ಆಕರ್ಷಿಸುತ್ತಿರುವ ನಿರ್ಮಲನಗರ ಉದ್ಯಾನ

7

ಆಕರ್ಷಿಸುತ್ತಿರುವ ನಿರ್ಮಲನಗರ ಉದ್ಯಾನ

Published:
Updated:
ಆಕರ್ಷಿಸುತ್ತಿರುವ ನಿರ್ಮಲನಗರ ಉದ್ಯಾನ

ಧಾರವಾಡ: ಮಲೆನಾಡಿನ ಸೆರಗಿನ ಅಂಚಿನಲ್ಲಿರುವ ಧಾರವಾಡ ಕಾಂಕ್ರೀಟ್ ಯುಗಕ್ಕೆ ಹೊಂದಿಕೊಂಡು ಮೊದಲಿದ್ದ ತನ್ನ ಕಳೆಯನ್ನೇ ಕಳೆದುಕೊಂಡಿದೆ. ಇಡೀ ನಗರವೇ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಕಾಲವೊಂದಿತ್ತು. ಆದರೆ ಇಂದು ಎಲ್ಲಿ ನೋಡಿದರೂ ಬೋಳು- ಬೋಳು, ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತಿವೆ.ಇಂಥ ಪರಿಸ್ಥಿತಿಯಲ್ಲಿಯೂ ಪ್ರತಿಷ್ಠಿತ ಜನರೇ ಹೆಚ್ಚಿರುವ, ಆಗಸಕ್ಕೆ ಚುಂಬಿಸುವ ಕಟ್ಟಡಗಳು ಮಾತ್ರ ಕಾಣುವ ಪ್ರದೇಶದಲ್ಲೊಂದು ಆಕರ್ಷಕ ಉದ್ಯಾನ ಈಗ ನಿರ್ಮಾಣವಾಗಿದೆ. ಅದು ಸರಿಯಾಗಿ ಮೂರು ವರ್ಷಗಳ ಹಿಂದೆ ಹಂದಿ- ನಾಯಿಗಳ ತಾಣವಾಗಿ, ಖಾಲಿ ಬಿದ್ದಿದ್ದ ಜಾಗೆ ಇಂದು ಹಸಿರು ವನ ಆಗಿ ಪರಿವರ್ತನೆಯಾಗಿದೆ.ಪಾಲಿಕೆಯ 17ನೇ ವಾರ್ಡಿನ ಕಲ್ಯಾಣನಗರದ ನಿರ್ಮಲ ನಗರ ಉದ್ಯಾನವನ ಇಂದು ಎಲ್ಲರನ್ನೂ ಆಕರ್ಷಿಸುತ್ತಿದೆ. ದಾರಿಹೋಕರನ್ನು ಕೈಬೀಸಿ ಕರೆಯುತಿದೆ. ಉದ್ಯಾನದಲ್ಲಿರುವ ಬೆಂಚುಗಳ ಮೇಲೆ ಕುಳಿತು, ದಣಿವಾರಿಸಿಕೊಳ್ಳಲು ಬನ್ನಿ ಎಂದು ಮಕ್ಕಳನ್ನು, ಮಹಿಳೆಯರನ್ನು, ವೃದ್ಧರನ್ನು ನಿತ್ಯ ಕರೆಯುವುದು ಇದರ ಕಾಯಕವಾಗಿದೆ.ಕಲ್ಯಾಣನಗರ, ನವೋದಯನಗರ, ನಿರ್ಮಲನಗರ ಪ್ರದೇಶದಲ್ಲಿ ಒಂದೂ ಉದ್ಯಾನ ಇರಲಿಲ್ಲ. ಈ ಪ್ರದೇಶದಲ್ಲಿ ವಿಶ್ರಾಂತ ಕುಲಪತಿಗಳು, ದೊಡ್ಡ ದೊಡ್ಡ ಸಾಹಿತಿಗಳು, ಚಿಂತಕರು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಸೇರಿದಂತೆ ಗಣ್ಯಾತಿಗಣ್ಯರು ವಾಸಿಸುತ್ತಾರೆ. ಉದ್ಯಾನ ನಿರ್ಮಾಣಕ್ಕೆ ಮನವಿ ಮಾಡಿದ್ದರೂ, ಇಲ್ಲಿಯವರೆಗೆ ಇವರ‌್ಯಾರೂ ಉದ್ಯಾನ ನಿರ್ಮಾಣದ ಬಗ್ಗೆ ನೇತೃತ್ವ ವಹಿಸರಲಿಲ್ಲ.ಪಾಲಿಕೆ ಸದಸ್ಯ ಶಿವು ಹಿರೇಮಠ ಶ್ರಮವಹಿಸಿ ಈ ಉದ್ಯಾನವನ ಅಸ್ತಿತ್ವಕ್ಕೆ ಬರುವಂತೆ ದುಡಿದಿದ್ದಾರೆ. ಮೂರು ವರ್ಷಗಳ ಹಿಂದೆ ಹಿರೇಮಠ ಅವರು ಅಲ್ಲಿನ ನಿವಾಸಿಗಳ ಸಹಕಾರದಿಂದ ಉದ್ಯಾನವ ನಿರ್ಮಾಣಕ್ಕೆ ಕೈ ಹಾಕಿದರು.39 ಗುಂಟೆ ಪ್ರದೇಶದಲ್ಲಿ ಈ ಉದ್ಯಾನವನ ನಿರ್ಮಾಣವಾಗಿದೆ. ನಿರ್ಮಲನಗರ ಬಡಾವಣೆ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲಿಯೇ ಈ ಜಾಗೆಯನ್ನು ಉದ್ಯಾನವನಕ್ಕೆ ಮೀಸಲಾಗಿಡಲಾಗಿತ್ತು. ಆದರೆ ದಶಕಗಳು ಕಳೆದರೂ ಉದ್ಯಾನ ಮಾತ್ರ ಇರಲಿಲ್ಲ. ಇಲ್ಲಿಯವರೆಗೆ ಈ ಜಾಗೆಯಲ್ಲಿ ಯಾವುದೇ ಕಟ್ಟಡ ಬರದಿರುವುದು ಅಲ್ಲಿನ ಜನರ ಸುದೈವ.`ಉದ್ಯಾನ ನಿರ್ಮಾಣಕ್ಕಾಗಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ 18 ಲಕ್ಷ ರೂ. ಅನುದಾನ ಪಡೆಯಲಾಯಿತು. ಮೋಹನಲಾಲ್ ಭಂಡಾರಿ (ಒಸವಾಲ್) ಅವರಿಂದ ಸಸಿಗಳನ್ನು ಪಡೆದು ನೆಡಲಾಯಿತು. ಸಿಂಗಾಪುರ ಚೆರ‌್ರಿ, ಪಾಮ್ ಟ್ರೀ ಸೇರಿದಂತೆ ಹೂವಿನ ಗಿಡಗಳನ್ನು ಸಹ ಬೆಳೆಸಲಾಗಿದೆ~ ಎಂದು ಹಿರೇಮಠ ಹೇಳುತ್ತಾರೆ.ಈ ಉದ್ಯಾನದಲ್ಲಿರುವ ಮಕ್ಕಳ ಆಟಿಕೆಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಜೋಕಾಲಿ, ಜಾರಗುಂಡಿ, ತಿರುಗುಣಿ, ವ್ಯಾಯಾಮ ಮಾಡಲು ಡಬಲ್ ಬಾರ್, ಸಿಂಗಲ್ ಬಾರ್ ಮತ್ತಿತರ ಆಕರ್ಷಕ ಆಟಿಕೆಗಳನ್ನು ಅಳವಡಿಸಲಾಗಿದೆ. ಗಿಡಗಳು ಹಾಗೂ ಆಟಿಕೆಗಳು ಹಾಳಾಗಬಾರದು ಎಂಬ ಉದ್ದೇಶದಿಂದ ಸುತ್ತಲೂ ಗೋಡೆ ಕಟ್ಟಲಾಗಿದೆ. ಉದ್ಯಾನವನದಲ್ಲಿ ವೇದಿಕೆಯೊಂದನ್ನು ಸಹ ನಿರ್ಮಿಸಲಾಗಿದೆ.ಈ ಉದ್ಯಾನವದಲ್ಲಿ ನೀರು ಹಾಗೂ ವಿದ್ಯುತ್ ದೀಪದ ವ್ಯವಸ್ಥೆ ಇದೆ. ಹೈಮಾಸ್ಟ್ ದೀಪ ಅಳವಡಿಸಲಾಗಿದೆ. ವಾಕಿಂಗ್ ಪಾತ್ ನಿರ್ಮಾಣಗೊಂಡಿದೆ.`ಉದ್ಯಾನವನ ನಿರ್ಮಾಣ ಆರಂಭವಾಗುತ್ತಿದ್ದಂತೆ ಬಹಳ ಕಿರುಕುಳ ಅನುಭವಿಸಬೇಕಾಯಿತು. ಗಿಡಗಳನ್ನು ಕಿತ್ತಿ ಹಾಕಿದ್ದರು. ಎಲ್ಲವನ್ನೂ ಸವಾಲಾಗಿ ಸ್ವೀಕರಿಸಿದ್ದರಿಂದಲೇ ಉದ್ಯಾನ ನಿರ್ಮಾಣವಾಯಿತು. ಗಾರ್ಡನ್ ನಿರ್ವಹಣೆಗೆ ಸಿಬ್ಬಂದಿ ನೀಡುವಂತೆ ಪಾಲಿಕೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ~ ಎನ್ನುತ್ತಾರೆ ಹಿರೇಮಠ.ಈ ಉದ್ಯಾನದ ರಕ್ಷಣೆಗೆ ಸ್ಥಳೀಯರ ಸಹಕಾರದೊಂದಿಗೆ ವಾಚಮನ್ ನೇಮಿಸಲಾಗಿದೆ. ಈ ವಾಚಮನ್‌ಗೆ ಸದ್ಯ ಸಂಬಳವನ್ನು ಪಾಲಿಕೆ ಸದಸ್ಯರು ನೀಡುತ್ತಿದ್ದಾರೆ.ಈ ಉದ್ಯಾನದಲ್ಲಿ ಸಾರ್ವಜನಿಕರಿಗೆ ಬೆಳಿಗ್ಗೆ 5.30 ರಿಂದ 9.30ರ ವರೆಗೆ ಮತ್ತು ಸಂಜೆ 5 ರಿಂದ 10ರ ವರೆಗೆ ಮಾತ್ರ ಪ್ರವೇಶಾವಕಾಶವಿದೆ. ಹೀಗಿರುವುದರಿಂದಲೇ ಸ್ವಚ್ಛತೆಯಿಂದ ಉದ್ಯಾನ ಕಂಗೊಳಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry