ಭಾನುವಾರ, ಏಪ್ರಿಲ್ 11, 2021
22 °C

ಅಸ್ಸಾಂ: ಹೊಸ ಜಿಲ್ಲೆಗೆ ಹಬ್ಬಿದ ಹಿಂಸಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗಿಯಾ (ಅಸ್ಸಾಂ) (ಪಿಟಿಐ): ಅಸ್ಸಾಂನ ಕೊಕ್ರ ಝಾರ್, ಚಿರಾಂಗ್, ಧುಬ್ರಿ ಹಾಗೂ ಬಕ್ಸಾ ಜಿಲ್ಲೆಗಳಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ 77 ಜನರು ಬಲಿಯಾದ ಘಟನೆಗಳನ್ನು ಮರೆಯುವ ಮುನ್ನವೇ ರಾಜ್ಯದ ಮತ್ತೊಂದು ಜಿಲ್ಲೆ ಕಾಮರೂಪ್‌ನ (ಗ್ರಾಮೀಣ) ರಂಗಿಯಾ ಪ್ರದೇಶದಲ್ಲಿ ಗುರುವಾರ ಹಿಂಸಾಕೃತ್ಯಗಳು ನಡೆದಿವೆ.ರಂಗಿಯಾ ಠಾಣೆ ವ್ಯಾಪ್ತಿಯಲ್ಲಿ ಉದ್ರಿಕ್ತ ಗುಂಪೊಂದು ವಾಹನಗಳಿಗೆ ಬೆಂಕಿಹಚ್ಚಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲಿಸರು ಅಶ್ರುವಾಯು, ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು. ರಾಷ್ಟ್ರೀಯ ಹೆದ್ದಾರಿ 31ರ ಉದಿಯಾನ ಚೌಕ್‌ನಲ್ಲಿ ಗುವಾಹಟಿ ಕಡೆಗೆ ಹೊರಟಿದ್ದ ಬಸ್‌ಗೆ ಬೆಂಕಿ ಹಚ್ಚಲಾಗಿದೆ.ಕಳೆದ ಜುಲೈ ತಿಂಗಳಲ್ಲಿ ನಿರಂತರವಾಗಿ ಅಸ್ಸಾಂನ ವಿವಿಧೆಡೆ ನಡೆದ ಗಲಭೆಗಳಲ್ಲಿ 4 ಲಕ್ಷಕ್ಕೂ ಅಧಿಕ ಜನ ನಿರಾಶ್ರಿತರಾಗಿದ್ದಾರೆ. ಈ ಎಲ್ಲರಿಗೆ ವಿವಿಧ ಸರ್ಕಾರಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.`ಸಾಮೂಹಿಕ ವಲಸೆ: ಅಜ್ಮಲ್ ಹೊಣೆ~

(ಗುವಾಹಟಿ ವರದಿ): 
ಸಂಭವನೀಯ ಹಲ್ಲೆಯ ಭಯದಿಂದಾಗಿ ವಿವಿಧ ರಾಜ್ಯಗಳಿಂದ ಈಶಾನ್ಯ ರಾಜ್ಯಗಳ ಜನರ ಸಾಮೂಹಿಕ ವಲಸೆಗೆ ಅಲ್ಪಸಂಖ್ಯಾತರ ಪ್ರಮುಖ ನಾಯಕ, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ಅವರೇ ಹೊಣೆ ಎಂದು ಅಖಿಲ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ (ಎಎಎಸ್‌ಯು) ದೂರಿದೆ.ಕರ್ನಾಟಕ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ನೆಲೆಸಿರುವ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳಲ್ಲಿ ಭಯಭೀತಿ ಉಂಟಾಗಲು ಅಜ್ಮಲ್ ಕೋಮುವಾದದ ರಾಜಕೀಯವೇ ಕಾರಣ. ಅಸ್ಸಾಂ ಹಿಂಸಾಚಾರಕ್ಕೆ ಕೋಮುವಾದದ ಬಣ್ಣ ಕೊಡಬೇಡಿ ಎಂದು ಅಜ್ಮಲ್‌ಗೆ ಎಎಎಸ್‌ಯು ಸಲಹೆಗಾರ ಸಮುಜ್ಜಲ್ ಭಟ್ಟಾಚಾರ್ಯ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.ಈಶಾನ್ಯ ರಾಜ್ಯಗಳ ಜನರಿಂದ ತುಂಬಿತುಳುಕುತ್ತಿರುವ, ಬೆಂಗಳೂರಿನಿಂದ ಹೊರಟ ಕನಿಷ್ಠ ಮೂರು ರೈಲುಗಳು ಶುಕ್ರವಾರ ಗುವಾಹಟಿ ತಲುಪಲಿವೆ ಎಂದರು.ಕರ್ನಾಟಕ ಸುರಕ್ಷಿತ (ನವದೆಹಲಿ ವರದಿ): ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚಾಗಿ ನೆಲೆಸಿರುವ ಈಶಾನ್ಯ ರಾಜ್ಯಗಳ ಜನ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿರುವ ಕೇಂದ್ರ ಸರ್ಕಾರ ಈ ಸಂಬಂಧ ಗಾಳಿ ಸುದ್ದಿ ಹರಡದಂತೆ ಎಚ್ಚರಿಕೆ ನೀಡಿದೆ.`ಗಾಳಿ ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ, ಬೆಂಗಳೂರಿನಲ್ಲಿ ಈಶಾನ್ಯ ರಾಜ್ಯಗಳ ಜನ ಸುರಕ್ಷಿತವಾಗಿದ್ದಾರೆ~ ಎಂದು ಕೇಂದ್ರ ಗೃಹ ಸಚಿವ ಸುಶೀಲ ಕುಮಾರ್ ಶಿಂಧೆ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಸಹ `ಇದೆಲ್ಲ ಬರಿ ಗಾಳಿ ಸುದ್ದಿ, ದೇಶದ ಯಾವ ಭಾಗದಲ್ಲೂ ಈಶಾನ್ಯ ರಾಜ್ಯಗಳ ಜನರಿಗೆ ತೊಂದರೆ ಇಲ್ಲ~ ಎಂದರು.ಸೋನಿಯಾ ಭೇಟಿ ಮಾಡಿದ ಈಶಾನ್ಯ ರಾಜ್ಯಗಳ ಸಂಸದರು

ನವದೆಹಲಿ ವರದಿ:
ಈಶಾನ್ಯ ರಾಜ್ಯಗಳ ಜನರಲ್ಲಿ ಆವರಿಸಿರುವ ಭಯದ ಕುರಿತು ಆ ರಾಜ್ಯಗಳ ಕಾಂಗ್ರೆಸ್ ಸಂಸದರು ಗುರುವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.ಹಲ್ಲೆಯ ಭಯದಿಂದಾಗಿ ಬೆಂಗಳೂರು ಮತ್ತಿತರ ಕಡೆಗಳಲ್ಲಿ ನೆಲೆಸಿರುವ ಈಶಾನ್ಯ ರಾಜ್ಯಗಳ ಜನರು ವಾಪಸ್ ಬರುತ್ತಿರುವ ಕುರಿತು ಈಶಾನ್ಯ ರಾಜ್ಯಗಳ ಅಭಿವೃದ್ಧಿಯ ರಾಜ್ಯ ಸಚಿವ ಪವನ್ ಸಿಂಗ್ ಘಟೊವಾರ್ ಸೇರಿದಂತೆ ವಿವಿಧ ಸಂಸದರು ಹಾಜರಿದ್ದು ಸೋನಿಯಾಗೆ ವಿವರಣೆ ನೀಡಿ ಸೂಕ್ತ ರಕ್ಷಣೆಗೆ ಮನವಿ ಮಾಡಿಕೊಂಡರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.