ಅ. 2ರಂದು ರಸ್ತೆ ತಡೆ: ಶಾಸಕ ರಾಜೀವ್‌

7
ಕಬ್ಬು ದರ ಹೆಚ್ಚಳಕ್ಕೆ ಒತ್ತಾಯ

ಅ. 2ರಂದು ರಸ್ತೆ ತಡೆ: ಶಾಸಕ ರಾಜೀವ್‌

Published:
Updated:

ಬೆಳಗಾವಿ:  ‘ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್‌ ಕಬ್ಬಿಗೆ ರೂ. 3500  ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಭಾರತೀಯ ಕೃಷಿಕ ಸಮಾಜದ ನೇತೃತ್ವದಲ್ಲಿ ಅ. 2 ರಂದು ಬೆಳಿಗ್ಗೆ 11 ಕ್ಕೆ ತಾಲ್ಲೂಕಿನ ಹಿರೇಬಾಗೇವಾಡಿಯ ಟೋಲನಾಕಾ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುವುದು’ ಎಂದು ಶಾಸಕ ಪಿ.ರಾಜೀವ್‌ ಹೇಳಿದರು.ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತವಿರೋಧಿ ನೀತಿ ಅನುಸರಿಸುತ್ತಿದ್ದು, ಸಕ್ಕರೆ ಕಾರ್ಖಾನೆಗಳ ಮಾಲೀಕರ ಲಾಬಿಗೆ ಮಣಿದಿದೆ. ಗುಜರಾತ್‌ನಲ್ಲಿ ಪ್ರತಿ ಟನ್‌ ಕಬ್ಬಿಗೆ ರೂ. 3800, ಪಂಜಾಬ್‌ನಲ್ಲಿ ರೂ. 2850, ಹರಿಯಾಣದಲ್ಲಿ ರೂ. 3000 ಹಾಗೂ ಉತ್ತರಾಂಚಲದಲ್ಲಿ ರೂ. 2800 ನೀಡಲಾಗುತ್ತಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಪ್ರತಿ ಟನ್‌ ಕಬ್ಬಿಗೆ ರೂ. 2000 ರಿಂದ 2200ನೀಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದ ರೈತರಿಗೆ 14 ದಿನಗಳ ಒಳಗಾಗಿ ಮೊದಲನೇ ಕಂತು ಪಾವತಿಸಬೇಕೆಂಬ ಕಾನೂನು ಇದೆ. ಆದರೆ, ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಕಾನೂನನ್ನು ಎತ್ತಿ ಹಿಡಿಯಬೇಕಾದ ಸರ್ಕಾರ ನಿದ್ರಾವಸ್ಥೆಯಲ್ಲಿದೆಯೇ? ಅಥವಾ ಸಕ್ಕರೆ ಕಾರ್ಖಾನೆಗಳ ಮಾಲೀಕರ ಪರವಾಗಿ ವರ್ತಿಸುತ್ತಿದೆಯೇ? ಎಂಬುದು ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.ನ. 11 ರಿಂದ ನಗರದ ಸುವರ್ಣ ವಿಧಾನಸೌಧಲ್ಲಿ ನಡೆಯಲಿರುವ ಅಧಿವೇಶನದ ಒಳಗಾಗಿ ರಾಜ್ಯ ಸರ್ಕಾರ ರೈತಪರವಾದ ನಿರ್ಣಯ ಕೈಗೊಳ್ಳದಿದ್ದರೆ ರೈತರ ಕೆಂಗಣ್ಣಿಗೆ ಗುರಿಯಾಗಲಿದ್ದು, ರೈತವಿರೋಧಿ ಸರ್ಕಾರ ಎಂಬ ಹಣೆಪಟ್ಟಿಯೊಂದಿಗೆ ಬೆಳಗಾವಿಯನ್ನು ಪ್ರವೇಶಿಸಬೇಕಾಗುತ್ತದೆ. ಅದೇ ರೀತಿಯಾಗಿ ನ. 11 ರಂದು ಸಾವಿರಾರು ರೈತರ ನೇತೃತ್ವದಲ್ಲಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಬೃಹತ್‌ ಪ್ರತಿಭಟನೆ ಮಾಡಲಾಗುವುದು. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಕಬ್ಬು ಪೂರೈಕೆ ಮಾಡಿದ ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.ನೆರೆ ರಾಜ್ಯಗಳ ಕಾರ್ಖಾನೆಗಳು ಪ್ರತಿ ಟನ್‌ ಕಬ್ಬಿಗೆ ರೂ. 3000ಕ್ಕೂ ಹೆಚ್ಚು ಬೆಲೆ ನೀಡುತ್ತಿರುವ ಇಂದಿನ ದಿನಗಳಲ್ಲಿ ರಾಜ್ಯದ ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿಯವರು ಯಾವ ಮಾನದಂಡ­ವಿಟ್ಟುಕೊಂಡು ಪ್ರತಿ ಟನ್‌ ಕಬ್ಬಿಗೆ ರೂ. 2400  ನೀಡಿ ಎಂದು ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಿ­ದ್ದಾರೆ ಎಂಬ ಸಂಶಯ ಕಾಡುತ್ತಿದೆ. ಈ ಕುರಿತು ಸಚಿವರು ಸ್ಪಷ್ಟೀಕರಣ ನೀಡಬೇಕು. ಕಬ್ಬು ಸರಬರಾಜು ಮತ್ತು ನಿಯಂತ್ರಣ ಮಂಡಳಿ­ಯಲ್ಲಿರುವ ರೈತ ವಿರೋಧಿ ದಲ್ಲಾಳಿಗಳನ್ನು ಹೊರಹಾಕಬೇಕು ಎಂದು ಆಗ್ರಹಿಸಿದರು.ಕಬ್ಬಿನ ದರ ನಿಗದಿಯಲ್ಲಿ ನಡೆಯುತ್ತಿರುವ ಹುನ್ನಾರದಿಂದ ಪ್ರತಿ ವರ್ಷ ರೈತರಿಗೆ ಲಭಿಸಬೇಕಾದ ರೂ. 1260 ಕೋಟಿ  ಪ್ರಭಾವಿ ವ್ಯಕ್ತಿಗಳ ಜೇಬು ಸೇರುತ್ತಿದೆ. ಈ ಕುರಿತು ಸದನದಲ್ಲಿ ಧ್ವನಿ ಎತ್ತುವ ಶಾಸಕರ ಅವಕಾಶ ತಪ್ಪಿಸಲು ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.ಸಕ್ಕರೆ ಕಾರ್ಖಾನೆಗಳು ತ್ಯಾಜ್ಯ ವಸ್ತುಗಳನ್ನು ನದಿಗೆ ಹರಿಬಿಡುತ್ತಿರುವದರಿಂದ ಸಾವಿರಾರು ಮೀನುಗಳು ಸಾಯುತ್ತಿದ್ದು, ಪರಿಸರ ಮಾಲಿನ್ಯವಾಗಿ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್‌ ಕಬ್ಬಿಗೆ ರೂ. 3500 ದರ ನಿಗದಿ ಮಾಡಬೇಕು. 2011–12 ನೇ ಸಾಲಿನ ಕೊನೆಯ ಕಂತು ಹಾಗೂ 2012–13 ನೇ ಸಾಲಿನ ಎರಡನೇ ಕಂತಾಗಿ ರೂ. 500  ಬಿಡುಗಡೆ ಮಾಡಬೇಕು. ಕಬ್ಬಿನ ತೂಕದಲ್ಲಿ ರೈತರಿಗೆ ಆಗುತ್ತಿರುವ ಮೋಸ ತಪ್ಪಿಸಲು ಪ್ರತಿ ಸಕ್ಕರೆ ಕಾರ್ಖಾನೆಯ ಮುಂದೆ ಎಪಿಎಂಸಿ ನೇತೃತ್ವದಲ್ಲಿ ವಿದ್ಯುನ್ಮಾನ ತೂಕದ ಯಂತ್ರವನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.ಭಾರತೀಯ ಕೃಷಿಕ ಸಮಾಜದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿದಗೌಡ ಮದಗಿ, ಲಿಂಗರಾಜ ಪಾಟೀಲ, ವೈ.ಎಚ್‌. ಪಾಟೀಲ, ಶಿವಶಂಕರ ಢಂಗ, ದುಂಡಯ್ಯಾ ಪೂಜಾರ, ಸಂಜು ಇನಾಮದಾರ, ಮಹಾಂತೇಶ ಚಿಕ್ಕಮಠ, ಬಸನಗೌಡ ಪಾಟೀಲ, ಟಿ.ಟಿ.ಮುರಕಟ್ನಾಳ, ರವಿ ಸಿದ್ದಮ್ಮನವರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry