ಆಂಗ್ಲೋ ಇಂಡಿಯನ್‌ ಕನ್ನಡತಿ

7

ಆಂಗ್ಲೋ ಇಂಡಿಯನ್‌ ಕನ್ನಡತಿ

Published:
Updated:
ಆಂಗ್ಲೋ ಇಂಡಿಯನ್‌ ಕನ್ನಡತಿ

ಆಂಗ್ಲೋ ಇಂಡಿಯನ್‌ ಎಂದೊಡನೆ ನೆನಪಾಗುವುದು ಹಳೆಯ ಜ್ಯೂಲಿ ಚಿತ್ರ. ಸಣ್ಣ ಅಂಗಿ, ಅವರ ಇಂಗ್ಲಿಷ್‌ ಸಂಸ್ಕೃತಿ. ಆದರೆ ಇಲ್ಲೊಬ್ಬರಿದ್ದಾರೆ. ಅಪ್ಪಟ ಕನ್ನಡತಿಯಂತೆ ಮಾತನಾಡುವ, ಕಾಣುವ, ಉಡುಗೆ, ತೊಡುಗೆ, ಅಡುಗೆ ಎಲ್ಲದರಲ್ಲಿಯೂ ಕನ್ನಡದ ಸೊಗಡನ್ನು ಅಳವಡಿಸಿಕೊಂಡಿರುವ ಆಂಗ್ಲೋ ಇಂಡಿಯನ್‌ ವಿನಿಷಾ ನೀರೊ.ಸದ್ಯಕ್ಕೆ ನಾಮಾಂಕಿತ ಶಾಸಕಿ. ತಾತ ಲಂಡನ್‌ ಮೂಲದವರು. 1915ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದರು. ಅವರ ಪುತ್ರ  ‘ಎರಿಕ್‌ ಬೈಫರ್ಡ್‌’ ಬೆಂಗಳೂರಿನ ಟೂಲ್‌ ಅಂಡ್‌ ಡೈ ಮೇಕಿಂಗ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರೂ ಬೆಂಗಳೂರಿನಲ್ಲೇ ನೆಲೆಸಿದ್ದ ಶಾಲಾ ಶಿಕ್ಷಕಿ ‘ಇವಾನ್‌’ ಎಂಬ ಆಂಗ್ಲೋ ಇಂಡಿಯನ್‌ ಮಹಿಳೆಯನ್ನು ವಿವಾಹವಾದರು. ಈ  ದಂಪತಿಗೆ 1966ರಲ್ಲಿ ಜನಿಸಿದ ಮೊದಲ ಮಗುವೇ ‘ವಿನಿಷಾ’.ಮಧ್ಯಮವರ್ಗ ಕುಟುಂಬದ ಮೊದಲ ಮಗುವಾಗಿ ಬೆಳೆದ ವಿನಿಷಾ 16ರ ಹರೆಯದಲ್ಲಿಯೇ ಕೆಲಸಕ್ಕೆ ಸೇರಬೇಕಾಯಿತು. ನಾಲ್ವರು ಸಹೋದರರ ಜವಾಬ್ದಾರಿಯನ್ನು ಹೆತ್ತವರೊಂದಿಗೆ ನಿರ್ವಹಿಸಲು, ಪಿಯುಸಿಯ ನಂತರ ಕೆಲಸಕ್ಕೆ ಸೇರಿದರು.  ಆಪ್ತ ಕಾರ್ಯದರ್ಶಿಯಾಗಿ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದ ವಿನಿಷಾ, ಸಿಗುವ ಕೇವಲ 400 ರೂಪಾಯಿ ಸಂಬಳದಲ್ಲಿ ಮನೆ ಖರ್ಚನ್ನೂ ನಿರ್ವಹಿಸಿ ತಮ್ಮ ಕನಸಿನ ಉನ್ನತ ವ್ಯಾಸಂಗವನ್ನೂ ಮುಂದುವರಿಸಿದರು. ಪರಿಣಾಮ ಹಲವು ಕೋರ್ಸುಗಳ ಕಲಿಕೆ ವಿನಿಷಾಗೆ ಸಾಧ್ಯವಾಯಿತು. ‘ಶಾರ್ಟ್‌ ಹ್ಯಾಂಡ್‌, ಡಿಪ್ಲೋಮಾ ಇನ್‌ ಏರ್‌ ಟಿಕೆಟಿಂಗ್‌, ಡಿಪ್ಲೋಮಾ ಇನ್‌ ಸೆಕ್ರೆಟ್ರಿ ಕೋರ್ಸ್‌, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಕಲಾ ವಿಭಾಗದಲ್ಲಿ ಪದವಿ, ಸಾಮಾಜಶಾಸ್ತ್ರ ಹಾಗೂ ತತ್ವಶಾಸ್ತ್ರತದಲ್ಲಿ ಸ್ನಾತಕೋತ್ತರ ಹಾಗೂ ಸಮಾಜಶಾಸ್ತ್ರದಲ್ಲಿ ಆಂಗ್ಲೋ ಇಂಡಿಯನ್ನರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನ ಕುರಿತಂತೆ ಎಂಫಿಲ್‌. ಅವಕಾಶ ಸಿಕ್ಕರೆ ಇದೇ ವಿಷಯದ ಮೇಲೆ ಪಿಎಚ್‌ಡಿ ಮಾಡುವ ಆಸೆಯೂ ಅವರಿಗಿದೆ.ಆಪ್ತ ಕಾರ್ಯದರ್ಶಿಯಾಗಿ ಒಂದೇ ಸಂಸ್ಥೆಯಲ್ಲಿ 21 ವರ್ಷ ಸೇವೆ ಮಾಡಿರುವ ಅನುಭವ ಸಿರಿವಂತಿಕೆಯು ಮುಂದೆ ಉಪಯೋಗಕ್ಕೆ ಬಂದಿತು. ನಂತರ ಹಲವು ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರು. 1995ರಲ್ಲಿ  ಆಂಗ್ಲೋ ಇಂಡಿಯನ್‌ ಸಂಘದ ಬೆಂಗಳೂರು ಶಾಖೆಯ ಸದಸ್ಯೆಯಾಗಿ ಸೇರಿಕೊಂಡರು. ಅಲ್ಲಿಂದ ತನ್ನ ಸಮುದಾಯಕ್ಕೆ ಸೇವೆ ಸಲ್ಲಿಸಲಾರಂಭಿಸಿದರು. ನಂತರ  ಬೆಂಗಳೂರು ಶಾಖೆಯ ಗೌರವ ಕಾರ್ಯದರ್ಶಿಯಾದರು. ಆಂಗ್ಲೋ ಇಂಡಿಯನ್ಸ್‌ ಸಂಘದ ಮೂಲ ಸಂಸ್ಥೆಯಲ್ಲಿಯೂ  ಸಕ್ರಿಯ ಸದಸ್ಯರಾದರು. 1992ರಲ್ಲಿ ಭಾರತೀಯ ಕಾರ್ಯದರ್ಶಿ ಹಾಗೂ ಆಡಳಿತಾತ್ಮಕ ವೃತ್ತಿಪರರ ಸಂಘದ ಸದಸ್ಯೆಯಾದರು. ಸದ್ಯ ಈ ಸಂಘದ ಬೆಂಗಳೂರು ಶಾಖೆಯ ಅಧ್ಯಕ್ಷೆಯಾಗಿದ್ದಾರೆ. ‘ಕ್ಲಚ್‌ ಸಮೂಹ ಸಂಸ್ಥೆ’ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಆಪ್ತ ಸಹಾಯಕಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.ವಿನಿಷಾ ಮನೆಯಲ್ಲಿ ಕನ್ನಡಿಗರ ಮತ್ತು ಆಂಗ್ಲೋ ಇಂಡಿಯನ್‌ ಸಂಸ್ಕೃತಿಯ ಸಮ್ಮಿಲನವೇ ಇದೆ. ಕ್ರೈಸ್ತ ಹಬ್ಬಗಳೊಂದಿಗೆ ದೀಪಾವಳಿ, ಯುಗಾದಿಯನ್ನೂ ಸಹೋದರರೊಂದಿಗೆ ಆಚರಿಸುತ್ತಾರೆ. ಹೋಳಿಗೆ­ಯೂಟ ಸವಿಯುತ್ತಾರೆ. ಇದಕ್ಕೆ ಪಾಕ ಪ್ರವೀಣ ಪತಿ ಲಾರೆನ್ಸ್‌ ಸಹ ಕೈಜೋಡಿಸುತ್ತಾರೆ. ಇವರಿಗೆ ಸೀರೆ ಎಂದರೆ ಅಚ್ಚುಮೆಚ್ಚು. ಇವರ ಸೀರೆ ಸಂಗ್ರಹವೇ ಇದಕ್ಕೆ ಸಾಕ್ಷಿಯಾಗಿದೆ.ದಶಕದ ಹಿಂದೆ ಶಾಸಕಿ ಸ್ಥಾನ ನಿರಾಕರಣೆ

2000ರಲ್ಲಿ ಆಕಸ್ಮಿಕವಾಗಿ ಎಸ್‌.ಎಂ.ಕೃಷ್ಣ ಅವರನ್ನು ಭೇಟಿಯಾಗಿದ್ದರು. ಆಗಲೇ ರಾಜಕೀಯ  ಪ್ರವೇಶಿಸುವಂತೆ ಕೃಷ್ಣ ಆಹ್ವಾನಿಸಿದ್ದರು. ಆದರೆ ಆಗ ಶಾಸಕರ ವೇತನ ವಿನಿಷಾ ಅವರ ಸಂಬಳಕ್ಕಿಂತಲೂ ಕಡಿಮೆ ಇತ್ತು. ಜತೆಗೆ ಅಂಗವಿಕಲ ಮಗನಿಗೆ ತಾಯಿಯಾಗಿ ಹೆಚ್ಚಿನ ಸಮಯ ನೀಡಬೇಕಾದ ಅನಿವಾರ್ಯವೂ ಇತ್ತು. ಇವೆರಡೂ ಅವರ ನಿರಾಕರಣೆಗೆ ಕಾರಣವಾಯಿತು. ‘ಆದರೆ ಈ ಹದಿಮೂರು ವರ್ಷಗಳಲ್ಲಿ ಸಂದರ್ಭಗಳು ಹಾಗೂ ಆದ್ಯತೆಗಳು ಬದಲಾಗಿವೆ. ಮಗ ದೊಡ್ಡವನಾಗಿದ್ದಾನೆ. ತನ್ನನ್ನು ನಿಭಾಯಿಸಬಲ್ಲ’ ಎನ್ನುತ್ತಾರೆ ಅವರು.ಪಂಚ ಭಾಷಾ ಪ್ರವೀಣೆ........

‘ಆರು ಮತ್ತು ಏಳನೇ ತರಗತಿಯಲ್ಲಿ ಮೂರನೇ ಭಾಷೆಯಾಗಿ ಕನ್ನಡವನ್ನು ಓದಿದ್ದೆ.   ಓದು ಬರಹಕ್ಕೆ ಹೋಲಿಸಿದರೆ ಕನ್ನಡ ಮಾತನಾಡುವುದು ಸುಲಭ. ಆದರೆ ಓದಲು ಸ್ವಲ್ಪ ಕಷ್ಟವಾಗುತ್ತದೆ.  ಸುಲಲಿತವಾಗಿ ಓದಲು, ಬರೆಯಲು ಕನ್ನಡ ತರಗತಿಗಳಿಗೆ ಸೇರುತ್ತೇನೆ.  ಇಂಗ್ಲಿಷ್‌ ಮತ್ತು ಹಿಂದಿಯೊಂದಿಗೆ ತೆಲುಗು ಹಾಗೂ ತಮಿಳು ಭಾಷೆಯೂ ಗೊತ್ತು.’ಮಗನ ಬಗ್ಗೆ ಹೆಮ್ಮೆ ಇದೆ..

ತಾಯ್ತನ ಸಂತಸ ಮತ್ತು ದುಃಖ ಎರಡನ್ನೂ ಹೊತ್ತು ತಂದಿತ್ತು. ಮಗ ಹುಟ್ಟಿದ್ದು ಸಂತಸವಾದರೆ, ಶ್ರವಣ ದೋಷವಿರುವುದು ಆತಂಕ ತಂದಿತ್ತು. ಆದರೆ ಅದೇ ಕಾರಣದಿಂದಾಗಿ ನನ್ನ ಸಂಗಾತಿ ಮತ್ತು ನಾನು ಶ್ರವಣ ದೋಷವುಳ್ಳ ಮಕ್ಕಳು ಮತ್ತು ಪಾಲಕರಿಗೆ ಸೇವೆ ನೀಡುವ ಅವಕಾಶವೂ ದೊರೆಯುವಂತಾಯಿತು. ನನ್ನ ಪತಿ ಲಾರೆನ್ಸ್‌ ‘ಲಿಪ್‌ ರೀಡಿಂಗ್‌ ಹಾಗೂ ಸ್ಪೀಚ್‌ ಥೆರಪಿ’ಯನ್ನು ಅಮೆರಿಕದಿಂದ ಕಲಿತರು.ಮಗನ ಬೆಳವಣಿಗೆಯಲ್ಲಿ ಸಹಾಯವಾಗಿರುವುದು ಕಂಡು ಉಳಿದವರಿಗೂ ಅನುಭವ ಮತ್ತು ಜ್ಞಾನವನ್ನು ಹಂಚತೊಡಗಿದರು. ಮಗ ನಿಕೊಲಸ್‌ ಬೆಳೆಯುತ್ತಲೇ ನಾವೂ ಬೆಳೆದೆವು.  

ಈಗ ನಿಕೊಲಸ್‌ ಪ್ರದರ್ಶಕ ಕಲೆಯಲ್ಲಿ ಪದವಿ ಮಾಡುತ್ತಿದ್ದಾನೆ. ಭರತನಾಟ್ಯ ಸೇರಿದಂತೆ ಕೆಲವು ನೃತ್ಯ ಶೈಲಿಗಳನ್ನು ಅಭ್ಯಾಸ ಮಾಡುತ್ತಿದ್ದಾನೆ. ಎರಡು ಸಲ ರಾಷ್ಟ್ರ ಮಟ್ಟದಲ್ಲಿ ಉತ್ತಮ ನೃತ್ಯಪಟು ಪ್ರಶಸ್ತಿಯನ್ನೂ ಪಡೆದಿದ್ದಾನೆ. ಇಂತಹ ಮಗನಿಗೆ ತಾಯಿ ಆಗಿರುವುದಕ್ಕೆ ಹೆಮ್ಮೆ ಇದೆ.

ರಾಷ್ಟ್ರ ಮಟ್ಟದ ಉತ್ತಮ ನೃತ್ಯಪಟುವಾಗಿ ಬೆಳೆದ ನಿಕೊಲಸ್ಮರೆಯಲಾಗದ ಘಟನೆ...

ನಿಕೊಲಸ್‌ ಪಿಯುಸಿವರೆಗೆ ಸಾಮಾನ್ಯ ಮಕ್ಕಳೊಂದಿಗೆ ಓದಿದ. ದ್ವಿತೀಯ ಪಿಯುಸಿಯಲ್ಲಿ ಪರೀಕ್ಷೆ ಬರೆಯುವಾಗ ಮೌಲ್ಯಮಾಪಕ ಎರಡು ಬಾರಿ ಕರೆದರೂ ತಲೆ ಬಗ್ಗಿಸಿ ಪರೀಕ್ಷೆ ಬರೆಯುತ್ತಿದ್ದ ಅದು ಕೇಳಲಿಲ್ಲ. ಮೌಲ್ಯಮಾಪಕರು ನಿಕೊಲಸ್‌ ಅಕ್ರಮ ಎಸಗುತ್ತಿದ್ದಾನೆ ಎಂದು ತಪ್ಪಾಗಿ ಗ್ರಹಿಸಿ ಕಪಾಳಕ್ಕೆ ಹೊಡೆದಿದ್ದರು.ಕಿವಿಯಲ್ಲಿದ್ದ ಶ್ರವಣ ಸಾಧನವನ್ನು ‘ಮೊಬೈಲ್‌ನ ಬ್ಲೂಟೂತ್‌’ ಎಂದು ಭಾವಿಸಿ ಪರೀಕ್ಷೆ ಬರೆಯದಂತೆ ಕೊಠಡಿಯಿಂದ ಹೊರ ಹಾಕಿದರು. ನನ್ನ ಮಗನ ಒಂದು ವರ್ಷದ ಪರಿಶ್ರಮ ವ್ಯರ್ಥವಾಗಿತ್ತು. ಆ ಅನುಮಾನ ಮತ್ತು ಅಪಮಾನ, ನಿಕೋಲಸ್‌ನ ಆತ್ಮವಿಶ್ವಾಸವನ್ನೇ ನುಂಗಿ ಹಾಕಿತ್ತು. ಈ ಸವಾಲಿನ ಸಂದರ್ಭ ಎಂದೂ ಮರೆಯಲಾಗದು. ಮತ್ತೆ ಅವನಲ್ಲಿ ಆತ್ಮವಿಶ್ವಾಸ ತುಂಬಿದ್ದು ಅಕ್ಕರೆ ಮತ್ತು ಆರೈಕೆ. ಆದರೆ ಇದನ್ನು ನೆನೆದಾಗಲೆಲ್ಲ ಹೃದಯ ಹಿಂಡಿದಂತಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry