ಶುಕ್ರವಾರ, ಡಿಸೆಂಬರ್ 13, 2019
20 °C

ಆಕರ್ಷಕ ಪಥಸಂಚಲನ, ಸಂಸ್ಕೃತಿ ಸಮ್ಮಿಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಕರ್ಷಕ ಪಥಸಂಚಲನ, ಸಂಸ್ಕೃತಿ ಸಮ್ಮಿಲನ

ನವದೆಹಲಿ (ಪಿಟಿಐ): ಚುಮು ಚುಮು ಬೆಳಗು, ಸುತ್ತೆಲ್ಲ ಮಂಜಿನ ಹೊದಿಕೆ, ಭವ್ಯ ರಾಜಮಾರ್ಗದ ಇಕ್ಕೆಲಗಳಲ್ಲಿ ಕಣ್ಣುಹಾಯಿಸಿದಷ್ಟು ದೂರಕ್ಕೂ ಪಥಸಂಚಲನ, ಕೊರೆಯುವ ಚಳಿಯನ್ನೂ ಲೆಕ್ಕಿಸದ ಜನರ ಸಂಭ್ರಮ, ಸೇನೆಯ ದಿಗ್ದರ್ಶನ, ಸಂಸ್ಕೃತಿ ಪರಂಪರೆಯ ಸಮ್ಮಿಲನ...ರಾಷ್ಟ್ರದ ರಾಜಧಾನಿಯಲ್ಲಿ ಗುರುವಾರ 63ನೇ ಗಣರಾಜ್ಯೋತ್ಸವದ ಸಡಗರದಲ್ಲಿ ಮನಸೂರೆಗೊಂಡ ಬಿಡಿ ಚಿತ್ರಗಳಿವು.ಬಾನ ತುಂಬ ಹಾರುತ್ತಿದ್ದ ಹೆಲಿಕಾಪ್ಟರ್‌ಗಳು, ಶ್ವಾನದಳ, ಮೂಲೆ ಮೂಲೆಯಲ್ಲೂ ಸೇನಾ ಸಿಬ್ಬಂದಿಯ ಹದ್ದಿನ ಕಣ್ಣು, ಪೊಲೀಸ್- ಅರೆಸೇನಾ ಪಡೆಗಳ ಸರ್ಪಗಾವಲು, ನೆಲ-ಮುಗಿಲ ಉದ್ದಕ್ಕೂ ಕಣ್ಗಾವಲು... ಹೀಗೆ ಇಡೀ ನಗರ ಅಕ್ಷರಶಃ ಏಳು ಸುತ್ತಿನ ಕೋಟೆಯೇ ಆಗಿತ್ತು.ಜನರಲ್ ಆಫೀಸರ್ ಕಮಾಂಡಿಂಗ್ (ದೆಹಲಿ) ಲೆ.ಜನರಲ್ ವಿ.ಕೆ.ಪಿಳ್ಳೈ ಅವರ ಸಾರಥ್ಯದಲ್ಲಿ ಬ್ಯಾಂಡ್ ಲಯಕ್ಕೆ ಹೆಜ್ಜೆ ಹಾಕುತ್ತಾ ಸಾಗಿದ ಸೇನೆ ಹಾಗೂ ಪೊಲೀಸ್ ಪಡೆಗಳು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಗೌರವ ವಂದನೆ ಸ್ವೀಕರಿಸಿದ ಕ್ಷಣಗಳಿಗೆ ಕಾರ್ಯಕ್ರಮದ ವಿಶೇಷ ಅತಿಥಿಯಾಗಿದ್ದ ಥಾಯ್ಲೆಂಡ್ ಪ್ರಧಾನಿ ಇಂಗ್ಲಕ್ ಶಿನಾವಾತ್ರ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ರಕ್ಷಣಾ ಸಚಿವ ಎ.ಕೆ.ಆಂಟನಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ವಾಯುಪಡೆ ಮುಖ್ಯಸ್ಥ ಅರ್ಜುನ್ ಸಿಂಗ್, ಪ್ರಮುಖ ರಾಜಕೀಯ ನಾಯಕರು ಮತ್ತು ಸೇನಾ ಮುಖಂಡರು ಸಾಕ್ಷಿಯಾದರು.ಪಥಸಂಚಲನಕ್ಕೆ ಮುನ್ನ ಸಿಂಗ್, ಆಂಟನಿ ಹಾಗೂ ಮೂರೂ ಪಡೆಗಳ ಮುಖ್ಯಸ್ಥರಿಂದ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಸ್ಮರಣಾರ್ಥ `ಅಮರ್ ಜವಾನ್ ಜ್ಯೋತಿ~ಗೆ ಪುಷ್ಪ ನಮನ. ಧ್ವಜಾರೋಹಣದ ಬಳಿಕ ರಾಷ್ಟ್ರಪತಿ ಅವರಿಂದ ಲೆ.ನವದೀಪ್ ಸಿಂಗ್ ಅವರಿಗೆ ಮರಣೋತ್ತರ `ಅಶೋಕ ಚಕ್ರ~ ಪ್ರಶಸ್ತಿ ಪ್ರದಾನ.ಏಕಾಏಕಿ ಪಡುವಣ ಬಾನಿನಿಂದ ಹಾರಿ ಬಂದ ಎಂಐ-17 ಹೆಲಿಕಾಪ್ಟರ್‌ಗಳು ಹೂದಳಗಳ ಮಳೆಗರೆದಾಗ ಜನಸ್ತೋಮಕ್ಕೆ ಒಂದು ಕ್ಷಣ ರೋಮಾಂಚನ! ಮುಂದಿನದೆಲ್ಲ ಪಥ ಸಂಚಲನದ ಸಂಭ್ರಮ.ಟಿ.72 ಟ್ಯಾಂಕ್‌ಗಳು, ಕ್ಷಿಪಣಿ ಉಡಾವಣಾ ಸಾಧನಗಳು ಸೇರಿದಂತೆ ಸೇನಾ ಪಡೆಯಿಂದ ಆಕರ್ಷಕ ಶಸ್ತ್ರಸಮೂಹದ ಪ್ರದರ್ಶನ. ಸ್ವದೇಶಿ ನಿರ್ಮಿತ ಮೂರು ಲಘು ಹೆಲಿಕಾಪ್ಟರ್‌ಗಳ (ಧ್ರುವ) ಹಾರಾಟವು ವಾಯುಪಡೆಯ ಸಾಮರ್ಥ್ಯವನ್ನು ಬಿಂಬಿಸಿತು.ವಿವಿಧ ಸೇನಾ ತಂಡಗಳು ಹಾಗೂ ನೌಕಾದಳ, ಪಥಸಂಚಲನದ ಮೆರುಗು ಹೆಚ್ಚಿಸಿದವು. ನಂತರದಲ್ಲಿ ಲೆ. ಸ್ನೇಹಾ ಶೆಖಾವತ್ ಅವರ ನೇತೃತ್ವದಲ್ಲಿ ವಾಯುಪಡೆ ಸಿಬ್ಬಂದಿ  `ಜೈ ಭಾರತಿ~ ಹಾಡಿಗೆ ಹೆಜ್ಜೆ ಹಾಕಿದರು.

ಹರ್ಷದ ಹೊನಲು: ಕಳೆದ ನವೆಂಬರ್‌ನಲ್ಲಿ ಪ್ರಯೋಗಾರ್ಥ ಹಾರಾಟ ಯಶಸ್ವಿಗೊಳಿಸಿದ್ದ 3,000 ಕಿ.ಮೀ ದೂರದ ಪರಮಾಣು ಸಾಮರ್ಥ್ಯದ ಅಗ್ನಿ-4 ಕ್ಷಿಪಣಿಗಳು ಇಡೀ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದವು. ಇವನ್ನು ಜನರ ಬಳಿ ಕೊಂಡೊಯ್ಯುತ್ತಿದ್ದಂತೆಯೇ ಹರ್ಷದ ಹೊನಲು, ಕರತಾಡನಗಳ ಸುರಿಮಳೆ!ಬಿಎಸ್‌ಎಫ್, ಅಸ್ಸಾಂ ರೈಫಲ್ಸ್, ಕರವಾಳಿ ರಕ್ಷಣಾ ಪಡೆ, ಸಿಆರ್‌ಪಿಎಫ್, ಐಟಿಬಿಪಿ, ಸಿಐಎಸ್‌ಎಫ್, ಎಸ್‌ಎಸ್‌ಬಿ, ಆರ್‌ಪಿಎಫ್, ದೆಹಲಿ ಪೊಲೀಸ್, ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್ ಕೂಡ ಪಥಸಂಚಲನದಲ್ಲಿ ಭಾಗವಹಿಸಿದ್ದವು.ವಿವಿಧ ರಾಜ್ಯಗಳು ಹಾಗೂ ಇಲಾಖೆಗಳೂ ತಾವೇನೂ ಕಮ್ಮಿ ಇಲ್ಲ ಎಂಬಂತೆ ಪಥಸಂಚಲನದಲ್ಲಿ ಹಿರಿಮೆ ಮೆರೆದವು. ಜಮ್ಮು-ಕಾಶ್ಮೀರದ ಸ್ತಬ್ಧ ಚಿತ್ರ, ಮಧ್ಯಯುಗದ ಶ್ರೀನಗರದ ವಾಸ್ತಶಿಲ್ಪ ಸಂಪತ್ತನ್ನು ಪರಿಚಯಿಸಿತು.

ಛತ್ತೀಸ್‌ಗಡದ ಕಲೆ, ಮಹಾರಾಷ್ಟ್ರದ ಐತಿಹಾಸಿಕ ಸ್ಮಾರಕಗಳು, ಪ್ರವಾಸಿ ತಾಣಗಳು, ಮೇಘಾಲಯದ ಜೈನ್ಷಿಯಾ ಹಬ್ಬ, ಬುಡಕಟ್ಟು ಸಮುದಾಯದ ರಂಗುರಂಗಿನ ನೃತ್ಯಗಳು, ಹಿಂದೂ ಹಾಗೂ ಮೊಘಲ್ ಶೈಲಿಯಲ್ಲಿ ಕಟ್ಟಿದ ರಾಜಸ್ತಾನದ ಅಂಬರ್ ಕೋಟೆ, ಅಸ್ಸಾಂನ ಸಾಂಪ್ರದಾಯಿಕ ನೃತ್ಯ, ಪಂಜಾಬ್‌ನ ಲಾಹೋರ್ ಕೋಟೆ, ಗೋವಾ, ನಾಗಾಲ್ಯಾಂಡ್, ಸಿಕ್ಕಿಂ ಹಾಗೂ ಇತರ ರಾಜ್ಯಗಳ ಸಾಂಸ್ಕೃತಿಕ ಸಂಪತ್ತು ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಗಮನ ಸೆಳೆಯಿತು.ಸತತ 13 ವರ್ಷಗಳ ಬಳಿಕ ಈ  ಬಾರಿ ಪಶ್ಚಿಮ ಬಂಗಾಳವು ಪಥ ಸಂಚಲನದ ಭಾಗವಾಗಿದ್ದು ವಿಶೇಷವಾಗಿತ್ತು. ರವೀಂದ್ರನಾಥ್ ಟ್ಯಾಗೋರ್ ಅವರ ನೆಲೆಯಾಗಿದ್ದ ಹಾಗೂ ಅಂತರ ರಾಷ್ಟ್ರೀಯ, ಶೈಕ್ಷಣಿಕ, ಸಾಂಸ್ಕೃತಿಕ ಸಂಸ್ಥೆಯ ಪರಿಕಲ್ಪನೆಯನ್ನು ಬಿಂಬಿಸುವ ಶಾಂತಿನಿಕೇತನ ಅಲ್ಲಿ ಮೈದಾಳಿತ್ತು.

ಪಶ್ಚಿಮ ಬಂಗಾಳ, ಒಡಿಶಾ, ದೆಹಲಿ ಹಾಗೂ ಇತರ ರಾಜ್ಯಗಳ 12 ರಿಂದ 20 ವರ್ಷದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ನಾಲ್ಕನೇ ನಾಯಕಿ

ಥಾಯ್ಲೆಂಡ್‌ನ ಮೊದಲ ಮಹಿಳಾ ಪ್ರಧಾನಿ ಇಂಗ್ಲಕ್ ಶಿನಾವಾತ್ರಾ ಕಳೆದ ನಾಲ್ಕು ವರ್ಷಗಳಿಂದ ಗಣರಾಜ್ಯೋತ್ಸವ ಪಥಸಂಚಲನದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಏಷ್ಯಾದ ನಾಲ್ಕನೇ ನಾಯಕರಾಗಿದ್ದಾರೆ.ಕಳೆದ 63 ವರ್ಷಗಳನ್ನು ತೆಗೆದುಕೊಂಡರೆ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ 3ನೇ ಮಹಿಳೆ ಇವರಾಗಿದ್ದಾರೆ. 1961ರಲ್ಲಿ ರಾಣಿ ಎಲಿಜಬೆತ್, 1974 ರಲ್ಲಿ ಲಂಕಾ ಪ್ರಧಾನಿ ಸಿರಿಮಾವೊ ಬಂಡಾರನಾಯಿಕೆ ಭಾಗವಹಿಸಿದ್ದರು.ಮಹಿಳಾ ಸಾರಥ್ಯ

ಗಣರಾಜ್ಯೋತ್ಸವ ಸಂದರ್ಭದ ಹಲವು ಪ್ರಥಮಗಳಲ್ಲಿ ಲೆ. ಸ್ನೇಹಾ ಶೆಖಾವತ್ ನೇತೃತ್ವದ ವಾಯುಪಡೆಯ ಆಕರ್ಷಕ ಪಥಸಂಚಲನವೂ ಒಂದು.63 ವರ್ಷಗಳ ಪಥಸಂಚಲನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ವಾಯುಪಡೆಯನ್ನು ಪ್ರತಿನಿಧಿಸಿದ್ದು ವಿಶೇಷವಾಗಿತ್ತು.

ಪ್ರತಿಕ್ರಿಯಿಸಿ (+)