ಆಂಬ್ರೋಸ್ ಅಂತ್ಯಸಂಸ್ಕಾರ

7

ಆಂಬ್ರೋಸ್ ಅಂತ್ಯಸಂಸ್ಕಾರ

Published:
Updated:

ಉಜಿರೆ: ಆಫ್ರಿಕದ ಐವರಿ ಕೋಸ್ಟ್‌ನಲ್ಲಿ ಪೋಪ್ ಪ್ರತಿನಿಧಿಯಾಗಿದ್ದ ಬೆಳ್ತಂಗಡಿ ಮೂಲದ ಆರ್ಚ್ ಬಿಷಪ್ ಆಂಬ್ರೋಸ್ ಮಾಡ್ತಾ (56) ಅವರ ಪಾರ್ಥಿವ ಶರೀರವನ್ನು ಶನಿವಾರ ಸಂಜೆ ಬೆಳ್ತಂಗಡಿಯಲ್ಲಿರುವ ಅವರ ಮನೆಗೆ ತರಲಾಯಿತು. ಧಾರ್ಮಿಕ ವಿಧಿ- ವಿಧಾನಗಳ ಬಳಿಕ ಹೋಲಿ ರಿಡೀಮರ್ ಚರ್ಚ್‌ನಲ್ಲಿ ಬಲಿಪೂಜೆ ನೆರವೇರಿಸಿ ಅಂತ್ಯ ಸಂಸ್ಕಾರ ನಡೆಸಲಾಯಿತು.ನಾಡಿನೆಲ್ಲೆಡೆಯಿಂದ ಬಂದ ಧರ್ಮಗುರುಗಳು ಹಾಗೂ ಸಾವಿರಾರು ಮಂದಿ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು. ಐವರಿ ಕೋಸ್ಟ್‌ನ ವಿದೇಶಾಂಗ ಸಚಿವ ಕೋಫಿ ಬಿಬಿ ಶ್ರದ್ಧಾಂಜಲಿ ಅರ್ಪಿಸಿ, ಆಂಬ್ರೋಸ್ ಮಾಡ್ತಾರ ಕರ್ತವ್ಯ ಪ್ರಜ್ಞೆ, ಸೇವಾ ಕಳಕಳಿ ಮತ್ತು ಮಾನವೀಯತೆಯನ್ನು ಶ್ಲಾಘಿಸಿದರು.ಭಾರತದಲ್ಲಿರುವ ಪೋಪ್ ಪ್ರತಿನಿಧಿ ಆರ್ಚ್ ಬಿಷಪ್ ಸಾಲ್ಲೊತ್ತೋರ್ ಪಿನ್ನಾಕಿಯೊ ನೇತೃತ್ವದಲ್ಲಿ ದಿವ್ಯ ಬಲಿಪೂಜೆ ನಡೆಯಿತು. ಬಳಿಕ ಬಲಿ ಪೀಠದ ಎಡಭಾಗದಲ್ಲಿ ವಿಶೇಷವಾಗಿ ಸಜ್ಜುಗೊಳಿಸಿದ ಜಾಗದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪಾರ್ಥಿವ ಶರೀರವನ್ನು ದಫನ ಮಾಡಲಾಯಿತು.ಆಂಬ್ರೋಸ್ ಮಾಡ್ತಾ ಇದೇ 9 ರಂದು ಐವರಿ ಕೋಸ್ಟ್‌ನಲ್ಲಿ ಸಂಭವಿಸಿದ್ದ ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್, ಬೆಂಗಳೂರಿನ ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್, ಮಂಗಳೂರಿನ ಬಿಷಪ್ ಡಾ. ಅಲೋಶಿಯಸ್ ಪೌಲ್ ಡಿಸೋಜ, ಪುತ್ತೂರಿನ ಗೀ ವರ್ಗೀಸ್ ಡಿವಾನೋಸ್, ಉಡುಪಿಯ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ, ಚಿಕ್ಕಮಗಳೂರಿನ ಅಂತೋಣಿ ಸ್ವಾಮಿ, ಜೈಪುರದ ಒಸ್ವಾಲ್ಡ್ ಲೂಯಿಸ್, ಲಖನೌದ ಜೆರಾಲ್ಡ್ ಮಥಾಯಿಸ್, ಬೆಳ್ತಂಗಡಿಯ ಬಿಷಪ್ ಲಾರೆನ್ಸ್ ಮುಕ್ಕುಯಿ, ಹೆನ್ರಿ ಡಿ'ಸೋಜ ಅಂತಿಮ ನಮನ ಸಲ್ಲಿಸಿದರು.ದಕ್ಷಿಣ ಕನ್ನಡ  ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ, ನಗರ ಪಂಚಾಯಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಕೆ.ಹರೀಶ್ ಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry