ಬುಧವಾರ, ನವೆಂಬರ್ 20, 2019
27 °C

ಆಂತರ್ಯಕ್ಕೆ ಸಂಬಂಧಿಸಿದ ಸಂಶೋಧನೆ

Published:
Updated:

ವಚನ ಸಾಹಿತ್ಯ ಹಾಗು ಜಾತಿ ವ್ಯವಸ್ಥೆಯ ಕುರಿತಾದ ಸಂಶೋಧನೆಯ ಮೇಲಿನ ಚರ್ಚೆ ಎಚ್.ಎಸ್.ಶಿವಪ್ರಕಾಶ್ ಹಾಕಿಕೊಟ್ಟ ಅಕಡೆಮಿಕ್ ಅಡಿಪಾಯವನ್ನು ಬಿಟ್ಟು ಅತ್ತಿತ್ತ ಓಲಾಡತೊಡಗಿದೆ ಎಂದು ನನಗನಿಸುತ್ತಿದೆ. ಕೆಲವು ನಿರ್ದಿಷ್ಟ ಲಕ್ಷಣಗಳನ್ನೊಳಗೊಂಡ ಬ್ರಾಹ್ಮಣ ಪುರೋಹಿತಶಾಹಿ ಪ್ರಚೋದಿತ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿದೆ ಎನ್ನುವ ಪೂರ್ವನಂಬಿಕೆಯಿಂದ ವಚನ ಸಾಹಿತ್ಯವನ್ನು ನೋಡಿದಾಗ ಅವು ಜಾತಿ ವ್ಯವಸ್ಥೆಯ ವಿರುದ್ಧದ ಚಳವಳಿಗಳಂತೆ ನಮಗೆ ಕಾಣಿಸುತ್ತದೆ. ಅಂತಹ ಬೌದ್ಧಿಕ ಚೌಕಟ್ಟಿನಿಂದ ಹೊರಬಂದು ವಚನಗಳನ್ನು ಓದಿದಾಗ ಅವು ಜಾತಿ ವ್ಯವಸ್ಥೆಯ ವಿರುದ್ಧದ ಚಳವಳಿ ಎಂದು ಸಿದ್ಧಪಡಿಸಿ ತೋರಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಡಂಕಿನ್‌ರವರ ವಾದದ ಸಾರಾಂಶ ಎಂದು ನಾನು ತಿಳಿದುಕೊಂಡಿದ್ದೇನೆ. ಮತ್ತು ಇದಕ್ಕೆ ಪೂರಕವಾಗಿ ಜಾತಿಯ ಉಲ್ಲೆೀಖವಿರುವ ವಚನಗಳ ಸಂಖ್ಯೆ ಅತ್ಯಂತ ಕಡಿಮೆ ಎಂದು ಅವರು ಕೊಡುವ ಪುರಾವೆ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಅವರು ಬಳಸುವ ಕೇವಲ ಒಂದು ಅಂಶವಷ್ಟೇ ಎನ್ನುವುದು ನನ್ನ ತಿಳಿವಳಿಕೆಯಾಗಿದೆ. ಕೇವಲ ಅದೊಂದರಿಂದಲೇ ತಮ್ಮ ವಾದವನ್ನು ಅವರು ಸಮರ್ಥಿಸಿಕೊಂಡಿರಲು ಸಾಧ್ಯವಿಲ್ಲ. ಎಚ್.ಎಸ್.ಶಿವಪ್ರಕಾಶ್‌ರವರು ಈ ಒಂದು ಅಂಶವನ್ನು ಉಲ್ಲೆೀಖಿಸಿರುವುದರಿಂದ ಅದೇ ಚರ್ಚೆಯ ಪ್ರಮುಖ ಗುರಿಯಾಗಿ ಚರ್ಚೆಗೆತ್ತಿಕೊಳ್ಳಬಹುದಾಗಿದ್ದ ಇನ್ನಿತರ ಮಹತ್ತರ ಅಂಶಗಳು ಕಣ್ಮರೆಯಾಗಿರುವ ಸಾಧ್ಯತೆ ಇದೆ.ನನಗನಿಸುವಂತೆ ಇಲ್ಲಿ ಅತ್ಯಂತ ಪ್ರಮುಖವಾಗಿ ಚರ್ಚೆಗೊಳಪಡ ಬೇಕಾದ ಸಂಗತಿಗಳು ಎಂದರೆ: ಡಂಕಿನ್‌ರವರ ಸಂಶೋಧನೆಯು ಅದರ ಅಧ್ಯಯನದ ಕೇಂದ್ರವಾದ ವಿದ್ಯಮಾನದ ಮೇಲೆ ಎಷ್ಟರ ಮಟ್ಟಿಗೆ ಬೆಳಕು ಚೆಲ್ಲುತ್ತದೆ; ಅವರ ಸಂಶೋಧನೆಯ ಪ್ರಾಕ್‌ಕಲ್ಪನೆಗೆ (ಜಾತಿ ವ್ಯವಸ್ಥೆಯ ಚೌಕಟ್ಟಿನಲ್ಲಿ ವಚನಗಳನ್ನು ಗ್ರಹಿಸಿದಾಗ ಮಾತ್ರ ಅವು ಜಾತಿ ವಿರೋಧಿ ಚಳವಳಿಗಳಂತೆ ಕಾಣುತ್ತವೆ ಎನ್ನುವ ಪ್ರಾಕ್‌ಕಲ್ಪನೆ) ಇರುವ ಸಮರ್ಥನೆ ಯಾವುದು; ಸಂಶೋಧನೆಯಲ್ಲಿ ಮಂಡಿಸಲಾಗಿರುವ ವಾದ ಎಷ್ಟು ತರ್ಕಬದ್ಧವಾಗಿದೆ ಇತ್ಯಾದಿ. ಚರ್ಚೆ ಈ ನಿಟ್ಟಿನಲ್ಲಿ ಮುಂದುವರೆದಿದ್ದರೆ ಇದೊಂದು ಅರ್ಥಪೂರ್ಣ ಚರ್ಚೆಯಾಗಿರುತ್ತಿತ್ತು ಹಾಗೂ ಓದುಗರಿಗೂ ಉಪಯುಕ್ತವಾಗುತ್ತಿತ್ತು.ಈಗ ನಡೆಯುತ್ತಿರುವ ಚರ್ಚೆಯಲ್ಲಿ ವ್ಯೆಜ್ಞಾನಿಕ ಸಂಶೋಧನೆಗೆ ಪ್ರಮುಖವಲ್ಲದ ವಿಷಯಗಳೇ ಪ್ರಧಾನವಾಗುತ್ತಿರುವಂತೆ ಕಾಣುತ್ತದೆ. ಒಂದು ಸಂಶೋಧನೆಯು ವ್ಯೆಜ್ಞಾನಿಕವಾದದ್ದೇ ಅಥವಾ ಪೂರ್ವಗ್ರಹ ಪೀಡಿತವೇ ಎಂದು ನಮಗೆ ಲಭ್ಯವಿರುವ ಸಂಶೋಧನಾ ಪರಿಕರಗಳನ್ನು ಬಳಸಿ ಹೇಳಲು ಸಾಧ್ಯವಿಲ್ಲವೆಂದಾದರೆ ನಮ್ಮಲ್ಲಿ ಇದುವರೆಗೂ ಸರಿಯಾದ ಸಂಶೋಧನೆಗಳೇ ನಡೆದಿಲ್ಲ ಎನ್ನುವ ತೀರ್ಮಾನಕ್ಕೆ ಬರಬೇಕಾಗುತ್ತದೆ. ವಚನಗಳನ್ನು ಕುರಿತಾದ ಡಂಕಿನ್ ಹಾಗು ಬಾಲುರವರ ವಾದಗಳು ಬ್ರಾಹ್ಮಣೇತರ ಚಳವಳಿಯನ್ನು ಹತ್ತಿಕ್ಕುವ, ಹಾಗೂ ಬ್ರಾಹ್ಮಣ ಪುರೋಹಿತಶಾಹಿಯನ್ನು ಪುನರ್‌ಸ್ಥಾಪಿಸುವ ಹುನ್ನಾರವೆನ್ನುವುದನ್ನು ಅವರ ವಾದದಲ್ಲಿಯೇ ತೋರಿಸಲು ಸಾಧ್ಯವಿದೆಯೇ ಅಥವಾ ಅಂತಹದೊಂದು ಹೇಳಿಕೆ ಅವರ ವಾದಕ್ಕೆ ಹೊರತಾಗಿದೆಯೇ ಎನ್ನುವ ಪ್ರಶ್ನೆ ಇಲ್ಲಿ ಬಹಳ ಮುಖ್ಯವಾಗುತ್ತದೆ. ಒಂದು ವೇಳೆ ಒಬ್ಬ ಸಂಶೋಧಕನ ವಾದದಲ್ಲಿ ಮತ್ತು ಅವನ ಬರವಣಿಗೆಯಲ್ಲಿ ಅವನ/ಅವಳ ಉದ್ದೇಶವನ್ನು ನಮಗೆ ತೋರಿಸಲಾಗದಿದ್ದರೂ ಕೂಡ ಸಂಶೋಧನೆಯ ಮೌಲ್ಯಮಾಪನದಲ್ಲಿ ಸಂಶೋಧಕರ ಉದ್ದೇಶ ಪ್ರಮುಖ ಪಾತ್ರ ವಹಿಸುತ್ತದೆ ಎಂದಾದರೆ ಅದರ ಪರಿಣಾಮ ಅತ್ಯಂತ ಅಪಾಯಕಾರಿಯಾಗಿರುತ್ತದೆ. ಬಾಲು ಅಥವಾ ಡಂಕಿನ್‌ರವರ ವಿಷಯವನ್ನು ಬದಿಗಿಟ್ಟು ನೋಡಿ. ಪ್ರಬಲವಾದ ಪ್ರಚಲಿತ ನಂಬಿಕೆಗೆ ವಿರುದ್ಧವಾದ ಯಾವುದೇ ಸಂಶೋಧನೆಯ ಬಗ್ಗೆ ಯೂ ಇಂತಹ ಆಪಾದನೆಯನ್ನು ಮಾಡಲು ಸಾಧ್ಯವಿದೆಯಲ್ಲವೆ? ಇಂತಹ ಧೋರಣೆ ಅಪಾಯಕಾರಿ ಏಕೆಂದರೆ ಒಬ್ಬ ವ್ಯಕ್ತಿಯ ಒಳ ಉದ್ದೇಶ ಅಥವಾ ಇಂಗಿತ ಅವನ/ಅವಳ ಆಂತರ್ಯಕ್ಕೆ ಸಂಬಂಧಿಸಿದ್ದು ಅದಕ್ಕೆ ಸಂಬಂಧಿಸಿದಂತೆ ಮಾಡಿದ ಆಪಾದನೆ ಸತ್ಯವೇ ಅಲ್ಲವೇ ಎನ್ನುವುದನ್ನು ಆಪಾದನೆ ಮಾಡಿದವರಿಗಾಗಲೀ ಅಥವಾ ಅದಕ್ಕೆ ಒಳಗಾದವರಿಗಾಗಲೀ ಸಿದ್ಧಪಡಿಸಿ ತೋರಿಸಲು ಸಾಧ್ಯವಿಲ್ಲ. ಇದರ ಪರಿಣಾಮವಾಗಿ ಯಾವುದೋ ಒಂದು ವಿಷಯದ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸಬೇಕಾಗಿದ್ದ ಚರ್ಚೆ ಅದಕ್ಕೆ ಯಾವುದೇ ರೀತಿಯಲ್ಲೂ ಸಂಬಂಧಿಸಿರದ ಮತ್ತು ಜ್ಞಾನ ಗಳಿಕೆಗೆ ಯಾವುದೇ ರೀತಿಯಲ್ಲೂ ಸಹಕಾರಿಯಲ್ಲದ ಕೆಸರೆರಚಾಟಕ್ಕೆ ದಾರಿ ಮಾಡಿಕೊಡುತ್ತದೆ.ವಚನಗಳ ಬಗ್ಗೆ ಹಾಗೂ ಲಿಂಗಾಯತ, ವೀರಶೈವ ಜಾತಿ/ಸಮುದಾಯಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ಈಗಾಗಲೇ ನಡೆದಿವೆ. ಅಂತಹ ವಿವರಣೆಗಳಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ಅದರ ಆಧಾರದ ಮೇಲೆ ಡಂಕಿನ್ ತಮ್ಮದೇ ಆದ ಊಹಾಸಿದ್ಧಾಂತವನ್ನು ಮಂಡಿಸಿದ್ದಾರೆ. ಭಾರತದ ಜಾತಿ ವ್ಯವಸ್ಥೆ ಹಾಗೂ ರಿಲಿಜನ್ ಕುರಿತು ಬಾಲಗಂಗಾಧರ ಅವರ ಸಂಶೋಧನೆ ಅವರ ಊಹಾ ಸಿದ್ಧಾಂತಕ್ಕೆ ಮೂಲ ಪ್ರೇರಣೆಯಾಗಿದೆ. ಹಾಗಿದ್ದಲ್ಲಿ ಇಲ್ಲಿ ಚರ್ಚೆಗೊಳಪಡಬೇಕಾಗಿರುವ ಅಂಶಗಳೆಂದರೆ ಡಂಕಿನ್ ಹಾಗೂ ಬಾಲುರವರ ವಾದ ಪ್ರಚಲಿತ ವಿದ್ಯಮಾನವಾದ ಜಾತಿಗಳ ಸ್ವರೂಪದ ಬಗ್ಗೆ ಇದುವರೆಗಿನ ವಿವರಣೆಗಳಲ್ಲಿರುವ ಸಮಸ್ಯೆಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆಯೇ ಮತ್ತು ಅವುಗಳಿಗಿಂತಲೂ ಹೆಚ್ಚು ಸಮರ್ಥವಾದ ವಿವರಣೆಯನ್ನು ನಮ್ಮ ಮುಂದಿಡುವಲ್ಲಿ ಅವರು ಯಶಸ್ವಿಯಾಗಿದ್ದಾರೆಯೇ ಎನ್ನುವುದು. ಡಂಕಿನ್‌ರವರ ಈ ಸಂಶೋಧನೆಯ ಬಗ್ಗೆ ಎತ್ತಬಹುದಾದ ಇಂತಹ ಪ್ರಶ್ನೆಗಳಿಗೂ ಸಂಶೋಧನೆಯನ್ನು ಕ್ಯೆಗೆತ್ತಿಕೊಳ್ಳುವ ಹಿಂದೆ ಇದ್ದಿರಬಹುದಾದ ಉದ್ದೇಶಗಳಿಗೂ ಏನಾದರೂ ಸಂಬಂಧವಿದೆಯೇ?ಡಂಕಿನ್ ಅವರ ವಾದಕ್ಕೆ ಬಂದ ಪ್ರತಿಕ್ರಿಯೆಯನ್ನು ನೋಡಿದಾಗ ಸಂಶೋಧನೆಯ ಸ್ವರೂಪದ ಬಗ್ಗೆ ಏಳುವ ಕೆಲವು ಪ್ರಶ್ನೆಗಳೆಂದರೆ: ಸದುದ್ದೇಶಗಳನ್ನು ಹೊಂದಿರುವ ಸಾಮಾಜಿಕ/ಸಾಂಸ್ಕೃತಿಕ ಚಳವಳಿಯ ಸ್ಯೆದ್ಧಾಂತಿಕ ನೆಲೆಯನ್ನು ಸಮಸ್ಯೀಕರಿಸುವ ಕೆಲಸವನ್ನು ಸಂಶೋಧನೆ ಕ್ಯೆಗೆತ್ತಿಕೊಳ್ಳಬೇಕೆ ಬೇಡವೆ? ಬ್ರಾಹ್ಮಣೇತರ, ದಲಿತ, ಬಂಡಾಯ ಇತ್ಯಾದಿ ಪ್ರಗತಿಪರ ಚಳವಳಿಗಳ ಸಿದ್ಧಾಂತಗಳಲ್ಲಿರುವ ವ್ಯೆರುಧ್ಯಗಳನ್ನು ತೋರಿಸಿದರೆ ಅವುಗಳ ಮೂಲ ಆಶಯವನ್ನು ವಿರೋಧಿಸಿದಂತಾಗುತ್ತದೆಯೆ? ವಚನಗಳು ಜಾತಿ ವ್ಯವಸ್ಥೆಯ ವಿರುದ್ಧವಾಗಿಲ್ಲ ಎಂದು ಹೇಳಿದರೆ ಅದು ವಚನಗಳ ಮಹತ್ವವನ್ನು ಕಡೆಗಣಿಸಿದಂತಾಗುತ್ತದೆಯೇ? ಪ್ರಚಲಿತ ನಂಬಿಕೆ, ಸಿದ್ಧಾಂತಗಳನ್ನು ವಿಮರ್ಶೆಗೊಳಪಡಿಸುವುದು ಅವುಗಳನ್ನು ಹತ್ತಿಕ್ಕುವ ಹುನ್ನಾರವಾಗುತ್ತದೆ ಎಂದಾದರೆ ಅಂತಹ ಚಳವಳಿಗಳನ್ನು ಕುರಿತು ಮೂಲಭೂತ ಜಿಜ್ಞಾಸೆಯೇ ಸಾಧ್ಯವಿಲ್ಲ ಎಂದು ಹೇಳಿದಂತಾಗುವುದಿಲ್ಲವೆ? ಯಾವುದೇ ಒಂದು ಸಿದ್ಧಾಂತ ಜೀವಂತವಾಗಿ ಉಳಿಯಬೇಕಾದರೆ ಅದು ನಿರಂತರ ವಿಮರ್ಶೆಗೊಳಪಡುತ್ತಿರಬೇಕು ಮತ್ತು ಅಂತಹ ಪ್ರಕ್ರಿಯೆಯಲ್ಲಿ ಅದರ ಮೂಲ ಸ್ವರೂಪ ಬದಲಾಗುತ್ತಾ ಹೋಗುತ್ತದೆ. ಇಲ್ಲವಾದಲ್ಲಿ ಅದೊಂದು ನಿರ್ಜೀವ ಐಡಿಯಾಲಜಿಯಾಗಿಬಿಡುತ್ತದೆ. ಮಾರ್ಕ್ಸ್‌ವಾದ ಇದಕ್ಕೊಂದು ಅತ್ಯುತ್ತಮ ಉದಾಹರಣೆಯಾಗಿ ನಮ್ಮ ಮುಂದಿದೆ.   ಡಂಕಿನ್ ಅವರ ವಾದದಲ್ಲಿರಬಹುದಾದ ವ್ಯೆರುಧ್ಯಗಳು, ಪೂರ್ವಗ್ರಹಗಳು ಮತ್ತು ಅವರ ಸಂಶೋಧನಾ ವಿಧಾನದಲ್ಲಿರಬಹುದಾದ ದೋೀಷಗಳನ್ನು ಅವರು ಮಂಡಿಸುವ ವಾದದ ಚೌಕಟ್ಟಿನಲ್ಲಿ ಚರ್ಚಿಸದೆ ಅವರ ಸಂಶೋಧನೆಯನ್ನು ಸಂಶೋಧನೆಗೆ ಅತೀತವಾದ ಅಂದರೆ ಇಂತಹ ಒಂದು ಸಂಶೋಧನೆಯನ್ನು ಕ್ಯೆಗೆತ್ತಿಕೊಳ್ಳುವ ಹಿಂದಿರುವ ಒಳಸಂಚು ಇತ್ಯಾದಿಗಳ ನೆಲೆಯಿಂದ ಚರ್ಚಿಸತೊಡಗಿದರೆ ಮೇಲಿನ ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ.

-ಜೆ.ಎಸ್.ಸದಾನಂದ

ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ, ಕುವೆಂಪು ವಿಶ್ವವಿದ್ಯಾಲಯ.

ಪ್ರತಿಕ್ರಿಯಿಸಿ (+)