ ರಾಜ್ಯ ರಚನೆಯ ಮಸೂದೆಯನ್ನು ಸಂವಿಧಾನದ 111 ವಿಧಿಯ ಅನ್ವಯ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗುತ್ತದೆ. ಇದಾದರೆ ಹೊಸ ರಾಜ್ಯವು ಅಧಿಕೃತವಾಗಿ ಅಸ್ತಿತ್ವಕ್ಕೆ ಬರುತ್ತದೆ' ಎಂದು ಅವರು ಹೇಳಿದ್ದಾರೆ.ಸುಪ್ರೀಂ ಕೋರ್ಟ್ ಮಾರ್ಗದರ್ಶಿ ತೀರ್ಪು: 1960ರಲ್ಲಿ ಬಾಬುಲಾಲ್ ಮತ್ತು ಬಾಂಬೆ ರಾಜ್ಯದ ನಡುವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಮತ್ತು ಮಾರ್ಗದರ್ಶಿ ತೀರ್ಪನ್ನು ನೀಡಿದೆ.`ಕೇಂದ್ರ ಸರ್ಕಾರಕ್ಕೆ ಹೊಸ ರಾಜ್ಯ ರಚಿಸುವ ಮತ್ತು ರಾಜ್ಯದ ಗಡಿಯಲ್ಲಿ ಮಾರ್ಪಾಟು ಮಾಡುವ ಅಧಿಕಾರ ಇದೆ. ಆದರೆ, ಸಂಬಂಧಿಸಿದ ರಾಜ್ಯದ ವಿಧಾನಮಂಡಲದ ಅಭಿಪ್ರಾಯ ಪಡೆಯುವುದು ಕಡ್ಡಾಯವಾದರೂ ಈ ಅಭಿಪ್ರಾಯಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿರಬೇಕು ಎಂಬ ಕಡ್ಡಾಯವೇನೂ ಇಲ್ಲ' ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಹೊಸ ರಾಜ್ಯ ರಚನೆ ಇಲ್ಲವೆ ಗಡಿ ಮಾರ್ಪಾಟು ಕುರಿತಂತೆ ಸಂವಿಧಾನದ 2,3 ಮತ್ತು 4ನೇ ವಿಧಿಗಳಲ್ಲಿ ವಿವರಿಸಲಾಗಿದೆ.ಪ್ರತ್ಯೇಕ ರಾಜ್ಯ ಸಾಂವಿಧಾನಿಕ ಹಾದಿ

* ಗೃಹ, ಹಣಕಾಸು, ಮಾನವ ಸಂಪನ್ಮೂಲ ಅಭಿವೃದ್ಧಿ, ಆರೋಗ್ಯ, ಜಲಸಂಪನ್ಮೂಲ, ಇಂಧನ, ಪರಿಸರ ಮತ್ತು ಅರಣ್ಯ, ರೈಲ್ವೆ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷರನ್ನು ಒಳಗೊಂಡ ಉನ್ನತಾಧಿಕಾರದ ಸಚಿವರ ಗುಂಪು (ಜಿಒಎಂ) ಹೊಸ ರಾಜ್ಯ ರಚನೆ ಕುರಿತ ಸಮಗ್ರ ವಿಷಯಗಳನ್ನು ಪರಿಶೀಲಿಸಿ ರಾಜ್ಯ ಪುನರ್ವಿಂಗಡಣಾ ಕರಡು ಮಸೂದೆಗೆ ಸೂಚಿಸಿದ ಒಪ್ಪಿಗೆಯನ್ನು ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಸುತ್ತದೆ.* ಸಚಿವ ಸಂಪುಟ ಸಭೆಯ ಅನಿಸಿಕೆಯಂತೆ ಪ್ರಧಾನಿ ಅವರು ಕರಡು ಮಸೂದೆಯನ್ನು ಸಂಬಂಧಿಸಿದ ರಾಜ್ಯದ ವಿಧಾನಮಂಡಲದ ಅಭಿಪ್ರಾಯಕ್ಕೆ ಕಳುಹಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುತ್ತಾರೆ. ಇದಕ್ಕೆ ಒಂದು ತಿಂಗಳಲ್ಲಿ ಅಭಿಪ್ರಾಯ ಸಲ್ಲಿಕೆಯಾಗಬೇಕು.* ರಾಜ್ಯದ ವಿಧಾನಮಂಡಲದ ಅಭಿಪ್ರಾಯವನ್ನು ಕರಡು ಮಸೂದೆಯಲ್ಲಿ ಅಳವಡಿಸಿ, ಕೇಂದ್ರ ಕಾನೂನು ಸಚಿವಾಲಯದ ಅಭಿಪ್ರಾಯಕ್ಕೆ ಕಳುಹಿಸಲಾಗುತ್ತದೆ.* ಕಾನೂನು ಸಚಿವಾಲಯವೂ ತನ್ನ ಟಿಪ್ಪಣಿಯನ್ನು ಸಂಪುಟಕ್ಕೆ ಸಲ್ಲಿಸುತ್ತದೆ. ನಂತರ ಸಚಿವ ಸಂಪುಟದ ಒಪ್ಪಿಗೆ ಪಡೆದು ಸಂಸತ್ತಿನಲ್ಲಿ ಮಸೂದೆ ಮಂಡನೆಯಾಗುತ್ತದೆ.* ರಾಜ್ಯ ಪುನರ್ವಿಂಗಡಣಾ ಮಸೂದೆಯ ಅಂಗೀಕಾರಕ್ಕೆ ಸರಳ ಬಹುಮತ ಸಾಕು. ಸಂವಿಧಾನ ತಿದ್ದುಪಡಿಗೆ ಅಗತ್ಯವಾದ ಮೂರನೇ ಎರಡರಷ್ಟು ಬಹುಮತದ ಅಗತ್ಯವಿಲ್ಲ.

`ತೆಲುಗರ ನಾಡು'

* ತೆಲಂಗಾಣವೆಂದರೆ `ತೆಲುಗರ ನಾಡು' ಎಂದರ್ಥ. ಇದು ಹಿಂದಿನ ನಿಜಾಮರ ಆಡಳಿತದಲ್ಲಿದ್ದ ಹೈದರಾಬಾದ್ ರಾಜ್ಯದ ಭಾಗವಾಗಿತ್ತು.* ನಿಜಾಮರು ಹೈದರಾಬಾದ್‌ನ್ನು ಸ್ವತಂತ್ರ ರಾಜ್ಯವನ್ನಾಗಿ ಕಾಯ್ದುಕೊಳ್ಳಲು ಬಯಸಿದಾಗ, ಸೇನಾ ಕಾರ್ಯಾಚರಣೆ ಮೂಲಕ 1948ರಲ್ಲಿ ಭಾರತದ ಭಾಗವಾಗಿ `ಹೈದರಾಬಾದ್ ರಾಜ್ಯ'ವನ್ನು ಘೋಷಿಸಲಾಯಿತು. ತೆಲಂಗಾಣವು ತೆಲುಗು ಮಾತನಾಡುವ ಜನರ ರಾಜ್ಯವಾಗಿ 1956ರವರೆಗೂ `ಹೈದರಾಬಾದ್ ರಾಜ್ಯ'ದ ಹೆಸರಿನಲ್ಲಿತ್ತು. ಆದರೆ ನಂತರ ಮದ್ರಾಸ್ ಪ್ರಾಂತ್ಯದಿಂದ ಬೇರ್ಪಟ್ಟು ರಚನೆಯಾದ ಆಂಧ್ರಪ್ರದೇಶ ರಾಜ್ಯದೊಂದಿಗೆ ವಿಲೀನವಾಯಿತು.* ಭೌಗೋಳಿಕ ವಿನ್ಯಾಸ: ತೆಲಂಗಾಣವು ಕರಾವಳಿ ಆಂಧ್ರ, ರಾಯಲಸೀಮಾ (ಈಗಿನ ಆಂಧ್ರಪ್ರದೇಶದ ಕೆಲವು ಭಾಗಗಳು), ಕರ್ನಾಟಕ, ಮಹಾರಾಷ್ಟ್ರ ಹಾಗೂ ಛತ್ತೀಸಗಡ ಪ್ರದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.