ಶನಿವಾರ, ನವೆಂಬರ್ 23, 2019
23 °C
ವಿದ್ಯುತ್ ದರ ಏರಿಕೆಗೆ ಪ್ರತಿಪಕ್ಷಗಳ ವಿರೋಧ

ಆಂಧ್ರ ಬಂದ್ ಸಂಪೂರ್ಣ ಶಾಂತಿಯುತ

Published:
Updated:
ಆಂಧ್ರ ಬಂದ್ ಸಂಪೂರ್ಣ ಶಾಂತಿಯುತ

ಹೈದರಾಬಾದ್ (ಪಿಟಿಐ): ಆಂಧ್ರಪ್ರದೇಶದಲ್ಲಿ ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ಪ್ರತಿಪಕ್ಷಗಳು ಮಂಗಳವಾರ ಕರೆ ನೀಡಿದ್ದ ಬಂದ್‌ಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಂದ್  ಸಂಪೂರ್ಣ ಶಾಂತಿಯುತವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖವಾಗಿ ಹೈದರಾಬಾದ್ ಮತ್ತು ವಿಶಾಖಪಟ್ಟಣಂನಲ್ಲಿ ಬ್ಯಾಂಕಿಂಗ್, ವಾಣಿಜ್ಯ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಹೊಟೇಲ್ ಸಂಪೂರ್ಣ ಮುಚ್ಚಲ್ಪಟ್ಟಿದ್ದವು.

ಆರ್‌ಟಿಸಿ ಮೂಲಗಳ ಪ್ರಕಾರ ಬಂದ್ ಹಿನ್ನೆಲೆಯಲ್ಲಿ ನಗರ ಮತ್ತು ದೂರದ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಪ್ರತಿಪಕ್ಷಗಳು ಕರೆ ನೀಡಿದ್ದ ಬಂದ್‌ಗೆ ಪ್ರಮುಖವಾಗಿ ತೆಲುಗು ದೇಶಂ,  ವೈಎಸ್‌ಆರ್ ಕಾಂಗ್ರೆಸ್ ಸೇರಿದಂತೆ ಇತರೆ ಪ್ರತಿಪಕ್ಷಗಳು ಬೆಂಬಲ ನೀಡಿದ್ದವು.

ಬಿಜೆಪಿ ಸಹ ಪ್ರತ್ಯೇಕವಾಗಿ ಬಂದ್‌ಗೆ ಕರೆ ನೀಡಿತ್ತು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಬಸ್ ಡಿಪೋಗಳ ಬಳಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಹಾತ್ಮಾಗಾಂಧಿ ಬಸ್ ನಿಲ್ದಾಣದ ಬಳಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಲು ಯತ್ನಿಸಿದ ಸಿಪಿಐ ರಾಜ್ಯ ಕಾರ್ಯದರ್ಶಿ ಕೆ. ನಾರಾಯಣ್ ಮತ್ತು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಬಿ. ವಿ. ರಾಘವುಲು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದಕ್ಕೂ ಮುನ್ನ ತಿಂಗಳಿಗೆ 200 ಯುನಿಟ್ ವರೆಗೆ ಬಳಕೆ ಮಾಡುವವರಿಗೆ ದರ ಏರಿಕೆ ಅನ್ವಯಿಸುವುದಿಲ್ಲ ಎಂದು ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಅವರು ತಿಳಿಸಿದ್ದರು.

ಆದರೆ ಈಗಾಗಲೇ ಇಂಧನದ ಮೇಲಿನ ಹೆಚ್ಚುವರಿ ತೆರಿಗೆ ಹೊಂದಾಣಿಕೆ ಜನತೆಗೆ ಹೊರೆಯಾಗಿದೆ. ಹೀಗಾಗಿ ವಿದ್ಯುತ್ ದರ ಏರಿಕೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿ ಬಂದ್‌ಗೆ ಕರೆ ನೀಡಿದ್ದವು.

ಆಂಧ್ರಪ್ರದೇಶದ ವಿದ್ಯುತ್ ನಿಯಂತ್ರಣ ಸಮಿತಿಯು 2013-14ನೇ ಹಣಕಾಸು ವರ್ಷದಲ್ಲಿ ಹೊಸ ವಿದ್ಯುತ್ ದರದ ಆದೇಶವನ್ನು ಜಾರಿಗೊಳಿಸುವ ಮೂಲಕ ಏಪ್ರಿಲ್ 1ರಿಂದ ಗ್ರಾಹಕರ ಮೇಲೆ ರೂ. 6, 173 ಕೋಟಿ ಹೆಚ್ಚುವರಿ ತೆರಿಗೆ ವಸೂಲು ಮಾಡುವಂತೆ ವಿದ್ಯುತ್ ವಿತರಣಾ ಕಂಪೆನಿಗಳಿಗೆ ಅವಕಾಶ ನೀಡಿದೆ.

ಪ್ರತಿಕ್ರಿಯಿಸಿ (+)