ಸೋಮವಾರ, ಆಗಸ್ಟ್ 26, 2019
21 °C

ಅಸ್ಸಾಂ: ರೈಲು ಸಂಚಾರ ಅಸ್ತವ್ಯಸ್ತ

Published:
Updated:

ದಿಫು/ಕೋಕ್ರಜಾರ್ (ಪಿಟಿಐ): ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹಿಸಿ ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತಷ್ಟು ತೀವ್ರಗೊಂಡಿದೆ. ಕಾಂಗ್ರೆಸ್ ಸಂಸದ ಬಿರೇನ್ ಸಿಂಗ್ ಅವರ ರಬ್ಬರ್ ತೋಟ ಮತ್ತು ನಿವಾಸಕ್ಕೆ ಬೆಂಕಿ ಹಚ್ಚಲಾಗಿದೆ. ದುಷ್ಕರ್ಮಿಗಳು ಕೆಲವು ಮರಗಳನ್ನೂ ನೆಲಕ್ಕುರುಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.ಕರ್ಬಿ ಅಂಗ್ಲಾಂಗ್‌ನಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು ಈ ವೇಳೆ ನಾಲ್ವರು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಹೋರಾಟಕ್ಕೆ ಹಲವು ಬುಡಕಟ್ಟು ಸಂಘಟನೆಗಳು ಕೈಜೋಡಿಸಿವೆ. ತೆಲಂಗಾಣ ರಚನೆ ಬಳಿಕ ಅಸ್ಸಾಂನ್ನು ಪ್ರತ್ಯೇಕ ರಾಜ್ಯಗಳನ್ನಾಗಿ ವಿಂಗಡಿಸಬೇಕು ಎಂಬ ನಾಲ್ಕು ಬುಡಕಟ್ಟು ಸಂಘಟನೆಗಳ ಕೂಗಿಗೆ ಮತ್ತೆ ಜೀವಬಂದಿದೆ.ಬೋಡೊ, ಕರ್ಬಿ ದಿಮಾಸ್ ಮತ್ತು ಕೊಚ್-ರಾಜ್‌ಬೊಂಗ್ಶಿಶ್ ಸಂಘಟನೆಗಳು ಪ್ರತ್ಯೇಕ ರಾಜ್ಯಗಳಿಗಾಗಿ ಬೇಡಿಕೆ ಮುಂದಿಟ್ಟಿವೆ. ಪ್ರತ್ಯೇಕ ಬೋಡೊಲ್ಯಾಂಡ್‌ಗೆ ಆಗ್ರಹಿಸಿ ವಿವಿಧ ಬೋಡೊ ಸಂಘಟನೆಗಳು ಕರೆ ನೀಡಿದ್ದ 12 ಗಂಟೆಗಳ `ರೈಲು ತಡೆ'ಯಿಂದ ರಾಜ್ಯದಾದ್ಯಂತ ಶುಕ್ರವಾರ ರೈಲುಗಳ ಸಂಚಾರ ಅಸ್ತವ್ಯಸ್ತ ಆಯಿತು.ಸೇನೆಯಿಂದ ಪಥಸಂಚಲನ: ಈ ಮಧ್ಯೆ, ಹಿಂಸಾಪೀಡಿತ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಸೇನೆಯು ಶುಕ್ರವಾರ ಪಥಸಂಚಲನ ನಡೆಸಿತು.

`ಹಿಂಸಾಚಾರವನ್ನು ನಿಯಂತ್ರಣಕ್ಕೆ ತರುವಲ್ಲಿ ಆಡಳಿತಕ್ಕೆ ನೆರವಾಗುವ ಉದ್ದೇಶದಿಂದ ಸೇನೆಯನ್ನು ಕರೆಸಲಾಗಿದೆ. ಸೇನಾ ಸಿಬ್ಬಂದಿ ಹಿಂಸಾ ಪೀಡಿತ ಪ್ರದೇಶಗಳಲ್ಲಿ ಪಥಸಂಚಲನ ನಡೆಸಿದರು' ಎಂದು ಅಧಿಕೃತ ಮೂಲಗಳು ತಿಳಿಸಿವೆ.ತೆಲಂಗಾಣ ರಾಜ್ಯ ರಚನೆಗೆ ಯುಪಿಎ ಸರ್ಕಾರ ಸಮ್ಮತಿಸಿದ ನಂತರ ಸತತ ಮೂರು ದಿನಗಳಿಂದ ಹಿಂಸಾಚಾರ ನಡೆಯುತ್ತಿರುವ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಅರೆಸೇನಾ ಪಡೆಯ ಹೆಚ್ಚುವರಿ ತುಕಡಿಗಳನ್ನು ನಿಯೋಜಿಸಲಾಗಿದೆ. ಮುಂದುವರಿದ ಹಿಂಸಾಚಾರ: ಕರ್ಫ್ಯೂ ವಿಧಿಸಿರುವುದನ್ನು ಲೆಕ್ಕಿಸದೆ ಶುಕ್ರವಾರವೂ ರಸ್ತೆಗಳಿದ ಪ್ರತಿಭಟನಾಕಾರರು ಹಿಂಸಾಚಾರದಲ್ಲಿ ತೊಡಗಿದರು. ಹಲವು ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಿ, ಅಪಾರ ಪ್ರಮಾಣದ ಆಸ್ತಿ ಪಾಸ್ತಿಗೆ ಹಾನಿ ಮಾಡಿದರು.ಉದ್ರಿಕ್ತ ಪ್ರತಿಭಟನಾಕಾರರು ಸುಮಾರು 6 ಕಿ.ಮೀಗಳಷ್ಟು ಉದ್ದಕ್ಕೆ ಹಳಿಯನ್ನು ಕಿತ್ತುಹಾಕಿದ್ದರಿಂದ ಮೇಲಿನ ಮತ್ತು ಕೆಳಗಿನ ಅಸ್ಸಾಂ ನಡುವಿನ ರೈಲುಗಳ ಸಂಚಾರಕ್ಕೆ ಅಡ್ಡಿಯಾಯಿತು ಎಂದು ಪೊಲೀಸರು ಹೇಳಿದರು. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಪೊಲೀಸರು ಕರ್ಬಿ ವಿದ್ಯಾರ್ಥಿಗಳ ಒಕ್ಕೂಟದ (ಕೆಎಸ್‌ಎ) ಅಧ್ಯಕ್ಷನನ್ನು ಬಂಧಿಸಿದ್ದಾರೆ. ಆ ಮೂಲಕ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ಬಂಧಿಸಲಾಗಿರುವವರ ಸಂಖ್ಯೆ 18ಕ್ಕೆ ಏರಿದೆ.ಜನಜೀವನ ಅಸ್ತವ್ಯಸ್ತ: ಪ್ರತ್ಯೇಕ ಕಮಟಾಪುರ ರಾಜ್ಯಕ್ಕಾಗಿ ಆಗ್ರಹಿಸಿ ಅಖಿಲ ಕೊಚ್ ರಾಜ್‌ಭೋಂಗ್ಶಿ ವಿದ್ಯಾರ್ಥಿಗಳ ಒಕ್ಕೂಟ (ಎಕೆಆರ್‌ಎಸ್‌ಯು) ಕರೆ ನೀಡಿದ್ದ 36-ಗಂಟೆಗಳ ಬಂದ್‌ನಿಂದಾಗಿ ಕೆಳಗಿನ ಅಸ್ಸಾಂನಲ್ಲಿ ಶುಕ್ರವಾರ ಜನಜೀವನ ಅಸ್ತವ್ಯಸ್ತವಾಯಿತು.ಗೋರ್ಖಾಲ್ಯಾಂಡ್‌ಗೆ ಪ್ರತ್ಯೇಕ  ರಾಜ್ಯಕ್ಕೆ ಒತ್ತಾಯಿಸಿ ಡಾರ್ಜಿಲಿಂಗ್‌ನಲ್ಲಿ ಹಿಂಸಾಚಾರಗಳು ನಡೆದಿವೆ.

ಗೃಹರಕ್ಷಕ ದಳದ ಸಿಬ್ಬಂದಿಗೆ ಬೆಂಕಿ ಹಚ್ಚಿದ್ದು, ಗೋರ್ಖಾ ಜನಮುಕ್ತಿ ಮೋರ್ಚಾದ ಕಾರ್ಮಿಕ ಮುಖಂಡನೊಬ್ಬನ ಮೃತದೇಹ ಡಾರ್ಜಿಲಿಂಗ್‌ನಲ್ಲಿ ಪತ್ತೆಯಾಗಿದೆ. ್ರಕ್ರಿಯಾ ಅಥಾಂಗ್ ಎಂಬಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Post Comments (+)