ಅಸ್ಪೃಶ್ಯತೆ ಹಿಂದೂ ಧರ್ಮಕ್ಕೆ ಕಳಂಕ

ಭಾನುವಾರ, ಜೂಲೈ 21, 2019
26 °C

ಅಸ್ಪೃಶ್ಯತೆ ಹಿಂದೂ ಧರ್ಮಕ್ಕೆ ಕಳಂಕ

Published:
Updated:

ಚಿತ್ರದುರ್ಗ: ಹಿಂದೂ ಧರ್ಮದಲ್ಲಿ ಅಸ್ಪ್ರಶ್ಯತೆ ಇದ್ದರೆ ಅದು ಕಳಂಕ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಗಳು ನುಡಿದರು.ಹಿರಿಯೂರು ತಾಲೂಕಿನ ಸೊಂಡೆಕೆರೆ ಗ್ರಾಮದಲ್ಲಿ ಜರುಗಿದ ಸಾಮರಸ್ಯ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮದ ವಿವಿಧ ಜಾತಿಗಳಾದ ದಲಿತ, ಕುರುಬ, ಯಾದವ ಜನಾಂಗದ ಕೇರಿಗಳಲ್ಲಿ ಪಾದಯಾತ್ರೆ ನಡೆಸಿದ ನಂತರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಅಸ್ಪೃಶ್ಯತೆಯ ಕಳಂಕದಿಂದ ಮಠಾಧೀಶರಿಗೆ ಕೆಟ್ಟ ಹೆಸರು ಬರುವುದು ಬೇಡ. ಈ ನಾಡಿನಲ್ಲಿ ಇಷ್ಟೆಲ್ಲಾ ಮಠಗಳು ಇದ್ದರೂ ಜಾತೀಯತೆ ಇನ್ನೂ ಜೀವಂತವಾಗಿದೆಂದರೆ ಎಲ್ಲಾ ಮಠಗಳಿಗೆ ಅವಮಾನ ಎಂದು ಶ್ರೀಗಳು ಅಭಿಪ್ರಾಯಪಟ್ಟರು.ಹಿಂದೂಗಳೆಲ್ಲರೂ ಸಮಾನರು. ನಾವೆಲ್ಲಾ ಯಾವುದೇ ಭೇದ ಭಾವವಿಲ್ಲದೇ ಬದುಕಬೇಕು ಎನ್ನುವ ಉದ್ದೇಶದಿಂದ ಮಾಧ್ವ ಮಠದ ಶ್ರೀಗಳಾದ ತಾವು ಹಾಗೂ ಆದಿ ಜಾಂಬವ ಮಠದ ಮಾದಿಗ ಸ್ವಾಮಿಜಿಗಳು ಸೇರಿಕೊಂಡು ದಲಿತ ಕೇರಿಗಳಲ್ಲಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಹಿಂದೂ ಧರ್ಮದಲ್ಲಿ ಮೇಲು ಕೀಳುಗಳಿಲ್ಲ. ಇಲ್ಲಿ ಎಲ್ಲರೂ ಸಮಾನರು. ಈ ಧರ್ಮ ಒಂದು ರೀತಿಯಲ್ಲಿ ಗಂಗೆಯಂತೆ. ಆದರೆ, ಅನೇಕ ಕಲ್ಮಶಗಳು ಬಂದು ಸೇರಿಕೊಂಡು ಗಂಗೆಯನ್ನು ಮಾಲೀನ ಮಾಡುತ್ತಿದೆ. ಆದರೆ ಈ ಮಲೀನತೆ ಹಿಂದೂ ಧರ್ಮದಲ್ಲಿ ಹೆಚ್ಚು ಕಾಲ ಉಳಿಯಬಾರದು ಎನ್ನುವ ಉದ್ದೇಶದಿಂದ ಸ್ವಚ್ಛ ಮಾಡುವ ಕಾರ್ಯಕ್ಕೆ ನಾವು ಕೈ ಹಾಕಿದ್ದೇವೆ ಎಂದು ತಿಳಿಸಿದರು.ಹಿಂದೂ ಧರ್ಮದ ಉನ್ನತಿಯಾಗ ಬೇಕಾದರೆ ಹಿಂದುಳಿದವರ ಉನ್ನತಿಯಾಗಬೇಕು. ಅದಕ್ಕೆ ಬೇಕಾದ ಎಲ್ಲ ಕಾರ್ಯಗಳನ್ನು ಪೂರಕವಾಗಿ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ದಲಿತರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು. ಎಲ್ಲರೂ ದುಡಿಯಬೇಕು ಮತ್ತು ದುಂದುವೆಚ್ಚ ಮಾಡಬಾರದು. ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಶ್ರೀಗಳು ಕಿವಿ ಮಾತು ಹೇಳಿದರು.ದಲಿತರಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಉಡುಪಿಯಲ್ಲಿ ಊಟ ವಸತಿ ಸಹಿತ ಶಾಲೆಯನ್ನು ತೆರೆದಿದ್ದೇವೆ. ಮುಂದೆ ಮೈಸೂರಿನಲ್ಲಿ ತೆರೆಯಲಿದ್ದೇವೆ. ಆದ್ದರಿಂದ ಎಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.ಆದಿಜಾಂಬವ ಮಠದ ಶ್ರೀಗಳಾದ ಷಡಾಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ದೂರದ ಉಡುಪಿಯಿಂದ ಪೇಜಾವರ ಶ್ರೀಗಳು ಚಿತ್ರದುರ್ಗಕ್ಕೆ ಬಂದು ಇಲ್ಲಿನ ಹಳ್ಳಿಗಳಲ್ಲಿ ಬಂದು ಪಾದಯಾತ್ರೆ ಮಾಡುವುದರಿಂದ ಅವರಲ್ಲಿರುವ ದಲಿತಪರ ಕಾಳಜಿ ಗೊತ್ತಾಗುತ್ತಿದೆ ಎಂದರು.ದಲಿತರು, ಸವರ್ಣೀಯರು ಸೇರಿದಂತೆ ಎಲ್ಲರೂ ಸಮಾನತೆಯಿಂದ ಬದುಕಬೇಕು. ನಾವೆಲ್ಲಾ ಜಾಗೃತರಾಗಬೇಕು. ಶ್ರೀಗಳು ಮಾಡುವ ಈ ಕಾರ್ಯಕ್ಕೆ ಅನೇಕರು ವಿರೋಧ ವ್ಯಕ್ತಪಡಿಸುತ್ತಾರೆ.

 

ಆದರೆ ಅವರಿಗೆ ಈ ಸಮಾಜದ ಮೇಲಿರುವ ಕಾಳಜಿಯನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾರ ಮಾತಿಗೂ ಕಿವಿಗೊಡದೇ ನಾವು ಒಂದಾಗಿ ಬಾಳಬೇಕು ಎಂದು ಕಿವಿ ಮಾತು ಹೇಳಿದರು.ಧರ್ಮ ಜಾಗರಣದ ಮುನಿಯಪ್ಪ ಮಾತನಾಡಿ,  ಹಿಂದು ಧರ್ಮವನ್ನು ತ್ಯಜಿಸಿ ಯಾವುದೇ ಧರ್ಮಗಳಿಗೂ ಮತಾಂತರ ಆಗಬಾರದು. ಮತಾಂತರವಾದರೆ ನಮ್ಮ ಮೂಲ ಧರ್ಮಕ್ಕೆ ಅವಮಾನ ಮಾಡಿದಂತಾಗುತ್ತದೆ ಎಂದರು. ಗ್ರಾಮದ ಮುಖಂಡರಾದ ಶ್ರೀನಿವಾಸ್, ರಮೇಶ್, ಜಯ್ಯಣ್ಣ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry