ಬುಧವಾರ, ಏಪ್ರಿಲ್ 21, 2021
30 °C

ಆಕಾಂಕ್ಷಿಗೆ ದೊರೆತ ಕ್ಯಾಬಿನೆಟ್ ಯೋಗ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಒಲಿದು ಬಂದ ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಸ್ಥಾನ ನಿರಾಕರಿಸಿ ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ಸೂಚ್ಯವಾಗಿ ತಮ್ಮ ಇಂಗಿತವನ್ನು ತಿಳಿಸಿದ್ದ ಚಿಂಚೋಳಿ ಮತಕ್ಷೇತ್ರದ ಶಾಸಕ ಸುನೀಲ ವಲ್ಯ್‌ಪುರ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಂತ್ರಿ ಮಂಡಳದಲ್ಲಿ ಕ್ಯಾಬಿನೆಟ್ ಸಚಿವರಾಗುವ ಮೂಲಕ ಶಾಸಕ ಸ್ಥಾನದಿಂದ ಬಡ್ತಿ ಹೊಂದಿದ್ದಾರೆ.ಕಳೆದ 2008ರಲ್ಲಿ ಶಾಸಕರಾಗಿ ಅವರು, ಬಿ. ಎಸ್. ಯಡಿಯೂರಪ್ಪ ಹೆಸರಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದು ಯಡಿಯೂರಪ್ಪ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಎಂ.ಪಿ ರೇಣುಕಾಚಾರ್ಯ ಮೊದಲಿಗರು. ಸುನೀಲ ವಲ್ಯ್‌ಪುರ ಎರಡನೆಯವರಾಗಿದ್ದರು. ಸುನೀಲ ವಲ್ಯ್‌ಪುರ ತಮ್ಮ ನಾಯಕನಿಗೆ ನಿಷ್ಠೆ ಪ್ರದರ್ಶಿಸಿ ಬೆಂಬಲಿಗರಾಗಿ ಮುಂದುವರೆದು ತಮ್ಮ ಗುರಿ ಸಾಧನೆಯಲ್ಲಿ ಯಶಸ್ವಿಯಾಗಿದ್ದಾರೆ.ಸಿವಿಲ್ ಎಂಜಿನಿಯರಿಂಗ್ ಪದವೀಧರರಾದ, ಭೋವಿ ವಡ್ಡರ್ ಸಮುದಾಯಕ್ಕೆ ಸೇರಿದ ಕ್ರಿಯಾಶೀಲ ರಾಜಕಾರಣಿ ತಮ್ಮ 46ರ ಹರೆಯದಲ್ಲಿ ಸಚಿವ ಸ್ಥಾನಕ್ಕೇರಿದ್ದಾರೆ. ಪತ್ರಿಕೋದ್ಯಮ, ಗುತ್ತಿಗೆದಾರ, ರಾಜಕಾರಣ, ಸಂಘಟನೆ, ಸಮಾಜಸೇವಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಇವರು, ಜನರನ್ನು ಬೇಗ ಮೋಡಿ ಮಾಡುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಸಮಾಜ (ಸಾಮೂಹಿಕ ವಿವಾಹ) ಸೇವೆ ಕಲೆ, ಸಾಹಿತ್ಯ, ಸಂಗೀತದ ಬಗೆಗಿನ ಕಾಳಜಿಯಿಂದ ಇಲ್ಲಿ ಮನೆ ಮಾತಾಗಿದ್ದಾರೆ.  ಕಳೆದ 2004ರಲ್ಲಿ ಶಹಾಬಾದ ಮೀಸಲು ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾದ ಇವರು, ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದ್ದರು.ಚಿಂಚೋಳಿ ರಾಜ್ಯ ಸರ್ಕಾರಕ್ಕೆ ದಿಕ್ಸೂಚಿಯಾದ ಪ್ರತಿಷ್ಠಿತ ಕ್ಷೇತ್ರ. ಇಲ್ಲಿಯವರೆಗೆ ಚಿಂಚೋಳಿಯಲ್ಲಿ ಗೆದ್ದ ಅಭ್ಯರ್ಥಿಯ ಪಕ್ಷವೇ ಸರ್ಕಾರ ರಚಿಸಿ ಅಧಿಕಾರ ನಡೆಸಿದ ಹಿರಿಮೆ ಹೊಂದಿದೆ. ಇಂತಹ ಕ್ಷೇತ್ರ ಪ್ರತಿನಿಧಿಸುವ ಮೂಲಕ ತಮ್ಮ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಸುನೀಲ ವಲ್ಯ್‌ಪುರ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಜಿಲ್ಲೆಯ ಹಿರಿಯ ರಾಜಕಾರಣಿ ಗೋವಿಂದ ಪಿ. ಒಡೆಯರಾಜ ಅವರ ಪುತ್ರಿ ಡಾ. ವಿಜಯಲಕ್ಷ್ಮೀ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿ, ಇಬ್ಬರು ಮಕ್ಕಳ ತಂದೆಯಾಗಿ ಜೀವನ ನಡೆಸುತ್ತಿದ್ದಾರೆ.ವೃತ್ತಿಯಲ್ಲಿಯೇ ರಾಜಕೀಯದ ಒಳಸುಳಿ ಅರಿತ ಅವರು, ಕೆಸಿಪಿಯಿಂದ ಕಮಲಾಪೂರ ವಿಧಾನಸಭೆ  ಸ್ಪರ್ಧಿಸಿ ಕಹಿ ಅನುಭವಿಸಿದರು. ನಂತರ ಶಹಾಬಾದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಚಿಂಚೋಳಿಯಲ್ಲಿ ವಿಜಯಿಯಾತ್ರೆ ಮುಂದುವರೆಸಿ ಸಚಿವರಾಗಿ ಜನಸೇವೆಗೆ ಮುಂದಾಗ್ದ್ದಿದರು.ಚಿಂಚೋಳಿ ವಿಧಾನಸಭೆ ಮತಕ್ಷೇತ್ರಕ್ಕೆ ಅಭಿವೃದ್ಧಿ ಕಾರ್ಯಗಳಿಗಾಗಿ ನೂರಾರು ಕೋಟಿ ರೂಪಾಯಿಗಳ ಅನುದಾನದ ಹೊಳೆ ಹರಿಸಿದ, ರಾಜ್ಯ ಸರ್ಕಾರದಿಂದ ಅತಿ ಹೆಚ್ಚು ಅನುದಾನ ತಂದ ಹಿರಿಮೆ ಹೊಂದಿರುವ ಸುನೀಲ ವಲ್ಯ್‌ಪುರ ಸಚಿವರಾಗಿ ಆಯ್ಕೆಯಾಗಿದ್ದು ಕ್ಷೇತ್ರದ ಜನತೆಗೆ ಸಂತಸ ತಂದಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.