ಬುಧವಾರ, ಮೇ 25, 2022
23 °C

ಆಂಗ್ಲ ಮಾಧ್ಯಮಕ್ಕೆ ಅನುಮತಿ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಪ್ರಸಕ್ತ ವರ್ಷ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಮೂಲಕ ಕನ್ನಡ ಭಾಷೆ ಮೂಲೆಗುಂಪು ಮಾಡಲು ರಾಜ್ಯ ಸರ್ಕಾರ ಷಡ್ಯಂತ್ರ ಹೂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಪುಂಡಲೀಕ ಹಾಲಂಬಿ ಆಕ್ರೋಶ ವ್ಯಕ್ತಪಡಿಸಿದರು.  ನಗರದ ಹಳೇ ಮಾಧ್ಯಮಿಕ ಶಾಲೆಯ ಕಟ್ಟಡದಲ್ಲಿ ಜಿಲ್ಲಾ ಕಸಾಪ ಘಟಕದ ತಾತ್ಕಾಲಿಕ ಕಚೇರಿಯನ್ನು ಶನಿವಾರ  ಉದ್ಘಾಟಿಸಿ ಅವರು ಮಾತನಾಡಿದರು.ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಕನ್ನಡ ತನವನ್ನು ಸರ್ಕಾರ ಬಲಿಕೊಟ್ಟಿದೆ. ಗ್ರಾಮಾಂತರ ಪ್ರದೇಶಗಳ ಬಹುತೇಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭವಾಗಿದ್ದು, ಕನ್ನಡಕ್ಕೆ ಕುತ್ತು ಬಂದಿದೆ. ಇಂತಹ ಪರಿಸ್ಥಿತಿಯನ್ನು ನಿವಾರಿಸಲು ಕನ್ನಡ ಸಾಹಿತ್ಯ ಪರಿಷತ್ ಹೋರಾಟ ನಡೆಸಲಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಕನ್ನಡಿಗರು ಹೋರಾಟಕ್ಕೆ ಕೈಜೋಡಿಸಬೇಕು ಎಂದರು.ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆಗೆ ಕನ್ನಡಿಗರಿಂದಲೇ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಅನ್ಯ ಭಾಷಿಕರು ಒಂದು ರೀತಿಯ ತೊಂದರೆ ನೀಡಿದರೆ ಕನ್ನಡಿಗರೆ ಕನ್ನಡ ಭಾಷೆಯನ್ನು ವ್ಯವಸ್ಥಿತವಾಗಿ ತುಳಿಯುತ್ತಿದ್ದಾರೆ ಎಂದು ಆತಂಕ ವ್ಯಕ್ತ ಪಡಿಸಿದರು.ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷಿಸಲಾಗುತ್ತಿದೆ. ನಮ್ಮ ಭಾಷೆ, ಸಂಸ್ಕೃತಿ ಉಳಿಸಿಕೊಳ್ಳದಿದ್ದಲ್ಲಿ ಕನ್ನಡಿಗರಾದ ನಮಗೂ ಉಳಿಗಾಲ ಇರುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಘಟಕ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಪೂರಕವಾದ ಚಟುವಟಿಕೆಗಳನ್ನು ನಡೆಸಬೇಕು. ಇದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ರಾಜ್ಯ ಘಟಕ ನೀಡಲಿದೆ. ರಾಜ್ಯದ 341 ಕನ್ನಡ ಮಾಧ್ಯಮ ಶಾಲೆಗಳಲ್ಲಿ 6 ನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿಸಲು ಸರ್ಕಾರ ಮುಂದಾಗಿದ್ದು, ಇದರ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ ಹೋರಾಟ ನಡೆಸಲಿದೆ ಎಂದರು.

 ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರುವುದು ಸರಿಯಲ್ಲ. ಬದಲಾಗಿ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲಿ. ಖಾಸಗಿ ಶಾಲೆಗಳಲ್ಲಿರುವಂತೆ ಸರ್ಕಾರಿ ಶಾಲೆಗಳಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಸರ್ಕಾರ ಕಲ್ಪಿಸಲಿ ಎಂದು ಆಗ್ರಹಿಸಿದರು.ಇಲ್ಲಿನ ಜಿಲ್ಲಾ ಘಟಕದಲ್ಲಿ ಆರಂಭವಾಗಿರುವ ಕಚೇರಿ ತಾತ್ಕಾಲಿಕವಾಗಿದ್ದು, ರಾಜ್ಯದ ಎಲ್ಲ ಜಿಲ್ಲಾ ಘಟಕಗಳು ಸ್ವಂತ ಕಟ್ಟಡ ಹೊಂದಬೇಕೆಂಬುದು ತಮ್ಮ ಆಸೆಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಘಟಕ ಮುಂದಾಗಬೇಕು. ಜಿಲ್ಲೆಯಲ್ಲಿ ಸಾಕಷ್ಟು ದಾನಿಗಳು ದತ್ತಿನಿಧಿ ನೀಡಿದ್ದು, ಅದನ್ನು ಬಳಸಿಕೊಂಡು ನಿಯಮಾನುಸಾರ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಸೂಚಿಸಿದರು.ಜಿಲ್ಲಾ ಕಸಾಪ ಅಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ರಾಘವೇಂದ್ರ ಪಾಟೀಲ, ಯಳನಾಡು ಆಂಜಿನಪ್ಪ, ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ವೀರೇಶ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.