ಅಹೋರಾತ್ರಿ ಹರಿದ ನಾದಗಂಗೆ

7

ಅಹೋರಾತ್ರಿ ಹರಿದ ನಾದಗಂಗೆ

Published:
Updated:

ರವೀಂದ್ರ ಕಲಾಕ್ಷೇತ್ರ ಶನಿವಾರ ಅಕ್ಷರಶಃ ತುಂಬಿ ತುಳುಕುತ್ತಿತ್ತು. ರಾತ್ರಿ ಹನ್ನೊಂದು, ಹನ್ನೆರಡಾದರೂ ಕಲಾಕ್ಷೇತ್ರದತ್ತ ಜನ ಸಾಗರ ಹರಿದು ಬರುತ್ತಲೇ ಇತ್ತು. ಆಸನಗಳು ತುಂಬಿದ್ದರೂ ಜನರು ನಿಂತುಕೊಂಡೇ ಸಂಗೀತವನ್ನು ಕಿವಿ ತುಂಬಿ, ಕಣ್ತುಂಬಿ, ಮನದುಂಬಿಕೊಂಡರು. ಝರಿ ಝರಿಯಾಗಿ ಹರಿದ ನಾದ ನೀರಾಂಜನದಲ್ಲಿ ಕೇಳುಗರು ಅದ್ವೈತದ ಸಂಭಾವ್ಯದಲ್ಲಿ ಒಂದಾದರು.

ರೇಣುಕಾ ಸಂಗೀತ ಸಭಾ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ದಿಗ್ಗಜ ಪಂ.ಅರ್ಜುನಸಾ ನಾಕೋಡ್ ಅವರ ಸ್ಮರಣಾರ್ಥ ಶನಿವಾರ ಆಯೋಜಿಸಿದ್ದ 10ನೇ ವರ್ಷದ `ಸ್ಮೃತಿ~ ಅಹೋರಾತ್ರಿ ಸಂಗೀತ ಸಮಾವೇಶದಲ್ಲಿ ಧುಮ್ಮಿಕ್ಕಿದ ನಾದಗಂಗೆ ಸಂಗೀತ ರಸಿಕರ ಹೃದಯವನ್ನು ತೇವಗೊಳಿಸಿತು. ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತದ ಜುಗಲ್‌ಬಂದಿ ಹಾಗೂ ವಾದನಗಳ ತಾನ ಕಲಾಕ್ಷೇತ್ರದ ಕಣಕಣದಲ್ಲಿ ಒಂದಾಗಿ ನಾದಲೋಕವನ್ನು ಸೃಷ್ಟಿಸಿತು.

ಅಹೋರಾತ್ರಿಯ ಸಂಗೀತ ಸಭೆ ಪಂ.ಬಾಲಚಂದ್ರ ನಾಕೋಡ್ ಅವರ ಗಾಯನ ಮತ್ತು ಉಸ್ತಾದ್ ಶಫೀಕ್ ಖಾನ್ ಅವರ ಸಿತಾರ್ ವಾದನದ ಮೂಲಕ ಆರಂಭವಾಯಿತು. ಜಪ್‌ತಾಲದ ಲಯದಲ್ಲಿ ಪೂರಿಯಾ ಧನಾಶ್ರೀ ರಾಗ ವಾದಕಿ-ಗಾಯಕಿಯನ್ನು ಮೀರಿ ಬೆಳೆಯಿತು. ತೀನ್‌ತಾಲ ಧೃತದ ಲಯದಲ್ಲಿ ಗಾಯನ-ವಾದನಗಳು ಭೋರ್ಗರೆದವು. ಕೇಳುಗರ ಮನಸ್ಸನ್ನು ತಾನಗಳ ಸವಾಲ್ ಜವಾಬ್‌ನ ಸ್ವರಗಳ ಮೂಲಕ ಮೀಟುವಲ್ಲಿ ಕಛೇರಿ ಯಶಸ್ವಿಯಾಯಿತು.

ಕಛೇರಿ ತರಾನಾಗಳಿಗೆ ಜನರು ಚಪ್ಪಾಳೆಯ ಉಡುಗೊರೆ ನೀಡಿ ಕಲಾವಿದರನ್ನು ಹುರಿದುಂಬಿಸಿದರು. ಗೋಪಿನಾಥ್ ನಾಕೋಡ್ (ಹಾರ್ಮೋನಿಯಂ) ಮತ್ತು ರಾಜೇಂದ್ರ ನಾಕೋಡ್ (ತಬಲಾ) ಗಾನ ಸುಧೆಗೆ ಉತ್ತಮ ಸಾಥಿದಾರರಾದರು.

ರಾತ್ರಿ 11 ಕ್ಕೆ ಆರಂಭಗೊಂಡ ಕೋಲ್ಕತ್ತದ ಪಂ.ತೇಜೇಂದ್ರ ನಾರಾಯಣ ಮಜುಂದಾರ್ ಅವರ ಸರೋದ್ ವಾದನ ಭಾಗೇಶ್ರೀಯಲ್ಲಿನ ಆಲಾಪಗಳಿಂದ ಮನಸೂರೆಗೊಂಡಿತು. ನುಡಿಸಾಣಿಕೆಯ ಸೂಕ್ಷ್ಮಗಳು ಕೇಳುಗರ ಹೃದಯದಲ್ಲಿ ನೆಲೆ ನಿಂತವು. ಬೆರಳುಗಳ ಕೋಮಲ ಮೀಟಿನ ಪ್ರತಿ ಅಲೆಯೂ ಸ್ವರಗಳ ಮಾಲೆಯನ್ನು ಪೋಣಿಸುತ್ತಿದ್ದವು. ಆಲಾಪ ಹಾಗೂ ತಾನಗಳು ಗಾಯಕಿ ಹಾಗೂ ವಾದಕಿಯ ಸಮ್ಮಿಲನದಿಂದ ಮಧ್ಯಮ ಮಾರ್ಗವನ್ನು ನಿರ್ಮಿಸಿದಂತಿತ್ತು. ಪಕ್ಕವಾದ್ಯದಲ್ಲಿ ಪಂ.ಶುಭಂಕರ್ ಬ್ಯಾನರ್ಜಿ ಅವರ ತಬಲಾ ಘಾತಗಳು ವಾದನವನ್ನು ಧೃತದ ಅಂತ್ಯಕ್ಕೆ ಸಾಗರದ ಭೋರ್ಗರೆತದಂತೆ ರೂಪಿಸಿದವು.

ಪಂ.ಕೈವಲ್ಯ ಕುಮಾರ್ ಗುರವ್ ಅವರ ಗಾಯನ ರಾಗ್ ಗೋರಕ್ ಕಲ್ಯಾಣ್‌ನಿಂದ ಆರಂಭಗೊಂಡಿತು. ಅಪೂರ್ವವಾದ ಚೀಸುಗಳು ಗುರವ್ ಅವರ ಸಂಗೀತ ಸಾಮರ್ಥ್ಯವನ್ನು ನಿರೂಪಿಸಿದವು. ಸಭಾಗೃಹ ಹಾಗೂ ಮನೋಗೃಹಗಳು ಅವರ ಗಾಯನದಲ್ಲಿ ಅದ್ದಿ ಎದ್ದವು. ಗಾಯಕಿಯ ಸೂಕ್ಷ್ಮಗಳನ್ನು ಅಲೆ ಅಲೆಯಾಗಿ ಹೊಮ್ಮಿಸಿದ ಗುರವ್ ಗಾಯನದುದ್ದಕ್ಕೂ ಕೇಳುಗರ ಕರತಾಡನವೇ ಹೆಚ್ಚಾಗಿತ್ತು. ಅದೇ ಕಛೇರಿಯಲ್ಲಿಯೇ ಪಂ.ಜಯತೀರ್ಥ ಮೇವುಂಡಿ ಅವರೂ ಜೊತೆಗೂಡಿ ರಚಿಸಿದ ಜುಗಲ್‌ಬಂದಿಯ ಸ್ವರಗಳ ವರ್ಣ ಚಿತ್ರವು ಕೇಳುಗ ರಸಿಕರ ಮನಸ್ಸಿನಲ್ಲಿ ಅಚ್ಚೊತ್ತಿತು. ಪಂ.ವಿಶ್ವನಾಥ ನಾಕೋಡ್ ಅವರು ತಬಲಾ ಹಾಗೂ ಪಂ.ರವೀಂದ್ರ ಕಾಟೋಟಿ ಅವರು ಹಾರ್ಮೋನಿಯಂನಲ್ಲಿ ಸಹಕರಿಸಿದರು.

ವಿದ್ವಾನ್ ಮೈಸೂರು ಎಂ. ಮಂಜುನಾಥ್ ಅವರ ವಯೊಲಿನ್ ಹಾಗೂ ಕೋಲ್ಕತ್ತದ ಪಂ.ತರುಣ್ ಭಟ್ಟಾಚಾರ್ಯ ಅವರ ಸಂತೂರ್ ವಾದನದ ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತದ ಜುಗಲ್‌ಬಂದಿ ಬೆಳಗಿನ ಜಾವದ ಮೂರು ಗಂಟೆಯಲ್ಲಿಯೂ ಸಂಗೀತ ರಸಿಕರು ನಿದ್ರೆಗೆ ಜಾರದಂತೆ ಹಿಡಿದಿಟ್ಟಿತು. ಇಬ್ಬರೂ ವಾದಕರು ತನಿಯ ಮೂಲಕ ವೇದಿಕೆಯನ್ನು ಮೈದಾನವಾಗಿಸಿಕೊಂಡು ಆಟವಾಡಿದ ಅನುಭವವಾಯಿತು. ಈ ಆಟದಲ್ಲಿ ಇಬ್ಬರೂ ಗೆದ್ದಿದ್ದು ವಿಶೇಷವಾಗಿತ್ತು. ಸಂತೂರ್‌ನ ತರಂಗಗಳು ಹಾಗೂ ವಯೊಲಿನ್‌ನ ಮಾಧುರ್ಯ ಕೇಳುಗರನ್ನು ನಾದಗಡಲಲ್ಲಿ ವಿಹರಿಸಿದವು. ಪಂ.ಶುಭಂಕರ್ ಬ್ಯಾನರ್ಜಿ ತಬಲಾದಲ್ಲಿ ಹಾಗೂ ವಿದ್ವಾನ್ ಅರ್ಜುನ್ ಕುಮಾರ್ ಮೃದಂಗದಲ್ಲಿ ಉತ್ತಮ ಸಾಥ್ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಪಂ.ಜಯತೀರ್ಥ ಮೇವುಂಡಿ ಅವರ ಗಾಯನ ಕಛೇರಿ ನಟ ಭೈರವ್ ನಲ್ಲಿ ಅಪೂರ್ವವಾಗಿ ಮೂಡಿಬಂದಿತು. ಬೆಳಗಿನ ಸುಮಾರು ಐದು ಗಂಟೆಗೆ ಆರಂಭವಾದ ಕಛೇರಿಯ ಗಾಯನ ಬೆಳಿಗ್ಗೆ ಸುಮಾರು ಆರರ ವರೆಗೆ ಅಹರ್ನಿಶಿ ಹರಿಯಿತು. ಪಂ.ವ್ಯಾಸಮೂತಿ ಕಟ್ಟಿ ಹಾರ್ಮೋನಿಯಂನಲ್ಲಿ ಹಾಗೂ ರಾಜೇಂದ್ರ ನಾಕೋಡ್ ತಬಲಾದಲ್ಲಿ ಅವರ ಗಾನಗಂಗೆಗೆ ಉಪ ನದಿಗಳಾಗಿ ಸೇರಿದರು.

ಅಹೋರಾತ್ರಿಯ ಸಂಗೀತ ಸಭೆಯಲ್ಲಿ ಒಂದಕ್ಕಿಂತ ಒಂದು ಕಛೇರಿಗಳು ಭಿನ್ನವಾಗಿ ಹಾಗೂ ಅಪೂರ್ವವಾಗಿ ಮೂಡಿಬಂದವು. ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ಪ್ರಕಾರಗಳ ಅಂತರವನ್ನು ನೀಗುವ ಪ್ರಯತ್ನ ಪ್ರತಿ ಬಾರಿಯ ಜುಗಲ್‌ಬಂದಿ ಕಛೇರಿಗಳ ಮೂಲಕ ಆಗುತ್ತಿದೆ. ಸರ್ಕಾರದಿಂದ ಸರಿಯಾದ ಸಹಕಾರ ಸಿಕ್ಕರೆ ರಾಷ್ಟ್ರಮಟ್ಟದ ಸಂಗೀತ ಸಮಾವೇಶ ಹಮ್ಮಿಕೊಳ್ಳುವ ಇಚ್ಛೆ ರೇಣುಕಾ ಸಂಗೀತ ಸಭಾದ ಅಧ್ಯಕ್ಷ ಪಂ.ವಿಶ್ವನಾಥ ನಾಕೋಡ್ ಅವರದ್ದು. ಅವರ ಇಚ್ಛೆ ಪೂರ್ಣವಾಗಲಿ ಎಂಬುದು ಎಲ್ಲ ಸಂಗೀತ ರಸಿಕರ ಆಶಯವೂ ಹೌದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry