ಸೋಮವಾರ, ಮೇ 23, 2022
30 °C

ಅಸ್ತಿತ್ವದ ಎರಡು ಭಾಗಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದು ದಿನ ಭಗವಾನ್ ಬುದ್ಧ ಬೋಧಿವೃಕ್ಷದ ಕೆಳಗೆ ಕುಳಿತಿದ್ದ. ಅವನ ಮುಖದಲ್ಲಿ ಸದಾ ತುಳುಕಾಡುತ್ತಿದ್ದ ಪ್ರಸನ್ನತೆ ಎದ್ದು ಕಾಣುತ್ತಿತ್ತು. ಯಾರು ಬಂದು ಏನೇ ಹೇಳಿದರೂ ಅವನ ಮುಖದ ಪ್ರಸನ್ನತೆ ಬದಲಾಗುತ್ತಿರಲಿಲ್ಲ. ಕೆಲ ಶಿಷ್ಯರು ಬಂದು ಸಂತೋಷದ ವಿಷಯಗಳನ್ನು ಹೇಳಿಕೊಂಡರು. ಒಬ್ಬ ಗೃಹಸ್ಥ ಬಂದು ಮನೆಯಲ್ಲಿ ಸಾವು ಆದ ಸಂಗತಿ ಹೇಳಿ ಕಣ್ಣೀರಿಟ್ಟ. ಬುದ್ಧ ಅವನಿಗೆ ಸಾಂತ್ವನ ಹೇಳುವಾಗ ಅವನ ಕಣ್ಣಿಂದ ಸಹಾನುಭೂತಿ ಒಸರುತ್ತಿತ್ತು. ಆದರೆ ಆ ವ್ಯಕ್ತಿ ಹೋದ ಮೇಲೆ ಮತ್ತೆ ಅದೇ ಪ್ರಶಾಂತ ಮುಖಮುದ್ರೆ.ಆಗ ಬಂದ ದೇವದತ್ತ. ಅವನು ಪಟ್ಟಣದ ಶ್ರೀಮಂತ ವ್ಯಾಪಾರಿಯ ಏಕ ಮಾತ್ರ ಪುತ್ರ. ಆತ ಬುದ್ಧನ ಪ್ರವಚನಗಳನ್ನು ಕೇಳಿ ಮನಸೋತು ಬಂದಿದ್ದಾನೆ. ಬಂದವನೇ ಬುದ್ಧನಿಗೆ ಪ್ರಣಾಮಗಳನ್ನು ಸಲ್ಲಿಸಿ ಕೈಮುಗಿದು ನಿಂತುಕೊಂಡ. ಬುದ್ಧ ಮುಗುಳ್ನಕ್ಕು ‘ಏನಾದರೂ ವಿಷಯದೆಯೇ ದೇವದತ್ತ?’ ಎಂದು ಕೇಳಿದ. ಆಗ ದೇವದತ್ತ ಹೇಳಿದ, ‘ಭಗವಾನ್, ನಾನು ನಿಮ್ಮ ರಕ್ಷೆಯಿಂದ ಬಹುದಿನ ಹೊರಗಿರಲಾರೆ.ದಯವಿಟ್ಟು ನನ್ನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ, ನನಗೆ ದೀಕ್ಷೆ ನೀಡಿ.’ ಬುದ್ಧ ಮತ್ತೆ ಅದೇ ಮಂದಹಾಸವನ್ನು ಬೀರಿ, ‘ಅಯ್ಯಾ ದೇವದತ್ತ ನಾಳೆ ಬೆಳಿಗ್ಗೆ ಸರಿಯಾಗಿ ನಾಲ್ಕು ಗಂಟೆಗೆ ಇಲ್ಲಿಗೇ ಬಾ. ನಿನಗೆ ದೀಕ್ಷೆ ನೀಡುತ್ತೇನೆ’ ಎಂದ. ಈ ತರುಣನಿಗೆ ನಂಬುವುದಕ್ಕೆ ಸಾಧ್ಯವಾಗಲಿಲ್ಲ. ಇಷ್ಟು ಬೇಗ ಬುದ್ಧ ತನ್ನನ್ನು ಶಿಷ್ಯನಾಗಿ ಒಪ್ಪಿಕೊಳ್ಳುತ್ತಾನೆ ಎಂದುಕೊಂಡಿರಲಿಲ್ಲ.‘ಆಯ್ತು ಪ್ರಭು, ಸರಿಯಾಗಿ ನಾಲ್ಕು ಗಂಟೆಗೇ ಬರುತ್ತೇನೆ’ ಎಂದು ಹಿಗ್ಗಿನಿಂದ ಹೇಳಿದ. ‘ದೇವದತ್ತ, ಇನ್ನೊಂದು ಮಾತನ್ನು ಸರಿಯಾಗಿ ಕೇಳಿಸಿಕೋ. ನೀನು ಬರುವಾಗ ಒಬ್ಬನೇ ಬರಬೇಕು. ನಿನ್ನ ಜೊತೆ ಜನರ ಗುಂಪನ್ನು ಕರೆದುಕೊಂಡು ಬರಬೇಡ’ ಎಂದು ನುಡಿದ ಬುದ್ಧ, ‘ಆಗಲಿ’ ಎಂದು ತಲೆ ಅಲ್ಲಾಡಿಸಿ ದೇವದತ್ತ ಹೊರಟ.ಮರುದಿನ ಸರಿಯಾಗಿ ನಾಲ್ಕು ಗಂಟೆಗೆ ದೇವದತ್ತ ಬಂದ. ಬುದ್ಧನ ಮುಂದೆ ಕೈಮುಗಿದು ನಿಂತ. ಒಂದು ಕ್ಷಣ ಅವನನ್ನು ಎವೆಯಿಕ್ಕದೇ ನೋಡಿದ ಬುದ್ಧ ಹೇಳಿದ. ‘ದೇವದತ್ತ, ನಾನು ನಿನಗೆ ಒಬ್ಬನೇ ಬರಲು ತಿಳಿಸಿದ್ದೆ. ಆದರೆ ನೀನು ಒಂದು ಜಾತ್ರೆಗಾಗುವಷ್ಟು ಜನರನ್ನು ಕರೆದುಕೊಂಡು ಬಂದಿದ್ದೀ. ಆಯ್ತು ನೀನೀಗ ಮರಳಿ ಹೋಗು. ಮತ್ತೆ ನಾಳೆ ಇದೇ ಸಮಯಕ್ಕೆ ಬಾ.ಇವತ್ತಿನ ಹಾಗೆ ರಾಶಿ ಜನರನ್ನು ಕರೆತರಬೇಡ.’ ದೇವದತ್ತ ಆಶ್ಚರ್ಯದಿಂದ ಸುತ್ತಮುತ್ತ ತಿರುಗಿ ನೋಡಿದ. ಯಾರೂ ಇರಲಿಲ್ಲ. ‘ಇಲ್ಲ ಭಗವಾನ್, ತಾವು ಹೇಳಿದಂತೆ ನಾನು ಒಬ್ಬನೇ ಬಂದಿದ್ದೇನೆ. ನನ್ನೊಂದಿಗೆ ಯಾರೂ ಇಲ್ಲ’ ಎಂದು ನಮ್ರನಾಗಿ ನುಡಿದ ದೇವದತ್ತ, ‘ನಿನ್ನ ಜೊತೆಗೆ ಯಾರೂ ಬಂದಿಲ್ಲ. ಅದು ಸರಿ. ಆದರೆ ನಿನ್ನೊಳಗೆ ತುಂಬಿಕೊಂಡಿದ್ದಾರಲ್ಲ ಎಷ್ಟೊಂದು ಜನ? ನಾಳೆ ಬರುವಾಗ ಅವರನ್ನೆಲ್ಲ ಬಿಟ್ಟು ಬಾ’ ನುಡಿದ ಬುದ್ಧ.ದೇವದತ್ತ ಈಗ ತನ್ನ ಗಮನವನ್ನು ಮನಸ್ಸಿನೊಳಗೆ ತಿರುಗಿಸಿದ. ‘ಹೌದು, ಅದೆಷ್ಟು ಜನ ಮನದಂಗಳದಲ್ಲಿ ಗುಂಪುಕಟ್ಟಿಕೊಂಡು ಆತಂಕದಿಂದ ಇವನನ್ನೇ ನೋಡುತ್ತ ನಿಂತಿದ್ದಾರೆ! ಅಲ್ಲಿ ಇವನ ತಂದೆ ತಾಯಿಯರು ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ನಿಂತಿದ್ದಾರೆ. ದೇವದತ್ತನ ಸುಂದರಳಾದ ಪತ್ನಿ ಅಲ್ಲಿಯೇ ಇದ್ದಾಳೆ. ಆಕೆಯ ಬಟ್ಟಲುಕಣ್ಣುಗಳಲ್ಲಿ ದುಗುಡ, ಆತಂಕ ತುಂಬಿದೆ. ಅವನ ಎರಡು ಪುಟ್ಟ ಮಕ್ಕಳು ತಾಯಿಯ ಮುಖವನ್ನೇ ನೋಡುತ್ತಿವೆ.’ ಆಗ ದೇವದತ್ತನಿಗೆ ಅರ್ಥವಾಯಿತು, ತಾನು ತನ್ನವರೆಲ್ಲರನ್ನು ಮನೆಯಲ್ಲಿ ದೈಹಿಕವಾಗಿ ಬಿಟ್ಟುಬಂದಿದ್ದರೂ ಮನಸ್ಸಿನಿಂದ ದೂರ ಮಾಡುವುದಾಗಿರಲಿಲ್ಲ. ಅದು ಸಾಧ್ಯವಾಗುವ ವರೆಗೂ ಆತ ಬುದ್ಧನ ಶಿಷ್ಯತ್ವವನ್ನು ಪಡೆಯುವುದು ಅಶಕ್ಯವಾಗಿತ್ತು. ಸುಮಾರು ಎರಡು ವರ್ಷಗಳ ಕಾಲ ಪ್ರಯತ್ನಿಸಿ, ಮನಸ್ಸನ್ನು ನಿಗ್ರಹಿಸಿ ಕೊನೆಗೊಮ್ಮೆ ಬುದ್ಧನ ಮುಂದೆ ಬಂದು ನಿಂತು, ‘ಭಗವಾನ್ ನಾನೀಗ ಒಬ್ಬನೇ ಬಂದಿದ್ದೇನೆ’ ಎಂದ. ಬುದ್ಧ ಅವನ ಮುಖ ನೋಡಿ, ನಕ್ಕು, ಆದರಿಸಿ ಸ್ವೀಕರಿಸಿದ.ಸಾಮಾನ್ಯವಾಗಿ ದೇಹ ಮತ್ತು ಮನಸ್ಸುಗಳು ಎರಡಾಗಿ ಕೆಲಸ ಮಾಡುತ್ತವೆ. ದೇಹ ಏನನ್ನೋ ಮಾಡುವಾಗ ಮನಸ್ಸು ಮತ್ತೇನನ್ನೋ ಚಿಂತಿಸುತ್ತದೆ. ನಮ್ಮ ಅಸ್ತಿತ್ವದ ಎರಡು ಭಾಗಗಳು ಎಲ್ಲಿಯವರೆಗೆ ಬೇರೆಬೇರೆಯಾಗಿ ಕೆಲಸ ಮಾಡುತ್ತವೋ ಅಲ್ಲಿಯವರೆಗೂ ಶ್ರೇಷ್ಠ ಕಾರ್ಯ ಸಾಧ್ಯವಾಗುವುದಿಲ್ಲ. ಯಾವತ್ತು ಎರಡೂ ಏಕೀಭವಿಸಿ ಕಾರ್ಯಮಾಡುತ್ತವೋ ಅಂದು ನಾವೇ ಬೆರಗುಪಟ್ಟುಕೊಳ್ಳುವಂಥ ಸಾಧನೆಯಾಗುತ್ತದೆ. ಮಹೋತ್ತರ ಸಾಧನೆಯ ಮೂಲಗುಟ್ಟು ಇದೇ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.