ಭಾನುವಾರ, ಮೇ 16, 2021
22 °C

ಅ.2ರಂದು ಶಂಕುಸ್ಥಾಪನೆ: ಮುನಿಯಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕೈಗೊಳ್ಳಲಿರುವ ತುಮಕೂರು ಮತ್ತು ರಾಯದುರ್ಗ (ಆಂಧ್ರ) ನಡುವಿನ ರೈಲ್ವೆ ಮಾರ್ಗ ಯೋಜನೆ ಶಂಕುಸ್ಥಾಪನೆ ಅಕ್ಟೋಬರ್ 2ರ ಗಾಂಧಿ ಜಯಂತಿ ದಿನದಂದು ನಡೆಯಲಿದೆ.   ಮಧುಗಿರಿ, ಕೊರಟಗೆರೆ, ಪಾವಗಡದ ಮೂಲಕ ಹಾದು ಹೋಗುವ 200 ಕಿ.ಮೀ. ಉದ್ದದ ಈ ಮಾರ್ಗದ ಒಟ್ಟಾರೆ ವೆಚ್ಚದಲ್ಲಿ ಶೇ 50ರಷ್ಟನ್ನು ಕೇಂದ್ರ ಭರಿಸಲಿದೆ.ಕರ್ನಾಟಕ ಮತ್ತು ಆಂಧ್ರ ಸರ್ಕಾರ ತಮ್ಮ ಪಾಲಿನ ಉಳಿದ 50ರಷ್ಟನ್ನು ಕೊಡಲಿವೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದರು.ರಾಜ್ಯದಲ್ಲಿ 100 ಕಿ.ಮೀ ಹಾಗೂ ಆಂಧ್ರದಲ್ಲಿ 100 ಕಿ.ಮೀ ಹಾದು ಹೋಗಲಿರುವ ಈ ಯೋಜನೆಗೆ ಒಂದು ಸಾವಿರ ಕೋಟಿ ವೆಚ್ಚವಾಗಲಿದೆ. ಶಂಕುಸ್ಥಾಪನೆ ಸಮಾರಂಭ ರಾಯದುರ್ಗದಲ್ಲಿ ನಡೆಯಲಿದೆ. ರಾಜ್ಯ ಸರ್ಕಾರ ಯೋಜನೆಗೆ ಭೂಮಿ ನೀಡಿದ ಬಳಿಕ ತುಮಕೂರಿನಲ್ಲೂ ಶಂಕು ಸ್ಥಾಪನೆ ನಡೆಸಲಾಗು  ವುದು ಎಂದರು.ಬಹುನಿರೀಕ್ಷಿತ ಕುಡುಚಿ ಬಾಗಲಕೋಟೆ, ಶಿವಮೊಗ್ಗ ಹರಿಹರ, ಕೋಲಾರ ವೈಟ್‌ಫೀಲ್ಡ್ ಹಾಗೂ ತುಮಕೂರು ದಾವಣಗೆರೆ ಮಾರ್ಗಗಳ ಸಮೀಕ್ಷೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಖಾಸಗಿ ಸಂಸ್ಥೆಯೊಂದು ಮಾರ್ಗ ಸಮೀಕ್ಷೆ ಕಾರ್ಯ ನಡೆಸಲಿದೆ ಎಂದು ಹೇಳಿದರು.ಮೈಸೂರು- ಬೆಂಗಳೂರು ಜೋಡಿ ಮಾರ್ಗಕ್ಕೆ ರಾಜ್ಯ ಸರ್ಕಾರ ಇನ್ನೂ 49 ಹೆಕ್ಟೇರ್ ಭೂಮಿ ನೀಡಬೇಕಿದೆ. ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತಿದ್ದ ಸಮಸ್ಯೆ ನಿವಾರಣೆ ಆಗಿದೆ. ಅಲ್ಲದೆ, ಮಾರ್ಗಕ್ಕೆ ಅಡ್ಡಿಯಾಗಿರುವ ಶ್ರೀರಂಗ ಪಟ್ಟಣದ ಟಿಪ್ಪು ~ಶಸ್ತ್ರಾಗಾರ~ವನ್ನು ಸ್ಥಳಾಂತರಿಸಲಾಗುತ್ತಿದೆ. ಈ ಜೋಡಿ ಮಾರ್ಗ ಯೋಜನೆ 2013 ಡಿಸೆಂಬ ರ್‌ಗೆ ಮುಗಿಯಬೇಕಿದೆ ಎಂದು ತಿಳಿಸಿದರು.ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿಗೆ ಕಾದಿರುವ ಹುಬ್ಬಳ್ಳಿ-ಅಂಕೋಲಾ, ತಾಳಗುಪ್ಪ, ಹೊನ್ನಾವರ, ಚಾಮರಾಜನಗರ-ಸತ್ಯಮಂಗಲ  ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ಜಯಂತಿ ನಟರಾಜನ್ ಅವರ ಜತೆ ಸಮಾಲೋಚನೆ ನಡೆಸಲಾಗಿದೆ. ಪಶ್ಚಿಮ ಘಟ್ಟದ ಸೂಕ್ಷ್ಮತೆ ಕುರಿತು ಅಧ್ಯಯನ ನಡೆಸುತ್ತಿರುವ ಗಾಡ್ಗೀಳ್ ಸಮಿತಿ ವರದಿ ಬಂದ ಬಳಿಕ ಹುಬ್ಬಳ್ಳಿ- ಅಂಕೋಲಾ ಮಾರ್ಗ ಕುರಿತು ತೀರ್ಮಾನವಾಗುವ ಸಾಧ್ಯತೆಯಿದೆ ಎಂದು ಮುನಿಯಪ್ಪ ವಿವರಿಸಿದರು. ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ವಿಶ್ವದರ್ಜೆನಿಲ್ದಾಣ ಬಗ್ಗೆ ಮಂಗಳವಾರ ಪಿಟ್ರೋಡ, ಮಾಂಟೆಕ್‌ಸಿಂಗ್ ಅಹ್ಲುವಾಲಿಯಾ, ಎಲ್ ಅಂಡ್ ಟಿ~ ಸಿಎಂಡಿ ಜತೆ ಚರ್ಚಿಸಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ದೇಶದ 50 ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ರಾಜ್ಯದ ಬೆಂಗಳೂರು, ಬಯ್ಯಪ್ಪನಹಳ್ಳಿ ಮತ್ತು ಮಂಗಳೂರು ನಿಲ್ದಾಣಗಳು ಇದರಲ್ಲಿ ಸೇರಿವೆ.  ರೈಲ್ವೆ ಸಚಿವ ದಿನೇಶ್ ತ್ರಿವೇದಿ ಮತ್ತು ತಾವು ರಾಜ್ಯದ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲಿಸಲು ಈ ತಿಂಗಳ ಕೊನೆಯ ವಾರ ಬೆಂಗಳೂರಿಗೆ ತೆರಳಲಿದ್ದೇವೆ. ರಾಜ್ಯ ಸರ್ಕಾರ ದಿನಾಂಕ ನಿಗದಿ ಮಾಡಲಿದೆ. ಮುಖ್ಯಮಂತ್ರಿ ಸದಾನಂದಗೌಡರು ಈಚೆಗೆ ದೆಹಲಿಗೆ ಬಂದಿದ್ದಾಗ ರಾಜ್ಯದ ಯೋಜನೆಗಳನ್ನು ಕುರಿತು ಚರ್ಚಿಸಿದರು ಎಂದು ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.