ಆಂಗ್ಲ ಮಾಧ್ಯಮ: ಭಿನ್ನಮತ ಮರೆತು ಒಂದಾಗಿ

7

ಆಂಗ್ಲ ಮಾಧ್ಯಮ: ಭಿನ್ನಮತ ಮರೆತು ಒಂದಾಗಿ

Published:
Updated:
ಆಂಗ್ಲ ಮಾಧ್ಯಮ: ಭಿನ್ನಮತ ಮರೆತು ಒಂದಾಗಿ

ಬೆಂಗಳೂರು:  `ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸುವ ಮೂಲಕ ಸರ್ಕಾರ ಕನ್ನಡ ಭಾಷೆಯನ್ನು ನಿರ್ಲಕ್ಷ್ಯಿಸುತ್ತಿದ್ದು, ಈ ಬಗ್ಗೆ ಇರುವ ಭಿನ್ನಮತವನ್ನು ಮರೆತು ಸಾಹಿತಿಗಳೆಲ್ಲ ಒಂದಾಗಿ ಹೋರಾಡಬೇಕು~ ಎಂದು ಹಿರಿಯ ಸಾಹಿತಿ ಡಾ.ದೇ.ಜವರೇಗೌಡ ಕರೆ ನೀಡಿದರು.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪ್ರಶಸ್ತಿ ಸಮಿತಿಯು ನಗರದಲ್ಲಿ ಶನಿವಾರ ಆಯೋಜಿಸಿದ್ದ `ಮಾಸ್ತಿ ಪ್ರಶಸ್ತಿ~ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.`ರಾಜ್ಯದಲ್ಲಿ ಕನ್ನಡಿಗರಿಗೆ ಯಾವುದೇ ವಿಚಾರದಲ್ಲೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಿರುವುದು ಸರ್ಕಾರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಅದು ಹೆಜ್ಜೆ ಇಡಬೇಕಿದೆ~ ಎಂದ ಅವರು, `ಶಿಕ್ಷಣ ಕ್ಷೇತ್ರದಲ್ಲಿ ಆಂಗ್ಲಮಾಧ್ಯಮದ ಶಾಲೆಗಳ ಸ್ಥಾಪನೆಯನ್ನು ತಡೆಯಲು ಸಾಧ್ಯವಿಲ್ಲ ಬದಲಿಗೆ ಸರ್ಕಾರ ಈ ಶಾಲೆಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಬೇಕು~ ಎಂದು ಸಲಹೆ ನೀಡಿದರು.`ಸರೋಜಿನಿ ಮಹಿಷಿ ವರದಿಯನ್ನು ತಿದ್ದುಪಡಿ ತಂದು  ಶೇ 85 ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು. ಆಡಳಿತದಲ್ಲಿ ಕನ್ನಡ ಬಳಕೆಯಾದರೆ ಇತರೆ ಭಾಷೆಗಳ ನೌಕರರು ಕನ್ನಡವನ್ನು ಕಲಿಯುತ್ತಾರೆ. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು~ಎಂದು ಆಗ್ರಹಿಸಿದರು.`ಬೇರೆ ಯಾವುದೇ ಭಾಷೆಯಲ್ಲಿರದಷ್ಟು ಮಹಾಕಾವ್ಯಗಳು ಮತ್ತು ಕವಿಗಳು ಕನ್ನಡ ಭಾಷೆಯಲ್ಲಿದ್ದಾರೆ. ರಾಜ್ಯಕ್ಕೆ ವಿವಿಧ ಭಾಷಿಗರು ಆಗಮಿಸುತ್ತಾರೆ. ಅದಕ್ಕೆ ಯಾರ ಅಭ್ಯಂತರವಿಲ್ಲ. ಬಂದವರೆಲ್ಲ ಕನ್ನಡ ಭಾಷೆಯನ್ನು ಕಲಿಯಬೇಕು~ ಎಂದು ಒತ್ತಾಯಿಸಿದರು.ಲೇಖಕ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ, `ನಗರದ ಚಿಕ್ಕಪೇಟೆಯಲ್ಲಿರುವ ಮಾಸ್ತಿ ರಂಗಮಂದಿರ ಉಗ್ರಾಣವಾಗಿದೆ. ಕನ್ನಡ ಭಾಷೆಗೆ ಉನ್ನತ ಕೊಡುಗೆ ನೀಡಿರುವ ಮಾಸ್ತಿ ಅವರನ್ನು ಸರ್ಕಾರ ಮರೆತಿದ್ದು, ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಳ್ಳಬೇಕು~ ಎಂದು ಹೇಳಿದರು.`ತೆಲುಗು, ತುಳು, ತಮಿಳು, ಕೊಂಕಣಿ ಸೇರಿದಂತೆ ಅನ್ಯ ಭಾಷಿಗರು ಕನ್ನಡವನ್ನು ಬೆಳೆಸುವಲ್ಲಿ ಉತ್ಸಾಹ ತೋರುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಮಾತೃಭಾಷೆಯನ್ನೇ ಕೊಲೆ ಮಾಡುವಂತಹ ಭಾಷಾ ನೀತಿಗಳು ಜಾರಿಯಾಗುತ್ತಿರುವುದು ವಿಷಾದನೀಯ~ ಎಂದು ಹೇಳಿದರು.ಸಾಹಿತಿಗಳಾದ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ, ಜಿ.ಎನ್.ರಂಗನಾಥ್‌ರಾವ್, ಡಾ.ಸುಮತೀಂದ್ರ ನಾಡಿಗ, ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಡಾ.ನಾ. ಡಿಸೋಜ ಅವರಿಗೆ `ಮಾಸ್ತಿ~ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿಯು 25 ಸಾವಿರ ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದೆ.ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, ಹಿರಿಯ ಸಾಹಿತಿ ಪ್ರೊ.ಎಲ್. ಎಸ್.ಶೇಷಗಿರಿರಾವ್, ಸಮಿತಿಯ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry