ಮಂಗಳವಾರ, ಸೆಪ್ಟೆಂಬರ್ 29, 2020
28 °C

ಅಸ್ಸಾಂನಲ್ಲಿ ಜನಾಂಗೀಯ ಹಿಂಸಾಚಾರ : ಕೇಂದ್ರದ ವಿರುದ್ಧ ಗೊಗೊಯ್ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಸ್ಸಾಂನಲ್ಲಿ ಜನಾಂಗೀಯ ಹಿಂಸಾಚಾರ : ಕೇಂದ್ರದ ವಿರುದ್ಧ ಗೊಗೊಯ್ ವಾಗ್ದಾಳಿ

ಧುಬ್ರಿ/ ಕೊಕ್ರಜಾರ್ (ಪಿಟಿಐ): ಅಸ್ಸಾಂನಲ್ಲಿ ಬೋಡೊ ಆದಿವಾಸಿಗಳು ಮತ್ತು ಬಂಗಾಳಿ ಮಾತನಾಡುವ ಮುಸ್ಲಿಂ ಅಲ್ಪಸಂಖ್ಯಾತರ ನಡುವೆ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಸತ್ತವರ ಸಂಖ್ಯೆ 45 ಕ್ಕೆ ಏರಿಕೆಯಾಗಿದೆ.ಈ ನಡುವೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್, `ಗಲಭೆಯನ್ನು ಆರಂಭದಲ್ಲೇ ಹತ್ತಿಕ್ಕುವುದಕ್ಕಾಗಿ ರಾಜ್ಯಕ್ಕೆ ಸೇನೆಯನ್ನು ಕಳುಹಿಸುವಂತೆ ಕೇಂದ್ರದ ಗೃಹ ಸಚಿವಾಲಯವನ್ನು ಕೋರಲಾಗಿತ್ತು. ಆದರೆ ಕೇಂದ್ರದ ವಿಳಂಬ ನೀತಿಯಿಂದಾಗಿ ಸೇನೆ ರಾಜ್ಯವನ್ನು ತಲುಪುವುದಕ್ಕೆ ನಾಲ್ಕೈದು ದಿನಗಳು ಬೇಕಾಯಿತು. ಹಾಗಾಗಿ ಅಕ್ಕಪಕ್ಕದ ಜಿಲ್ಲೆಗಳಿಗೂ ಹಿಂಸಾಚಾರ ವ್ಯಾಪಿಸಿತು~ ಎಂದು ದೂರಿದ್ದಾರೆ.ಗಲಭೆ ಪೀಡಿತ ನಾಲ್ಕು ಜಿಲ್ಲೆಗಳ ಪೈಕಿ ಧುಬ್ರಿ ಜಿಲ್ಲೆ ಸಮೀಪದ ನದಿಯಲ್ಲಿ ತೇಲುತ್ತಿದ್ದ ಮೃತದೇಹವೊಂದು ಶುಕ್ರವಾರ ಪತ್ತೆಯಾದರೆ, ಬಕ್ಸಾ ಜಿಲ್ಲೆಯ ಹಳ್ಳಿಯೊಂದರಲ್ಲಿ ದುಷ್ಕರ್ಮಿಗಳು ಮೂರು ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ವರದಿಯಾಗಿದೆ.ಅತಿ ಹೆಚ್ಚಿನ ಹಿಂಸಾಚಾರ ದಾಖಲಾಗಿರುವ ಕೊಕ್ರಜಾರ್ ಜಿಲ್ಲೆ ಸೇರಿದಂತೆ ಇತರೆ ಗಲಭೆ ಪೀಡಿತ ಪ್ರದೇಶಗಳಲ್ಲಿ ವಿಧಿಸಲಾಗಿದ್ದ ಕರ್ಫ್ಯೂ ಸಡಿಲಿಸಲಾಗಿದ್ದು, ಆಯಕಟ್ಟಿನ ಜಾಗಗಳಲ್ಲಿ ಸೇನಾಪಡೆಗಳನ್ನು ನಿಯೋಜಿಸಲಾಗಿದೆ.ನಿರಾಶ್ರಿತರ ಶಿಬಿರಗಳಲ್ಲಿ ನರಕಯಾತನೆ: ಕೋಮುಗಲಭೆಯಲ್ಲಿ ನಿರಾಶ್ರಿತರಾಗಿರುವ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರಿಗೆ ಧುಬ್ರಿ ಮತ್ತು ಬಿಲಾಸಿಪುರಗಳಲ್ಲಿ ಒದಗಿಸಲಾಗಿರುವ 250ಕ್ಕೂ ಹೆಚ್ಚು ಪರಿಹಾರ ಶಿಬಿರಗಳಲ್ಲಿ ಅಗತ್ಯ ಆಹಾರ, ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲದೆ ನಿರಾಶ್ರಿತರು ಪರದಾಡುವಂತಾಗಿದೆ.ಬಿಲಾಸಿಪುರದ ಶಿಬಿರದಲ್ಲಿ ಚಿಕಿತ್ಸೆಯ ಕೊರತೆಯಿಂದಾಗಿ ಎರಡು ವರ್ಷದ ಮಗು ಮತ್ತು 60 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ನಿರಾಶ್ರಿತರು ತಮ್ಮ ಅವಶ್ಯಕತೆಗಳ ಪೂರೈಕೆಗಾಗಿ ಶಿಬಿರದ ಸಮೀಪದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಹಾಕಿ ಭಿಕ್ಷೆ ಬೇಡುತ್ತಿದ್ದಾರೆ ಎಂದು ಶಿಬಿರದಲ್ಲಿ ಆಶ್ರಯ ಪಡೆದಿರುವರೊಬ್ಬರು ತಿಳಿಸಿದ್ದಾರೆ.`ನಿರಾಶ್ರಿತರ ಶಿಬಿರಗಳಿಗೆ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಹೆಚ್ಚುವರಿಯಾಗಿ ಗುವಾಹಟಿಯಿಂದ 55 ವೈದ್ಯರನ್ನು ಕರೆಸಿಕೊಳ್ಳಲಾಗುತ್ತಿದೆ~ ಎಂದು ಆರೋಗ್ಯ ಸಚಿವ ಹಿಮಂತ್ ಬಿಸ್ವಾ ಶರ್ಮ ಹೇಳಿದ್ದಾರೆ.ಗಲಭೆ ನಿಯಂತ್ರಣಕ್ಕೆ ಸೌಹಾರ್ದ ಸಮಿತಿ: ಅಸ್ಸಾಂನಲ್ಲಿ ತಲೆದೋರಿರುವ ಜನಾಂಗೀಯ ಹಿಂಸಾಚಾರವನ್ನು ಶಮನಗೊಳಿಸಲು ಕಾಂಗ್ರೆಸ್ ಮುಂದಾಗಿದ್ದು, ಇದಕ್ಕಾಗಿ ಮುಖ್ಯಮಂತ್ರಿ ತರುಣ್ ಗೊಗೊಯ್ ನೇತೃತ್ವದ ಹತ್ತು ಜನರನ್ನೊಳಗೊಂಡ ಸೌಹಾರ್ದ ಸಮಿತಿಯೊಂದನ್ನು ರಚಿಸಿದೆ.ಜೊತೆಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭುವನೇಶ್ವರ್ ಕಲಿತಾ ಮುಂದಾಳತ್ವದಲ್ಲಿ ಹತ್ತು ಜನರ ಮೇಲ್ವಿಚಾರಣಾ ಸಮಿತಿಯನ್ನು ಕೂಡ ರಚನೆ ಮಾಡಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.