ಅಸ್ಸಾಂನಲ್ಲಿ ಬಿಜೆಪಿ ಶಕೆ ಆರಂಭ

7
ಮುಖ್ಯಮಂತ್ರಿಯಾಗಿ ಸರ್ವಾನಂದ ಸೋನೋವಾಲ್‌ ಪ್ರಮಾಣ

ಅಸ್ಸಾಂನಲ್ಲಿ ಬಿಜೆಪಿ ಶಕೆ ಆರಂಭ

Published:
Updated:
ಅಸ್ಸಾಂನಲ್ಲಿ ಬಿಜೆಪಿ ಶಕೆ ಆರಂಭ

ನವದೆಹಲಿ: ಸರ್ವಾನಂದ ಸೋನೋವಾಲ್ ಅವರು ಅಸ್ಸಾಂನ 14ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದರೊಂದಿಗೆ ಈಶಾನ್ಯ ಭಾರತದಲ್ಲಿ ಬಿಜೆಪಿ ಇತಿಹಾಸದ ಹೊಸ ಅಧ್ಯಾಯವನ್ನು ಬರೆದಿದೆ.ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಕೇಂದ್ರದ ಪ್ರಮುಖ ಸಚಿವರು, 13 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರ ಉಪಸ್ಥಿತಿಯಲ್ಲಿ ರಾಜ್ಯಪಾಲ ಪಿ. ಬಿ. ಆಚಾರ್ಯ ಅವರು ಸೋನೋವಾಲ್ ಮತ್ತು ಇತರ 10 ಸಚಿವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ಭೋದಿಸಿದರು.ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸತತ ಮೂರು ಅವಧಿಗೆ ಅಸ್ಸಾಂ ಮುಖ್ಯಮಂತ್ರಿ ಆಗಿದ್ದ ತರುಣ್ ಗೊಗೊಯಿ, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸೋನೋವಾಲ್ ಜತೆ  ಸಂಪುಟ ದರ್ಜೆಯ ಎಂಟು ಸಚಿವರು, ಇಬ್ಬರು ಸ್ವತಂತ್ರ ಖಾತೆಯ ರಾಜ್ಯ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ಸಚಿವರ ಖಾತೆಯನ್ನು ನಂತರ ಹಂಚಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಬಿಜೆಪಿಯ ಚುನಾವಣೆ ಉಸ್ತುವಾರಿ ಹೊತ್ತಿದ್ದ ಹಿಮಂತಾ ಬಿಸ್ವಾಸ್ ಶರ್ಮಾ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಣಜಿತ್ ದತ್ತಾ, ಮಾಜಿ ಸಚಿವ ಹಾಗೂ ಬಿಜೆಪಿಯ ಪ್ರಮುಖ ನಾಯಕ ಚಂದ್ರಮೋಹನ್ ಪಟ್ವಾರಿ, ಬಿಜೆಪಿ ಮಿತ್ರ ಪಕ್ಷವಾದ ಎಜಿಪಿಯ ಕಾರ್ಯಾಧ್ಯಕ್ಷ ಅತುಲ್ ಬೋರಾ, ಕೇಶವ್ ಮಹಾಂತ, ಬಿಪಿಎಫ್‌ನ ಪ್ರಮೀಳಾ ರಾಣಿ ಬ್ರಹ್ಮಾ ಮತ್ತು ರಿಹೊನ್ ದಿಯಾಮೇರಿ ಅವರು ಸಂಪುಟ ದರ್ಜೆಯ ಸಚಿವರಾಗಿದ್ದಾರೆ.ಇದಲ್ಲದೆ ದಕ್ಷಿಣ ಅಸ್ಸಾಂನ ಹಿರಿಯ  ಧುರೀಣ ಪರಿಮಾಲ್ ಶುಕ್ಲಾ ವೈದ್ಯ ಅವರೂ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾನ ವಚನ ಸ್ವೀಕರಿಸಿದರು.ಬಿಜೆಪಿಯ ಪಲ್ಲವ್ ಲೋಚನ್ ದಾಸ್ ಮತ್ತು ಎಜಿಪಿಯ ನಬ ಕುಮಾರ್ ಡೋಲೆ ಅವರು ಸ್ವತಂತ್ರ ಖಾತೆಯ ರಾಜ್ಯ ಸಚಿವರಾಗಿದ್ದಾರೆ.ರಾಜ್ಯದಲ್ಲಿ ಇರುವ ಅಕ್ರಮ ವಲಸಿಗರನ್ನು ಹೊರದಬ್ಬುವ ಭರವಸೆಯೊಂದಿಗೆ ಬಿರುಸಿನ ಪ್ರಚಾರ ಮಾಡಿ ಅಧಿಕಾರಕ್ಕೆ ಬಂದಿರುವ ಸೋನೋವಾಲ್ ಅವರಿಗೆ ಆಡಳಿತ ಈಗ ಸವಾಲಿನ ಕೆಲಸವಾಗಿದೆ.ಬಿಜೆಪಿ ಮತ್ತು ಮಿತ್ರ ಪಕ್ಷಗಳ ಭರವಸೆಗಳನ್ನು ನಂಬಿ ಜನರು ಅಭೂತಪೂರ್ವ ಬೆಂಬಲ ನೀಡಿದ್ದರಿಂದ 15 ವರ್ಷಗಳ ಕಾಂಗ್ರೆಸ್ ಆಡಳಿತ ಅಂತ್ಯ ಕಂಡಿದೆ.

ಬಿಜೆಪಿ ಮತ್ತು ಮಿತ್ರ ಪಕ್ಷಗಳು 87 ಸ್ಥಾನಗಳನ್ನು ಗಳಿಸಿವೆ. ಕಾಂಗ್ರೆಸ್ 26 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ.ಸೋನೋವಾಲ್ ಅವರು ಅಸ್ಸಾಂ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಸೋನೋವಾಲ್ ಅವರು ಸರ್ಕಾರದ ಆದ್ಯತೆಯನ್ನು ಈಗಾಗಲೇ ಪಟ್ಟಿ ಮಾಡಿದ್ದು, ಹಿಂದೂ ಮತ್ತು ಮುಸ್ಲಿಮರಿಗೆ ಸೂಕ್ತ ರಕ್ಷಣೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.ಎಲ್ಲಾ ಸಮುದಾಯಗಳನ್ನು ಒಳಗೊಂಡ ಸಾಮಾಜಿಕ– ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದು ಪ್ರಮಾಣ ವಚನ ಸ್ವೀಕಾರದ ನಂತರ ನಡೆದ ರ್ಯಾಲಿಯಲ್ಲಿ ತಿಳಿಸಿದರು.ಅಸ್ಸಾಂ ಚಳವಳಿಯ ಹುತಾತ್ಮರನ್ನು ನೆನೆಯುತ್ತ ಸಮಾಜದ ಎಲ್ಲಾ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು.ಬ್ರಹ್ಮಪುತ್ರಾ ಮತ್ತು ಬರಾಕ್ ಕಣಿವೆಯನ್ನು ಒಗ್ಗೂಡಿಸಿ ಅಸ್ಸಾಂ ಅನ್ನು ಅಭಿವೃದ್ಧಿಪಡಿ ಸುತ್ತೇವೆ ಎಂದು ಭರವಸೆ ನೀಡಿದರು.ಪ್ರಥಮ ಆದ್ಯತೆ: ಅಕ್ರಮ ವಲಸೆ ತಡೆಯುವುದು, ಗಡಿಯನ್ನು ಮುಚ್ಚುವುದು ಹಾಗೂ ಪೌರತ್ವ ನೋಂದಣಿ ದಾಖಲೆ ಸರಿಪಡಿಸುವುದು ತಮ್ಮ ಸರ್ಕಾರದ ಪ್ರಥಮ ಆದ್ಯತೆ ಎಂದು ಮುಖ್ಯಮಂತ್ರಿ ತಿಳಿಸಿದರು.ಮುಖ್ಯಾಂಶಗಳು

* ಮೋದಿ, ಅಡ್ವಾಣಿ, 13 ಮುಖ್ಯಮಂತ್ರಿಗಳ ಉಪಸ್ಥಿತಿ

* ಸಂಪುಟಕ್ಕೆ 10 ಸಚಿವರು

* ಅಕ್ರಮ ವಲಸೆ ತಡೆಗೆ ಆದ್ಯತೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry