`ಆಕಾಶ್' ಟ್ಯಾಬ್ಲೆಟ್: ಹುಸಿಯಾದ ನಿರೀಕ್ಷೆ

7

`ಆಕಾಶ್' ಟ್ಯಾಬ್ಲೆಟ್: ಹುಸಿಯಾದ ನಿರೀಕ್ಷೆ

Published:
Updated:
`ಆಕಾಶ್' ಟ್ಯಾಬ್ಲೆಟ್: ಹುಸಿಯಾದ ನಿರೀಕ್ಷೆ

`ಆಕಾಶ್' ಟ್ಯಾಬ್ಲೆಟ್‌ನ ಮೊದಲ ಆವೃತ್ತಿ ಬಿಡುಗಡೆಗೊಂಡದ್ದು  2011ರ ಅಕ್ಟೋಬರ್‌ನಲ್ಲಿ. ಕೇವಲ 35 ಡಾಲರ್ ಮೌಲ್ಯದ, (ಅಂದಿನ ವಿನಿಮಯ ಮೌಲ್ಯದಲ್ಲಿರೂ 2250) ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶ ಹೊಂದಿರುವ ಈ ಟ್ಯಾಬ್ಲೆಟ್ ದೇಶದಾದ್ಯಂತ ಬಹು ದೊಡ್ಡ ಸಂಚಲನವನ್ನೇ  ಸೃಷ್ಟಿಸಿತ್ತು.  ಕೇಂದ್ರ ಸರ್ಕಾರದ `ಇ-ಕಲಿಕೆ' ಕಾರ್ಯಕ್ರಮದಡಿ ದೇಶದ 25 ಸಾವಿರ ಮಹಾವಿದ್ಯಾಲಯಗಳು ಮತ್ತು 400 ವಿಶ್ವವಿದ್ಯಾಲಯಗಳ ನಡುವೆ ಸಂಪರ್ಕ ಕಲ್ಪಿಸುವುದು `ಆಕಾಶ್' ಯೋಜನೆಯ ಪ್ರಮುಖ ಉದ್ದೇಶವಾಗಿತ್ತು.ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ಮೂಲಕ ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿಯೇ ಸಂಭವಿಸಲಿದೆ ಎಂದು ಬಣ್ಣಿಸಿತ್ತು.ವರ್ಷಾಂತ್ಯದೊಳಗೆ ತರಗತಿ ಕೋಣೆಗಳಲ್ಲಿ ಕಪ್ಪು ಹಲಗೆ ಬದಲಿಗೆ ಅತ್ಯಾಧುನಿಕ ಸ್ಪರ್ಶ ಸಂವೇದಿ ತಂತ್ರಜ್ಞಾನ ಬರಲಿದೆ ಎಂದೂ ಪ್ರತಿಪಾದಿಸಿತ್ತು. ವಿಶ್ವಸಂಸ್ಥೆಯ ಮಹಾ  ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಕೂಡ  `ಆಕಾಶ್' ಮೂಲಕ ಭಾರತ ಮಾಹಿತಿ ತಂತ್ರಜ್ಞಾನ ಹೆದ್ದಾರಿಯಲ್ಲಿ ಶಕ್ತಿಶಾಲಿ ರಾಷ್ಟ್ರ ಎನಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಲಕ್ಷಾಂತರ ಬಡ ಮಕ್ಕಳಿಗೆ ಅಗ್ಗದ ದರದಲ್ಲಿ ಟ್ಯಾಬ್ಲೆಟ್ ಪೂರೈಸುವ ಭಾರತ ಸರ್ಕಾರದ ಈ ಮಹತ್ವಾಕಾಂಕ್ಷೆ ಯೋಜನೆ ಜಾಗತಿಕ ಪ್ರಶಂಸೆಗೂ ಪಾತ್ರವಾಗಿತ್ತು.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಟ್ಯಾಬ್ಲೆಟ್ ಪೂರೈಸಲು ಗುತ್ತಿಗೆ ಪಡೆದುಕೊಂಡ `ಡಾಟಾವಿಂಡ್' ಎನ್ನುವ ಬ್ರಿಟನ್ ಕಂಪೆನಿ ಇಷ್ಟೊತ್ತಿಗೆ ಒಂದು ಲಕ್ಷ ಟ್ಯಾಬ್ಲೆಟ್‌ಗಳನ್ನು ಪೂರೈಸಬೇಕಿತ್ತು. ಆದರೆ, ಪೂರೈಕೆಯಾಗಿರುವುದು 10 ಸಾವಿರ ಮಾತ್ರ. ವಾಣಿಜ್ಯ ಬಳಕೆಯ    `ಆಕಾಶ್-2'ಗಾಗಿ ಬೇಡಿಕೆ ಸಲ್ಲಿಸಿ, ಹಣ ಪಾವತಿಸಿ ಸಾವಿರಾರು ಜನರು ಕಾಯುತ್ತಿದ್ದಾರೆ. ಮುಗಿಲೆತ್ತರ ಭರವಸೆ ಮೂಡಿಸಿದ್ದ `ಆಕಾಶ್' ಹುಸಿ ಭರವಸೆಯಾಗಿಯೇ ಉಳಿಯುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.ಅಸಲಿಗೆ `ಡಾಟಾ ವಿಂಡ್' ಎನ್ನುವುದು ನಿಸ್ತಂತು ಇಂಟರ್‌ನೆಟ್ ಸಂಪರ್ಕ ಉಪಕರಣಗಳನ್ನು ತಯಾರಿಸುವ ಚಿಕ್ಕ ಕಂಪೆನಿ. ಲಂಡನ್‌ನ ಡೌನ್‌ಟೌನ್ ಮಾಂಟ್ರಿಯಲ್‌ನಲ್ಲಿ ಕಂಪೆನಿಯ ತಯಾರಿಕಾ ಘಟಕ ಇದೆ. ಪಂಜಾಬ್ ಮೂಲದ  ರಾಜಾ ತುಳಿ ಮತ್ತು ಸುನೀತ್ ಸಿಂಗ್ ತುಳಿ ಎಂಬ ಸಹೋದರರು ಈ ಕಂಪೆನಿಯ ಸ್ಥಾಪಕರು. ಕಂಪೆನಿಯ ಹಣಕಾಸು ಪರಿಸ್ಥಿತಿ ತೀವ್ರ ಸಂಕಷ್ಟದಲ್ಲಿದೆ ಎನ್ನುತ್ತದೆ ಲಂಡನ್ ಷೇರು ವಿನಿಮಯ ಕೇಂದ್ರದ ವರದಿ. `ಆಕಾಶ್' ಟ್ಯಾಬ್ಲೆಟ್ ಪೂರೈಕೆಗೆ ಈ ಕಂಪೆನಿ ಭಾರತ ಸರ್ಕಾರದಿಂದ  ಗುತ್ತಿಗೆ ಪಡೆದದ್ದೇ ಬಹು ದೊಡ್ಡ ವಿಸ್ಮಯ ಎನ್ನುವುದು ಮಾರುಕಟ್ಟೆ ವಿಶ್ಲೇಷಣೆ. ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ `ಎಚ್‌ಸಿಎಲ್', `ವಿಪ್ರೊ' ಸೇರಿದಂತೆ ಯಾವುದೇ ಪ್ರಮುಖ ಕಂಪೆನಿಗಳು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ.ಭಾಗವಹಿಸಿದ ಬೆರಳೆಣಿಕೆಯ ಕಂಪೆನಿಗಳಲ್ಲಿ ಅತ್ಯಂತ ಕಡಿಮೆ ದರದಲ್ಲಿ ಟ್ಯಾಬ್ಲೆಟ್ ಪೂರೈಸಲು ಬಿಡ್ ಸಲ್ಲಿಸಿದ್ದೇ ಡಾಟಾವಿಂಡ್. ಒಪ್ಪಂದದಂತೆ ಹೈದರಾಬಾದ್ ಮೂಲದ `ವಿಎಂಎಸ್ ಸಿಸ್ಟಂ' ಎನ್ನುವ ಕಂಪೆನಿಯಲ್ಲಿ ಆಕಾಶ್ ಟ್ಯಾಬ್ಲೆಟ್ ತಯಾರಿಸಿ, ಸರ್ಕಾರಕ್ಕೆ ಪೂರೈಸಬೇಕಿತ್ತು. ಆದರೆ, ಈಗ ಪೂರೈಕೆಯಾಗಿರುವ 10 ಸಾವಿರ ಟ್ಯಾಬ್ಲೆಟ್‌ಗಳು ತಯಾರಾಗಿರುವುದು ದಕ್ಷಿಣ ಚೀನಾದ ಕೈಗಾರಿಕಾ ಪ್ರದೇಶ `ಷೆಂಜೆನ್'ನಲ್ಲಿ. `ಆಕಾಶ್-2' ಸುಧಾರಿತ ಆವೃತ್ತಿ ತಯಾರಿಕೆಗೂ ಚೀನಾದ ಕಂಪೆನಿಗಳೇ ಗುತ್ತಿಗೆ ಪಡೆದುಕೊಂಡಿವೆ. ಒಂದು ಟ್ಯಾಬ್ಲೆಟ್ ಮೇಲೆ ಕನಿಷ್ಠ ಒಂದು ಡಾಲರ್ ಲಾಭ ಇದೆ ಎನ್ನುತ್ತಾರೆ ಈ ಕಂಪೆನಿಗಳ ಅಧಿಕಾರಿಗಳು. ಭಾರತ ಯಾವತ್ತೂ ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕೆಯಲ್ಲಿ ಚೀನಾ ಜತೆ ಸ್ಪರ್ಧಿಸಲು ಸಾಧ್ಯವಿಲ್ಲ ಎನ್ನುವುದು ಅವರ ವಿವರಣೆ.`ಆಕಾಶ್' ಟ್ಯಾಬ್ಲೆಟ್ ಮೂಲಕ ದೇಶದ ತಯಾರಿಕಾ ಕ್ಷೇತ್ರಕ್ಕೆ ಗರಿಷ್ಠ ಉತ್ತೇಜನ ಲಭಿಸಲಿದೆ ಎಂದು ಭಾವಿಸಲಾಗಿತ್ತು. ದೇಶೀಯ ಕಂಪೆನಿಗಳಿಗೆ ಲಭಿಸಬೇಕಿದ್ದ ಈ ಅವಕಾಶ ಈಗ ಚೀನಾದ ಪಾಲಾಗಿದೆ. `ಕಂಪ್ಯೂಟರ್ ಹಾರ್ಡ್ ವೇರ್ ಸೇರಿದಂತೆ ಚೀನಾವು ಈಗಾಗಲೇ ಜಾಗತಿಕ ತಯಾರಿಕಾ ಕೇಂದ್ರವಾಗಿ ಮಾರ್ಪಟ್ಟಿದೆ. ಭಾರತ ಈ ಅವಕಾಶವನ್ನು ಕಳೆದುಕೊಂಡಿದೆ' ಎನ್ನುತ್ತಾರೆ  ಆರ್ಥಿಕ ತಜ್ಞ ಮತ್ತು ಅಕ್ಸಸ್ ಇನ್ವೆಸ್ಟ್‌ಮೆಂಟ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸುರ್ಜಿತ್ ಎಸ್. ಬಲ್ಹಾ. `ಆಕಾಶ್' ದೇಶದ ಶೈಕ್ಷಣಿಕ ವ್ಯವಸ್ಥೆಯ ಲೋಪ, ಮತ್ತು ತಯಾರಿಕಾ ವಲಯದ ವೈಫಲ್ಯಕ್ಕೆ ಹಿಡಿದ ಕನ್ನಡಿ ಎನ್ನುತ್ತಾರೆ ಈ ಕ್ಷೇತ್ರದ ತಜ್ಞರು.  `ಭಾರತದ ಶಾಲೆಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಅತ್ಯಂತ ಸಂಕೀರ್ಣ ಮತ್ತು ದುಬಾರಿ. ಯೋಜನೆ ಅನುಷ್ಠಾನ ಪೂರ್ವದಲ್ಲಿ ಶಿಕ್ಷಕರಿಗೆ ತರಬೇತಿ ಅಗತ್ಯ. ತರಬೇತಿ ಪಡೆದ ಹೆಚ್ಚುವರಿ ಶಿಕ್ಷಕರೂ ಬೇಕಾಗುತ್ತಾರೆ. ಹೊಸ ತಂತ್ರಜ್ಞಾನದಿಂದ ಬೋಧನಾ ವಿಧಾನದಲ್ಲಿ ಆಗುವ ವ್ಯತ್ಯಾಸ ವಿದ್ಯಾರ್ಥಿಗಳ ಮೇಲೂ ಪರಿಣಾಮ ಬೀರುತ್ತದೆ. ತರಗತಿ ಕೋಣೆಗೆ ಗಣಕಯಂತ್ರವನ್ನು ತರುವ ಮೂಲಕ ವಿದ್ಯಾರ್ಥಿಗಳ ಒಟ್ಟಾರೆ ಸಾಮರ್ಥ್ಯ ಹೆಚ್ಚಿಸಲು ಸಾಧ್ಯವಿಲ್ಲ. ಸದ್ಯ ಲಭ್ಯವಿರುವ ಸಂಶೋಧನೆ ಪ್ರಕಾರ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಇದು ಅತ್ಯಂತ ಪರಿಣಾಮಕಾರಿ ಕಲಿಕಾ ವಿಧಾನವೂ ಅಲ್ಲ' ಎಂದು ಹೇಳುತ್ತಾರೆ ಭಾರತವೂ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಶಾಲೆಗಳಲ್ಲಿ  ತಂತ್ರಜ್ಞಾನ ಬಳಕೆ ಹೇಗಿರಬೇಕು ಎನ್ನುವುದರ ಕುರಿತು ಸಾಕಷ್ಟು ಅಧ್ಯಯನ ನಡೆಸಿರುವ ಟೆಕ್ಸಾಸ್ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ಸಾರ್ವಜನಿಕ ವ್ಯವಹಾರಗಳ ವಿಭಾಗದ ಸಹಾಯಕ ಉಪನ್ಯಾಸಕ ಲಿಗ್ ಎಲ್. ಲಿಂಡನ್.ಡಾಟಾವಿಂಡ್‌ನ ಕಾರ್ಯನಿರ್ವಾಹಕ ನಿರ್ದೇಶಕರು, ಭಾರತ ಸರ್ಕಾರದ ಅಧಿಕಾರಿಗಳು, ಚೀನಾದ ತಯಾರಿಕಾ ಕಂಪೆನಿಗಳ ಜತೆ ಪತ್ರಿಕೆ ನಡೆಸಿದ ಸಂದರ್ಶನದಲ್ಲಿ ಒಂದಂಶ ಮನದಟ್ಟಾಗಿದೆ. ಚಿಕ್ಕ ಕಂಪೆನಿಯೊಂದು ತನ್ನ ಸಾಮರ್ಥ್ಯ ಮೀರಿದ ದೊಡ್ಡ ಯೋಜನೆಯೊಂದನ್ನು ಒಪ್ಪಿಕೊಂಡು ಈಗ ಇಕ್ಕಟ್ಟಿಗೆ ಸಿಲುಕಿದೆ.`ನಾವು ವರ್ಷಾಂತ್ಯದೊಳಗೆ 1 ಲಕ್ಷ ಟ್ಯಾಬ್ಲೆಟ್‌ಗಳನ್ನು ಪೂರೈಸುವುದಾಗಿ ಒಪ್ಪಂದ ಮಾಡಿಕೊಂಡಿದ್ದೆವು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಇದು ಕಷ್ಟ. ಇಷ್ಟೊಂದು ಕಡಿಮೆ ದರದಲ್ಲಿ ಟ್ಯಾಬ್ಲೆಟ್ ತಯಾರಿಸಿಕೊಡಲು ಕಂಪೆನಿಗಳು ಮುಂದೆ ಬರುತ್ತಿಲ್ಲ. ಒಪ್ಪಂದಕ್ಕೆ ಸಹಿ ಹಾಕುವ ಮೊದಲೇ ನಾನು, ಇದು ನಮ್ಮ ಕಂಪೆನಿಯಿಂದಾಗುವ ಕೆಲಸವಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದೆ. ಡಾಟಾ ವಿಂಡ್‌ನ ಪ್ರಮುಖ ಗುರಿ ಭಾರತದಂತಹ ದೇಶಗಳಲ್ಲಿ ಟ್ಯಾಬ್ಲೆಟ್‌ಗಳಲ್ಲಿ ಬಳಸುವ ಅಗ್ಗದ ದರದ ನಿಸ್ತಂತು ಇಂಟರ್‌ನೆಟ್ ಸಂಪರ್ಕ ಸಾಧನಗಳನ್ನು ಮಾರಾಟ ಮಾಡುವುದು. ಅದನ್ನು ಬಿಟ್ಟು ಟ್ಯಾಬ್ಲೆಟ್ ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿ ಈಗ ಇದರಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದೇವೆ' ಎಂದು ರಾಜಾ ತುಳಿ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅಲವತ್ತುಕೊಂಡಿದ್ದಾರೆ.`ಡಾಟಾವಿಂಡ್ ವರ್ಷಗಳ ಹಿಂದೆ ಲಂಡನ್ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ `ಪಾಕೆಟ್ ಸರ್ಫರ್' ಎನ್ನುವ ಉಪಕರಣ ಸಾಕಷ್ಟು ಜನಪ್ರಿಯವಾಗಿದೆ. ಮೊಬೈಲ್ ಸಂಪರ್ಕ ವ್ಯವಸ್ಥೆ ನಿಧಾನವಾಗಿದ್ದರೂ, ಇದನ್ನು ಬಳಸಿ ಸುಲಭವಾಗಿ ವೆಬ್ ಪುಟಗಳನ್ನು ತೆರೆಯಬಹುದು. ಇದು ಸಾಫ್ಟ್‌ವೇರ್ ಕ್ಷೇತ್ರದಲ್ಲಿ ನಮ್ಮ ಮಹತ್ತರ ಕೊಡುಗೆ. ಹಾರ್ಡ್‌ವೇರ್ ಉದ್ಯಮ ನಮ್ಮದಲ್ಲ' ಎಂಬ ವಿವರಣೆ ರಾಜಾ ಅವರದು. 2011ರ ಅಕ್ಟೋಬರ್‌ನಲ್ಲಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ `ಆಕಾಶ್' ಮೂಲಕ ಭಾರತೀಯ ತರಗತಿ ಕೋಣೆಗಳು ಡಿಜಿಟಲ್ ಜಗತ್ತಿಗೆ ತೆರೆದುಕೊಳ್ಳಲಿವೆ. ಈ ಮೂಲಕ ಭಾರತೀಯ ಬಡವರ ಜೀವನ ಮಟ್ಟವೂ ಸುಧಾರಿಸಲಿದೆ ಎಂಬ ಭರವಸೆಯ ಮಾತನ್ನಾಡಿದ್ದರು ಸುನೀತ್ ಸಿಂಗ್ ತುಳಿ.ಸುನೀತ್ ಚಿಕ್ಕ ವಯಸ್ಸಿನಲ್ಲಿರುವಾಗಲೇ ಅವರ ಕುಟುಂಬ ಭಾರತದಿಂದ ಕೆನಡಾಕ್ಕೆ ವಲಸೆ ಹೋಗಿ ನೆಲೆಗೊಂಡಿದೆ. ಭಾರತದಲ್ಲೇ ಟ್ಯಾಬ್ಲೆಟ್ ತಯಾರಿಸಲಾಗುವುದು ಎಂದು ಹೇಳಿದ್ದ ಅವರು, ಇದೀಗ ಭಾರತದಲ್ಲಿ ಅಗ್ಗದ ದರದ ಸ್ಪರ್ಶ ಪರದೆ ಮತ್ತು ಹಾರ್ಡ್‌ವೇರ್ ತಂತ್ರಜ್ಞಾನ ಇಲ್ಲ. ಕಂಪೆನಿಯು ಸರ್ಕಾರದ ಜತೆ ಮಾಡಿಕೊಂಡ ಒಪ್ಪಂದಕ್ಕೆ ಬದ್ಧವಾಗಿರಲು ಅನಿವಾರ್ಯವಾಗಿ ಚೀನಾದಲ್ಲಿ ಟ್ಯಾಬ್ಲೆಟ್‌ಗಳನ್ನು ತಯಾರಿಸುತ್ತಿರುವುದಾಗಿ ಸಮರ್ಥಿಸಿಕೊಳ್ಳುತ್ತಾರೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ, ಅಗ್ಗದ ದರದ `ಆಕಾಶ್' ಬಗೆಗಿನ ಭಾರತೀಯರ ಮೋಹ ಕಡಿಮೆಯಾಗಿಲ್ಲ. ಈಗಲೂ ನೂರಾರು ಜನರು ಆನ್‌ಲೈನ್‌ನಲ್ಲಿ ಈ ಟ್ಯಾಬ್ಲೆಟ್‌ಗಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ.- ದಿ ನ್ಯೂಯಾರ್ಕ್ ಟೈಮ್ಸ

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

(ಕಾರಣಾಂತರಗಳಿಂದ `ಅನಾವರಣ' ಅಂಕಣ ಈ ವಾರ ಪ್ರಕಟವಾಗುತ್ತಿಲ್ಲ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry