ಬುಧವಾರ, ನವೆಂಬರ್ 20, 2019
27 °C
ವಿವಿಧೆಡೆಯಿಂದ ಹರಿದು ಬಂದ ಭಕ್ತ ಸಾಗರ

ಆಂಜನೇಯ ಸ್ವಾಮಿ ರಥೋತ್ಸವ

Published:
Updated:

ಹೊನ್ನಾಳಿ: ತಾಲ್ಲೂಕಿನ ಕುಂದೂರು ಗ್ರಾಮದ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಕಳೆದ ನಾಲ್ಕೈದು ದಿನಗಳಿಂದ ಬ್ರಹ್ಮ ರಥೋತ್ಸವ ಸಂಬಂಧಿ ಪೂರ್ವ ಸಿದ್ಧತೆಗಳು ನಡೆದಿದ್ದವು.

ರಥಕ್ಕೆ ಕಂಕಣ ಧಾರಣೆ, ವಿವಿಧ ದೇವರುಗಳ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜಾ ಕಾರ್ಯಕ್ರಮ ನಡೆದಿದ್ದವು. ಕುಂದೂರು ಗ್ರಾಮದ ಪಕ್ಕ ಇರುವ ಕೂಲಂಬಿ ಗ್ರಾಮದ ವಿಶ್ವಕರ್ಮ ಜನಾಂಗದವರು ಕಂಕಣ ಧಾರಣೆ ನಡೆಸುವುದು ವಿಶೇಷ.

ಧೂಳಿ ಉತ್ಸವ, ನಾಗಸರ್ಪೋತ್ಸವ, ಚಿಗರಿ ವಾಹನೋತ್ಸವ ಹಾಗೂ ಗಜವಾಹನೋತ್ಸವಗಳು ಪಾರಂಪರಿಕ ಶ್ರದ್ಧಾ-ಭಕ್ತಿಗಳಿಂದ ನೆರವೇರಿದವು.ಬ್ರಹ್ಮ ರಥೋತ್ಸವದ ಅಂಗವಾಗಿ ಕುಂದೂರು ಗ್ರಾಮ ನವ ವಧುವಿನಂತೆ ಶೃಂಗಾರಗೊಂಡಿತ್ತು. ಶುಕ್ರವಾರ ಬೆಳಗಿನ ಜಾವ ವಿವಿಧ ದೇವರುಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಅಲಂಕೃತ ರಥದಲ್ಲಿ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಸಹಸ್ರಾರು ಭಕ್ತರು ಆಂಜನೇಯ ಸ್ವಾಮಿಗೆ ಜಯಘೋಷ ಹಾಕುತ್ತಾ ರಥ ಎಳೆದರು. ರಥಕ್ಕೆ ಬಾಳೆಹಣ್ಣು, ಕಾಳು ಮೆಣಸು ಇತ್ಯಾದಿ ಸಮರ್ಪಿಸಿ ಧನ್ಯತಾ ಭಾವ ಹೊಂದಿದರು. ರಥಕ್ಕೆ ಎರಚಿದ ಮೆಣಸಿನ ಕಾಳು, ಬಾಳೆಹಣ್ಣು ಸೇವಿಸಿದರೆ ಒಳ್ಳೆಯದು ಎಂಬ ಭಾವನೆ ಜನರಲ್ಲಿ ಇರುವ ಕಾರಣ, ಅವುಗಳನ್ನು ಸಂಗ್ರಹಿಸಲು ಭಕ್ತರಲ್ಲಿ ಸ್ಪರ್ಧೆ ಏರ್ಪಟ್ಟಿತ್ತು.ಶಿವಮೊಗ್ಗ, ದಾವಣಗೆರೆ, ಹಾವೇರಿ ಸೇರಿದಂತೆ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಬ್ರಹ್ಮ ರಥೋತ್ಸವಕ್ಕೆ ಆಗಮಿಸಿದ್ದರು.ಏ. 6ರಂದು ಮಧ್ಯಾಹ್ನ 3ರಿಂದ ಸಂಜೆ 6.30ರವರೆಗೆ ಆಂಜನೇಯ ಸ್ವಾಮಿಯ ವಿಶಿಷ್ಟವಾದ ಮುಳ್ಳೋತ್ಸವ ವೈಭವದಿಂದ ನಡೆಯಲಿದೆ.ಆಂಜನೇಯಸ್ವಾಮಿ ದೇವಸ್ಥಾನದ ಪಕ್ಕದ ಅಗಸಿ ಬಾಗಿಲಿಗೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಎತ್ತರದ ಕಾರೆ ಮುಳ್ಳಿನ ಗದ್ದುಗೆ ಸಿದ್ಧಪಡಿಸಲಾಗುತ್ತದೆ. ಸಾಂಪ್ರದಾಯಿಕ ಪೂಜೆ ನಂತರ ದಾಸಪ್ಪನವರು ಮೊದಲು ಮುಳ್ಳುಗದ್ದುಗೆ ಆರೋಹಣ ಮಾಡುತ್ತಾರೆ.

ಬಡವ, ಬಲ್ಲಿದ, ಜಾತಿ, ಮತ ಭೇದ ಇಲ್ಲದೇ ಹರಕೆ ಹೊತ್ತ ಸಮಸ್ತ ಭಕ್ತರು ಸಾಮೂಹಿಕವಾಗಿ ಮುಳ್ಳುಗದ್ದುಗೆ ಏರಿ ಮುಳ್ಳುತುಳಿಯುವ ದೃಶ್ಯ ಮೈನವಿರೇಳಿಸುತ್ತದೆ. ಭಕ್ತರು ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ. ನಂತರ ಧಾರ್ಮಿಕ ವಿಧಿ-ವಿಧಾನದಿಂದ ದೇವರು ಪಲ್ಲಕ್ಕಿ ಏರಿದ ತಕ್ಷಣ ಕಾರ್ಣೀಕ ನುಡಿಯುವ ದಾಸಪ್ಪನವರ ದೇವವಾಣಿ ಮೊಳಗುತ್ತದೆ.7ರಂದು ಬೆಳಿಗ್ಗೆ ಓಕುಳಿ ಉತ್ಸವ, ರಾತ್ರಿ ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತದೆ. ಏ. 7 ಮತ್ತು ಏ. 8ರಂದು ಎರಡು ದಿನಗಳ ಕಾಲ ಬಯಲು ಜಂಗೀ ಕುಸ್ತಿ ನಡೆಯಲಿದೆ.

ಪ್ರತಿಕ್ರಿಯಿಸಿ (+)