ಆಕ್ಷೇಪಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ

7

ಆಕ್ಷೇಪಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ

Published:
Updated:

ನವದೆಹಲಿ: ಕರ್ನಾಟಕ ಹಾಗೂ ಗೋವಾ ನಡುವಿನ ಮಹಾದಾಯಿ ನದಿ ನೀರಿನ ವಿವಾದ ಇತ್ಯರ್ಥಪಡಿಸಲು ರಚಿಸಲಾಗಿರುವ ನ್ಯಾಯಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ವಸತಿ ಸೌಕರ್ಯ ಕಲ್ಪಿಸದ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.ಮಹಾದಾಯಿ ನ್ಯಾಯಮಂಡಳಿ ಅಧ್ಯಕ್ಷರು ಮತ್ತು ಸದಸ್ಯರಿಗೆ ವಸತಿ ಸೌಲಭ್ಯ ಕಲ್ಪಿಸದ ಬಗ್ಗೆ ಗೋವಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ. ಆರ್.ಎಂ. ಲೋಧ ಹಾಗೂ ನ್ಯಾ.ಎ.ಆರ್.ದವೆ ಅವರನ್ನೊಳಗೊಂಡ ನ್ಯಾಯಪೀಠ, ನಗರಾಭಿವೃದ್ಧಿ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿ, ಅಕ್ಟೋಬರ್ 1ರ ವೇಳೆಗೆ ಸಾಮಾನ್ಯ ಪಟ್ಟಿಯಲ್ಲಿ ಲಭ್ಯವಿರುವ  7 ಮತ್ತು 8ನೇ ನಮೂನೆ ಬಂಗಲೆಗಳ ವಿವರಗಳನ್ನು ಒಳಗೊಂಡ ಪ್ರಮಾಣಪತ್ರವನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ಸೂಚಿಸಿತು.ಸೌಲಭ್ಯಗಳು ಲಭ್ಯವಿಲ್ಲದ್ದರಿಂದ ನ್ಯಾಯಮಂಡಳಿ ಕಾರ್ಯನಿರ್ವಹಿಸುವುದು ಕಷ್ಟ. ಪರಿಸರ ನ್ಯಾಯಮಂಡಳಿ ಸ್ಥಿತಿಯೂ ಇದೇ ಆಗಿತ್ತು. ನದಿ ವಿವಾದ ಇತ್ಯರ್ಥಪಡಿಸಲು ರಚಿಸಲಾಗಿರುವ ನ್ಯಾಯಮಂಡಳಿಗೂ ಅದೇ ಗತಿ ಬಂದೊದಗಿದೆ ಎಂದು ನ್ಯಾಯಪೀಠ ಹೇಳಿತು.ಅಂತರರಾಜ್ಯ ನದಿ ನೀರು ವಿವಾದ ಬಗೆಹರಿಸಲು ರಚಿಸಲಾಗಿರುವ ನ್ಯಾಯಮಂಡಳಿ ಅಧ್ಯಕ್ಷರು, ಸದಸ್ಯರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂಬ ಜಲ ಸಂಪನ್ಮೂಲ ಸಚಿವಾಲಯದ ನಿಯಮದ ಬಗ್ಗೆ ನಗರಾಭಿವೃದ್ಧಿ ಸಚಿವಾಲಯ ಆಕ್ಷೇಪವೆತ್ತಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಚ್.ಪಿ. ರಾವಲ್ ವಿವರಿಸಿದರು. ಇದು ನ್ಯಾಯಾಲಯದ ಅಸಮಾಧಾನಕ್ಕೆ ಕಾರಣವಾಯಿತು. ಸರ್ಕಾರದ ಕೆಲವು ನಿಯಗಳಿಂದಾಗಿ ನ್ಯಾಯಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು ಸರ್ಕಾರಿ  ವಸತಿ ಸೌಲಭ್ಯದಿಂದ ವಂಚಿತರಾಗಬೇಕೇ ಎಂದು ಅಚ್ಚರಿ ವ್ಯಕ್ತಪಡಿಸಿತು.ನ್ಯಾಯಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸಾಮಾನ್ಯ ವಸತಿ ಪಟ್ಟಿಯಲ್ಲಿ ಅವಕಾಶ ಕಲ್ಪಿಸಬಾರದು ಎಂಬ ನಿಯಮವನ್ನು ಪುನರ್ ಪರಿಶೀಲಿಸುವಂತೆ ಟಿಪ್ಪಣಿ ಕಳುಹಿಸಲಾಗಿದೆ. ತಾವು ಸರ್ಕಾರದ ಸಂಪರ್ಕದಲ್ಲಿದ್ದು ಮುಂದಿನ ಸಂಪುಟ ಸಭೆಯಲ್ಲಿ ಈ ಬಗೆಗೆ ತೀರ್ಮಾನ ಆಗಬಹುದು ಎಂದು ರಾವಲ್ ನ್ಯಾಯಪೀಠಕ್ಕೆ ಹೇಳಿದರು. ಅದಕ್ಕೆ `ಎಷ್ಟು ದಿನ ನೀವು ನಿದ್ದೆ ಮಾಡುತ್ತೀರಿ? ನಿಮ್ಮನ್ನು ನಿದ್ರಾವಸ್ಥೆಯಿಂದ ಎಚ್ಚರಿಸಲು ನ್ಯಾಯಾಲಯ ಬರಬೇಕೇ?~ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.ಸರ್ಕಾರದ ಯಾವುದೇ ನಿಯಮಗಳು ಸಂವಿಧಾನಾತ್ಮಕ, ಶಾಸನಾತ್ಮಕ ಹಾಗೂ ನ್ಯಾಯಮಂಡಳಿ ಉಪಬಂಧಗಳ ವ್ಯಾಪ್ತಿ ಮೀರಬಾರದು. ಅಂತರರಾಜ್ಯ ನದಿ ವಿವಾದ ಕಾಯ್ದೆ- 1956ರ ಸೆಕ್ಷನ್ 13ರ ಅನ್ವಯ ಅನುಷ್ಠಾನವಾಗಿರುವ ನಿಯಮವನ್ನು ಸರ್ಕಾರದ ಆದೇಶದ ಮೂಲಕ ಮೀರಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿತು.ಏಪ್ರಿಲ್ 20ರಂದು ವಸತಿ ನಿರ್ದೇಶನಾಲಯ ನ್ಯಾಯಮಂಡಳಿ ಅಧ್ಯಕ್ಷರು- ಸದಸ್ಯರು ಸರ್ಕಾರಿ ವಸತಿಗೆ ಅರ್ಹರಲ್ಲ ಎಂದು ಹೇಳಿ ಜಲ ಸಂಪನ್ಮೂಲ ಸಚಿವಾಲಯಕ್ಕೆ ಪತ್ರ ಬರೆದಿರುವ ಕುರಿತು ನ್ಯಾಯಾಲಯ ಅತೃಪ್ತಿ ವ್ಯಕ್ತಮಾಡಿತು. ಸುಪ್ರೀಂ ಕೋರ್ಟ್ ಈಗಾಗಲೇ ಈ ಪ್ರಶ್ನೆಯನ್ನು ಕಾವೇರಿ ನ್ಯಾಯಮಂಡಳಿ ರಚನೆಯಾದ ಸಂದರ್ಭದಲ್ಲಿ ಇತ್ಯರ್ಥಪಡಿಸಿದೆ ಎಂದು ಸ್ಪಷ್ಟಪಡಿಸಿತು.ಗೋವಾ ಪರ ವಕೀಲರಾದ ಎ. ಸುಭಾಷಿಣಿ, ನ್ಯಾಯಮಂಡಳಿ ಮಹಾದಾಯಿ ವಿವಾದ ಕುರಿತು ಒಮ್ಮೆ ಅಂದರೆ ಸೆ. 6ರಂದು ವಿಚಾರಣೆ ನಡೆಸಿದೆ ಎಂದರು. ಗೋವಾ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ, ನ್ಯಾಯಮಂಡಳಿ ಅಧ್ಯಕ್ಷರು ಮತ್ತು ಸದಸ್ಯರಿಗೆ ವಸತಿ ಸೌಲಭ್ಯ ಕಲ್ಪಿಸದಿದ್ದರೆ ಅದು ಕೆಲಸ ಮಾಡುವುದು ಕಷ್ಟವಾಗಲಿದೆ  ಎಂದು ಅಭಿಪ್ರಾಯಪಟ್ಟಿತು.ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೆ.ಎಂ. ಪಾಂಚಾಲ ಅಧ್ಯಕ್ಷರಾಗಿರುವ ಮಹಾದಾಯಿ ನ್ಯಾಯಮಂಡಳಿಗೆ ಮಧ್ಯಪ್ರದೇಶ ನಿವೃತ್ತ ನ್ಯಾಯಮೂರ್ತಿ ವಿನಯ ಮಿತ್ತಲ್ ಮತ್ತು  ಆಂಧ್ರ ನಿವೃತ್ತ ನ್ಯಾಯಮೂರ್ತಿ ಪಿ.ಎಸ್. ನಾರಾಯಣ ಸದಸ್ಯರಾಗಿದ್ದಾರೆ. ಕೇಂದ್ರ ಸರ್ಕಾರ 2010ರ ನವೆಂಬರ್ 16ರಂದು ಹೊರಡಿಸಿದ ಅಧಿಸೂಚನೆಯಡಿ ರಚನೆಯಾದ ನ್ಯಾಯಮಂಡಳಿ ಇದೇ 8ರಂದು ಪುನಃ ಸೇರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry