ಆಕಾಶವೇ ಚಪ್ಪರ; ಕೆರೆ ನೀರೇ ಜೀವಜಲ!

7

ಆಕಾಶವೇ ಚಪ್ಪರ; ಕೆರೆ ನೀರೇ ಜೀವಜಲ!

Published:
Updated:
ಆಕಾಶವೇ ಚಪ್ಪರ; ಕೆರೆ ನೀರೇ ಜೀವಜಲ!

ಹರಪನಹಳ್ಳಿ: ಅಲೆಮಾರಿ `ಬುಡ್ಗ ಜಂಗಮ್~ ಸಮುದಾಯವನ್ನು ಸಾಂಸ್ಕೃತಿಕ ರಾಯಭಾರಿ ಎಂದೇ ಕರೆಯಲಾಗುತ್ತದೆ. ಇಂತಹ ಅಪರೂಪದ ಸಮುದಾಯ  ನೀರು ನೆರಳಿಲ್ಲದೆ ಶೋಚನೀಯ ಸ್ಥಿತಿಯಲ್ಲಿದೆ.ರಾಮಾಯಣ-ಮಹಾಭಾರತದ ಸನ್ನಿವೇಶಗಳನ್ನು ಕಥೆ, ಹಾಡು, ವೇಷ, ಶಾಸ್ತ್ರ, ಕೈಚಳಕ, ಬುರ‌್ರಕಥಾ ಕಲಾ ಪರಂಪರೆಗಳಿಂದ ಹಿಡಿದು ಭಕ್ತ ಕನಕದಾಸರ ಕೀರ್ತನೆಗಳ ತನಕ ಹಾಗೂ ಸಾಮಾಜಿಕ ಘಟನಾವಳಿಗಳನ್ನು ಆಧರಿಸಿದ ನೂರಾರು ಕಥಾಪ್ರಸಂಗಗಳನ್ನು ತಮ್ಮದೇ ವಾದ್ಯ ಪರಿಕರಗಳ ಮೂಲಕ ಸಂಗೀತಕ್ಕೆ ಸಂಯೋಜನೆಗೊಳಿಸಿ ಕಣ್ಣಿಗೆ ಕಟ್ಟುವಂತೆ ಅಭಿನಯಿಸುವುದರ ಮೂಲಕ ಜನಪದ ಸಂಸ್ಕೃತಿಯನ್ನು ಅಲೆಮಾರಿ ಬುಡ್ಗ ಜಂಗಮ್ ಸಮುದಾಯ ಕಾಪಾಡಿಕೊಂಡು ಬಂದಿದೆ.ಇಲ್ಲಿನ ಕರ್ನಾಟಕ ರಾಜ್ಯ ಉಗ್ರಾಣದ ನಿಗಮದ ಗೋದಾಮ್ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ 25ಕುಟುಂಬಗಳು ತಾವೇ ಕಟ್ಟಿಕೊಂಡಿರುವ ಕವದಿ ಅಥವಾ ಬಟ್ಟೆ, ಪ್ಲಾಸ್ಟಿಕ್ ಜೋಪಡಿಗಳಲ್ಲಿ ವಾಸಿಸುತ್ತಿವೆ.ಕಳೆದ 25-30ವರ್ಷಗಳಿಂದಲೂ ಪಟ್ಟಣದ ಒಂದಿಲ್ಲೊಂದು ಕಡೆ ಜೀವನ ಸಾಗಿಸುತ್ತಿರುವ ಇವರ ಕುಟುಂಬಗಳಿಗೆ ಇದುವರೆಗೂಆಶ್ರಯ, ಇಂದಿರಾ ಆವಾಸ್ ಸೇರಿದಂತೆ ಯಾವ ಯೋಜನೆಯ ಸೂರು ತಲುಪಿಲ್ಲ. ಆಶ್ರಯ ಮನೆ ನೀಡುವಂತೆ ನೂರಾರು ಬಾರಿ ವಿನಂತಿಸಿದ ಇವರ ಮನವಿಗೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲವಾದ್ದರಿಂದ ಆಕಾಶವಿದೆ ಚಪ್ಪರವಾಗಿದೆ!ಮಳೆ ಸುರಿಯಲು ಆರಂಭವಾಯಿತು ಅಂದರೆ ಬದುಕಿನ ಯಾತನೆ ಹೇಳತೀರದು. ರಾತ್ರೋರಾತ್ರಿ  ಬದುಕಿನ ಗಂಟುಮೂಟೆ ಕಟ್ಟಿಕೊಂಡು ಖಾಲಿ ಇರುವ ಸರ್ಕಾರಿ ಕಟ್ಟಡಗಳಿಗೋ, ಗುಡಿ -ಗುಂಡಾರಗಳಿಗೋ ಆಶ್ರಯಕ್ಕಾಗಿ ಅಲೆದಾಡುತ್ತಾರೆ. ನೀರು ಸಿಗದಿದ್ದರೆ, ಪಕ್ಕದಲ್ಲಿರುವ ಹಿರೆ ಕೆರೆಯಲ್ಲಿನ ನೀರೇ ಈ ಕುಟುಂಬಗಳಿಗೆ ಜೀವಜಲ!.ಸುತ್ತಲೂ ಬಳ್ಳಾರಿಯ ಜಾಲಿಗಿಡಗಳ ಮಧ್ಯ ಇವರ ಕಟೀರಗಳು ಇವೆ. ಕತ್ತಲು ಆವರಿಸಿತೆಂದರೆ ಸಾಕು ಜೀವಭಯದಲ್ಲಿಯೇ ರಾತ್ರಿ ಕಳೆಯುವುದು ಅನಿವಾರ್ಯ ಸ್ಥಿತಿ. ಹಾವು-ಚೇಳು ಮುಂತಾದ ವಿಷಜಂತುಗಳ ಕಾಟ ಬೇರೆ. ಕುಟೀರಕ್ಕೆ ಬೀದಿದೀಪದ ವ್ಯವಸ್ಥೆ ಕಲ್ಪಿಸಿ ಎಂದು ಬೇಡಿಕೊಂಡಿರುವ ಇವರ ಕೂಗು ಅರಣ್ಯರೋಧನವಾಗಿದೆ.ಶ್ರೀಮಂತ ಪರಂಪರೆಯ ಅಲೆಮಾರಿ ಬುಡ್ಗ ಜಂಗಮ ಸಮುದಾಯ ಇಂದಿಗೂ ಕನಿಷ್ಠ ಮೂಲ ಸೌಕರ್ಯದಿಂದ ವಂಚಿತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry