ಆಕ್ಸಫರ್ಡ್ ಯೂನಿಯನ್ ಕುತಂತ್ರದ ಪ್ರತಿಬಿಂಬ

7

ಆಕ್ಸಫರ್ಡ್ ಯೂನಿಯನ್ ಕುತಂತ್ರದ ಪ್ರತಿಬಿಂಬ

Published:
Updated:
ಆಕ್ಸಫರ್ಡ್ ಯೂನಿಯನ್ ಕುತಂತ್ರದ ಪ್ರತಿಬಿಂಬ

ಧಾರವಾಡ: “ಶಿರಸಿಯ ಮಾರಿಕಾಂಬಾ ಹೈಸ್ಕೂಲ್‌ನಲ್ಲಿದ್ದಾಗ ಮಾಡಿದ ಭಾಷಣ ಮುಂದೆ ಆಕ್ಸಫರ್ಡ್ ಯೂನಿಯನ್ ಅಧ್ಯಕ್ಷನಾಗಲು ಆತ್ಮವಿಶ್ವಾಸ ಹೆಚ್ಚಿಸಿತು. ಆಕ್ಸಫರ್ಡ್ ಯೂನಿಯನ್‌ಗೆ ಅಧ್ಯಕ್ಷನಾಗಬೇಕಾದರೆ ನಾಲ್ಕೈದು ಹುದ್ದೆಗಳನ್ನು ದಾಟಿ ಹೋಗಬೇಕು” ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡ ತಮ್ಮ ಆಡಾಡತ ಆಯುಷ್ಯ ಎಂಬ ಆತ್ಮಕಥನ ಪುಸ್ತಕದ ಕೆಲ ಆಯ್ದ ಭಾಗಗಳನ್ನು ಬುಧವಾರ ಸಾರಸ್ವತಲೋಕದ ದಿಗ್ಗಜರ ಎದುರು ಎಳೆಎಳೆಯಾಗಿ ಬಿಡಿಸಿಟ್ಟರು.ಇಲ್ಲಿನ ಮನೋಹರ ಗ್ರಂಥಮಾಲಾ ಆಲೂರು ವೆಂಕಟರಾವ್ ಸಭಾಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ತಮ್ಮ ಆತ್ಮಕಥನ ಆಯ್ದ ಭಾಗಗಳನ್ನು ಅವರು ವಾಚಿಸಿದರು. ತಮ್ಮ ಆತ್ಮಕಥೆಗಳನ್ನು ವಿವರಿಸುತ್ತಿದ್ದರೆ ನೆರೆದವರೆಲ್ಲ ಮಂತ್ರಮುಗ್ಧರಾಗಿ ಕೇಳುತ್ತಿದ್ದರು.‘ಆಕ್ಸಫರ್ಡ ಯೂನಿಯನ್ ರಾಜಕೀಯ ಕುತಂತ್ರವನ್ನೇ ಪ್ರತಿಬಿಂಬಿಸುವಂತಿತ್ತು. ನಾನು ಅಲ್ಲಿದ್ದಾಗ ಕರಿಯ ಶೇರವಾನಿ ಹಾಕಿಕೊಂಡಿರುತ್ತಿದ್ದೆ. ಬ್ರಿಟಿಷರು ಬಿಳಿಯ ಬಟ್ಟೆ ಟೈಗಳನ್ನು ಹಾಖಿಕೊಳ್ಳುತ್ತಿದ್ದರು. ಅವರು ಕೇಳಿದಾಗ ನಾನು ಭಾರತೀಯ, ಹಾಗಾಗಿ ಇಂಥ ಬಟ್ಟೆಗಳನ್ನು ಹಾಕಿಕೊಂಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದ್ದೆ’. ಅಲ್ಲಿ ನಡೆಯುವ ಚರ್ಚೆಗಳು, ಅತಿಥಿಗಳು ಪರಿಚಯವಾದ ಪರಿ, ದೊಡ್ಡವರ ಜೊತೆ ಒಡನಾಟ ಇಟ್ಟುಕೊಂಡಿದ್ದು ಹೇಗೆ ಎಂಬುದನ್ನು ವಿವರಿಸಿದರು.‘ನಾನು ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್ ನಿರ್ದೇಶಕನಾಗಿದ್ದಾಗ ಸ್ಕ್ರೀನ್ ಟೆಸ್ಟ್ ರದ್ದು ಮಾಡಿದೆ. ಆಗ ಹಲವಾರು ಜನ ಬರುತ್ತಿದ್ದರು. ಒಂದು ದಿನ ಸಿಡುಬಿನ ಮುಖದ, ರೂಪವಂತನಲ್ಲದ ಹುಡುಗನೊಬ್ಬ ಬಂದ. ಹುಡುಗ ಹೀಗಿದ್ದರೂ ಸಂದರ್ಶನದಲ್ಲಿ ಮಾತ್ರ ಅದ್ಭುತ ಪ್ರತಿಭೆ ತೊರಿಸಿದ್ದ. ಆದರೂ ನಮ್ಮ ಸಂಸ್ಥೆಯವರು ಆತನನ್ನು ತೆಗೆದುಕೊಳ್ಳುವುದು ಬೇಡ ಎಂದರು. ನಾನು ಅದಕ್ಕೆ ಒಪ್ಪದೇ ಆತನನ್ನು ತೆಗೆದುಕೊಂಡೆ. ಅಲ್ಲಿ ಕಲಿತ ಆ ಹುಡುಗ ಮುಂದೆ ದೊಡ್ಡ ನಟನಾದ. ಫಿಲ್ಮ್‌ಫೇರ್ ಪ್ರಶಸ್ತಿ ಪಡೆದ. ಆತನೇ ಓಂ ಪುರಿ’.‘ದಿಲೀಪ ಧವನ್ ಎಂಬಾತನನ್ನು ತೆಗೆದುಕೊಳ್ಳಬೇಕೆಂದು 13 ನಿರ್ಮಾಪಕರ ಶಿಫಾರಸ್ಸು ಪತ್ರ ನನಗೆ ಬಂದವು. ಇದಲ್ಲದೇ ಅಂದಿನ ಮೇರುನಟ ದಿ. ರಾಜಕಪೂರ ಅವರೂ ಸಹ ಈ ಹುಡುಗನನ್ನು ತೆಗೆದುಕೊಳ್ಳಿ ಎಂದು ಪತ್ರ ಕಳಿಸಿದ್ದರು. ಆದರೆ ನಾನು ಸಾರಾಸಗಟಾಗಿ ನಿರಾಕರಿಸಿದ್ದೆ. ಒಂದು ದಿನ ಸ್ವತಃ ರಾಜಕಪೂರ ಅವರೇ ಬಂದರು. ಆಗ ನಮ್ಮ ಪ್ರಾಧ್ಯಾಪಕರ ಮೀಟಿಂಗ್ ನಡೆಯುತ್ತಿತ್ತು. ಮೀಟಿಂಗ್ ಮುಗಿಸಿ ಬರುತ್ತೇನೆ, ನನ್ನ ಕೋಣೆಯಲ್ಲಿ ಕಾಯಿರಿ ಎಂದು ಅವರಿಗೆ ಹೇಳಿ ಕಳುಸಿದ್ದೆ. ಅದರಂತೆ ಅವರು ಕಾಯ್ದರು, ಮುಂದೆ ದಿಲೀಪ ಧವನ್‌ಗೆ ಅವಕಾಶ ನೀಡಲಾಯಿತು’ ಎಂದು ತಮ್ಮ ಆಡಾಡತ ಆಯುಷ್ಯದಲ್ಲಿ ಅಡಕವಾಗಿರುವ ಕೆಲವು ಅಂಶಗಳನ್ನು ಕಾರ್ನಾಡ ವಾಚಿಸಿದರು.ತಮ್ಮ ಆತ್ಮಕಥೆಯಲ್ಲಿ ತಮ್ಮ ಮದುವೆಯ ಬಗ್ಗೆ ಸಹ ಪ್ರಸ್ತಾಪಿಸಿದ್ದನ್ನು ಅವರು ವಾಚಿಸಿದರು. ‘ಅದು 1976ರಲ್ಲಿ ಬೆಂಗಳೂರಿನ ಕನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಕಾವೇರಿ ಹೋಟೆಲ್‌ನಲ್ಲಿ ತಂಗಿದ್ದೆ. ಆಗ ಸರಸ್ವತಿಯೂ ಅಲ್ಲಿಗೆ ಬಂದಳು. ನಾನು ಅವಳಿಗೆ ಪ್ರಪೋಸ್ ಮಾಡಿ ನನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದೆ. ಅದಕ್ಕಾಗಿ ಅವರು ಇದಕ್ಕಾಗಿ 10 ವರ್ಷ ಕಾದಿದ್ದೆ, ಆಗ ನೀನು ಹೇಳಲಿಲ್ಲ ಎಂದು ಹೇಳಿ ಅಮೆರಿಕಕ್ಕೆ ಹೋದಳು. ಮುಂದೆ ಅವಳು ನನ್ನನ್ನು ಮದುವೆಯಾಗಲು ಒಪ್ಪಿದಳು. ನಾವು ಆರ್ಯ ಸಮಾಜದ ಪದ್ಧತಿಯಂತೆ ಮದುವೆಯಾದೆವು. ಆಗ ನನಗೆ ಬರೋಬ್ಬರಿ 41 ವರ್ಷ ವಯಸ್ಸು’ ಎಂದು ಹೇಳಿದರು.ಡಾ. ಎಂ.ಎಂ.ಕಲಬುರ್ಗಿ, ಡಾ. ಜಿ.ಎಸ್.ಆಮೂರ, ಆರ್ಯ ಆಚಾರ್ಯ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಹೇಮಾ ಪಟ್ಟನಶೆಟ್ಟಿ, ನಿರಂಜನ ವಾಲಿಶೆಟ್ಟರ, ಪ್ರೊ. ಸುಕನ್ಯಾ ಮಾರುತಿ, ಡಾ. ಗಿರಡ್ಡಿ ಗೋವಿಂದರಾಜ್, ಡಾ. ಮೋಹನ ತಾವರಗೇರಿ, ಪ್ರೊ. ಅಶೋಕ ಶೆಟ್ಟರ, ಪ್ರೊ. ದುಷ್ಯಂತ ನಾಡಗೌಡ, ಡಾ. ಎಸ್.ಕೆ.ಸೈದಾಪುರ, ಶಿಕ್ಷಣ ಇಲಾಖೆಯ ಅಪರ್ ಆಯುಕ್ತ ವೆಂಕಟೇಶ ಮಾಚಕನೂರ ಮತ್ತಿತರರು ಭಾಗವಹಿಸಿದ್ದರು. ನಂತರ ಸಂವಾದ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry