ಆಂಗ್ಲ ಮಾಧ್ಯಮ ಮಕ್ಕಳ `ಸ್ವಚ್ಛ ಕನ್ನಡ'

7

ಆಂಗ್ಲ ಮಾಧ್ಯಮ ಮಕ್ಕಳ `ಸ್ವಚ್ಛ ಕನ್ನಡ'

Published:
Updated:

ಚಿಂತಾಮಣಿ: ನಗರದ ರಾಯಲ್ ಕಾನ್ವೆಂಟ್ ಶಾಲೆ ಮಕ್ಕಳಿಂದ ಮೂಡಿಬಂದ ಅಚ್ಚ ಕನ್ನಡ-ಸ್ವಚ್ಛ ಕನ್ನಡದ ಪದ ಪುಂಜ ಕನ್ನಡಾಭಿಮಾನಿಗಳನ್ನು ಚಕಿತಗೊಳಿಸಿದವು.ತಾಲ್ಲೂಕು ಕನ್ನಡ ಸಾಹಿತ್ಯ ವೇದಿಕೆ, ಚುಟುಕು ಸಾಹಿತ್ಯ ಪರಿಷತ್ ಈಚೆಗೆ ರಾಯಲ್ ಶಾಲೆಯಲ್ಲಿ ಏರ್ಪಡಿಸಿದ್ದ ಅಚ್ಚ ಕನ್ನಡ-ಸ್ವಚ್ಛ ಕನ್ನಡ ಹಾಗೂ ಶಾಲೆಯ ಅಂಗಳದಲ್ಲಿ ಕವಿ ಕಾವ್ಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.ವಿದ್ಯಾರ್ಥಿಗಳು ಅವಿಭಕ್ತ ಕುಟುಂಬ, ಗುರುವಿನ ಮಹತ್ವ, ಪರಿಸರ, ಸಮೂಹ ಮಾಧ್ಯಮಗಳು, ಇಂದಿನ ಶಿಕ್ಷಣ ಎಂಬ ವಿಷಯಗಳ ಕುರಿತು ಒಂದೇ ಒಂದು ಅನ್ಯ ಭಾಷೆ ಪದ ಬಳಸದೆ ಕನ್ನಡದಲ್ಲಿ ವಿಷಯ ಮಂಡಿಸಿದರು.ಕೆಲವು ವಿದ್ಯಾರ್ಥಿಗಳು ಡಾ.ಶಿವರಾಮ ಕಾರಂತ, ದ.ರಾ.ಬೇಂದ್ರೆ, ಜಿ.ಪಿ.ರಾಜರತ್ನಂ, ಚಂದ್ರಶೇಖರ ಕಂಬಾರ, ಮಾಸ್ತಿ, ಡಿ.ವಿ.ಜಿ., ಆದಿ ಕವಿ ಪಂಪ, ಕುವೆಂಪು, ಯು.ಆರ್.ಅನಂತಮೂರ್ತಿ ಮುಂತಾದವರ ಬದುಕು ಬರಹಗಳ ಕುರಿತು ಮಾತನಾಡಿದರು.ಇನ್ನೂ ಕೆಲವರು ಆಕರ್ಷಕ ಶೀರ್ಷಿಕೆಗಳನ್ನು ಹೊಂದಿದ ಹಾಗೂ ಅರ್ಥಪೂರ್ಣ ವಿಷಯಗಳನ್ನೊಳಗೊಂಡ ಸ್ವರಚಿತ ಚುಟುಕುಗಳನ್ನು ವಾಚಿಸಿ ತಮ್ಮ ಕಾವ್ಯ ಪ್ರತಿಭೆಯನ್ನು ತೋರಿದರು.ಜನಪದ ಗಾಯಕರಾದ ಸೀಕಲ್ ನರಸಿಂಹಪ್ಪ, ಮಹೇಶ್ ಕುಮಾರ್, ಎಂ.ವಿ.ಅಶ್ವತ್ಥನಾರಾಯಣ ಜನಪದ ಗೀತೆಗಳನ್ನು ಹಾಡಿದರು. ಅಲ್ಲೂರಿ ಸೀತಾರಾಮರಾಜು ಆಂಗ್ಲರೊಡನೆ ಸೆಣೆಸಿದ ಹಲವು ಸನ್ನಿವೇಶಗಳನ್ನು ಪೊಲೀಸ್ ವಿಶ್ವನಾಥ್ ಮನೋಜ್ಞವಾಗಿ ಅಭಿನಯಿಸಿ ಮೆಚ್ಚುಗೆಗೆ ಪಾತ್ರರಾದರು.

ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ನಗರದ ಉದ್ಯಮಿ ರಘುನಂದನ್ ಸತ್ಕರಿಸಿದರು ವಿದ್ಯಾ ಸಂಸ್ಥೆ ಪ್ರಾಂಶುಪಾಲರಾದ ಪ್ರೇಮಲತಾ ರಾಮಕೃಷ್ಣಾರೆಡ್ಡಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜು ಉಪನ್ಯಾಸಕಿ ಕೆ.ಎನ್.ಮಾಲತಮ್ಮ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಆರೋಗ್ಯ ನಿರೀಕ್ಷಕ ಸಿ.ಕೆ.ಬಾಬು, ತಾಲ್ಲೂಕು ಕ.ಸಾ.ಪ. ಗೌರವ ಕಾರ್ಯದರ್ಶಿ ಆರ್.ಅಶೋಕ್‌ಕುಮಾರ್, ಉಪನ್ಯಾಸಕರಾದ ನಾಗಾರ್ಜುನರೆಡ್ಡಿ, ಚುಟುಕು ಕವಿಗಳಾದ ವಿ.ನಾರಾಯಣರೆಡ್ಡಿ, ರಾಯಲ್ ಶಿ.ಮ.ಮಂಜುನಾಥ್, ಕೆ.ಎಸ್.ನೂರುಲ್ಲಾ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry