ಆಕಸ್ಮಿಕವಾಗಿ ಹಾರಿದ ಗುಂಡು:ಶಾಸಕರ ಅಂಗರಕ್ಷಕನಿಗೆ ಗಾಯ

7

ಆಕಸ್ಮಿಕವಾಗಿ ಹಾರಿದ ಗುಂಡು:ಶಾಸಕರ ಅಂಗರಕ್ಷಕನಿಗೆ ಗಾಯ

Published:
Updated:

ಬೆಂಗಳೂರು: ಪಿಸ್ತೂಲ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಶಾಸಕರ ಅಂಗರಕ್ಷಕ ಗಾಯಗೊಂಡಿರುವ ಘಟನೆ ಜೀವನ್‌ಬಿಮಾನಗರ ಸಮೀಪದ 515 ಕಾಲೊನಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.ನಾಗಮಂಗಲ ಶಾಸಕ ಸುರೇಶ್‌ಗೌಡ ಅವರ ಅಂಗರಕ್ಷಕ ರವೀಂದ್ರಕುಮಾರ್ (26) ಗಾಯಗೊಂಡವರು. ಈ ಘಟನೆ ಸುರೇಶ್‌ಗೌಡ ಅವರ ಮನೆಯಲ್ಲೇ ನಡೆದಿದ್ದು, ರವೀಂದ್ರಕುಮಾರ್ ಅವರ ಎಡಗೈಗೆ ಗುಂಡು ತಗುಲಿದೆ ಎಂದು ಜೀವನ್‌ಬಿಮಾನಗರ ಪೊಲೀಸರು ತಿಳಿಸಿದ್ದಾರೆ.ಮಂಡ್ಯ ಜಿಲ್ಲಾ ಸಶಸ್ತ್ರ ಮೀಸಲು (ಡಿಎಆರ್) ಪೊಲೀಸ್ ಪಡೆಯಲ್ಲಿ ಕಾನ್‌ಸ್ಟೇಬಲ್ ಆಗಿರುವ ರವೀಂದ್ರಕುಮಾರ್, ಸುರೇಶ್‌ಗೌಡ ಅವರ ಅಂಗರಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಶಾಸಕರ ಮನೆಯ ಆವರಣದಲ್ಲಿ ಬೆಳಿಗ್ಗೆ 8.45ರ ಸುಮಾರಿಗೆ ಅವರು ಪಿಸ್ತೂಲ್ ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಟ್ರಿಗರ್ ಒತ್ತಿದ್ದಾರೆ. ಪಿಸ್ತೂಲ್‌ನಿಂದ ಹೊರ ಬಂದ ಗುಂಡು ಅವರ ಕೈಗೆ ಹೊಕ್ಕಿತು.

 

ಈ ವೇಳೆ ಮನೆಯಲ್ಲೇ ಇದ್ದ ಸುರೇಶ್‌ಗೌಡ, ಗಾಯಾಳು ರವೀಂದ್ರಕುಮಾರ್ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು ಎಂದು ಪೊಲೀಸರು ಹೇಳಿದ್ದಾರೆ.ಅವರಿಗೆ ಸಂಜೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಗುಂಡನ್ನು ಹೊರ ತೆಗೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಫೋಟಕ ವಸ್ತುಗಳ ಬಳಕೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ರವೀಂದ್ರಕುಮಾರ್ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 286 ಮತ್ತು 336 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry