ಸೋಮವಾರ, ನವೆಂಬರ್ 18, 2019
25 °C

ಆಂಧ್ರ: `108'ರ ಮಾದರಿ ಪೊಲೀಸ್ ಸೇವೆ

Published:
Updated:

ಹೈದರಾಬಾದ್: ಬೇಕೆಂದಾಗ 108ಕ್ಕೆ ಕರೆ ಮಾಡಿ ಆಂಬುಲೆನ್ಸ್ ಸೇವೆ ಪಡೆಯುವ ಮಾದರಿಯಲ್ಲೇ ಇನ್ನು ಮುಂದೆ ಪೊಲೀಸರ ಸಹಾಯವನ್ನೂ ಪಡೆಯಬಹುದು ಎನ್ನುತ್ತಿದೆ ಆಂಧ್ರ ಸರ್ಕಾರ.ಇದುವರೆಗೂ ಆಂಧ್ರದ ಪ್ರಮುಖ ನಗರಗಳಲ್ಲಿ ಮಾತ್ರ ಲಭ್ಯವಿದ್ದ ಈ ಸೇವೆಯನ್ನು  ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗಿದೆ. ಪೊಲೀಸರ ನೆರವು ಪಡೆಯಲು 100 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದರೆ ಸಾಕು. ತ್ವರಿತವಾಗಿ ನೆರವಿಗೆ ಪೊಲೀಸರು ಧಾವಿಸುತ್ತಾರೆ.ರಾಜ್ಯದಲ್ಲಿ `108' ಆಂಬುಲೆನ್ಸ್ ಸೇವೆ ಯಶಸ್ವಿಯಾದ ಬೆನ್ನಲ್ಲೇ ಪೊಲೀಸ್ ಸೇವೆಯನ್ನೂ ಚಾಲ್ತಿಗೆ ತಂದಿದೆ. ಅಪಾಯಕ್ಕೆ ಸಿಲುಕಿದ ಯಾವುದೇ ವ್ಯಕ್ತಿ 100 ಸಂಖ್ಯೆಗೆ ಕರೆ ಮಾಡಿ ಈ ಸೇವೆ ಪಡೆಯಬಹುದು.ಕಾಂಪೊಲಿ ಕಾಲ್ ಸೆಂಟರ್‌ನ ಸಹಭಾಗಿತ್ವದೊಂದಿಗೆ ಸರ್ಕಾರ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ.ಹೇಗೆ ಕಾರ್ಯ ನಿರ್ವಹಣೆ:  ಇದು ಕಾಲ್ ಸೆಂಟರ್ ರೀತಿ ಕಾರ್ಯ ನಿರ್ವಹಿಸಲಿದ್ದು, 100 ಟೋಲ್ ಫ್ರೀ ಸಂಖ್ಯೆಗೆ ಮೊಬೈಲ್‌ಅಥವಾ ಸ್ಥಿರ ದೂರವಾಣಿ ಯಾವುದರಿಂದ ಕರೆ ಮಾಡಿದರೂ ಕಾಂಪೊಲಿ ಕಾಲ್ ಸೆಂಟರ್‌ಗೆ ಮೊದಲು ಕರೆ ತಲುಪುತ್ತದೆ. ಅಲ್ಲಿ ವಿಶೇಷ ತರಬೇತಿ ಪಡೆದ ಪೊಲೀಸ್ ಸಿಬ್ಬಂದಿ ಕರೆ ಬಂದ ಸ್ಥಳವನ್ನು ಜಿಐಎಸ್ ಹಾಗೂ ಜಿಪಿಎಸ್ ಮೂಲಕ ಪತ್ತೆ ಹಚ್ಚಿ, ಆ ಸ್ಥಳದ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕಂಟ್ರೊಲ್ ರೂಮ್‌ಗೆ ಮಾಹಿತಿ ರವಾನೆ ಮಾಡುತ್ತಾರೆ. ಬಳಿಕ ವ್ಯಕ್ತಿ ಕರೆ ಮಾಡಿದ ಸ್ಥಳಕ್ಕೆ ಸಮೀಪವಿರುವ ಪೊಲೀಸ್ ಠಾಣೆಗೆ ರವಾನೆಯಾಗಿ  ಸಿಬ್ಬಂದಿ ಸಹಾಯಕ್ಕೆ ಧಾವಿಸುತ್ತಾರೆ.ಈ ಪ್ರಕ್ರಿಯೆ ಒಂದು ನಿಮಿಷದಲ್ಲಿ ನಡೆಯುತ್ತದೆ. ಹಾಗೂ ಪ್ರತಿಯೊಂದು ಕರೆಯನ್ನೂ ರೆಕಾರ್ಡ್ ಮಾಡುವ ವ್ಯವಸ್ಥೆಯೂ ಇದರಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)