ಆಕರ್ಷಕ, ಆಸಕ್ತಿಕರ ಮೇಳ

7

ಆಕರ್ಷಕ, ಆಸಕ್ತಿಕರ ಮೇಳ

Published:
Updated:

ಚಿಕ್ಕಬಳ್ಳಾಪುರ: ಒಂದೆಡೆ ಮಳಿಗೆಗಳ ಸಮೂಹ, ಮತ್ತೊಂದೆಡೆ  ಹಣ್ಣುತರಕಾರಿಗಳ ಅಚ್ಚುಕಟ್ಟು ಅಲಂಕಾರ. 12 ಸಾವಿರ ಗುಲಾಬಿ ಹೂಗಳಿಂದ ಅಲಂಕೃತಗೊಂಡ ನಂದಿ ಗಮನಸೆಳೆದರೆ, ಇನ್ನೊಂದೆಡೆ ಬಾಳೆದಿಂಡಿನ ಶಿವನ ಮಂಟಪ ಕಣ್ಮನ ಸೆಳೆಯುತ್ತದೆ. ದಣಿವಾದರೆ ನೆರಳು ನೀಡಲು ಮಾವಿನ ಮರಗಳಿವೆ. ಬಾಯಾರಿದರೆ ಎಳನೀರು ಮತ್ತು ಮಜ್ಜಿಗೆ ಸಿಗುತ್ತದೆ. ಹಸಿವಾದರೆ ರುಚಿಕಟ್ಟಾದ ಊಟ ಸಿದ್ಧ. ತಲುಪಬೇಕಿರುವ ಊರು ದೂರವಿದ್ದರೆ ಸಿಗುತ್ತದೆ ಸಾರಿಗೆ ಬಸ್!ತಾಲ್ಲೂಕಿನ ನಂದಿ ಕ್ರಾಸ್ ಸಮೀಪದ ಪಿಆರ್‌ಎಸ್ ತೋಟಗಾರಿಕೆ ಕ್ಷೇತ್ರದಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನ ಮತ್ತು ತೋಟಗಾರಿಕೆ ಮೇಳದ ಚಿತ್ರಣವಿದು. ಶುಕ್ರವಾರದಿಂದ ಭಾನುವಾರದವರೆಗೆ ನಡೆಯುವ ಮೇಳವು ವೈಶಿಷ್ಟಮಯ ಸಂಗತಿಗಳಿಂದ ಕೂಡಿದೆ. ಕೃಷಿ, ತೋಟಗಾರಿಕೆ ಇಲಾಖೆಯೂ ಸೇರಿದಂತೆ ಖಾಸಗಿ ಸಂಘ-ಸಂಸ್ಥೆಗಳು ಮಳಿಗೆಗಳನ್ನು ಹಾಕಿದ್ದು, ರೈತ ಸಮುದಾಯಕ್ಕೆ ಮಾಹಿತಿ ದೊರೆಯುತ್ತಿದೆ.ಚಿಕ್ಕಬಳ್ಳಾಪುರ ಜಿಲ್ಲೆಯು ಪುಷ್ಪೋದ್ಯಮದಲ್ಲಿ ಮಾತ್ರವಲ್ಲದೆ ತೋಟಗಾರಿಕೆ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ. ಆದರೆ ನಿರೀಕ್ಷಿಸಿದಂತೆ ತಕ್ಕ ಮಾನ್ಯತೆ ಸಿಕ್ಕಿಲ್ಲ. ಈ ಕಾರಣದಿಂದಲೇ ಇಲ್ಲಿ ವೈಶಿಷ್ಟ್ಯಗಳು ಪೂರ್ಣಪ್ರಮಾಣದಲ್ಲಿ ಬೆಳಕಿಗೆ ಬರಲು ಸಾಧ್ಯವಾಗಿರಲಿಲ್ಲ. ಆದರೆ ಈ ಮೇಳವನ್ನು ಆಯೋಜಿಸುವ ಮೂಲಕ ಪುಷ್ಪೋದ್ಯಮ, ತೋಟಗಾರಿಕೆ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೆ ಪ್ರೋತ್ಸಾಹಿಸಲು ಯೋಜಿಸಿದ್ದೇವೆಂದು ತೋಟಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಬೃಹತ್ ಮಟ್ಟದಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ತೋಟಗಾರಿಕೆ ಮೇಳವನ್ನು ಆಯೋಜಿಸಿದ್ದ ಅನುಭವವಿತ್ತು. ಅದರ ಆಧಾರದ ಮೇಲೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ವೈವಿಧ್ಯಮಯ ತೋಟಗಾರಿಕೆ ಮೇಳ ಆಯೋಜಿಸಲು ಸಾಧ್ಯವಾಗಿದೆ.ರೈತರಿಗೆ ಉಪಯುಕ್ತ ಮಾಹಿತಿ ನೀಡುವ ಜೊತೆಗೆ ಮೇಳವು ಆಕರ್ಷಕವಾಗಿರಬೇಕು ಎಂಬ ಉದ್ದೇಶ ನಮ್ಮದು. ಎಲ್ಲರ ಸಹಕಾರದಿಂದ ಉತ್ತಮ ಮೇಳವನ್ನು ನಡೆಸಲು ಪ್ರಯತ್ನಿಸಿದ್ದೇವೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಲಲಿತಾ `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry