ಆಂಡ್ರೋಪಾಸ್ ಪುರುಷರ `ಆ ದಿನಗಳು'

ಮಂಗಳವಾರ, ಜೂಲೈ 16, 2019
25 °C
ವಾರದ ವೈದ್ಯ

ಆಂಡ್ರೋಪಾಸ್ ಪುರುಷರ `ಆ ದಿನಗಳು'

Published:
Updated:

ಹಿಳೆಯರ ರಜೋನಿವೃತ್ತಿಯ (ಋತುಬಂಧ) ಬಗ್ಗೆ ಸಾಕಷ್ಟು ಚರ್ಚೆ- ಚಿಂತನೆಗಳು ನಡೆಯುತ್ತವೆ. ಆದರೆ, ಅದೇ ರೀತಿ ಪುರುಷರಲ್ಲೂ  ಸಂಭವಿಸುವ ಒಂದು ಸ್ಥಿತಿ ಆಂಡ್ರೋಪಾಸ್. ಈ ಬಗ್ಗೆ ಹಿಂದಿನಿಂದಲೂ ಮೌನವೇ ಉತ್ತರವಾಗಿ ಬಂದಿದೆ. ಇತ್ತೀಚಿನ ದಿನಗಳಲ್ಲಿ ಪುರುಷರು ಬಹಳ ಬೇಗ ಆಂಡ್ರೋಪಾಸ್ ಸಂಬಂಧಿ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ.

ಬದಲಾದ ಜೀವನ ಶೈಲಿ, ಒತ್ತಡದ ಬದುಕು, ಮಾಲಿನ್ಯ, ದೈಹಿಕ ಶ್ರಮದ ಕೊರತೆ ಮುಂತಾದ ಕಾರಣಗಳು ಪುರುಷರನ್ನು ಆಂಡ್ರೋಪಾಸ್‌ನತ್ತ ನೂಕುತ್ತಿವೆ. ಈ ಬಗ್ಗೆ ಗಮನ ಹರಿಸಲೇಬೇಕಾದ ಸಮಯ ಇದು...

ಮೊದಲು 50ರ ಆಸುಪಾಸಿನಲ್ಲಿ ಮಾತ್ರ ಪುರುಷರು ಆಂಡ್ರೋಪಾಸ್ ಲಕ್ಷಣಗಳನ್ನು ಅನುಭವಿಸುತ್ತಿದ್ದರು. ಆದರೆ ಈಚೆಗೆ ಜೀವನಶೈಲಿಗೆ ಸಂಬಂಧಿಸಿದ ತೊಡರುಗಳಿಂದಾಗಿ 30ರಲ್ಲೇ ಈ ಪ್ರಕ್ರಿಯೆಗೆ ಒಳಗಾಗುತ್ತಿದ್ದಾರೆ.

ಆಂಡ್ರೋಪಾಸ್ ಬಗ್ಗೆ ವಿವರಿಸಿ

ಲೈಂಗಿಕ ನಿಶ್ಶಕ್ತಿ, ಸ್ನಾಯು ಸೆಳೆತ, ಬೊಜ್ಜು, ಮನಃಸ್ಥಿತಿಯಲ್ಲಿ ದಿಢೀರ್ ಬದಲಾವಣೆ... ಇದೆಲ್ಲ ಆಂಡ್ರೋಪಾಸ್ ಚಿಹ್ನೆಗಳು. ಪುರುಷರ ಪ್ರಾಥಮಿಕ ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟೆರಾನ್‌ನಲ್ಲಿ ಇಳಿಮುಖವಾದಾಗ ಈ ಎಲ್ಲ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಪುರುಷರು ಕೂಡ ಕೆಲವು ಮನೋ-ದೈಹಿಕ ತೊಡಕುಗಳಿಗೆ ಗುರಿಯಾಗುತ್ತಾರೆ.

ಇದು ಸ್ತ್ರೀಯರ ರಜೋನಿವೃತ್ತಿಯಷ್ಟೇ ಸ್ವಾಭಾವಿಕ ಪ್ರಕ್ರಿಯೆ. ಆದಾಗ್ಯೂ ಇದರ ಲಕ್ಷಣ ಹಾಗೂ ಪರಿಹಾರ ಕ್ರಮಗಳ ಬಗ್ಗೆ ತಿಳಿದುಕೊಂಡಲ್ಲಿ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬಹುದು.

50 ವರ್ಷ ಮೇಲ್ಪಟ್ಟ ವಯೋಮಾನದ ಶೇ 30ರಷ್ಟು ಪುರುಷರು ಈ ಕೆಳಗಿನ ಸ್ಥಿತಿಗಳನ್ನು ಎದುರಿಸುತ್ತಾರೆ ಎಂದು ಅಧ್ಯಯನವೊಂದು ವರದಿ ಮಾಡಿದೆ-

ಲೈಂಗಿಕ ಆಸಕ್ತಿಯಲ್ಲಿ ಇಳಿಕೆ- ಶೇ 91

ಲೈಂಗಿಕ ಸಾಮರ್ಥ್ಯ ಇಳಿಕೆ- ಶೇ 89

ನಿಮಿರುವಿಕೆ ತೊಂದರೆ- ಶೇ 79

ಜೋಂಪು ಹೋಗುವುದು- ಶೇ 70

ವಿಷಾದ ಅಥವಾ ಮುಂಗೋಪ ಚಿತ್ತ- ಶೇ 68

ಧಾರಣ ಶಕ್ತಿ ಇಳಿಮುಖ ಶೇ 66

ಕಾರ್ಯಕ್ಷಮತೆ ಕುಗ್ಗುವಿಕೆ ಶೇ 51

ಇದರಿಂದ ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯ ತಗ್ಗುತ್ತದೆಯೇ?

ಈ ಹಂತದಲ್ಲಿ ವೀರ್ಯ ಉತ್ಪಾದನೆ ಕ್ರಮೇಣ ಕಡಿಮೆ ಆಗುವುದು ನಿಜ. ಆದರೆ, ಸಂತಾನೋತ್ಪತ್ತಿ ನಿಂತೇ ಹೋಗುತ್ತದೆ ಎಂದು ಅರ್ಥವಲ್ಲ. ಆಂಡ್ರೋಪಾಸ್ ತಲುಪಿದ ನಂತರವೂ 90 ವರ್ಷದವರೆಗೂ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಉಳಿಸಿಕೊಂಡವರೂ ಇದ್ದಾರೆ.

ಆಂಡ್ರೋಪಾಸ್‌ಗೆ ಕಾರಣಗಳು ಯಾವುವು?

ಪುರುಷರ ಈ ಸ್ಥಿತಿಗೆ ಮಹಿಳೆಯರಿಗೆ ಇರುವಂತೆ ನಿರ್ದಿಷ್ಟವಾದ ಲಕ್ಷಣಗಳು ಅಥವಾ ಕಾರಣಗಳು ಇಲ್ಲ. ಕೇವಲ ವಯಸ್ಸಿನ ಕಾರಣದಿಂದ ಪುರುಷ ಆಂಡ್ರೋಪಾಸ್ ತಲುಪುತ್ತಾನೆ ಎಂದರೆ ಅದೊಂದು ಆರೋಗ್ಯಕರ ಬದಲಾವಣೆಯಷ್ಟೆ. ಆದರೆ ಅನೇಕ ಸಂದರ್ಭಗಳಲ್ಲಿ ಇತರ ಅಂಶಗಳೂ ಆಂಡ್ರೋಪಾಸ್‌ಗೆ ಕಾರಣವಾಗುತ್ತವೆ. ಅವುಗಳೆಂದರೆ-

* ಮಸ್ತಿಷ್ಕನಿಮ್ನಾಂಗ ಜಡತೆ (hypothalamic sluggishness)

* ಹಾರ್ಮೋನ್ ನ್ಯೂನತೆಗಳು

* ವಿಪರೀತ ಮದ್ಯ ಸೇವನೆ, ಧೂಮಪಾನ

* ಸ್ಥೂಲಕಾಯ

* ಕೆಲವು ಔಷಧಗಳು

* ಕೆಲವು ಪ್ರಕಾರದ ಶಸ್ತ್ರಚಿಕಿತ್ಸೆಗಳು

ಆಂಡ್ರೋಪಾಸ್ ಲಕ್ಷಣಗಳೇನು?

* ಲೈಂಗಿಕ ಆಸಕ್ತಿಯಲ್ಲಿ ಕೊರತೆ

* ನಿದ್ರಾಹೀನತೆ

* ದುರ್ಬಲ ಮೂಳೆಗಳು

* ಸ್ನಾಯು ಶಕ್ತಿ ನಷ್ಟ

* ದೇಹದ ಮೇಲ್ಭಾಗ ಮತ್ತು ಕೇಂದ್ರ ಭಾಗದಲ್ಲಿ ಕೊಬ್ಬು ಹೆಚ್ಚಳ

* ವರ್ತನೆಯ ಬದಲಾವಣೆಗಳು

* ಹೃದಯ ರಕ್ತನಾಳಗಳ ಅಪಾಯ

ತಪಾಸಣೆ ಮತ್ತು ಚಿಕಿತ್ಸೆಗಳೇನು?

ಈ ಮೇಲಿನ ಲಕ್ಷಣಗಳು ಕಂಡುಬಂದಾಗ ವೈದ್ಯರನ್ನು ಕಾಣಬೇಕು. ಆಗ ಟೆಸ್ಟೋಸ್ಟೆರಾನ್ ಹಾರ್ಮೋನ್ ಪರಿಶೀಲಿಸಲು ರಕ್ತ ಪರೀಕ್ಷೆ  ನಡೆಸಲಾಗುತ್ತದೆ. ನಂತರ ಈ ಬದಲಾವಣೆ ಸ್ವಾಭಾವಿಕವೇ ಅಥವಾ ಅಸ್ವಾಭಾವಿಕವೇ ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ.

ಇಳಿಮುಖವಾದ ಟೆಸ್ಟೋಸ್ಟೆರಾನ್‌ನ್ನು ಸುಸ್ಥಿತಿಗೆ ತರುವುದು ಹೇಗೆ? ಇತರ ಪರಿಹಾರ, ಚಿಕಿತ್ಸೆ ಏನಿದೆ?

ಟೆಸ್ಟೋಸ್ಟೆರಾನ್ ಬದಲಿ ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿ ಎಂದು ಗುರುತಿಸಲಾಗಿದೆ. ಅನೇಕ ಪ್ರಕರಣಗಳಲ್ಲಿ ಈ ಚಿಕಿತ್ಸೆ ಆಂಡ್ರೋಪಾಸ್ ಲಕ್ಷಣಗಳನ್ನು ನಿರ್ವಹಿಸುವುದರ ಜೊತೆಗೆ ಜೀವನದ ಗುಣಮಟ್ಟವನ್ನು ಕಾಪಾಡುವಲ್ಲಿ ನೆರವಾಗಿದೆ.

ಟೆಸ್ಟೋಸ್ಟೆರಾನ್ ಚಿಕಿತ್ಸೆಯನ್ನು ವಿವಿಧ ಪ್ರಕಾರಗಳಲ್ಲಿ ನೀಡಬಹುದು. ಅದು ಚರ್ಮದ ಪಟ್ಟಿಗಳು, ಮಾತ್ರೆಗಳು, ಜೆಲ್ ಹಾಗೂ ಇಂಜೆಕ್ಷನ್ ರೂಪಗಳಲ್ಲಿ ಲಭ್ಯ ಇದೆ.

ಈ ಚಿಕಿತ್ಸೆಯಿಂದ ಏನಾದರೂ ಅಪಾಯಗಳಿವೆಯೇ?

ಹೌದು, ಕೆಲವು ವೈದ್ಯಕೀಯ ಸ್ಥಿತಿಯಲ್ಲಿ ಇರುವವರಿಗೆ ಇದು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. ಪ್ರಾಸ್ಟೇಟ್ (ಜನನೇಂದ್ರಿಯ ಗ್ರಂಥಿ) ಅಥವಾ ಸ್ತನ ಕ್ಯಾನ್ಸರ್, ಹೃದಯ ಸಂಬಂಧಿ ಅಥವಾ ಮೂತ್ರಪಿಂಡ ಸಮಸ್ಯೆಗಳಿಂದ ಬಳಲುವವರಿಗೆ ಈ ಚಿಕಿತ್ಸೆ ಅಡ್ಡ ಪರಿಣಾಮಗಳನ್ನು ಬೀರಬಹುದು.

ಮುಂಜಾಗ್ರತೆ ಹೇಗೆ?

ಮೊದಲು ಜೀವನಶೈಲಿಯಲ್ಲಿ ಬದಲಾವಣೆ ತರುವುದು ಮುಖ್ಯ. ಪೌಷ್ಟಿಕ ಆಹಾರ, ವ್ಯಾಯಾಮ, ದೈಹಿಕ ಚಟುವಟಿಕೆ, ಒತ್ತಡದಿಂದ ಬಿಡುಗಡೆ ಮುಂತಾದ ಬದಲಾವಣೆಗಳಿಂದ ಆರೋಗ್ಯಕರ ಜೀವನ ನಡೆಸಬಹುದು.

-ಡಾ. ಎಂ.ಬಿ.ರಾಮಮೂರ್ತಿ. ಸಮುದಾಯ ಆರೋಗ್ಯ ಸೇವೆ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry