ಆಗದ ಕಾಮಗಾರಿಗೆ ಹಣ ಪಾವತಿ: ದೂರು

7

ಆಗದ ಕಾಮಗಾರಿಗೆ ಹಣ ಪಾವತಿ: ದೂರು

Published:
Updated:
ಆಗದ ಕಾಮಗಾರಿಗೆ ಹಣ ಪಾವತಿ: ದೂರು

ಬ್ರಹ್ಮಾವರ: ಉಡುಪಿ ತಾಲ್ಲೂಕಿನ ಚಾಂತಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತು ಹೆಕ್ಟೇರ್ ವಿಸ್ತೀರ್ಣದಲ್ಲಿ ವ್ಯಾಪಿಸಿರುವ  ಚಾಂತಾರು ಮದಗದ ಹೂಳೆತ್ತುವ ಕಾರ್ಯವನ್ನು ಗ್ರಾಮೀಣ ನೀರು ಸರಬರಾಜು(ಅಂತರ್ಜಲ ಅಬಿವೃದ್ಧಿ)ಇಲಾಖೆಯಿಂದ ಮಾಡಲಾಗುತ್ತಿದ್ದು, ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರು ಕಾಮಗಾರಿ ಆರಂಭಿಸದೇ ಮುಕ್ತಾಯದ ಹಂತದಲ್ಲಿದೆ ಎಂದು ವರದಿ ನೀಡಿ ಹಣ ಬಿಡುಗಡೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹೇರೂರು ನಾಗರಿಕ ಸಮಿತಿಯು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ದೂರು ನೀಡಿದೆ.ಸುಮಾರು 10 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಮದಗದಿಂದ ಸುತ್ತಮುತ್ತ ಇರುವ ರೈತರಿಗೆ ತಮ್ಮ ಬೆಳೆ ಬೆಳೆಯಲು ಅನುಕೂಲವಾಗಿದೆ. ಪರಿಸರದ ಬಾವಿಗಳಲ್ಲಿ ಅಂತರ್ಜಲ ಅಭಿವೃದ್ಧಿಯಾಗಿದೆ. ಕುಂಜಾಲು ಮತ್ತು ಚಾಂತಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 500ಕ್ಕೂ ಹೆಚ್ಚು ಗ್ರಾಮದ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕೂಡಾ ಇದೇ ಮದಗದಿಂದ ಆಗುತ್ತಿದೆ. ಆದರೆ ಇದೀಗ ಕಳೆದ ಕೆಲವು ವರ್ಷಗಳಿಂದ ಕೆರೆಯ ಹೂಳೆತ್ತುವ ಕಾಮಗಾರಿ ಆಗದೇ ಇರುವುದರಿಂದ ಹೂಳು ತುಂಬಿ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ಪರಿಸರದ ಬಾವಿಗಳಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಬಾವಿಯ ನೀರು ಗಣನೀಯವಾಗಿ ಕಡಿಮೆ ಯಾಗುವ ಸಾಧ್ಯತೆ ಇದೆ ಎಂದು ದೂರಲಾಗಿದೆ.ಕಳೆದ ಐದಾರು ವರ್ಷಗಳ ಹಿಂದೆ ಈ ಕೆರೆಯ ಹೂಳನ್ನು ತೆಗೆಯಲಾಗಿದ್ದು, ಅಗ ಸಹ ಕಾಮಗಾರಿ ಪೂರ್ಣಗೊಳಿಸದೇ ಬಿಲ್ ಪಡೆಯಲಾಗಿತ್ತು. ಕಳೆದ ಬಾರಿ ಈ ಕೆಲಸ ನಡೆದಾಗಲೂ ಅವ್ಯವಹಾರವಾಗಿತ್ತು ಎನ್ನುವ ಮಾತುಗಳು ಜನರಿಂದಲೇ ಕೇಳಿ ಬಂದಿತ್ತು. ಆದರೆ ಇದೀಗ ಕಾಮಗಾರಿ ನಡೆಸದೇ ಬಿಲ್ ಪಡೆಯಲು ಮುಂದಾಗುವುದು ಯಾವ ನ್ಯಾಯ ಎಂದು ಸಮಿತಿ ಪ್ರಶ್ನಿಸಿದೆ.ಕಳೆದ ಮಳೆಗಾಲದಲ್ಲಿ ಮದಗದಲ್ಲಿ ನಿರ್ಮಿಸಿದ ಬಾವಿ ಕುಸಿದು ರೂ 2 ಲಕ್ಷ ಅಧಿಕ ಮೌಲ್ಯದ ಪಂಪ್ ಮುಳುಗಿ ನಷ್ಟವಾಗಿತ್ತು. ನೂರಾರು ಮಂದಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಆದರೆ ಪಂಪ್ ಸೆಟ್ ದುರಸ್ತಿ ಬಗ್ಗೆಯಾಗಲೀ ಬಾವಿಯ ದುರಸ್ತಿ ಬಗ್ಗೆಯಾಗಲೀ ಇದುವರೆಗೆ ಯಾರೂ ತಲೆಕೆಡಿಸಿಕೊಂಡಿಲ್ಲ ಎಂದು ಸಮಿತಿ ತಿಳಿಸಿದೆ. ಈ ಕೆರೆಯ ಹೂಳೆತ್ತುವ ಕಾರ್ಯ ನಡೆಯುವುದರಿಂದ ಒಟ್ಟಾರೆ ಈ ಎರಡೂ ಗ್ರಾಮ ಪಂಚಾಯಿತಿಯ ಸುಮಾರು 7 ಸಾವಿರ ಮಂದಿ ಪ್ರಯೋಜನ ಪಡೆಯಲಿದ್ದಾರೆ.ಆದ್ದರಿಂದ ಈ ಮದಗದ ಕೆರೆಯ ಹೂಳೆತ್ತಲು ಜಿಲ್ಲಾ ಪಂಚಾಯಿತಿಯ 2010-11ರ ಸಾಲಿನ ಕ್ರಿಯಾ ಯೋಜನೆಯಲ್ಲಿ ಕಾಮಗಾರಿ ಸೇರ್ಪಡೆಗೊಂಡು ಸುಮಾರು ರೂ 9 ಲಕ್ಷ ಅಂದಾಜಿನಲ್ಲಿ ಟೆಂಡರ್ ಕೂಡಾ ಕರೆದು ಕುಂದಾಪುರ ಮೂಲದ ಗುತ್ತಿಗೆದಾರರಿಗೆ ಕಾಮಗಾರಿ ನಡೆಸಲು ವಹಿಸಿಕೊಡಲಾಗಿತ್ತು. ಸುಮಾರು 150 ಮೀ.ಉದ್ದಕ್ಕೆ, 95 ಮೀ ಅಗಲಕ್ಕೆ ಮತ್ತು 95 ಮೀ ಆಳಕ್ಕೆ ಕೆರೆಯ ಹೂಳೆತ್ತಲು ಉದ್ದೇಶಿಸಿ ಮಾ.31ರೊಳಗೆ ಕೆಲಸ ಆರಂಭಿಸಬೇಕೆಂದು ಗುತ್ತಿಗೆದಾರರಲ್ಲಿ ಹೇಳಲಾಗಿದ್ದರೂ ಇದುವರೆಗೆ ಕೆಲಸ ಆರಂಭಿಸಿಲ್ಲ. ಆದರೂ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಎಂಬ ವರದಿ ನೀಡಿ ಹಣ ಬಿಡುಗಡೆಗೊಳಿಸಲಾಗುತ್ತಿದೆ ಎನ್ನುವ ಗುಮಾನಿ ವ್ಯಕ್ತವಾಗಿದೆ.ಕಾಮಗಾರಿ ನಡೆಸದೇ ಬಿಲ್ಲು ಪಾಸ್ ಮಾಡುವ ಈ ಕ್ರಮದ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕ ಹೋರಾಟ ಸಮಿತಿಯ ಕಾರ್ಯದರ್ಶಿ ಬಿ.ಸದಾಶಿವ ಶೆಟ್ಟಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಮತ್ತು ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿ, ಮಳೆಗಾಲ ಆರಂಭವಾಗುವ ಮುನ್ನ ಕಾಮಗಾರಿ ನಡೆಸುವಂತೆ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry