ಅಸ್ಥಿರಂದ್ರತೆಯಿಂದ ಬೆನ್ನುಮೂಳೆಗೆ ಅಪಾಯ

7

ಅಸ್ಥಿರಂದ್ರತೆಯಿಂದ ಬೆನ್ನುಮೂಳೆಗೆ ಅಪಾಯ

Published:
Updated:

ಬೆಂಗಳೂರು: ಆಸ್ಟಿಯೋಪೋರೋಸಿಸ್ (ಅಸ್ಥಿರಂದ್ರತೆ) ಒಂದು `ಮೌನ~ ಕಾಯಿಲೆಯಾಗಿದ್ದು, ಇದರಿಂದ ಬೆನ್ನುಮೂಳೆಗೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ~ ಎಂದು ನಗರದ ಜೈನ್ ಆಸ್ಪತ್ರೆಯ ಬೆನ್ನುಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಮಹೇಶ ಬಿಜ್ಜಾವರ ಹೇಳಿದರು.ವಿಶ್ವ ಅಸ್ಥಿರಂದ್ರತೆ ಜಾಗೃತಿ ಸಪ್ತಾಹದ ಹಿನ್ನೆಲೆಯಲ್ಲಿ ಶುಕ್ರವಾರ ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. `ಜಗತ್ತಿನಲ್ಲಿ ಪ್ರತಿ 22 ಸೆಕೆಂಡಿಗೆ ಒಂದರಂತೆ ಬೆನ್ನೆಲುಬು ಮುರಿಯುತ್ತಿದ್ದು, ಶೇ 83ರಷ್ಟು ಬೆನ್ನುಮೂಳೆ ಮುರಿತದ ಪ್ರಕರಣಗಳಿಗೆ ಅಸ್ಥಿರಂದ್ರತೆಯೇ ಕಾರಣವಾಗಿದೆ. 50 ವರ್ಷ ಮೇಲ್ಪಟ್ಟ ಶೇ 20ರಷ್ಟು ಸ್ತ್ರೀಯರು ಮತ್ತು ಶೇ 15ರಷ್ಟು ಪುರುಷರು ಈ ಸಮಸ್ಯೆಯಿಂದ ಬಳಲುತ್ತಿದ್ದರೂ ಅವರಿಗೆ ಅದರ ಪರಿಣಾಮದ ಅರಿವಿಲ್ಲ~ ಎಂದು ವಿವರಿಸಿದರು.`ಅಸ್ಥಿರಂದ್ರತೆಗೆ ಶಸ್ತ್ರ ಚಿಕಿತ್ಸೆಯೇ ಪರಿಹಾರವಾಗಿದ್ದು, ಬಲೂನ್ ಕೈಫೊಪ್ಲಾಸ್ಟಿ ಮೂಲಕ ಸುರಕ್ಷಿತವಾದ ಚಿಕಿತ್ಸೆ ನೀಡಬಹುದು. ಆದರೆ, ಶಸ್ತ್ರ ಚಿಕಿತ್ಸೆ ಎಂದರೆ ಬಹುತೇಕರಿಗೆ ಅನಗತ್ಯವಾದ ಭಯ ಇದೆ~ ಎಂದು ಅವರು ಹೇಳಿದರು.`ಎತ್ತರ ಕಡಿಮೆ ಆಗುವುದು, ದಿಢೀರ್ ತೀವ್ರವಾದ ಬೆನ್ನುನೋವು ಉಂಟಾಗುವುದು, ಇಲ್ಲವೇ ಅಸಾಮಾನ್ಯ ರೀತಿಯಲ್ಲಿ ಬೆನ್ನು ಬಾಗುವುದು ಈ ಕಾಯಿಲೆಯ ಪ್ರಮುಖ ಲಕ್ಷಣಗಳಾಗಿವೆ. ಆದರೆ, ಬೆನ್ನುಮೂಳೆಯ ಈ ಸಮಸ್ಯೆಯನ್ನು ಸಾಮಾನ್ಯವಾಗಿ ಬರಿ ನೋವು ಎಂಬ ಭ್ರಮೆಯಲ್ಲಿ ಅಲಕ್ಷಿಸಲಾಗುತ್ತದೆ~ ಎಂದು ವಿಷಾದಿಸಿದರು. `ದೇಶದಲ್ಲಿ 30 ಲಕ್ಷಕ್ಕಿಂತ ಅಧಿಕ ಜನ ಈ ಕಾಯಿಲೆಯಿಂದ ಬಳಲುತ್ತಿರುವ ಅಂದಾಜಿದೆ~ ಎಂದು ತಿಳಿಸಿದರು.`ಬೆನ್ನುಮುರಿತದ ಚಿಕಿತ್ಸೆಗೆ ಒಂದು ಗಂಟೆಯಷ್ಟು ಸಮಯ ಬೇಕಾಗುತ್ತದೆ. ಅದರ ದೋಷವನ್ನು ಸಣ್ಣ ಛೇದನದಿಂದ ಸರಿಪಡಿಸಲಾಗುತ್ತದೆ. ಅಲ್ಲಿ ಉಂಟಾಗುವ ಕುಳಿಯನ್ನು ಬೋನ್ ಸಿಮೆಂಟ್ ಹಾಕಿ ಭರ್ತಿ ಮಾಡಲಾಗುತ್ತದೆ~ ಎಂದು ಹೇಳಿದರು. `ನೋವನ್ನು ಸಹಿಸುತ್ತಾ ಕೂಡುವ ಬದಲು ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವುದು ಹೆಚ್ಚಿನ ಹಾನಿಯನ್ನು ತಪ್ಪಿಸಬಲ್ಲದು~ ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry