ಮಂಗಳವಾರ, ಮೇ 18, 2021
31 °C

ಆಂಧ್ರದಲ್ಲಿ ಗುತ್ತಿಗೆ ಪಡೆದದ್ದು ತೋರಿಕೆಗೆ ಮಾತ್ರ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಜನಾರ್ದನ ರೆಡ್ಡಿ ಒಡೆತನದ ಮೆಸರ್ಸ್ ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್ ಲಿಮಿಟೆಡ್ ಆಂಧ್ರದಲ್ಲಿ ಗುತ್ತಿಗೆ ಪಡೆದಿದ್ದ ಪ್ರದೇಶದಲ್ಲಿ ಗಣಿಗಾರಿಕೆಯನ್ನೇ ನಡೆಸುತ್ತಿರಲಿಲ್ಲ. ಒಟ್ಟು ಅಗೆದ 5 ಲಕ್ಷ 48 ಸಾವಿರ 895 ಟನ್ ಅದಿರಿನ ಪೈಕಿ 40 ಸಾವಿರ 387 ಟನ್ ಮಾತ್ರ ನಿಗದಿತ ಗುತ್ತಿಗೆ ಪ್ರದೇಶಕ್ಕೆ ಸೇರಿದ್ದು. ಉಳಿದ ಅದಿರೆಲ್ಲಾ ಗುತ್ತಿಗೆ ಪ್ರದೇಶಕ್ಕೆ ಹೊರತಾದ ಜಾಗದಲ್ಲಿ ಅಗೆದು ಇಲ್ಲಿ ರಾಶಿ ಹಾಕಿದ್ದು ಎಂದು ಸಿಬಿಐ ಹೇಳಿದೆ.ಬೇರೆಡೆಯಿಂದ ತಂದ ಅದಿರನ್ನು ರಾಶಿ ಹಾಕಲು ಹಾಗೂ ಅಕ್ರಮ ಅದಿರನ್ನು ಸಕ್ರಮವಾಗಿ ಪರಿವರ್ತಿಸಿ ಮಾರಾಟ ಮಾಡಲು ಆಂಧ್ರದಲ್ಲಿ ಗುತ್ತಿಗೆ ಪಡೆದಿದ್ದ ಪ್ರದೇಶವನ್ನು ಕಂಪೆನಿ ಬಳಸುತ್ತಿತ್ತು ಎಂದು ನಿಯೋಜಿತ ನ್ಯಾಯಾಲಯಕ್ಕೆ ಸಲ್ಲಿಸಿದ 10 ಪುಟಗಳ ರಿಮ್ಯಾಂಡ್ ನೋಟ್‌ನಲ್ಲಿ ಸಿಬಿಐ ದಾಖಲಿಸಿದೆ.ರಾಜ್ಯದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರು ಗುತ್ತಿಗೆ ಪರವಾನಗಿ ನೀಡಿದ್ದ 68.5 ಹೆಕ್ಟೇರ್ ಪ್ರದೇಶದಲ್ಲಿ 2007ರಿಂದ 2010ರವರೆಗಿನ ಅವಧಿಯಲ್ಲಿ ಯಾವುದೇ ಗಣಿಗಾರಿಕೆ ನಡೆದಿಲ್ಲ. ರಾಜಶೇಖರ ರೆಡ್ಡಿ ನೇತೃತ್ವದ ಸರ್ಕಾರ 68.52 ಹೆಕ್ಟೇರ್ ಗುತ್ತಿಗೆ ನೀಡಲು ನಿರ್ಧರಿಸಿದ್ದು 2007ರ ಆ.18ರಂದು. ಅದಾದ ಕೇವಲ 24 ಗಂಟೆಗಳೊಳಗೆ ಅದು ಜಾರಿಗೆ ಬಂತು.ಆದರೆ ಆಂಧ್ರ ಸರ್ಕಾರದ ನಿಗಮವಾದ ಎಪಿಎನ್‌ಎಂಡಿಸಿಗೆ 93 ಹೆಕ್ಟೇರ್ ಪ್ರದೇಶವನ್ನು ಗುತ್ತಿಗೆ ನೀಡುವ ಪ್ರಸ್ತಾವಕ್ಕೆ ಈತನಕ ಅನುಮೋದನೆ ದೊರೆತಿಲ್ಲ ಎಂಬುದನ್ನು ಸಿಬಿಐ ಪ್ರಸ್ತಾಪಿಸಿದೆ.ಸಂಸ್ಥೆಯ ಅಧಿಕಾರಿಗಳು ಗಣಿ ಗುತ್ತಿಗೆ ಪ್ರದೇಶದ ಖುದ್ದು ಪರಿಶೀಲನೆ ನಡೆಸಿದ್ದಾರೆ.ಅಲ್ಲಿದ್ದ ಕಬ್ಬಿಣದ ಅದಿರನ್ನು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ), ಭಾರತೀಯ ಗಣಿ ಬ್ಯೂರೊ ಹಾಗೂ ಮತ್ತಿತರ ಸಂಸ್ಥೆಗಳಿಂದ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಇದರ ಜತೆಗೆ ಉಪಗ್ರಹ ಚಿತ್ರಗಳು, ದೂರ ಸಂವೇದಿ ತಂತ್ರಜ್ಞಾನದಿಂದ ತೆಗೆದ ಛಾಯಾಚಿತ್ರಗಳು, ಥ್ರೀ ಡಿ ಭೌಗೋಳಿಕ ಲೇಸರ್ ಸ್ಕ್ಯಾನರ್‌ಗಳನ್ನು ಬಳಸಿ ಅದಿರು ಮೂಲ ಹಾಗೂ ಅದರ ಮೌಲ್ಯ ಅಂದಾಜು ಮಾಡಲಾಗಿದೆ ಎಂದು ತನಿಖಾ ಸಂಸ್ಥೆ ವಿವರಿಸಿದೆ.ತನ್ನ ಅಕ್ರಮ ಗಣಿ ಚಟುವಟಿಕೆಗಳಿಗೆ ಸಕ್ರಮದ ಸಮರ್ಥನೆ ನೀಡುವ ಏಕೈಕ ಉದ್ದೇಶದಿಂದ ಒಎಂಸಿಪಿಎಲ್ ಈ ಗಣಿ ಜಾಗವನ್ನು ಗುತ್ತಿಗೆ ಪಡೆದಿದೆ. ಇದಕ್ಕಾಗಿ ಕಂಪೆನಿ ಆಂಧ್ರ ಅಧಿಕಾರಿಗಳನ್ನು ಬಳಸಿಕೊಂಡು ಸಂಚು ರೂಪಿಸಿದೆ. ಬೇರೆಡೆಗಳಿಂದ ತಂದ ಅದಿರನ್ನು ಇಲ್ಲಿ ರಾಶಿ ಹಾಕುತ್ತಿದ್ದ ಕಂಪೆನಿ ನಂತರ ಅನಂತಪುರದ ಎಡಿಎಂಜಿಯವರು ನೀಡಿದ ಪರ್ಮಿಟ್‌ಗಳನ್ನು ಬಳಸಿಕೊಂಡು ಅದನ್ನು ಸಾಗಿಸುತ್ತಿತ್ತು ಎಂದು ದಾಖಲಿಸಿದೆ.ಸುಪ್ರೀಂಕೋರ್ಟ್ ನೇಮಿಸಿದ ಕೇಂದ್ರ ಉನ್ನತಾಧಿಕಾರಿ ಸಮಿತಿ ಮತ್ತು ಕರ್ನಾಟಕ ಲೋಕಾಯುಕ್ತ ತನಿಖಾ ಸಂಸ್ಥೆಗಳಿಗೆ ಕೂಡ ಈ ಅಂಶಗಳು ಮನವರಿಕೆಯಾಗಿದ್ದವು. ಆದರೆ ಗುತ್ತಿಗೆ ಪ್ರದೇಶ ಆಂಧ್ರ ವ್ಯಾಪ್ತಿಗೆ ಸೇರಿದ್ದರಿಂದ ಲೋಕಾಯುಕ್ತ ಏನನ್ನೂ ಮಾಡಲು ಆಗಲಿಲ್ಲ.ಆದರೆ ಸಿವಿಸಿ ವರದಿ ಪರಿಗಣಿಸಿದ ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ನಿರ್ದೇಶಿಸಿತು. ವೈ.ಎಸ್.ರಾಜಶೇಖರ ರೆಡ್ಡಿ ನೇತೃತ್ವದ ಆಂಧ್ರ ಸರ್ಕಾರ ಆಗ ಮೌನ ವಹಿಸಿತಲ್ಲದೆ, ಸಿಬಿಐ ತನಿಖೆಗೆ ತಡೆಯಾಜ್ಞೆ ತರಲು ಒಎಂಸಿಪಿಎಲ್‌ಗೆ ಅನುಮತಿ ನೀಡಿತು.ಆದರೆ ನಂತರ ಬಂದ ಕೆ.ರೋಸಯ್ಯ ನೇತೃತ್ವದ ಸರ್ಕಾರ ತಡೆಯಾಜ್ಞೆ ತೆರವುಗೊಳಿಸಿ ತನಿಖೆ ಮುಂದುವರಿಸಲು ಕೋರಿ ರಿಟ್ ಅರ್ಜಿ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿತು ಎಂಬುದನ್ನೂ ಕೋರ್ಟ್ ಗಮನಕ್ಕೆ ತರಲಾಗಿದೆ.ತನಿಖೆ ಹಂತದಲ್ಲಿ 2530 ದಾಖಲೆಗಳನ್ನು ಪರಿಶೀಲಿಸಲಾಗಿದೆ; 112 ಅದಿರು ಮಾದರಿಗಳನ್ನು ಸಂಗ್ರಹಿಸಿ ಅದರಲ್ಲಿನ ಅದಿರು ಗುಣಮಟ್ಟ ಅಳೆಯಲಾಗಿದೆ; 85 ಸಾಕ್ಷಿಗಳ ಹೇಳಿಕೆಗಳನ್ನು ಕಲೆ ಹಾಕಲಾಗಿದೆ ಎಂದು ಸಿಬಿಐ ತಿಳಿಸಿದೆ.ಒಎಂಸಿಪಿಎಲ್ ಮಾಲಿಕ ಜನಾರ್ದನ ರೆಡ್ಡಿ  ಮತ್ತು ವ್ಯವಸ್ಥಾಪಕ ಬಿ.ವಿ.ಶ್ರೀನಿವಾಸ ರೆಡ್ಡಿ ಅವರ ಬಂಧನ ಹಾಗೂ ಕಸ್ಟಡಿ ಕೋರಿರುವ ಸಿಬಿಐ ಈ ಸಂಬಂಧ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದೆ.ಗಣಿ ಗುತ್ತಿಗೆ ಪಡೆಯುವಲ್ಲಿ ರೆಡ್ಡಿ ರೂಪಿಸಿದ ಒಳಸಂಚಿನಲ್ಲಿ ಭಾಗಿಯಾದ ಆಂಧ್ರದ ಸರ್ಕಾರಿ ಅಧಿಕಾರಿಗಳು ಯಾರ‌್ಯಾರು? ಸರ್ಕಾರಿ ನೌಕರರಿಗೆ ಇದಕ್ಕಾಗಿ ನೀಡಿದ ಲಂಚ ಎಷ್ಟು? ಅಕ್ರಮ ಗಣಿಗಾರಿಕೆಯ ನಿರ್ದಿಷ್ಟ ಮೂಲ ಯಾವುದು? ಅಕ್ರಮ ಅದಿರನ್ನು ಯಾರಿಗೆ ಮಾರಾಟ ಮಾಡಲಾಗುತ್ತಿತ್ತು? ಅಕ್ರಮ ಹಣವನ್ನು ಯಾರಿಗೆ, ಎಷ್ಟು ಪ್ರಮಾಣದಲ್ಲಿ ಕೊಡಲಾಗುತ್ತಿತ್ತು?- ಇವೆಲ್ಲವುಗಳ ಬಗ್ಗೆ ತಾನು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಬೇಕಿದೆ ಎಂದು ವಿವರಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.