ಅಹಿಂಸಾತ್ಮಕ ಹೋರಾಟಕ್ಕೆ ದಲೈಲಾಮಾ ಕರೆ

7

ಅಹಿಂಸಾತ್ಮಕ ಹೋರಾಟಕ್ಕೆ ದಲೈಲಾಮಾ ಕರೆ

Published:
Updated:

ಮುಂಡಗೋಡ: ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ಟಿಬೆಟ್‌ನಲ್ಲಿ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ. ಜೀವನ ಅಮೂಲ್ಯವಾಗಿದ್ದು, ಇಂತಹ ಕೃತ್ಯಕ್ಕೆ ಮುಂದಾಗದೇ ಅಹಿಂಸಾತ್ಮಕ ಹೋರಾಟ ಮುಂದುವರೆಸಬೇಕು ಎಂದು ಟಿಬೆಟನ್ ಧರ್ಮಗುರು ದಲೈಲಾಮಾ ಎಂದು ಕರೆ ನೀಡಿದರು.ಟಿಬೆಟನ್ ಧರ್ಮಗುರು ದಲೈಲಾಮಾ ಅವರು ನೊಬೆಲ್ ಶಾಂತಿ ಪ್ರಶಸ್ತಿ ಪಡೆದು 23ವರ್ಷಗಳು ಸಂದ ಹಿನ್ನೆಲೆಯಲ್ಲಿ ಇಲ್ಲಿನ ಕ್ಯಾಂಪ ನಂ.6ರ ಡ್ರೆಪುಂಗ್ ಮೊನ್ಯಾಸ್ಟ್ರಿಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಸೋಮವಾರ ಮಾತನಾಡಿದರು.ನಿರಾಶ್ರಿತರಾಗಿ ಭಾರತಕ್ಕೆ ಬಂದ ಸಂದರ್ಭದಲ್ಲಿ ಟಿಬೆಟನ್‌ರಿಗೆ ಆಶ್ರಯ ನೀಡಿದ ಅಂದಿನ ಪ್ರಧಾನಿ ಜವಾಹರಲಾಲ ನೆಹರು ಹಾಗೂ ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪ ಅವರ ಸಹಾಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಾರತದಲ್ಲಿ ಎಲ್ಲ ಧರ್ಮದವರೂ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಇದು ಹೆಮ್ಮೆಯ ವಿಷಯ.ಟಿಬೆಟ್ ರಾಜಕೀಯ ಚಟುವಟಿಕೆಗಳಿಂದ ಈಗ ಮುಕ್ತಿ ಹೊಂದಿದ್ದು ರಾಜಕೀಯ ಆಗುಹೋಗುಗಳನ್ನು ಟಿಬೆಟ್ ಪ್ರಧಾನಿ ಡಾ.ಲೋಬಸಂಗ್ ಸಂಗೈ ನಿರ್ವಹಿಸಲಿದ್ದಾರೆ. ಜಗತ್ತಿನಲ್ಲಿ ಶಾಂತಿ ಹಾಗೂ ಸಾಮರಸ್ಯ ನೆಲೆಸುವಂತೆ ಮಾಡಲು ಧರ್ಮಗುರುವಾಗಿ ಕೆಲಸ ಮಾಡುವುದಾಗಿ ತಿಳಿಸಿದ ಅವರು, `ನನ್ನ ಬಳಿ ಯಾರಾದರೂ ವ್ಯವಹಾರದ ವಿಚಾರ ಮಾತನಾಡಿದರೆ ಒಂದೇ ವಾರದಲ್ಲಿ ನಷ್ಟ ಅನುಭವಿಸುವರು' ಎಂದು ಹಾಸ್ಯ ಚಟಾಕಿ ಹಾರಿಸಿದರು.ವಿಶ್ವಕ್ಕೆ ಶಾಂತಿ ಸಂದೇಶ ಸಾರುವಲ್ಲಿ ಪ್ರಮುಖ ಪಾತ್ರ ವಹಿಸಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿರುವ ಟಿಬೆಟನ್ ಧರ್ಮಗುರು ದಲೈಲಾಮಾ ಅವರಿಗೆ ಗೆಲುಗ್ಪಾ ಹಿರಿಯ ಬೌದ್ಧ ಬಿಕ್ಕುಗಳು ಗೌರವ ಸ್ಮರಣಿಕೆ ನೀಡಿದರು.ವಿಶ್ವ ಹಿಂದು ಪರಿಷತ್‌ನ ಅಶೋಕ ಸಿಂಘಾಲ ಮಾತನಾಡಿ, ವಿಶ್ವಕ್ಕೆ ಶಾಂತಿಯ ಸಂದೇಶ ಸಾರುತ್ತಿರುವ ಟಿಬೆಟನ್ ಧರ್ಮಗುರು ದಲೈಲಾಮಾ ಪ್ರೀತಿ, ಮಮತೆ, ಮಾನವೀಯತೆಯನ್ನು ಅಳವಡಿಸಿಕೊಂಡಿರುವ ಪೂಜ್ಯ ಗುರುವಿಗೆ ಬೆಂಬಲ ನೀಡಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು.ವಿವಿಧ ಸಂಪ್ರದಾಯ, ಆಚರಣೆಯನ್ನು ಅನುಸರಿಸುತ್ತ ದೇಶದ ವಿವಿಧ ಭಾಗಗಳಿಂದ ಸಂತರು, ಜಗದ್ಗುರುಗಳು ಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಾರೆ. ಇಂತಹ ಅಪರೂಪದ ಧರ್ಮಸಮ್ಮೇಳನದಲ್ಲಿ ದಲೈಲಾಮಾ ಅವರು ಭಾಗವಹಿಸಿದರೆ ಶಾಂತಿಯ ಸಂದೇಶವನ್ನು ಸಾರಲು ಇನ್ನಷ್ಟು ಅನುಕೂಲವಾಗುತ್ತದೆ. ಫೆಬ್ರುವರಿಯಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ದಲೈಲಾಮಾ ಭಾಗವಹಿಸುವರು ಎಂದರು.ಟಿಬೆಟ್ ಪ್ರಧಾನಿ ಡಾ.ಲೋಬಸಂಗ್ ಸಂಗೈ ಮಾತನಾಡಿ ಟಿಬೆಟ್‌ನಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಚೀನಾ ಸರ್ಕಾರದ ಕ್ರೂರ ದಬ್ಬಾಳಿಕೆಯಿಂದ ಮನನೊಂದು ಇಲ್ಲಿಯವರೆಗೆ 90ಕ್ಕೂ ಹೆಚ್ಚು ಟಿಬೆಟನ್‌ರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟಿಬೆಟನ್ ವಾಸ್ತವಿಕ ಪರಿಸ್ಥಿತಿಯನ್ನು ಹಾಗೂ ಅಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಇತರರಿಗೆ ತಿಳಿಯುವಂತೆ ಮಾಡಬೇಕಾಗಿದೆ. ಚೀನಾ ಸರ್ಕಾರದಿಂದ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದ ಅವರು ಟಿಬೆಟನ್‌ರಿಗೆ ಬೆಂಬಲ ವ್ಯಕ್ತಪಡಿಸುತ್ತಿರುವ ಫ್ರಾನ್ಸ್, ಇಟಲಿ, ಕೆನಡಾ, ಜಪಾನ, ಆಸ್ಟ್ರೇಲಿಯಾ, ಭಾರತ ಸೇರಿದಂತೆ ಎಲ್ಲ ದೇಶಗಳಿಗೂ ಆಭಾರಿಯಾಗಿದ್ದೇವೆ.ಕಠಿಣ ಕ್ರಮಗಳನ್ನು ಅನುಸರಿಸುತ್ತಿರುವ ಚೀನಾ ಸರ್ಕಾರದ ಧೋರಣೆಯಿಂದ ಆತ್ಮಾಹುತಿಯಂತ ಪ್ರಕರಣಗಳು ಸಂಭವಿಸುತ್ತಿವೆ. ಜಗತ್ತಿನ ಇತರ ರಾಷ್ಟ್ರಗಳು ಹಾಗೂ ವಿಶ್ವಸಂಸ್ಥೆ ಕೂಡಲೇ ಟಿಬೆಟ್‌ನ ವಾಸ್ತವಿಕ ಸ್ಥಿತಿಗತಿಯನ್ನು ಅರಿಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ ಅವರು ಸ್ವತಂತ್ರ ತನಿಖಾ ತಂಡವನ್ನು ಟಿಬೆಟ್‌ಗೆ ಕಳಿಸಿಕೊಟ್ಟು ಅಲ್ಲಿನ ವಾಸ್ತವಿಕತೆಯನ್ನು ಜಗತ್ತಿಗೆ ತಿಳಿಸುವ ಕೆಲಸವಾಗಬೇಕು. ಅಹಿಂಸಾ ಮಾರ್ಗದಿಂದಲೇ ಒಗ್ಗಟ್ಟಿನಿಂದ ಹೋರಾಟ ನಡೆಸುವ ಮೂಲಕ ದಲೈಲಾಮಾ ಅವರನ್ನು ಮತ್ತೆ ಟಿಬೆಟ್‌ನಲ್ಲಿ ನೋಡುವ ಕನಸು ನನಸಾಗುವ ಅವಶ್ಯಕತೆಯಿದೆ ಎಂದರು.ಹಾಲಿವುಡ್ ನಟ ರಿಚರ್ಡ ಗ್ಯಾರೆ, ಅರುಣಾಚಲ ಪ್ರದೇಶದ ಸಂಸದ ತ್ಸೋನಾ ರಿನಪೊಚ್, ಕರ್ಮಾ ಸಿಂಗೈ, ಟಿಬೆಟ್ ಸಂಸದ ಅಂದುಂಗ್ ತ್ಸೆತೆನ್, ಶಾಸಕ ವಿ.ಎಸ್.ಪಾಟೀಲ, ಜಿಲ್ಲಾಧಿಕಾರಿ ಇಂಕಾಗೋ ಜಮೀರ, ಎಸ್ಪಿ ಕೆ.ಟಿ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಗೌತಮ ಬಗಾದಿ,  ಬೌದ್ಧ ಬಿಕ್ಕುಗಳು ಉಪಸ್ಥಿತರಿದ್ದರು. ಸೋನಂ ತೆಂಜಿನ್ ನಿರ್ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry