ಭಾನುವಾರ, ಆಗಸ್ಟ್ 25, 2019
23 °C

ಅ. 8ರಿಂದ `ಶರಣ ಸಂಸ್ಕೃತಿ ಉತ್ಸವ'

Published:
Updated:

ಚಿತ್ರದುರ್ಗ: ಮುರುಘಾ ಮಠದ ಸಾಂಪ್ರದಾಯಿಕ ಕಾರ್ಯಕ್ರಮ ಶರಣ ಸಂಸ್ಕೃತಿ ಉತ್ಸವನ್ನು ಅ. 8ರಿಂದ 16ರವರೆಗೆ ಆಚರಿಸಲು ಶನಿವಾರ ಸಂಜೆ ನಡೆದ ಉತ್ಸವದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.ನಗರದ ಮುರುಘಾ ಮಠದ ಬಸವೇಶ್ವರ ಸಭಾಂಗಣದಲ್ಲಿ ನಡೆದ 2013ರ ಶರಣ ಸಂಸ್ಕೃತಿ ಉತ್ಸವ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ  ಶಿವಮೂರ್ತಿ ಮುರುಘಾ ಶರಣರು, ಉತ್ಸವದ ಅಂಗವಾಗಿ ಅ. 8ರಿಂದ 10ರವರೆಗೆ `ಜಮುರಾ ಕಪ್' ಕ್ರಿಕೆಟ್ ಟೂರ್ನಿ, ಬೈಸಿಕಲ್ ಜಾಥಾ, ಸಾಮರಸ್ಯದ ನಡಿಗೆ, ಪರಿಸರ ಜಾಗೃತಿ, ಅಂಧರ ಕ್ರಿಕೆಟ್ ಪಂದ್ಯಾವಳಿ, ಮಹಿಳಾ ಕ್ರೀಡಾಕೂಟ  ಆಯೋಜಿಸಲಾಗಿದೆ ಎಂದು ತಿಳಿಸಿದರು.ಈ ವರ್ಷದ ವಿಶೇಷ ಆಕರ್ಷಣೆ ಸಾಕುಪ್ರಾಣಿಗಳ ಪ್ರದರ್ಶನ, ಶ್ವಾನ ಪ್ರದರ್ಶನ ಹಾಗೂ ಬಸವ ಜಯಂತಿ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಬಸವೇಶ್ವರರ ವೇಷಭೂಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ವಿವರಿಸಿದರು.ಅ. 11ರಿಂದ 16ರವರೆಗೆ ಕೃಷಿ, ಕೈಗಾರಿಕಾ ಮೇಳ, ಬಸವತತ್ವ ಸಮಾವೇಶ, ಮಹಿಳಾಗೋಷ್ಠಿ, ಕವಿಗೋಷ್ಠಿ, ನಗೆಹಬ್ಬ, ಜಾನಪದ ಮೇಳ, ಶರಣದಂಪತಿಗೆ ಗೌರವ ಸಮರ್ಪಣೆ, ವಚನ ಕಮ್ಮಟದ ರ‌್ಯಾಂಕ್ ವಿಜೇತರಿಗೆ ಕಾರ್ಯಕ್ರಮ, ಆರೋಗ್ಯವಂತ ಮಕ್ಕಳ ಸ್ಪರ್ಧೆ, ಜಾನಪದ ಮೇಳ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದರು.ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ದಸರೆ ಮಾದರಿಯಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವ ವಿಜೃಂಭಣೆಯಿಂದ ನಡೆಯಬೇಕು. ರಾಜ್ಯದ ನಾನಾ ಭಾಗಗಳಿಂದ ಕ್ರೀಡಾಪಟುಗಳು, ಕಲಾವಿದರು, ಸಾಹಿತಿಗಳು, ರಾಜಕಾರಣಿಗಳು, ಚಿಂತಕರು ಪಾಲ್ಗೊಳ್ಳುವುದರಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಂತೆ ನಾವುಗಳು ನೋಡಿಕೊಳ್ಳಬೇಕು. ಈ ಬಾರಿ ಉತ್ತಮ ಮಳೆಯಾಗಿದ್ದು, ಸಂತಸದಿಂದ ಜನರು ಪಾಲ್ಗೊಳ್ಳುತ್ತಾರೆ. ಇದಕ್ಕಾಗಿ ಎಲ್ಲ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ವಿವಿಧ ಮಠಾಧೀಶರು, ಭಕ್ತರು ಭಾಗವಹಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮುರುಘಾ ಶರಣರು ನಮಗೆ  ವಹಿಸಿದ ಎಲ್ಲಾ ಜವಾಬ್ದಾರಿ ನಿರ್ವಹಿಸಲು ನಾವು  ತಯಾರಿದ್ದೇವೆ ಎಂದು ಹೇಳಿದರು. ವಿವಿಧ ಬಸವ ಕೇಂದ್ರಗಳಿಂದ ಬಂದಿದ್ದ ಭಕ್ತರು ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಪ್ರತಿಯೊಬ್ಬರಿಗೂ ತಮ್ಮದೇ ಸಲಹೆ ಸೂಚನೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿತ್ತು.ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ, ಅಥಣಿಯ ಶಿವಬಸವ ಸ್ವಾಮೀಜಿ, ಕೇತೇಶ್ವರಮಠದ ಸ್ವಾಮೀಜಿ, ಹಾವೇರಿಯ ಶಾಂತಲಿಂಗ ಸ್ವಾಮೀಜಿ, ಕುಂಬಾರಗುಂಡಯ್ಯ ಸ್ವಾಮೀಜಿ, ವನಕಲ್ಲಿನ ಬಸವರಾಮಾನಂದ ಸ್ವಾಮೀಜಿ, ಶಿವಮೊಗ್ಗದ ಮರುಳಸಿದ್ದ ಸ್ವಾಮೀಜಿ, ದಾವಣಗೆರೆಯ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ, ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ ಸಭೆಯಲ್ಲಿ ಹಾಜರಿದ್ದರು.ಮಠದ ಕಾರ್ಯಾಧ್ಯಕ್ಷ ಜೆ.ಎಂ.ಜಯಕುಮಾರ್, ಉದ್ಯಮಿ ತಾಜ್‌ಪೀರ್, ನಿಶಾನಿ ಜಯಣ್ಣ, ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ, ರೈತ ನಾಯಕ ಟಿ.ನುಲೇನೂರು ಶಂಕ್ರಪ್ಪ ಸೇರಿದಂತೆ ಎಸ್.ಜೆ.ಎಂ ಸಮೂಹ ಸಂಸ್ಥೆಗಳ ಮುಖ್ಯಸ್ಥರು ಹಾಗೂ ನೌಕರ ವರ್ಗ  ಉಪಸ್ಥಿತರಿದ್ದರು.2013-14ನೇ ಸಾಲಿನ ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷರನ್ನಾಗಿ ಕೆ.ಇ.ಬಿ.ಷಣ್ಮುಖಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Post Comments (+)