ಬುಧವಾರ, ಜೂನ್ 16, 2021
23 °C

ಆಂಬುಲೆನ್ಸ್ ಜಾಗೃತಿಗಾಗಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರಣಕ್ಕಾಗಿ ನಗರದ ಹಲವೆಡೆ ಅಭಿಯಾನ ಕೈಗೊಳ್ಳಲು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಪ್ರಯೋಗಾರ್ಥವಾಗಿ ಜಾಗೃತಿ ಅಭಿಯಾನ ಆರಂಭವಾಗಲಿದ್ದು, ಹಂತ ಹಂತವಾಗಿ ಇತರೆ ರಸ್ತೆಗಳಲ್ಲೂ ಅಭಿಯಾನ ನಡೆಯಲಿದೆ. ರೋಗಿಗಳು ಹಾಗೂ ಅಪಘಾತಗಳಲ್ಲಿ ಗಾಯಗೊಳ್ಳುವವರ ಪ್ರಾಣ ರಕ್ಷಣೆಯ ಉದ್ದೇಶಕ್ಕಾಗಿ ಪೊಲೀಸರು ಈ ನಿರ್ಧಾರ ಕೈಗೊಂಡಿದ್ದಾರೆ.`ರೋಗಿಗಳಿಗೆ ಮತ್ತು ಅಪಘಾತಗಳಲ್ಲಿ ಗಾಯಗೊಳ್ಳುವವರಿಗೆ ಸಕಾಲಕ್ಕೆ ಚಿಕಿತ್ಸೆ ಲಭ್ಯವಾಗದಿದ್ದರೆ ಸಾವನ್ನಪ್ಪುತ್ತಾರೆ. ಈ ಹಿನ್ನೆಲೆಯಲ್ಲಿ ರೋಗಿಗಳು ಹಾಗೂ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವ ಆಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಇತರೆ ವಾಹನಗಳ ಸವಾರರು ಸ್ಥಳಾವಕಾಶ ಕಲ್ಪಿಸಿಕೊಡುವುದು ಬಹಳ ಮುಖ್ಯ. ಈ ಕಾರಣಕ್ಕಾಗಿ ವಾಹನ ಸವಾರರಲ್ಲಿ ಅರಿವು ಮೂಡಿಸಲು ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ~ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಡಾ.ಎಂ.ಎ.ಸಲೀಂ `ಪ್ರಜಾವಾಣಿ~ಗೆ ತಿಳಿಸಿದರು.ಹಳೆ ವಿಮಾನ ನಿಲ್ದಾಣ ರಸ್ತೆಯ ಸುತ್ತಮುತ್ತಲ ಪ್ರದೇಶದಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಿರುವುದರಿಂದ ಸಹಜವಾಗಿಯೇ ಆ ಭಾಗದಲ್ಲಿ ಆಂಬುಲೆನ್ಸ್‌ಗಳ ಓಡಾಟ ಹೆಚ್ಚಿರುತ್ತದೆ. ಆದ್ದರಿಂದ ಈ ರಸ್ತೆಯಲ್ಲಿ ಸದ್ಯದಲ್ಲೇ ಅಭಿಯಾನ ನಡೆಸಲಾಗುತ್ತಿದೆ. ಅಂತೆಯೇ ಆಸ್ಪತ್ರೆಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಮತ್ತು ಹೆಚ್ಚು ವಾಹನ ದಟ್ಟಣೆ ಇರುವ ಸ್ಥಳಗಳಲ್ಲೂ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.ಆಂಬುಲೆನ್ಸ್‌ಗಳ ಸಂಚಾರಕ್ಕೆ ಸ್ಥಳಾವಕಾಶ ಕಲ್ಪಿಸಿಕೊಡಬೇಕೆಂಬ ಸಂದೇಶವನ್ನು ಒಳಗೊಂಡ ಫಲಕಗಳನ್ನು ರಸ್ತೆ  ಇಕ್ಕೆಲಗಳಲ್ಲಿ ಅಳವಡಿಸಲಾಗುತ್ತದೆ. ಅಲ್ಲದೇ ಆ ಸಂದೇಶವನ್ನು ಒಳಗೊಂಡ ಕರಪತ್ರಗಳನ್ನು ವಾಹನ ಸವಾರರಿಗೆ ಹಂಚಲಾಗುತ್ತದೆ.ಜತೆಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಪ್ರಮುಖ ವೃತ್ತ ಮತ್ತು ಜಂಕ್ಷನ್‌ಗಳಲ್ಲಿ ನಿಯೋಜಿಸಿ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.ದಂಡ ವಿಧಿಸಲಾಗುತ್ತದೆ: ಆಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಇತರೆ ವಾಹನಗಳ ಸವಾರರು ಅವಕಾಶ ಕಲ್ಪಿಸಿ ಕೊಡಬೇಕೆಂಬ ನಿಯಮ ಮೋಟಾರು ವಾಹನ ಕಾಯ್ದೆಯಲ್ಲೇ ಇದೆ. ಆ ನಿಯಮವನ್ನು ಉಲ್ಲಂಘಿಸಿದರೆ ನೂರು ರೂಪಾಯಿ ದಂಡ ಸಹ ವಿಧಿಸಬಹುದಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಈ ನಿಯಮವನ್ನು ಪಾಲಿಸಲಾಗುತ್ತಿದ್ದು, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಸಲೀಂ ಹೇಳಿದರು.ನಗರದಲ್ಲೂ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಆಂಬುಲೆನ್ಸ್‌ಗಳ ಸಂಚಾರಕ್ಕೆ ಸ್ಥಳಾವಕಾಶ ನೀಡದೆ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಇನ್ನು ಮುಂದೆ ದಂಡ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.